7

ಪ್ರವೇಶ ನಿರಾಕರಣೆ ಹಾಗೂ ಭಕ್ತಿಯಲ್ಲಿನ ಸುಖ

Published:
Updated:
ಪ್ರವೇಶ ನಿರಾಕರಣೆ ಹಾಗೂ ಭಕ್ತಿಯಲ್ಲಿನ ಸುಖ

ದುಶ್ಶಾಸನ ಹಾಗೂ ದುರ್ಯೋಧನ ಎನ್ನುವ ಹೆಸರುಗಳನ್ನು ಒಡಿಶಾ ಜನರಿಗೆ ಇಡುವುದು ಸಾಮಾನ್ಯ. ಭುವನೇಶ್ವರ ಹಾಗೂ ಪುರಿಗೆ ಭೇಟಿ ನೀಡುವವರೆಗೆ ನನಗೆ ಇದು ತಿಳಿದಿರಲಿಲ್ಲ. ನಾನು ಜಗನ್ನಾಥ ದೇವಸ್ಥಾನ ನೋಡಲು ಇಲ್ಲಿಗೆ ಬಂದಿದ್ದೇನೆ. ಇಂತಹ ದೇವಸ್ಥಾನಗಳ ಇತಿಹಾಸ ಹಾಗೂ ಅವುಗಳ ವಾಸ್ತುಶಿಲ್ಪ ನನ್ನನ್ನು ಮಂತ್ರಮುಗ್ಧಗೊಳಿಸುವ ಕಾರಣ ನಾನು ಇವುಗಳನ್ನು ವೀಕ್ಷಿಸಲು ಹೋಗುತ್ತೇನೆ. ಭಾರತವು ಸಾಂಸ್ಕೃತಿಕವಾಗಿ ಏಕರೂಪಿಯಾಗಿದೆ ಎಂದು ಹೊರಗಿನಿಂದ ಅನಿಸಬಹುದಾದರೂ, ನಿಜವಾಗಿಯೂ ಅದು ಹಾಗಿಲ್ಲ ಎಂಬುದನ್ನು ಕಂಡುಕೊಳ್ಳಲಿಕ್ಕೂ ಇದು ನನಗೆ ಸಹಾಯ ಮಾಡುತ್ತದೆ.

ದುಶ್ಶಾಸನನು ಮಹಾಭಾರತದ ಖಳನಾಯಕ ಎಂದೇ ನಮಗೆಲ್ಲ ಹೇಳಿಕೊಡಲಾಗಿದೆ. ಇವನ ಹೆಸರನ್ನು ಅಪ್ಪ-ಅಮ್ಮ ತಮ್ಮ ಮಗನಿಗೆ ಇಡಬಹುದು ಎಂಬ ಆಲೋಚನೆಯೇ ಗುಜರಾತ್ ಅಥವಾ ದೇಶದ ಇತರ ಪ್ರದೇಶಗಳ ಜನರಲ್ಲಿ ಆಶ್ಚರ್ಯ ತರಿಸುತ್ತದೆ. ಒಡಿಶಾ ರಾಜ್ಯದವರು ನಮ್ಮಲ್ಲಿ ಕುತೂಹಲ ಸೃಷ್ಟಿಸುವ ಜನ ಎಂಬುದು ಸ್ಪಷ್ಟ. ದೈಹಿಕ ಶ್ರಮ ಬೇಡುವ ಕೆಲಸಗಳನ್ನು ಅವರು ಕಷ್ಟಪಟ್ಟು ಮಾಡುತ್ತಿರುವುದನ್ನು ಮಾತ್ರ ನಾವು ನೋಡಿರುತ್ತೇವೆ. ಆದರೆ ಅವರ ಸಾಂಸ್ಕೃತಿಕ ಆಳವನ್ನು ನಾವು ಗ್ರಹಿಸಿಲ್ಲ.

ಈ ಬಾರಿಯ ಪ್ರವಾಸದ ವೇಳೆ ನಾನು ಅತ್ತೆಯ ಮನೆಯವರನ್ನು ಕರೆದುಕೊಂಡು ಬಂದಿದ್ದೇನೆ. ಅವರು ಬಂಗಾಳಿ ಬ್ರಾಹ್ಮಣರು. ಪೂಜೆಗಳಲ್ಲಿ ಅವರಿಗೆ ನನಗಿಂತ ಹೆಚ್ಚು ಆಸಕ್ತಿ. ದೇವರ ಜೊತೆ ನನಗೆ ನಿರ್ದಿಷ್ಟವಾದ ತಕರಾರುಗಳು ಏನೂ ಇಲ್ಲ. ಆದರೆ ನನಗೆ ಈಗಾಗಲೇ ಸಾಕಷ್ಟು ಇದೆ. ದೇವರಿಂದ ಇನ್ನಷ್ಟು ಬಯಸಲು ನನಗೆ ಮುಜುಗರವಾಗುತ್ತದೆ. ಹಾಗಾಗಿ, ನಾ ಆ ಕೆಲಸ ಮಾಡುವುದಿಲ್ಲ.

ಜಗನ್ನಾಥ ದೇವಸ್ಥಾನದ ಹೊರಗಡೆ ಹಲವು ಭಾಷೆಗಳಲ್ಲಿ ಬರೆದಿರುವ ಒಂದು ಸೂಚನಾ ಫಲಕವು, ‘ಹಿಂದೂಗಳಿಗೆ ಮಾತ್ರ ಪ್ರವೇಶ’ ಎನ್ನುತ್ತದೆ. ಈ ಸೂಚನೆಯ ಹಿಂದಿನ ತರ್ಕ ಏನು ಎಂಬುದು ನನಗೆ ಅರ್ಥವಾಗುವುದಿಲ್ಲ ಎಂಬುದನ್ನು ಒಪ್ಪಿಕೊಳ್ಳುತ್ತೇನೆ. ಇಂತಹ ನಿಯಮಗಳು ಚರ್ಚ್‌ಗಳಲ್ಲಿ ಇರುವುದಿಲ್ಲ, ಅತ್ಯಂತ ಪ್ರಸಿದ್ಧವಾದ ವ್ಯಾಟಿಕನ್‌ನ ಚರ್ಚ್‌ನಲ್ಲೂ ಇಂಥದ್ದು ಇಲ್ಲ. ಆ ಚರ್ಚ್‌ಅನ್ನು ನಾನು ನೋಡಿದ್ದೇನೆ. ಅಲ್ಲಿ ಐತಿಹಾಸಿಕ ಮಹತ್ವದ ವಸ್ತುಗಳನ್ನು ಅತ್ಯಂತ ಹೆಮ್ಮೆಯಿಂದ ಪ್ರದರ್ಶನಕ್ಕೆ ಇರಿಸಲಾಗಿದೆ. ಮೆಕ್ಕಾದಲ್ಲಿ ಮುಸ್ಲಿಮೇತರರಿಗೆ ಅವಕಾಶ ಇಲ್ಲ. ಆದರೆ ಅಲ್ಲಿಗೆ ಗುರು ನಾನಕರು ಒಮ್ಮೆ ಹೋಗಿದ್ದರು ಎಂದು ನಮಗೆ ಹೇಳಿಕೊಡಲಾಗಿದೆ.

ಕೆಲವು ವರ್ಷಗಳ ಹಿಂದೆ ನಾನು ಸ್ಥಳೀಯ ಸ್ನೇಹಿತರ ಜೊತೆ, ಲಾಹೋರಿನ ಗುರು ಅರ್ಜನ್‌ ಅವರ ಗುರುದ್ವಾರಕ್ಕೆ ಭೇಟಿ ನೀಡಿದ್ದೆ. ಗುರುದ್ವಾರಕ್ಕೆ ಪ್ರವೇಶಿಸಲು ಮುಸ್ಲಿಮರಿಗೆ ಅವಕಾಶ ಇಲ್ಲ ಎಂಬ ಸೂಚನಾ ಫಲಕವನ್ನು ಅಲ್ಲಿ ಹೊರಗಡೆ ಹಾಕಿದ್ದರು. ಅದನ್ನು ಹಾಕಿದ್ದು ಸರ್ಕಾರದವರು ಅನಿಸುತ್ತದೆ. ಇದನ್ನು ನಾವು ನಿರ್ಲಕ್ಷಿಸಿದೆವು. ಅಲ್ಲಿನ ಸಿಖ್ಖರು, ನಮ್ಮ ಬಗ್ಗೆ ವಿಚಾರಿಸಿದಾಗ ನಾವು ಸುಳ್ಳು ಹೇಳಲಿಲ್ಲ. ನನ್ನ ಸ್ಥಳೀಯ ಸ್ನೇಹಿತರ ಮಗನಿಗೆ ಅರ್ಜುನ್ ಎಂದು ಹೆಸರಿಡಲಾಗಿತ್ತು. ಇದನ್ನು ತಿಳಿದ ಸಿಖ್ಖರು, ಅರ್ಜುನ್‌ನನ್ನು ತಮ್ಮ ಜೊತೆ ಆಟವಾಡಲು ಬಿಡಿ ಎಂದು ಕೇಳಿದರು. ಹಾಗೇ ಮಾಡಿದ ನಾವು ಗುರುದ್ವಾರ ವೀಕ್ಷಿಸಿದೆವು.

ಭಾರತದ ಚರ್ಚ್‌ಗಳು, ಮಸೀದಿಗಳು ಹಾಗೂ ಗುರುದ್ವಾರಗಳು ಎಲ್ಲರಿಗೂ ಪ್ರವೇಶ ನೀಡುತ್ತವೆ. ತಮ್ಮ ಹತ್ತಿರದ ಮಸೀದಿಗಳ ಒಳಗೆ ಹೋಗಿಬನ್ನಿ ಎಂದು ನಾನು ಹಿಂದೂಗಳಿಗೆ ಹೇಳುತ್ತೇನೆ. ಅವರಿಗೆ ಇಸ್ಲಾಂನಲ್ಲಿ ಆಸಕ್ತಿ ಇದ್ದರೂ, ಇಲ್ಲದಿದ್ದರೂ ಅವರನ್ನು ಅಲ್ಲಿ ಸ್ವಾಗತಿಸಲಾಗುತ್ತದೆ.

ನಮ್ಮ ನಂಬಿಕೆಗಳ ಬಗ್ಗೆ ಆಸಕ್ತಿ ಇರುವವರನ್ನು, ಆದರೆ ಹಿಂದೂಗಳಲ್ಲದವರನ್ನು, ನಮ್ಮ ದೇವಸ್ಥಾನಗಳಿಂದ ಹೊರಗಿಡುವುದು ಏಕೆ? ಹಿಂದೂ ಶಾಸ್ತ್ರಗಳಲ್ಲಿ ಹೇಳಿರುವ ಕಾರಣ ಹೀಗೆ ಮಾಡಲಾಗುತ್ತಿದೆ ಎನ್ನಲು ಸಾಧ್ಯವಿಲ್ಲ. ಏಕೆಂದರೆ ಹಾಗೆ ಹೇಳಿದ್ದಿದ್ದರೆ, ಎಲ್ಲ ದೇವಸ್ಥಾನಗಳೂ ಇದೇ ನಿಯಮ ಪಾಲಿಸುತ್ತಿದ್ದವು. ವಾಸ್ತವ ಹಾಗಿಲ್ಲ. ಆದರೆ, ವಿದೇಶಿ ಪ್ರವಾಸಿಗರಿಗೆ ಹಾಗೂ ಹಿಂದೂಗಳಲ್ಲದ ಭಾರತೀಯರಿಗೆ ಪ್ರಮುಖ ದೇವಸ್ಥಾನಗಳು ಪ್ರವೇಶ ನಿರಾಕರಿಸುತ್ತಿವೆ. ಈ ವರ್ಷ ಇಂಥದ್ದೊಂದು ಸೂಚನಾ ಫಲಕವನ್ನು ನಾನು ಮದುರೈ ಮೀನಾಕ್ಷಿ ದೇವಸ್ಥಾನದ ಗರ್ಭಗೃಹದ ಹೊರಗಡೆ, ನೇಪಾಳದ ಪಶುಪತಿನಾಥ ದೇವಸ್ಥಾನದಲ್ಲಿ ಗಮನಿಸಿದೆ.

ಹುಟ್ಟಿನಿಂದ ಕ್ರೈಸ್ತರಾಗಿರುವ ಮಹಾನ್ ಗಾಯಕ ಯೇಸುದಾಸ್ ಅವರಿಗೆ ಗುರುವಾಯೂರು ದೇವಸ್ಥಾನಕ್ಕೆ ಪ್ರವೇಶ ನಿರಾಕರಿಸುತ್ತಲೇ ಬರಲಾಗಿದೆ. ಅಲ್ಲಿ ಭಜನೆ ಹಾಡಬೇಕು ಎಂಬುದು ಯೇಸುದಾಸ್ ಆಸೆ. ಹಿಂದೂ ಆಚರಣೆಗಳಲ್ಲಿ ತಮಗೆ ನಂಬಿಕೆ ಇದೆ ಎಂಬ ಪ್ರಮಾಣಪತ್ರ ನೀಡಿದ ನಂತರ, ಅವರಿಗೆ ಪದ್ಮನಾಭಸ್ವಾಮಿ ದೇವಸ್ಥಾನದ ಒಳಕ್ಕೆ (ಸೆಪ್ಟೆಂಬರ್ 30ರಂದು) ಪ್ರವೇಶ ನೀಡಲಾಗುತ್ತಿದೆ.

ಹಿಂದೂಗಳು ಇತರರನ್ನು ಮತಾಂತರ ಮಾಡುವುದಿಲ್ಲವಾದ ಕಾರಣ, ಮತಾಂತರ ಮಾಡುವ ಸಮುದಾಯದ ಜನರನ್ನು ಹೊರಗಡೆಯೇ ಇರಿಸುವ ಹಕ್ಕು ಹಿಂದೂಗಳಿಗೆ ಇದೆ ಎಂಬ ಒಂದು ವಿವರಣೆಯನ್ನು ಈ ಆಚರಣೆಗಳ ವಿಚಾರದಲ್ಲಿ ನೀಡಬಹುದು. ಆದರೆ ಇದನ್ನು ಸಾಬೀತು ಮಾಡುವುದು ಕಷ್ಟ. ದೇವಸ್ಥಾನಗಳು ಇತರರನ್ನು, ಅದರಲ್ಲೂ ಹಿಂದೂಗಳಲ್ಲಿನ ಇತರ ಸಮುದಾಯಗಳನ್ನೂ, ಹೊರಗಡೆಯೇ ಇರಿಸಿವೆ ಎಂಬುದು ವಾಸ್ತವ. ಸ್ವಾಮಿ ನಾರಾಯಣ ಪಂಥದ ದೇವಸ್ಥಾನಗಳು (ಇವುಗಳನ್ನು ನಡೆಸುವವರು ನನ್ನ ಪಟೇಲ್ ಸಮುದಾಯದವರು) ಕೆಳಜಾತಿಗಳ ಜನರನ್ನು ಒಳಕ್ಕೆ ಬಿಟ್ಟುಕೊಳ್ಳದಿರುವುದನ್ನು ವಿರೋಧಿಸಿ ಗಾಂಧೀಜಿ 1930ರ ದಶಕದಲ್ಲಿ ಉಪವಾಸ ಸತ್ಯಾಗ್ರಹ ನಡೆಸಿದರು. ಕೆಳಜಾತಿಗಳ ಜನರ ಪ್ರವೇಶಕ್ಕೆ ಒಪ್ಪಿಗೆ ನೀಡುವ ಬದಲು ಸ್ವಾಮಿ ನಾರಾಯಣ ಪಂಥದವರು, ತಾವು ಹಿಂದೂ ಸಮುದಾಯಕ್ಕೆ ಸೇರಿಲ್ಲದ ಅಲ್ಪಸಂಖ್ಯಾತರು ಎಂದು ಬಿಂಬಿಸಿಕೊಳ್ಳಲು ನ್ಯಾಯಾಲಯದಲ್ಲಿ ಯತ್ನಿಸಿದರು. ದೇವಸ್ಥಾನಗಳನ್ನು ಕೆಲವರ ಪ್ರವೇಶಕ್ಕೆ ಮುಕ್ತವಾಗಿಸದೆ ಇರುವುದಕ್ಕೆ ಕಾರಣ ಜಾತಿ ಶುದ್ಧತೆಯ ಪೂರ್ವಗ್ರಹವೇ? ಹಾಗೆ ಇರಲಿಕ್ಕಿಲ್ಲ ಎಂದು ಆಶಿಸುವೆ.

ಇಂದಿರಾ ಗಾಂಧಿ ಅವರಿಗೆ ಜಗನ್ನಾಥ ದೇವಸ್ಥಾನ ಪ್ರವೇಶಕ್ಕೆ ಪೂಜಾರಿಗಳು ಅವಕಾಶ ನಿರಾಕರಿಸಿದ್ದು ಎಲ್ಲರಿಗೂ ತಿಳಿದಿದೆ. ಇಂದಿರಾ ಅವರು ಜನಿಸಿದ್ದು ಹಿಂದೂವಾಗಿ, ಅವರ ಅಂತಿಮ ಸಂಸ್ಕಾರ ನಡೆದಿದ್ದು ಕೂಡ ಹಿಂದೂ ಸಂಪ್ರದಾಯಕ್ಕೆ ಅನುಗುಣವಾಗಿ. ‘ಸಂಪ್ರದಾಯವಾದಿ ಹಿಂದೂಗಳಿಗೆ ಮಾತ್ರ ಪ್ರವೇಶ’ ಎಂಬ ಸೂಚನಾ ಫಲಕವನ್ನು ಜಗನ್ನಾಥ ದೇವಸ್ಥಾನದಲ್ಲಿ ಹಾಕಲಾಗಿದೆ ಎಂದು 2012ರಲ್ಲಿ ವರದಿಯಾಗಿತ್ತು. ಈ ಫಲಕವನ್ನು ನಾನು ಕಾಣಲಿಲ್ಲ. ಆದರೂ ಇದೊಂದು ಆಶ್ಚರ್ಯದ ಸಂಗತಿ. ಸಂಪ್ರದಾಯವಾದಿ ಹಿಂದೂ ಎಂಬುದು ಸಂಪೂರ್ಣವಾಗಿ ವರ್ಣಾಶ್ರಮ ವ್ಯವಸ್ಥೆಗೆ ಸಂಬಂಧಿಸಿದ್ದು. ಇದರ ಆಚರಣೆಯನ್ನು ಸಂವಿಧಾನವು 14ರಿಂದ 17ರವರೆಗಿನ ವಿಧಿಗಳ ಮೂಲಕ ಸ್ಪಷ್ಟವಾಗಿ ನಿರ್ಬಂಧಿಸಿದೆ. ವರ್ಣ ವ್ಯವಸ್ಥೆಯನ್ನು ಪಾಲಿಸುವವ (ಅಂದರೆ ಅಸ್ಪೃಶ್ಯತೆಯನ್ನು ಆಚರಿಸುತ್ತ, ಶೂದ್ರರಿಗೆ ವೇದಗಳನ್ನು ಹೇಳಿಕೊಡಬಾರದು ಎಂಬುದನ್ನು ಒಪ್ಪುವವ) ಮಾತ್ರ ಸಂಪ್ರದಾಯವಾದಿ ಆಗುತ್ತಾನೆ. ಹಾಗಾದರೆ, ಪೂಜಾರಿಗಳು ದೇವಸ್ಥಾನದ ಒಳಗೆ ಪ್ರವೇಶಿಸುವ ಅವಕಾಶ ನೀಡಲು ಯತ್ನಿಸುತ್ತಿರುವುದು ಯಾರಿಗೆ?

ಒಡಿಯಾ ಯುವತಿಯೊಬ್ಬಳನ್ನು ಮದುವೆಯಾಗಿರುವ ಅಮೆರಿಕದ ವ್ಯಕ್ತಿಯೊಬ್ಬ ರಥಯಾತ್ರೆಯಲ್ಲಿ ಪಾಲ್ಗೊಳ್ಳಲು ಯತ್ನಿಸಿದಾಗ, ಪೂಜಾರಿಗಳು ಆತನನ್ನು ಥಳಿಸಿದರು. ಈ ಘಟನೆಯ ನಂತರ ಇಂಥದ್ದೊಂದು ಫಲಕ ಹಾಕಾಲಾಯಿತು. ‘ಇದು ಅನ್ಯಾಯ. ಜಗನ್ನಾಥನನ್ನು ಜಗತ್ತಿನ ಒಡೆಯ ಎಂದು ಪರಿಗಣಿಸಿರುವಾಗ, ನನ್ನ ಗಂಡನಿಗೆ ಅವಕಾಶ ನಿರಾಕರಿಸುವುದು ಎಷ್ಟು ಸರಿ’ ಎಂದು ಆತನ ಪತ್ನಿ ಸಿಲ್ಪಿ ಬೊರಾಲ್ ಪ್ರಶಿಸಿದ್ದರು ಎಂದು ವರದಿಯಾಗಿದೆ. ಆಕೆ ಹೇಳುವ ಮಾತು ನನಗೆ ಅರ್ಥವಾಗುತ್ತದೆ. ಪುರಿ ದೇವಸ್ಥಾನ ಹಾಗೂ ಇತರ ದೇವಸ್ಥಾನಗಳಿಗೆ ಸೇರಿದವರು ಕೆಲವರಿಗೆ ಪ್ರವೇಶ ನಿರಾಕರಿಸುತ್ತಿರುವುದು ಏಕೆ ಎಂಬುದನ್ನು ಸ್ಪಷ್ಟವಾಗಿ ವಿವರಿಸಲಿ ಎಂದು ನಾನು ಬಯಸುತ್ತೇನೆ.

ವಾಸ್ತುಶಿಲ್ಪ ಹಾಗೂ ಅಸಾಮಾನ್ಯ ವಿಗ್ರಹಗಳನ್ನು ಕಂಡು ಹೇಳುವುದಾದರೆ ಜಗನ್ನಾಥ ದೇವಸ್ಥಾನ ಸುಂದರವಾಗಿದೆ. ಕೊನೆಯ ಆರತಿ ನಡೆಯುತ್ತಿದ್ದ ವೇಳೆ ನಾವು ಅಲ್ಲಿಗೆ ಹೋದೆವು. ಆ ಹೊತ್ತಿನಲ್ಲಿ ಅಲ್ಲಿ ಕೆಲವು ಜನ ಮಾತ್ರ ಇದ್ದರು. ದೇವರ ಮೂರ್ತಿಯನ್ನು ಕಂಡ ನಾನು ಹಿಂದೆ ತಿರುಗಿ ಜನರನ್ನು ನೋಡಿದೆ. ಪೂಜೆಯ ವಿಚಾರದಲ್ಲಿ ಭಾರತೀಯರು ಇತರರಿಗಿಂತ ಹೆಚ್ಚು ತೋರ್ಪಡಿಕೆಯ ಜನ. ಎರಡೂ ಕೈಗಳನ್ನು ಮೇಲೆತ್ತುವುದು, ಬಾಗುವುದು, ಉರುಳು ಸೇವೆ ಮಾಡುವುದು ಇತ್ಯಾದಿಗಳನ್ನು ನಾವು ಮಾಡುತ್ತೇವೆ. ಚರ್ಚ್‌, ಮಸೀದಿ, ಗುರುದ್ವಾರಗಳಲ್ಲಿ ನಡೆಯುವಂತೆ ಸಾಮೂಹಿಕ ಪ್ರಾರ್ಥನೆ ನಮ್ಮದಲ್ಲ. ನಮ್ಮದು ವೈಯಕ್ತಿಕ ನೆಲೆಯಲ್ಲಿ ಆಗುವ ಪ್ರಾರ್ಥನೆ. ಮೂರ್ತಿ ರೂಪದ ದೇವರು ನಮ್ಮನ್ನು ಸರಿಯಾಗಿ ನೋಡಬೇಕು ಎಂದು ನಾವು ಖಚಿತ ಮಾಡಿಕೊಳ್ಳುತ್ತೇವೆ. ಹಾಗಾಗಿಯೇ ನಾವು ಎಲ್ಲರ ನಡುವೆಯೇ ಎದ್ದು ಕಾಣುವಂತೆ ಆಗಲು ಯತ್ನಿಸುತ್ತೇವೆ. (ದೇವರ ಪೂರ್ಣ ಗಮನ ನಮ್ಮ ಮೇಲೆ ಬರಲಿ ಎಂದು ಆಶಿಸುವ ಕಾರಣ, ಕೆಲವರನ್ನು ಹೊರಗಡೆ ಇರಿಸುತ್ತೇವೆಯೇ?)

ಅಲ್ಲಿಗೆ ಬಂದಿದ್ದವರಲ್ಲಿ ಹಲವರು ಬಡವರು. ಅವರ ಮುಖದಲ್ಲಿ ನೈಜ ಭಕ್ತಿ, ಭಾವ, ನಂಬಿಕೆಗಳು ಕಂಡವು. ಅವುಗಳನ್ನು ಕಂಡು ನಾನು ಭಾವುಕನಾದೆ. ಇಂತಹ ಕ್ಷಣಗಳನ್ನು ಅನುಭವಿಸಲು ಹೆಚ್ಚು ಜನರಿಗೆ ನಾವು ಅವಕಾಶ ಮಾಡಿಕೊಡೋಣ ಎಂದು ನಾನು ಆಶಿಸುತ್ತೇನೆ. ಹಿಂದೂ ಭಕ್ತಿಯ ಭಾವೋತ್ಕರ್ಷ, ಹಿಗ್ಗು ಅವರಿಗೂ ಸಿಗಲಿ ಹಾಗೂ ಅವರನ್ನು ಕಾಣುವ ಸುಖ ಕೂಡ ಇತರರಿಗೆ ಸಿಗಲಿ.

(ಲೇಖಕ ಅಂಕಣಕಾರ ಹಾಗೂ ಆಮ್ನೆಸ್ಟಿ ಇಂಟರ್ ನ್ಯಾಷನಲ್ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry