ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತರಗತಿಯಲ್ಲಿ ಪಠ್ಯಪುಸ್ತಕದ ಪ್ರಶಸ್ತ ಬಳಕೆ

Last Updated 25 ಸೆಪ್ಟೆಂಬರ್ 2017, 20:09 IST
ಅಕ್ಷರ ಗಾತ್ರ

ಇಂದಿನ ಶಿಕ್ಷಣ ಪದ್ಧತಿಯಲ್ಲಿ ಮಕ್ಕಳಿಗೆ ಕೆಲವು ಅಧ್ಯಾಪಕರು ಹೀಗೆ ಹೇಳುವುದುಂಟು, ‘ಪಠ್ಯಪುಸ್ತಕವನ್ನು ಬಿಸಾಡು; ಪ್ರಶ್ನೋತ್ತರಗಳನ್ನು ಒಳಗೊಂಡ ನನ್ನ ನೋಟ್ಸ್‌ ನಿನ್ನ ಪರೀಕ್ಷಾ ಅಂಕ ಗಳಿಕೆಗೆ ಸಂಕ್ಷಿಪ್ತ ಆಕರ.’

ಈ ವಿಧಾನ ಈಗಲೂ ರಾಜ್ಯದಾದ್ಯಂತ ಪ್ರಚಾರದಲ್ಲಿದೆ. ಇದಕ್ಕೆ ಕಾರಣವೂ ಉಂಟು. ಸ್ವಾತಂತ್ರ್ಯ ಬಂದ ಹೊಸತರಲ್ಲಿ ಕಡು ಬಡಮಕ್ಕಳು ಶಾಲೆಗೆ ಬರುತ್ತಿದ್ದರು. ಅವರಿಗೆ ಕೊಳ್ಳುವ ಸಾಮರ್ಥ್ಯ ಇಲ್ಲದ ಕಾರಣ ಪಠ್ಯಪುಸ್ತಕಗಳು ಅವರ ಬಳಿ ಇರುತ್ತಿರಲಿಲ್ಲ. ಶಾಲೆಗಳನ್ನೂ ಅಧಿಕ ಸಂಖ್ಯೆಯಲ್ಲಿ ತೆರೆಯುತ್ತಿದ್ದ ಕಾರಣ ಆ ಶಾಲೆಗಳಲ್ಲಿ ಪುಸ್ತಕಗಳು ಗ್ರಂಥಾಲಯದ ಮೂಲಕ ಪೂರೈಕೆ ಆಗುತ್ತಿರಲಿಲ್ಲ. ಈಗಿನ ಹಾಗೆ, ಪಠ್ಯಪುಸ್ತಕವನ್ನು ಸರ್ಕಾರ ಪೂರೈಕೆ ಮಾಡುತ್ತಿರಲಿಲ್ಲ; ಅಂತರ್ಜಾಲ ಸೌಕರ್ಯವೂ ಇರಲಿಲ್ಲ. ಹಾಗಾಗಿ ವಿದ್ಯಾರ್ಥಿಗಳು ಮರುಪರಿಶೀಲನೆ ಮಾಡಲು ಅನುಕೂಲವಾಗುವಂತೆ ನೋಟ್ಸ್‌ ಬರೆಸಲೇಬೇಕಾದ ಅನಿವಾರ್ಯವಿತ್ತು. ಪಠ್ಯಪುಸ್ತಕಗಳನ್ನು ರಚನೆ ಮಾಡುವಾಗ ಅಧ್ಯಾಪಕರಿಗೆ ಬೋಧಿಸಬೇಕಾದ ವಿಷಯವ್ಯಾಪ್ತಿಯನ್ನು ನಿರೂಪಿಸುವ ಹಾಗೆ ಪಠ್ಯಪುಸ್ತಕಗಳನ್ನು ಬರೆಯಲಾಗುತ್ತಿತ್ತು. ಆ ಬಿಗುಭಾಷೆಯನ್ನು ಮಕ್ಕಳಿಗೆ ಗ್ರಾಹ್ಯವಾಗುವ ಹಾಗೆ ಅವರ ಸರಳ ಭಾಷೆಯಲ್ಲಿ ನೋಟ್ಸ್‌ ಆಗಿ ರಚಿಸಿಕೊಡುವ ಅಭ್ಯಾಸ ರೂಢಿಗೆ ಬಂದಿತು.

ಆದರೆ ಇಂದು ಪರಿಸ್ಥಿತಿ ಬದಲಾಗಿದೆ. ಅಭ್ಯಾಸಗಳನ್ನು ಬದಲಿಸಿಕೊಳ್ಳಲು, ಮರುಪರಿಶೀಲಿಸಲು ಇದು ಸಕಾಲ. ಏಕೆಂದರೆ ಇಂದಿನ ವಿದ್ಯಾರ್ಥಿಗಳೆಲ್ಲರ ಬಳಿ ಪಠ್ಯಪುಸ್ತಕವಿದೆ. ಪಠ್ಯಪುಸ್ತಕದ ಪ್ರೇರಿಸುವ ಪರಿಭಾಷೆಯಲ್ಲಿ ಬರೆಯಲು ಪ್ರಯತ್ನವಂತೂ ಮಾಡಲಾಗಿದೆ. (ಅಲ್ಲಲ್ಲಿ ಎಡವಿರಲೂ ಸಾಧ್ಯ) ಪ್ರತಿ ಶಾಲೆಗೂ ಕಂಪ್ಯೂಟರ್‌ ನೀಡಲಾಗಿದ್ದು – ಸದ್ಯದಲ್ಲೇ ವೈಫೈ ಸೌಕರ್ಯವೂ ಒದಗುವ ಲಕ್ಷಣವಿದೆ. ಹೀಗಾಗಿ ಮಾಹಿತಿ ಲಭ್ಯತೆಯ ಕೊರತೆ ಈ ಮೊದಲಿನ ಹಾಗೆ ಇಲ್ಲ.

ಅಂಕಗಳನ್ನು ಗಳಿಸಲು ಹೆಚ್ಚು ಮಾಹಿತಿ ಅಡ್ಡಿ

ಪಠ್ಯಪುಸ್ತಕಕ್ಕಿಂತಲೂ ಸಂಕ್ಷಿಪ್ತವಾಗಿ ಪ್ರಶ್ನೋತ್ತರ ರೂಪದಲ್ಲಿ ಬರೆಸುವ ನೆವದಲ್ಲಿ ಈಗಲೂ ನೋಟ್ಸ್‌ಗಳನ್ನು ಬರೆಸಲಾಗುತ್ತಿದೆ. ಈ ಹಿಂದೆ ಪುಸ್ತಕವಾಗುತ್ತಿದ್ದ ಈ ಪದ್ಧತಿಯ ಅಭ್ಯಾಸ, ಪ್ರಶ್ನಿಸದೆ ಮುಂದುವರೆಸುತ್ತಿರುವುದರಿಂದ ಚಟವಾಗುತ್ತಿದೆ. ಇದು ವಿದ್ಯಾರ್ಥಿಯ ಆಲೋಚನಾ ಸಾಮರ್ಥ್ಯ ಹಾಗೂ ಅಭಿವ್ಯಕ್ತಿ ಸಾಮರ್ಥ್ಯವನ್ನು ಕುಂಠಿಸುತ್ತಿದೆ. ಆದ್ದರಿಂದ ಈ ಚಟವನ್ನು ಮುಂದುವರಿಸುವ ಹಟ ಸಲ್ಲದು.

ಹೀಗೆಂದ ಮಾತ್ರಕ್ಕೆ ಪಠ್ಯಪುಸ್ತಕವೇ ನೋಟ್ಸ್‌ ಎಂದು ಪರಿಗಣಿತವಾಗಬೇಕೆಂಬ ಅಭಿಪ್ರಾಯವಲ್ಲ. ಆದರೆ ಪ್ರತಿ ದಿನವೂ ಶಾಲೆಗೆ ಶ್ರಮವಹಿಸಿ ಹೊತ್ತು ತರುವ ಪಠ್ಯಪುಸ್ತಕಗಳನ್ನು ತರಗತಿಗಳಲ್ಲಿ ಪ್ರಶಸ್ತವಾಗಿ ಬಳಕೆ ಆಗಬೇಕು.

ನೋಟ್ಸ್‌ ಬರೆಸುವುದೆಂದರೆ ಖಾಲಿ ಹಾಳೆಯ ಮೇಲೆ ಅಕ್ಷರಗಳನ್ನು ಉತ್ತಮ ಲೇಖನದ ಮೂಲಕ ತುಂಬಿಸುವುದು (ಇದಕ್ಕೆ ಇಂಗ್ಲಿಷಿನಲ್ಲಿ ‘ಡಿಕ್ಟೇಷನ್‌’ ಎನ್ನಲಾಗುತ್ತದೆ). (ಡಿಕ್ಟೇಷನ್‌ ಎಂದರೆ ನಿರಂಕುಶ ಪ್ರತಿರೋಧ ದಮಿಸಿದ ಆಳ್ವಿಕೆ) ನೋಟ್ಸ್‌ ಬರೆದುಕೊಳ್ಳುವುದು ಕ್ರಿಯೆ – ಆದರೆ ಕಲಿಕೆ ಪ್ರಕ್ರಿಯೆ! ಅಂದರೆ, ಅನುಕ್ರಮ ಪೂರ್ವಯೋಜಿತ ಕ್ರಿಯಾಸರಣಿ.

ನಮ್ಮ ದೇಹಕ್ಕೆ, ಪರಕೀಯ ವಸ್ತು ಪ್ರವೇಶಿಸಿದರೆ ಮೊದಲು ಆಗುವ ಪ್ರತಿಕ್ರಿಯೆ ಪ್ರತಿರೋಧ. ‘ಪರಕಾಯ’ವನ್ನು ಪ್ರತಿಭಟಿಸುವ ಪ್ರತಿಕಾಯಗಳು ಸೃಷ್ಟಿ ಆಗುತ್ತವೆ. ಹಾಗೆಯೇ ವಿದ್ಯಾರ್ಥಿಯು ಹೊಸ ವಿಷಯವನ್ನು ಮೈಗೂಡಿಸಿಕೊಳ್ಳುವಾಗ ಪ್ರೇಮಾದರಗಳಿಂದ ಮೂಕವಾಗಿ ಸ್ವೀಕರಿಸಿದರೆ – ಅದು ಹೇರುವಿಕೆಯೇ ವಿನಾ ಕಲಿಕೆ ಇರಲಿ, ಕಲಿಕೆಗೆ ಪ್ರೇರಕ ಅಲ್ಲ!

ತಾನು ಕಲಿಯುವ ವಿಷಯವನ್ನು ಸ್ವೀಕರಿಸಿದ ವಿದ್ಯಾರ್ಥಿ ತನ್ನ ಹಿಂದಿನ ಅನುಭವ/ ನಂಬಿಕೆಗಳೊಡನೆ ತಾಳೆ ನೋಡಬೇಕು. ಹೊಸ ಅಭಿಪ್ರಾಯ ಸ್ವೀಕರಿಸುವ ಮೊದಲು, ಹಳೆ ಅಭಿಪ್ರಾಯಗಳಲ್ಲಿ ಕಳೆಯಬಹುದಾದದ್ದು, ಪಕ್ಕಕ್ಕೆ ಸರಿಸಬಹುದಾದದ್ದು– ಯಾವುದು? ಅದನ್ನು ಹೇಗೆ ಮಾಡುವುದು ಎಂದು ನಿರ್ಣಯಿಸುವುದು. ಅಂದ ಮೇಲೆ ಹೊಸ ಮಾಹಿತಿ ಸೇರ್ಪಡೆ ಖಾಲಿ ಹಾಳೆಗೆ ಅಕ್ಷರ ತುಂಬಿದಂತಲ್ಲ. ಗ್ರಂಥಾಲಯಕ್ಕೆ ತಂದ ಪುಸ್ತಕವನ್ನು ನಾಮಕರಣ ಮಾಡಿ ಸರಿಯಾದ ಅಲಮಾರು ಮಾಹಿತಿ ಭಂಡಾರಕ್ಕೆ ಸೇರಿಸುವುದೂ ಈ ಬಗೆಯ ಪ್ರಕ್ರಿಯೆಯೇ ವಿನಾ ಕೈ ನೋವು ಬರುವವರೆಗೆ ಕಾಗದದ ಮುಖಕ್ಕೆ ಮಸಿ ಮೆತ್ತಿಬಿಡುವ ಹಾಗೆ ಸರಳವಲ್ಲ.

ಹೊಸ ಪಾಠಕ್ಕೆ ಒಡ್ಡಿಕೊಂಡ ಮಗುವು ತನ್ನ ಪ್ರತಿಕ್ರಿಯೆ ಪ್ರತಿಕ್ರಿಯ ಸರಣಿಯನ್ನು ವಾಹಿಪಟ (Flow Chart) ಸೂಚಿಸುತ್ತದೆ.

ಸೇರ್ಪಡೆ - ಅನುಸ್ಮರಣೆ (ಪೂರ್ವಾನುಭವಾಧಾರಿತ ಪರಿಶೀಲನೆ) - ಅನಿಸಿಕೆ - ವಿಶ್ಲೇಷಣೆ‌ - ಪ್ರತಿಕ್ರಿಯೆ - ವಿಸ್ತರಣೆ - ಅನ್ವಯ - ಅಭಿವ್ಯಕ್ತಿ - ಸಾಧ್ಯಾಸಾಧ್ಯತೆ ಚರ್ಚೆ - ಸಂಭವನೀಯ ಪ್ರಶ್ನೋತ್ತರಗಳು.

ಈ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಾದ ವಿವಿಧ ಹಂತಗಳನ್ನು ನೋಡೋಣ

1) ಮುಂದಿನ ತರಗತಿಯಲ್ಲಿ ಚರ್ಚಿಸುವ ಅಧ್ಯಾಯವನ್ನು ಕುರಿತಂತೆ ಪ್ರೇರಣೆಯ ಮಾತುಗಳನ್ನು ಹೇಳಿ ಅದನ್ನು ಓದಿಕೊಂಡು ಬಂದು ತಮ್ಮ ತಮ್ಮ ಅಭಿಪ್ರಾಯವನ್ನು ತಿಳಿಸುವಂತೆ ಮಕ್ಕಳಿಗೆ ಸೂಚನೆ ನೀಡುವುದು.

2) ತರಗತಿಯ ಹಿಂದಿನ ಸಂಜೆ ಅಧ್ಯಾಪಕರು ಆ ಅಧ್ಯಾಯವನ್ನು ಓದಿ ಅಡಿಗೆರೆ ಹಾಕಬೇಕಾದ ಸ್ವಾರಸ್ಯಕರ ಅಂಶಗಳು, ಹುಡುಗರು ಉಪೇಕ್ಷಿಸಿರಬಹುದಾದ ಮಾಹಿತಿಗಳು, ಸಾಮಾಜಿಕ ಪ್ರಸಕ್ತತೆ, ಅನುಭವಜನ್ಯ ಅಂಶಗಳು, ತೋರಿಕೆಯಾಗಬಹುದಾದ ವೈರುದ್ಧ್ಯಗಳು ಮುಂತಾದುವನ್ನು ಟಿಪ್ಪಣಿ ಮಾಡಿಕೊಂಡು ತಯಾರಾಗುವುದು. ಈ ಟಿಪ್ಪಣಿ ತಯಾರಿಸಲು ಹಿಂದಿನ ವರ್ಷದ ಅನುಭವ ಸಹಾಯಕ (ಹಾಗೆಯೇ ಈ ವರ್ಷದ ಟಿಪ್ಪಣಿಯನ್ನು, ಈ ವರ್ಷದ ಮಕ್ಕಳ ಪ್ರತಿಕ್ರಿಯೆ ಆಧರಿಸಿ ಪರಿಷ್ಕರಿಸಲು ಆಸ್ಪದ ಇದ್ದೇ ಇದೆ).

3) ತರಗತಿಗೆ ಹೋಗಿ ಪ್ರತಿಕ್ರಿಯೆ – ಸರಿ, ತಪ್ಪು, ತಿದ್ದಿಕೆ ಎಲ್ಲವೂ ಒಳಗೊಂಡಂತೆ ಚರ್ಚೆ ಮುಂದುವರಿಕೆಗೆ ಪ್ರಚೋದನೆ ನೀಡುವ ಹಾಗೆ ಅಧ್ಯಾಪಕರು ನಿರೂಪಿಸಬೇಕು.

4) ವಿದ್ಯಾರ್ಥಿಗಳು ಹೇಳುವ ಪ್ರತಿಕ್ರಿಯೆಗಳಲ್ಲಿ ಸರಿಯಾದುದನ್ನು ಮುಕ್ತ ಮನಸ್ಸಿನಿಂದ ಶ್ಲಾಘಿಸಬೇಕು. ತಪ್ಪು ಪ್ರತಿಕ್ರಿಯೆ ಏನಾದರೂ ಇದ್ದಲ್ಲಿ ಮೊದಲು ಪ್ರತಿಕ್ರಿಯಿಸಿದ್ದಕ್ಕೆ ಅಭಿವಂದಿಸಿ, ಪ್ರತಿಕ್ರಿಯೆಯನ್ನು ಸಾಧ್ಯವಾದಲ್ಲಿ ತಿದ್ದುಪಡಿ ಮಾಡಿ, ತಪ್ಪುಗ್ರಹಿಕೆಗೆ ಕಾರಣವನ್ನು ಭೇದಿಸದೆ, ತಪ್ಪುಗ್ರಹಿಕೆಯ ಪರಿಣಾಮವನ್ನು ಒತ್ತಿ ಹೇಳಬೇಕು. ಯಾವುದೇ ಕಾರಣಕ್ಕೆ ತಪ್ಪು ಪ್ರತಿಕ್ರಿಯೆ ನೀಡಿದ ವಿದ್ಯಾರ್ಥಿಗೆ ಮುಖಭಂಗವಾಗದಂತೆ ನೋಡಿಕೊಳ್ಳುವುದು ಅವಶ್ಯ. ಆಕಸ್ಮಿಕ ಆಗುವ ಆಘಾತವನ್ನು ಆದರ, ಸಹಾನುಭೂತಿಗಳಿಂದ ಸರಿಪಡಿಸಿ ಮತ್ತೆ ಅಧ್ಯಾಪಕ – ವಿದ್ಯಾರ್ಥಿ ಬಾಂಧವ್ಯ ಹಾಗೂ ವಿದ್ಯಾರ್ಥಿಯ ಆತ್ಮವಿಶ್ವಾಸ ಕುಗ್ಗದಂತೆ ವಿಶ್ಲೇಷಿಸಿ ತಪ್ಪನ್ನು ಮಾತ್ರ ತೆಗೆದುಹಾಕಬೇಕು.

5) ದೈನಂದಿನ ಅನುಭವಗಳನ್ನು/ ಸಮಾಂತರ ಸಂದರ್ಭಗಳನ್ನು ವಿಪುಲವಾಗಿ ನೀಡುವ ಮೂಲಕ ಈ ಕಲಿಕೆಯ ಮಹತ್ವವನ್ನು ಮನಗಾಣಿಸಬೇಕು.

6) ಮೌಖಿಕವಾಗಿ ವಿದ್ಯಾರ್ಥಿಗಳು ಈ ಪಾಠದ ಸಾರಾಂಶವನ್ನು ಹೇಳಲು ಪ್ರೇರೇಪಿಸಿ ತಿದ್ದುವುದಲ್ಲದೆ, ಲಿಖಿತವಾಗಿ ಅವರ ಭಾಷೆಯಲ್ಲಿ ಬರೆದುಕೊಂಡು ಬರಲು ಧೈರ್ಯ ತಂದುಕೊಡಬೇಕು.

7) ಈ ಅಧ್ಯಾಯದಲ್ಲಿ ಬರಬಹುದಾದ ಪ್ರಶ್ನೆಗಳು (ವಿವಿಧ ಅಂಶದವು) ವಿದ್ಯಾರ್ಥಿಗಳಿಂದಲೇ ರೂಪಿತವಾಗಿ – ಬೇರೆ ವಿದ್ಯಾರ್ಥಿಗಳು ಉತ್ತರ ಹೇಳಿದಂತೆ ಆಗಬೇಕು.

8) ವಿದ್ಯಾರ್ಥಿಗಳ ಲಕ್ಷ್ಯಕ್ಕೆ ಬರದೇ ಹೋದ ಪ್ರಶ್ನೆಗಳನ್ನು ಅಧ್ಯಾಪಕರು ವಿದ್ಯಾರ್ಥಿಗಳಿಗೆ ಹಾಕಬೇಕು. ಸ್ಥಳದಲ್ಲೇ ಮೌಖಿಕ ಉತ್ತರ ನೀಡಬೇಕು.

9) ಅಧ್ಯಾಯದ ಪ್ರಶ್ನೋತ್ತರಗಳನ್ನು ಪ್ರಶ್ನೆ – ಉತ್ತರ ರೂಪದ ನೋಟ್ಸ್ ಅನ್ನು ಮಕ್ಕಳೇ ತಯಾರಿಸಬೇಕು.

10) ಆ ನೋಟ್ಸ್ ಅನ್ನು ಪರಸ್ಪರ ವಿನಿಮಯ ಮಾಡಿಕೊಂಡು – ತಿದ್ದುಪಡಿಯನ್ನು ಹುಡುಗರೇ ಮಾಡಬೇಕು.

11) ಮಕ್ಕಳು ಬರೆದ ಈ ಟಿಪ್ಪಣಿಗಳನ್ನು ಸಿಸಿಇಗೂ (ನಿರಂತರ ಸಮಗ್ರ ಮೌಲ್ಯಮಾಪನಕ್ಕೂ ಬಳಕೆ ಮಾಡಿಕೊಳ್ಳಬಹುದು).

12) ಪಾಠ ಮುಗಿಸುವ ಮೊದಲು ಮುಂದಿನ ಪಾಠದ ಸ್ವಾರಸ್ಯವನ್ನು ಪೀಠಿಕೆಯಾಗಿ ಹೇಳಬೇಕು.

13) ಸ್ವಾರಸ್ಯಕರ ಪ್ರಶ್ನೆಯನ್ನು/ ಹೆಚ್ಚು ಸಂಖ್ಯೆಯ ಪ್ರಶ್ನೆಗಳನ್ನು ಕೇಳಿದ ವಿದ್ಯಾರ್ಥಿಗಳನ್ನು ಆ ದಿನದ ನಾಯಕ/ನಾಯಕಿ ಕಲಿಕೆಗಾರರೆಂದು ಘೋಷಿಸಬೇಕು. ಉಳಿದ ವಿದ್ಯಾರ್ಥಿಗಳೂ ಅದನ್ನು ಗಳಿಸುವಂತೆ ಪ್ರೇರೇಪಿಸಬೇಕು.

14) ವಿಜ್ಞಾನದ ವಿಷಯದಲ್ಲಿ, ಪುಸ್ತಕದಲ್ಲಿ ನೀಡಿರುವ ಪ್ರಯೋಗ/ ಚಟುವಟಿಕೆಗಳಲ್ಲದೆ ಸಮಾಂತರ ಚಟುವಟಿಕೆ/ ಪ್ರಯೋಗಗಳನ್ನು ಅಧ್ಯಾಪಕರು ವಿದ್ಯಾರ್ಥಿಗಳು ಕೂಡಿ ರೂಪಿಸಬೇಕು. ಗಣಿತದ ತರಗತಿಯಲ್ಲಿ ಒಂದೇ ಲೆಕ್ಕವನ್ನು ಮಾಡುವ ಪರ್ಯಾಯ ಸಾಧ್ಯತೆಗಳ ಬಗ್ಗೆ (ಅದು ಸಾಧ್ಯವಿದ್ದರೆ) ತಿಳಿವು ನೀಡಬೇಕು.

15) ಪಠ್ಯಪುಸ್ತಕದ ವಿಷಯ, ದೈನಂದಿನ ಅನುಭವ ಬೆರೆಸಿ ಹಾಡು, ಲಾವಣಿ, ನಾಟಕ ರಚಿಸಿ ಪ್ರದರ್ಶಿಸಿದಾಗ ಮಕ್ಕಳಿಗೆ ಪರಿಕಲ್ಪನೆ ಸ್ಪಷ್ಟವಾದೀತು.

16) ಈ ವಿಧಾನದಲ್ಲಿ ಅಧ್ಯಾಪಕ – ವಿದ್ಯಾರ್ಥಿ ಬಾಂಧವ್ಯ ಖಂಡಿತವಾಗಿಯೂ ವೃದ್ಧಿಯಾಗಿ ವಿದ್ಯಾರ್ಥಿಗಳ ಭಾಗವಹಿಸಿಕೆ ಅಧಿಕವಾಗುವುದು. ಕಲಿಕೆಯಲ್ಲೂ ಏಕರೂಪತೆ ತಂತಾನೆ ರೂಪುಗೊಳ್ಳುವುದು ಸಹಜ. ಕಲಿಕಾ ಪ‍ರಿವರ್ತನೆಯ ಹಂತಗಳು ಇವು:

1. ಧೋರಣೆ 2. ವೀಕ್ಷಣೆ 3. ಸಂಗ್ರಹಣೆ (ಧಾರಣೆ) 4. ವಿಶ್ಲೇಷಣೆ 5. ವಿವರಣೆ 6. ವಿಚಕ್ಷಣೆ ಈ ಆರರಲ್ಲೂ ವಿದ್ಯಾರ್ಥಿ–ಅಧ್ಯಾಪಕರು ಇಬ್ಬರೂ ಪಾಲ್ಗೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT