5
ತಮಿಳುನಾಡು ಮುಖ್ಯಮಂತ್ರಿ ಕೆ.ಪಳನಿಸ್ವಾಮಿ ವಿರುದ್ಧ ದಿನಕರನ್‌ ಆಕ್ರೋಶ

‘ಚುನಾವಣೆ ನಡೆದರೆ ನಮ್ಮದೇ ಸರ್ಕಾರ ರಚನೆ’

Published:
Updated:
‘ಚುನಾವಣೆ ನಡೆದರೆ ನಮ್ಮದೇ ಸರ್ಕಾರ ರಚನೆ’

ಸುಂಟಿಕೊಪ್ಪ, ಕೊಡಗು ಜಿಲ್ಲೆ: ‘ಎಐಎಡಿಎಂಕೆ ಪಕ್ಷದ ಎರಡು ಎಲೆಗಳ ಚಿಹ್ನೆಯ ವಿಚಾರದಲ್ಲಿ ಕೆ.ಪಳನಿಸ್ವಾಮಿ ಹಾಗೂ ಓ.ಪನ್ನೀರಸೆಲ್ವಂ ಚುನಾವಣಾ ಆಯೋಗದ ಮೆಟ್ಟಿಲೇರಿದ್ದರೂ ಜಯ ನಮಗೇ ಲಭಿಸಲಿದೆ’ ಎಂದು ಪಕ್ಷದ ಉಪ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ವಜಾಗೊಂಡಿರುವ ಟಿ.ಟಿ.ವಿ. ದಿನಕರ್‌ ಹೇಳಿದರು.

ಸಮೀಪದ ತೊಂಡೂರಿನ ಪ್ಯಾಡಿಂಗ್‌ಟನ್‌ ರೆಸಾರ್ಟ್‌ನಲ್ಲಿ ಶನಿವಾರ ತಮ್ಮ ಬೆಂಬಲಿಗರೊಂದಿಗೆ ಸಭೆ ನಡೆಸಿದ ಬಳಿಕ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ‘ಪಕ್ಷದ ಹಿತಾಸಕ್ತಿಯ ರಕ್ಷಣೆಯೇ ನಮ್ಮ ಬಣದ ಉದ್ದೇಶ. ಪಕ್ಷಕ್ಕೆ ವಿರುದ್ಧವಾಗಿರುವ ವ್ಯಕ್ತಿಗಳನ್ನು ಸಹಿಸುವುದಿಲ್ಲ’ ಎಂದು ತಮಿಳುನಾಡು ಮುಖ್ಯಮಂತ್ರಿ ಪಳನಿಸ್ವಾಮಿ ವಿರುದ್ಧ ಕಿಡಿಕಾರಿದರು.

‘ಜಯಲಲಿತಾ ಸಾವು: ತನಿಖೆಗೆ ಸಿದ್ಧ’

‘ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಸಾವಿನ ಕುರಿತು ಸಂದೇಹ ವ್ಯಕ್ತಪಡಿಸಲಾಗುತ್ತಿದೆ. ಅಗತ್ಯವಿದ್ದರೆ ಸಿಬಿಐ ತನಿಖೆಗೆ ವಹಿಸಲಿ’ ಎಂದು ದಿನಕರನ್‌ ಹೇಳಿದರು.

‘ಜಯಲಲಿತಾಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿರುವ ಎಲ್ಲ ದೃಶ್ಯಗಳೂ ಸಿ.ಸಿ ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಅಗತ್ಯಬಿದ್ದಾಗ ಅದನ್ನು ಬಹಿರಂಗ ಪಡಿಸುತ್ತೇವೆ’ ಎಂದು ತಿಳಿಸಿದರು.

‘ಎಲ್ಲರಿಗೂ ರಾಜಕೀಯ ಪ್ರವೇಶ ಮಾಡುವುದಕ್ಕೆ ಹಕ್ಕಿದೆ. ಅದನ್ನು ವಿರೋಧಿಸುವ ಹಕ್ಕು ಯಾರಿಗೂ ಇಲ್ಲ. ಅಲ್ಲದೇ ಯಾರೂ ಬೇಕಾದರೂ ಮುಖ್ಯಮಂತ್ರಿ ಆಗುವ ಕನಸು ಕಾಣಬಹುದು’ ಎಂದು ಚಿತ್ರ ನಟ ಕಮಲ ಹಾಸನ್‌ ರಾಜಕೀಯ ಪ್ರವೇಶ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry