7

ಹೆಚ್ಚಿದ ಲಾಭದ ನಗದೀಕರಣ ಒತ್ತಡ

ಕೆ. ಜಿ. ಕೃಪಾಲ್
Published:
Updated:

ಸಂವೇದಿ ಸೂಚ್ಯಂಕವು ಈ ವಾರದ ಕೊನೆ ದಿನ 447 ಅಂಶಗಳ ಕುಸಿತವನ್ನು ಕಂಡಿರುವುದು ಅನಿರೀಕ್ಷಿತ ಬೆಳವಣಿಗೆಯಾಗಿತ್ತು.  ವೈವಿಧ್ಯಮಯ ಕಾರಣಗಳಿಂದ ಲಾಭದ ನಗದೀಕರಣದ ಒತ್ತಡವು ಹೆಚ್ಚಾಗಿ ಮಧ್ಯಮ ಮತ್ತು ಕೆಳಮಧ್ಯಮ ಶ್ರೇಣಿ ವಲಯದ ಸೂಚ್ಯಂಕಗಳು ಭಾರಿ ಕುಸಿತವನ್ನು ಪ್ರದರ್ಶಿಸಿದವು.

ಬಾಂಬೆ ಡೈಯಿಂಗ್ ಆ್ಯಂಡ್‌ ಮ್ಯಾನುಫ್ಯಾಕ್ಚರಿಂಗ್ ಕಂಪೆನಿ ಲಿಮಿಟೆಡ್ ಕಂಪೆನಿಯ ಕಳೆದ ತ್ರೈಮಾಸಿಕದ ಫಲಿತಾಂಶವು ಕಳಪೆಯಾಗಿತ್ತು. ಅದರ ಹಿಂದಿನ ತ್ರೈಮಾಸಿಕದಲ್ಲಿ ಉತ್ತಮ ಲಾಭಗಳಿಕೆಯಾಗಿತ್ತು.  ಜೂನ್ ತ್ರೈಮಾಸಿಕದಲ್ಲಿ ಹಾನಿಕಾರಕ ಅಂಕಿ ಅಂಶಗಳನ್ನು ಪ್ರಕಟಿಸಿದ ನಂತರ ಷೇರಿನ ಬೆಲೆಯು ₹ 73 ರವರೆಗೂ ಕುಸಿದು ನಂತರ ಪುಟಿದೆದ್ದು  ಕೇವಲ ಒಂದೇ ತಿಂಗಳಲ್ಲಿ ₹222 ಕ್ಕೆ ಜಿಗಿತ ಕಂಡಿದೆ. ಆಂತರಿಕವಾಗಿ ಯಾವುದೇ ಬದಲಾವಣೆಗಳಿಲ್ಲದಿದ್ದರೂ ಈ ರೀತಿಯ ಜಿಗಿತವು  ಷೇರುಪೇಟೆಯ ವಿಸ್ಮಯಕಾರಿ ಸಂಗತಿಯಾಗಿದೆ.   ಈ ಕಂಪೆನಿಯ ಷೇರಿನ ಬೆಲೆ ಕಳೆದ ನವೆಂಬರ್ ತಿಂಗಳಲ್ಲಿ ₹ 41 ರ ಸಮೀಪವಿದ್ದು ಹತ್ತು ತಿಂಗಳಲ್ಲಿ ಷೇರಿನ ಬೆಲೆ ₹222 ನ್ನು ತಲುಪಿರುವುದು ಪೇಟೆಯು ಬಂಡವಾಳವನ್ನು ಬೆಳೆಸುವ ರೀತಿ ಸಹ ಕುತೂಹಲಕರವಾಗಿದೆ. ₹ 203 ರ ಸಮೀಪ ವಾರಾಂತ್ಯಕಂಡಿದೆ.

ಪೇಟೆಯ ಚಲನೆ ಎಷ್ಟರ ಮಟ್ಟಿಗೆ ತ್ವರಿತ ಮತ್ತು ಹರಿತ ಎಂಬುದನ್ನು ಶುಕ್ರವಾರ ಫಾರ್ಮಾ ವಲಯದ ಇಪ್ಕಾ ಲ್ಯಾಬೊರೇಟರೀಸ್ ಷೇರಿನ ಏರಿಳಿತದಿಂದಲೂ ಅರಿಯಬಹುದಾಗಿದೆ. ಈ ಷೇರಿನ ಬೆಲೆಯು ದಿನದ ಆರಂಭಿಕ ಕ್ಷಣಗಳಲ್ಲಿ ಹಿಂದಿನ ದಿನದ ₹ 573 ರ ಸಮೀಪದಿಂದ ₹596 ರವರೆಗೂ ಜಿಗಿತ ಕಂಡು ನಂತರ ಸತತವಾದ ಇಳಿಕೆಯಿಂದ ₹541 ರವರೆಗೂ ಕುಸಿದು ಚೇತರಿಸಿಕೊಂಡಿತು. ಫಾರ್ಮಾ ವಲಯದ ಇತರೆ ಕಂಪೆನಿಗಳಾದ ಲುಪಿನ್, ಸನ್ ಫಾರ್ಮಾ, ಸಿಪ್ಲಾ ಷೇರುಗಳು ಸಹ ಇದೇ ರೀತಿಯ ರಭಸದ ಏರಿಳಿತಗಳನ್ನು ಪ್ರದರ್ಶಿಸಿದವು.

ದಿವೀಸ್ ಲ್ಯಾಬೊರೇಟರೀಸ್ ಸಹ ₹1,000 ದ ಗಡಿ ದಾಟಿದ ದಾಖಲೆ ನಂತರ ₹970 ರ ಸಮೀಪ ವಾರಾಂತ್ಯ ಕಂಡಿತು. ಬಜಾಜ್ ಫೈನಾನ್ಸ್, ಬಜಾಜ್ ಫಿನ್ ಸರ್ವ್ , ಬಜಾಜ್ ಹೋಲ್ಡಿಂಗ್ಸ್,  ದಿವಾನ್ ಹೌಸಿಂಗ್ ಫೈನಾನ್ಸ್, ಮುಂತಾದ ಅಗ್ರಮಾನ್ಯ ಕಂಪೆನಿಗಳು ಭಾರಿ ಕುಸಿತಕ್ಕೊಳಗಾದವು. ಇತ್ತೀಚೆಗಷ್ಟೇ ವಹಿವಾಟಿಗೆ ಬಿಡುಗಡೆಯಾದ ಮ್ಯಾಟ್ರಿಮನಿ ಡಾಟ್ ಕಾಮ್  ಷೇರು ಎರಡೇ ದಿನಗಳಲ್ಲಿ ವಿತರಣೆ ಬೆಲೆ ₹985 ರಿಂದ ₹802 ರವರೆಗೂ ಕುಸಿದು ₹823 ರ ಸಮೀಪ ಕೊನೆಗೊಂಡಿದೆ.

ದಿವೀಸ್ ಲ್ಯಾಬ್, ಸೋಮವಾರ ₹792 ರಿಂದ ₹ 880 ರವರೆಗೂ, ಮಂಗಳವಾರ ₹800  ರಿಂದ ₹ 871 ರವರೆಗೂ ಏರಿಳಿತ ಪ್ರದರ್ಶಿಸಿದೆ.  ಈ ಷೇರಿನ  ದಿನದ ಚಲನೆಯನ್ನು ಗಮನಿಸಿದಾಗ ಷೇರುಪೇಟೆ ಒದಗಿಸುತ್ತಿರುವ ಕ್ಯಾಷ್‌ ಬ್ಯಾಕ್ ಯೋಜನೆಯ ಶೈಲಿಯ ಅರಿವಾಗುವುದು.  ದಿನದ ಆರಂಭದಲ್ಲಿ ಷೇರಿನ ಬೆಲೆಯು ಗರಿಷ್ಠ ಮಟ್ಟದಲ್ಲಿ ಆರಂಭವಾಗಿ ದಿನದ ಮಧ್ಯಂತರದಲ್ಲಿ ಭಾರಿ ಕುಸಿತ ಪ್ರದರ್ಶಿಸಿ ಆರಂಭದಲ್ಲಿ ಮಾರಾಟ ಮಾಡಿದವರಿಗೆ ಆಕರ್ಷಕ ರಿಯಾಯ್ತಿ ದರದಲ್ಲಿ ಪುನಃ ಖರೀದಿಸುವ ಅವಕಾಶ ಕಲ್ಪಿಸಲಾಗುತ್ತಿದೆ.

ಮಾರಾಟ ಮಾಡಿದ ಷೇರು ಕೈಗೆ ಹಿಂದಿರುಗಿ ಬರುವುದರೊಂದಿಗೆ ಹೆಚ್ಚಿನ ಲಾಭವು ಲಭಿಸುವ ಈ ಯೋಜನೆಯೇ ಕ್ಯಾಷ್ ಬ್ಯಾಕ್ ಅಲ್ಲವೇ?   ಮತ್ತೆ ಸ್ವಲ್ಪ ಹೊತ್ತಿನ ನಂತರ ಪುಟಿದೆದ್ದು ಗರಿಷ್ಠಕ್ಕೆ ತಲುಪಿರುವುದು ಈ ಎರಡೂ ದಿನವು ಕಂಡುಬಂದಿದೆ. ಒಂದು ವಾರದಲ್ಲಿ ₹794 ರ ಸಮೀಪದಿಂದ ₹997.90 ರವರೆಗೂ, ಒಂದೇ  ತಿಂಗಳಲ್ಲಿ  ₹622 ರ ಸಮೀಪದಿಂದ ₹1,003 ರವರೆಗೂ ಏರಿಕೆ ಪ್ರದರ್ಶಿಸಿದ ಈ ಅಗ್ರಮಾನ್ಯ ಕಂಪೆನಿ ಷೇರಿನ ಬೆಲೆ ಹಿಂದೆ ಇದೇ ರೀತಿ ಕುಸಿತ ಪ್ರದರ್ಶಿಸಿತ್ತು. ಕಂಪೆನಿ ವಿತರಿಸಲಿರುವ ಲಾಭಾಂಶದ ನಂತರ ಈ ರೀತಿಯ ಏರಿಳಿತ ಪ್ರದರ್ಶನಕ್ಕೆ ಕಾರಣ ಈ ತಿಂಗಳ 25 ರಂದು ಕಂಪೆನಿಯ ವಾರ್ಷಿಕ ಸಾಮಾನ್ಯ ಸಭೆ ನಡೆಯಲಿರುವುದಾಗಿದೆ.

ಒಟ್ಟಾರೆ ಸಂವೇದಿ ಸೂಚ್ಯಂಕವು 350 ಅಂಶಗಳ ಕುಸಿತವನ್ನು ಈ ವಾರದಲ್ಲಿ ಕಂಡರೆ, ಮಧ್ಯಮ ಶ್ರೇಣಿ ಸೂಚ್ಯಂಕ 362 ಅಂಶಗಳ ಹಾಗೂ ಕೆಳಮಧ್ಯಮ ಶ್ರೇಣಿ ಸೂಚ್ಯಂಕ 394 ಅಂಶಗಳ ಕುಸಿತವನ್ನು ಕಂಡವು. ವಿದೇಶಿ ವಿತ್ತೀಯ ಸಂಸ್ಥೆಗಳು ಸತತವಾದ ಮಾರಾಟದಲ್ಲಿದ್ದು ಒಟ್ಟು ₹5,448 ಕೋಟಿ ಮೌಲ್ಯದ ಷೇರು ಮಾರಾಟ ಮಾಡಿವೆ. ಸ್ಥಳೀಯ ವಿತ್ತೀಯ ಸಂಸ್ಥೆಗಳು ₹3,581 ಕೋಟಿ ಮೌಲ್ಯದ ಷೇರು ಖರೀದಿಸಿವೆ. ಪೇಟೆಯ ಬಂಡವಾಳ ಮೌಲ್ಯವು ₹135.68 ಲಕ್ಷ ಕೋಟಿಯಿಂದ ₹133.35 ಲಕ್ಷ ಕೋಟಿಗೆ ಕುಸಿದಿದೆ.

ಹೊಸ ಷೇರು: ದೆಹಲಿ, ಜಯಪುರ ಮತ್ತು ಅಹ್ಮದಾಬಾದ್ ಷೇರು ವಿನಿಮಯ ಕೇಂದ್ರಗಳಲ್ಲಿ ವಹಿವಾಟಾಗುತ್ತಿರುವ ಪ್ರೊವೆಸ್ಟ್ ಮೆಂಟ್ ಸರ್ವಿಸಸ್ ಲಿಮಿಟೆಡ್ ಕಂಪೆನಿ 21 ರಿಂದ ಮುಂಬೈ ಷೇರು ವಿನಿಮಯ ಕೇಂದ್ರದ 'ಟಿ' ವಿಭಾಗದಲ್ಲಿ ವಹಿವಾಟಿಗೆ ಬಿಡುಗಡೆಯಾಗಿದೆ.

ಬೋನಸ್ ಷೇರು: ಸರ್ಕಾರಿ ವಲಯದ ಮೊಯಿಲ್ ಲಿಮಿಟೆಡ್ ಕಂಪೆನಿ ವಿತರಿಸಲಿರುವ 1:1 ರ ಅನುಪಾತದ ಬೋನಸ್ ಷೇರಿಗೆ ಈ ತಿಂಗಳ 29 ನಿಗದಿತ ದಿನ.

ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಕಂಪೆನಿ ವಿತರಿಸಲಿರುವ 1:10 ರ ಅನುಪಾತದ ಬೋನಸ್ ಷೇರಿಗೆ ಈ ತಿಂಗಳ 29 ನಿಗದಿತ ದಿನ.

ಮನ್ ಪಸಂದ್ ಬಿವರೇಜಸ್ ಲಿಮಿಟೆಡ್ ಕಂಪೆನಿ ವಿತರಿಸಲಿರುವ 1:1 ರ ಅನುಪಾತದ ಬೋನಸ್ ಷೇರಿಗೆ ಈ ತಿಂಗಳ 28 ನಿಗದಿತ ದಿನ.

ಪನಾಮ ಪೆಟ್ರೋಕೆಮ್ ಲಿಮಿಟೆಡ್ ವಿತರಿಸಲಿರುವ 1:1 ರ ಅನುಪಾತದ ಬೋನಸ್ ಷೇರಿಗೆ ಅಕ್ಟೊಬರ್ 4 ನಿಗದಿತ ದಿನ.

ಮುಖಬೆಲೆ ಸೀಳಿಕೆ:  ಟ್ರಾನ್ಸ್ ಫಾರ್ಮಾರ್ಸ್ ಅಂಡ್ ರೆಕ್ಟಿಫೈಯರ್ಸ್ (ಇಂಡಿಯಾ) ಲಿಮಿಟೆಡ್ ಕಂಪೆನಿ ಷೇರಿನ ಮುಖಬೆಲೆಯನ್ನು ₹10 ರಿಂದ ₹1 ಕ್ಕೆ ಸೀಳಲು ಈ ತಿಂಗಳ 30 ನಿಗದಿತ ದಿನ.

ಎಲ್ ಪ್ರೋ ಇಂಟರ್ ನ್ಯಾಷನಲ್ ಲಿಮಿಟೆಡ್ ಕಂಪೆನಿ ಷೇರಿನ ಮುಖಬೆಲೆಯನ್ನು ₹2 ರಿಂದ ₹1 ಕ್ಕೆ ಸೀಳಲು ಈ ತಿಂಗಳ 28 ನಿಗದಿತ ದಿನ.

ಸಟ್ಲೆಜ್  ಟೆಕ್ಸ್ ಟೈಲ್ಸ್ ಅಂಡ್ ಇಂಡಸ್ಟ್ರೀಸ್ ಲಿಮಿಟೆಡ್ ಷೇರಿನ ಮುಖಬೆಲೆಯನ್ನು ₹10 ರಿಂದ ₹1 ಕ್ಕೆ ಸೀಳಲು ಈ ತಿಂಗಳ 27 ನಿಗದಿತದಿನವಾಗಿದೆ.

*

ವಾರದ ವಿಶೇಷ

ಡಿ ಮ್ಯಾಟ್ ಅನಧಿಕೃತವಾಗಿ ಕಡ್ಡಾಯ

ಷೇರುಪೇಟೆಯಲ್ಲಿ ವ್ಯವಹರಿಸುವುದಕ್ಕೆ ಮಾತ್ರ ಡಿ ಮ್ಯಾಟ್ ಖಾತೆ ಹೊಂದಬೇಕು ಎಂಬ ಕಲ್ಪನೆ ಹೆಚ್ಚಿನವರಲ್ಲಿದೆ. ಅದು ತಪ್ಪು ಅಭಿಪ್ರಾಯವಾಗಿದೆ.  ಯಾವುದೇ ಷೇರುಪತ್ರಗಳಿರಲಿ ಅವನ್ನು ಭೌತಿಕ ಪತ್ರಗಳಲ್ಲಿ ಇಟ್ಟುಕೊಳ್ಳುವುದಕ್ಕಿಂತ ಡಿ ಮ್ಯಾಟ್ ರೂಪದಲ್ಲಿ ಇದ್ದಲ್ಲಿ ಹೆಚ್ಚು ಅನುಕೂಲಕರ.

ಷೇರುಗಳನ್ನು ಮಾರಾಟ ಮಾಡದಿದ್ದರೂ ಸಹ  ಡಿ ಮ್ಯಾಟ್ ರೂಪದಲ್ಲಿ ಷೇರುಗಳನ್ನು ಹೊಂದುವುದು ಉತ್ತಮ ಕ್ರಮವಾಗಿದೆ.  ಷೇರುಗಳನ್ನು ಡಿಮ್ಯಾಟ್ ಗೆ ಪರಿವರ್ತಿಸುವುದರಿಂದ  ಷೇರುಪತ್ರಗಳು ಕಳೆದುಹೋಗುವುದೆಂಬ ಭಯವಿರುವುದಿಲ್ಲ.  ಕಂಪನಿಗಳು ವಿತರಿಸುವ ಲಾಭಾಂಶಗಳನ್ನು ನೇರವಾಗಿ ಬ್ಯಾಂಕ್ ಖಾತೆಗೆ ಜಮೆ ಪಡೆಯಲು ಇ ಸಿ ಎಸ್ ಸವಲತ್ತಿನ ಮೂಲಕ ಪಡೆಯಬಹುದು.

ಭೌತಿಕವಾಗಿ ಡಿವಿಡೆಂಡ್ ವಾರಂಟ್ ಗಳು ಬಂದಾಗ ಅದರಲ್ಲಿರುವ ಬ್ಯಾಂಕ್ ಖಾತೆ ಸರಿಯಾಗಿ ನಮೂದಿಸಿರದಿದ್ದಲ್ಲಿ ಅಥವಾ ಘೋಷಿಸಿದ  ಡಿವಿಡೆಂಡ್ ಗೆ  ಡಿವಿಡೆಂಡ್ ವಾರಂಟ್  ಬರದೇ ಇದ್ದಲ್ಲಿ, ಷೇರುದಾರರ ಹೆಸರಿನಲ್ಲಿ ವ್ಯತ್ಯಯವಿದ್ದಲ್ಲಿ,  ಮತ್ತೊಮ್ಮೆ ಪತ್ರ ವ್ಯವಹಾರ ಮಾಡಬೇಕಾಗುವುದು.  ಒಂದು ವೇಳೆ ಕಂಪನಿಯ ಹೆಸರನ್ನು ಬದಲಿಸುವುದಾಗಲಿ, ಮುಖಬೆಲೆ ಸೀಳಿಕೆ, ಕ್ರೋಡೀಕರಣ, ವಿಲೀನ,  ಸಮ್ಮಿಲನ, ಬೇರ್ಪಡಿಸುವಿಕೆಯಂತಹ ಕಾರ್ಪೊರೇಟ್ ಕ್ರಿಯೆಗಳಿಗೆ ಪ್ರತಿ ಬಾರಿಯೂ ಭೌತಿಕ ಷೇರುಪತ್ರಗಳನ್ನು ಕಂಪನಿಗೆ ಕಳುಹಿಸಲೇಬೇಕಾಗುವುದು.

ಒಬ್ಬ ಷೇರುದಾರರು ತನ್ನ ವಿಳಾಸ ಬದಲಾವಣೆ ಮಾಡಬೇಕಿದ್ದಲ್ಲಿ ಪ್ರತಿಯೊಂದು  ಕಂಪನಿಗೂ ಪ್ರತ್ಯೇಕವಾಗಿ ವಿಳಾಸದ ದಾಖಲೆಯೊಂದಿಗೆ ಪತ್ರಬರೆಯಬೇಕಾಗುವುದು. ಆದರೆ ಷೇರುಪತ್ರಗಳನ್ನು ಡಿ ಮ್ಯಾಟ್ ಖಾತೆಯಲ್ಲಿ ಹೊಂದಿದ್ದರೆ ಯಾವ ಕಾರ್ಪೊರೇಟ್ ಪ್ರಕ್ರಿಯೆಗೂ ಪತ್ರ ವ್ಯವಹಾರವಿರದೆ ಸ್ವಯಂಚಾಲಿತವಾಗಿ ಎಲ್ಲವೂ ಜಾರಿಯಾಗುತ್ತವೆ. ವಿಳಾಸದಲ್ಲಿ ಬದಲಾವಣೆ ಆಗಬೇಕಾದರೂ ಸಹ ಕೇವಲ ಡಿ ಮ್ಯಾಟ್ ಖಾತೆ ಹೊಂದಿರುವ ಡಿಪಾಜಿಟರಿ ಪಾರ್ಟಿಸಿಪಂಟ್ ಅವರಿಗೆ ತಿಳಿಸಿದರೆ  ಸಾಕು. ಎಲ್ಲಾ ಕಂಪನಿಗಳ ದಾಖಲೆಗಳಲ್ಲಿ ವಿಳಾಸ ಬದಲಾವಣೆಯಾಗುವುದು. ಎಲ್ಲಕ್ಕೂ ಮಿಗಿಲಾಗಿ ಖಾತೆಗಳಿಗೆ ವಾರಸುದಾರರ ನೇಮಕ ಮಾಡಬಹುದಾಗಿದ್ದು,  ಖಾತೆದಾರರ ನಂತರ ವಾರಸುದಾರರಿಗೆ ಷೇರುಗಳ ವರ್ಗಾವಣೆ ಸುಲಭವಾಗಿದ್ದು, ಕಾನೂನಿನ ರಗಳೆ ಇರುವುದಿಲ್ಲ.

ಈಗಾಗಲೇ ಹೆಚ್ಚಿನ ಕಂಪೆನಿಗಳಲ್ಲಿ ಗರಿಷ್ಠ ಮಟ್ಟದಲ್ಲಿ ಷೇರುಗಳು ಡಿ ಮ್ಯಾಟ್ ಆಗಿರುವುದರಿಂದ ಭೌತಿಕ ಷೇರುಪತ್ರಗಳ  ವಿಭಾಗದ ನಿರ್ವಹಣೆಗೆ ಹೆಚ್ಚಿನ ಮಹತ್ವವಿರುವುದಿಲ್ಲ.  ಯಾವುದಾದರೂ ಕಂಪೆನಿಗೆ ಷೇರುಗಳನ್ನು ವರ್ಗಾಯಿಸಲು ಕಳುಹಿಸಿದಲ್ಲಿ ಹೆಚ್ಚಿನವು ' ಸಹಿ ಸರಿಯಾಗಿಲ್ಲ- ಹೊಸದಾಗಿ ಬ್ಯಾಂಕ್ ಮ್ಯಾನೇಜರ್ ಅವರಿಂದ ಸಹಿ ದೃಢೀಕರಿಸಲ್ಪಟ್ಟ ದಾಖಲೆ, ಅಫಿಡವಿಟ್ ನೊಂದಿಗೆ ಕಳುಹಿಸಿರಿ ' ಎಂಬ ತಕರಾರಿನಿಂದ ಹಿಂದಿರುಗಿ ಬರುವುದು.  ಇನ್ನು ಮುಂದಿನ ದಿನಗಳಲ್ಲಿ ಈ ವಿಭಾಗವನ್ನೇ ಕಡಿತಗೊಳಿಸುವ ಹಂತಕ್ಕೆ ಹೋದರೂ ಆಶ್ಚರ್ಯವೇನಿಲ್ಲ.

ಈ ಕಾರಣಗಳಿಂದಾಗಿ ನಮ್ಮಲ್ಲಿರುವ ಎಲ್ಲಾ ಷೇರು ಪತ್ರಗಳನ್ನು ಡಿ ಮ್ಯಾಟ್ ಗೆ ಪರಿವರ್ತಿಸಿಕೊಳ್ಳುವುದು ಹೆಚ್ಚು ಜಾಣತನದ ನಿರ್ಧಾರವಾಗಿರುತ್ತದೆ.

(9886313380 ಸಂಜೆ 4.30 ರನಂತರ)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry