5

ಚುನಾವಣೆ ಮುಗಿಯುವವರೆಗೂ ಸುಮ್ಮನಿರಿ

Published:
Updated:
ಚುನಾವಣೆ ಮುಗಿಯುವವರೆಗೂ ಸುಮ್ಮನಿರಿ

ಬಾಗಲಕೋಟೆ: ಜಮಖಂಡಿ ತಾಲ್ಲೂಕಿನಲ್ಲಿ ಎಂಆರ್ಎನ್ ನಿರಾಣಿ ಸಮೂಹದ ಕಾರ್ಯ ಚಟುವಟಿಕೆಯನ್ನು ವಿಧಾನಸಭೆ ಚುನಾವಣೆ ಮುಗಿಯುವವರೆಗೂ ಸ್ಥಗಿತಗೊಳಿಸುವಂತೆ ಮಾಜಿ ಸಚಿವ ಮುರುಗೇಶ ನಿರಾಣಿ ಅವರಿಗೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ. ಇದು ಜಿಲ್ಲೆಯಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿಯೂ ಆಗಿರುವ ಯಡಿಯೂರಪ್ಪ ಅವಿಭಜಿತ ವಿಜಯಪುರ ಜಿಲ್ಲೆಯಿಂದ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂಬ ಸಂಗತಿಯ ನಡುವೆಯೇ ಈ ವಿಚಾರ ಮಹತ್ವ ಪಡೆದಿದೆ.

‘ಜಮಖಂಡಿಯಲ್ಲಿ ಪಕ್ಷದ ಮುಖಂಡರ ನಡುವಿನ ಮುಸುಕಿನ ಗುದ್ದಾಟಕ್ಕೆ ತೆರೆ ಎಳೆಯಲು ಯಡಿಯೂರಪ್ಪ ಮುಂದಾಗಿದ್ದಾರೆ. ಅದಕ್ಕೆ ಪೂರಕವಾಗಿ ಬುಧವಾರ ಮುರುಗೇಶ ನಿರಾಣಿ ಅವರನ್ನು ಬೆಂಗಳೂರಿಗೆ ಕರೆಸಿ ಈ ಸೂಚನೆ ನೀಡಿದ್ದಾರೆ. ಅದರ ಹಿಂದೆ ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಅವರ ರಾಜಕೀಯ ಭವಿಷ್ಯ ಅಡಗಿದೆ’ ಎಂದು ಮೂಲಗಳು ತಿಳಿಸಿವೆ.

ಶ್ರೀಕಾಂತ ಕುಲಕರ್ಣಿ ಆತಂಕ?: ‘ಫೌಂಡೇಶನ್ ಚಟುವಟಿಕೆ ಮೂಲಕ ನಿರಾಣಿ ಕುಟುಂಬ ಜಮಖಂಡಿ ಕ್ಷೇತ್ರದ ಜನತೆಗೆ ಹತ್ತಿರವಾಗಿದೆ. ಪಂಚಮಸಾಲಿ ಸಮುದಾಯ ಇಲ್ಲಿ ಹೆಚ್ಚಿರುವುದರಿಂದ ಸಾಹೇಬರು (ಮುರುಗೇಶ ನಿರಾಣಿ) ಬೀಳಗಿ ಬದಲು ಇಲ್ಲಿಂದಲೇ ಸ್ಪರ್ಧಿಸಲಿದ್ದಾರೆ ಎಂದು ಬೆಂಬಲಿಗರು ಹೇಳುತ್ತಿದ್ದಾರೆ.

ಮುರುಗೇಶ ಬೀಳಗಿಗೆ ಹೋದರೂ ಸಹೋದರ ಸಂಗಮೇಶ ಇಲ್ಲಿಂದ ಪಕ್ಷದ ಟಿಕೆಟ್‌ ಕೇಳಲಿದ್ದಾರೆ. ಸಿಗದಿದ್ದರೆ ಸ್ವತಂತ್ರವಾಗಿ ಸ್ಪರ್ಧಿಸಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಸಹೋದರನ ಸ್ಪರ್ಧೆ ವಿಚಾರವನ್ನು ಮುರುಗೇಶ ನಿರಾಣಿ ಕೂಡ ನಿರಾಕರಿಸಿಲ್ಲ. ಹೀಗಾದಲ್ಲಿ ನನ್ನ ಭವಿಷ್ಯವೇನು’ ಎಂದು ಪಕ್ಷದ ಪ್ರಮುಖರ ಸಭೆಯಲ್ಲಿ ವರಿಷ್ಠರಿಗೆ ಮಾಜಿ ಶಾಸಕ ಶ್ರೀಕಾಂತ್ ಕುಲಕರ್ಣಿ ಪ್ರಶ್ನಿಸಿದ್ದರು ಎನ್ನಲಾಗಿದೆ.

ಮುರುಗೇಶ ನಿರಾಣಿ ಆಪ್ತ ಉಮೇಶ ಮಹಾಬಳಶೆಟ್ಟಿ ಕಳೆದ ಬಾರಿ ಕೆಜೆಪಿಯಿಂದ ಸ್ಪರ್ಧಿಸಿದ ಪರಿಣಾಮ ಬಿಜೆಪಿ ಅಭ್ಯರ್ಥಿಯಾಗಿದ್ದ ಶ್ರೀಕಾಂತ ಕುಲಕರ್ಣಿ ಸೋಲು ಕಂಡಿದ್ದರು. ಈ ಬಾರಿ ಸಂಗಮೇಶ ಸ್ಪರ್ಧಿಸಿದಲ್ಲಿ ಮತ್ತೆ ತಮಗೆ ತೊಂದರೆಯಾಗಬಹುದು’ ಎಂದು ಆತಂಕ ತೋಡಿಕೊಂಡಿದ್ದಾರೆ. ಕುಲಕರ್ಣಿ ಅವರ ಬೆಂಬಲಕ್ಕೆ ಆರ್‌ಎಸ್‌ಎಸ್ ನಿಂತಿದೆ.

ಇಬ್ಬರನ್ನೂ ಕೂರಿಸಿಕೊಂಡು ಸಮಸ್ಯೆ ಪರಿಹರಿಸಲು ಯಡಿಯೂರಪ್ಪ ಅವರಿಗೆ ಸೂಚನೆ ನೀಡಿದೆ. ಹಾಗಾಗಿ ಕುಲಕರ್ಣಿ ಅವರ ಅಳಲಿಗೆ ದನಿಯಾಗಿಯೇ ಈ ಆದೇಶ ಹೊರಬಿದ್ದಿದೆ’ ಎಂಬ ಮಾತು ಪಕ್ಷದ ವಲಯದಲ್ಲಿ ಕೇಳಿಬರುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry