ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೆಲುವಿನ ರೂವಾರಿ

Last Updated 25 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

-ಅನಿಲಾ ಕುರಿಯನ್‌

*

ಸಾಂಪ್ರದಾಯಿಕ ಹಾಗೂ ಸಮಕಾಲೀನ ವಿನ್ಯಾಸಗಳನ್ನು ಜೋಪಾನವಾಗಿ ಸಂಯೋಜಿಸಿ, ಹೊಸ ರೂಪು ನೀಡಬಲ್ಲ ನೀತಾ ಅವರ ಫ್ಯಾಷನ್‌ ವೈಖರಿಗೆ ಬಾಲಿವುಡ್‌ನ ಅನೇಕರು ಮನ ಸೋತಿದ್ದಾರೆ. ಕಂಗನಾ ರನೋಟ್‌, ಹೇಮಾಮಾಲಿನಿ, ಐಶ್ವರ್ಯಾ ರೈ ಬಚ್ಚನ್‌, ಶ್ರೀದೇವಿ, ಸುಷ್ಮಿತಾ ಸೇನ್‌, ಪ್ರಿಯಾಂಕಾ ಚೋಪ್ರಾ, ಶಾರುಖ್‌ ಖಾನ್‌, ಹೃತಿಕ್‌ ರೋಷನ್‌, ರಜನಿಕಾಂತ್‌ ಹೀಗೆ ಸಿನಿಮಾ ಕ್ಷೇತ್ರದ ದಿಗ್ಗಜರಿಗೆ ನೀತಾ ಲುಲ್ಲಾ ಆದ್ಯತೆಯ ವಸ್ತ್ರ ವಿನ್ಯಾಸಕಿ.

ಸದ್ಯ ಕಂಗನಾ ರನೋಟ್‌ ಅವರ ‘ಮಣಿಕರ್ಣಿಕಾ: ದ ಕ್ವೀನ್‌ ಆಫ್‌ ಝಾನ್ಸಿ’ ಚಿತ್ರಕ್ಕೆ ಅದ್ದೂರಿ ವಸ್ತ್ರವಿನ್ಯಾಸ ಮಾಡಿಕೊಡುವ ಕಾಯಕದಲ್ಲಿದ್ದಾರೆ ನೀತಾ. ಸದಾ ಜನಪ್ರಿಯತೆಯ ಅಲೆಯಲ್ಲಿರುವ ನೀತಾ ದಿನಚರಿ ಹೇಗೆ, ಅವರ ಕೆಲಸದ ವೈಖರಿ ಹೇಗೆ ಎನ್ನುವ ಕುರಿತು ಇಲ್ಲಿದೆ ಮಾಹಿತಿ.

‘ಮಣಿಕರ್ಣಿಕಾ’ ಚಿತ್ರ ತಯಾರಿ ಹೇಗಿದೆ?

ತುಸು ಒತ್ತಡದಾಯಕವಾಗಿಯೇ ಇದೆ. ವಸ್ತ್ರ ವಿನ್ಯಾಸ ಹೇಗಿರಬೇಕು ಎನ್ನುವುದನ್ನು ನಿರ್ಧರಿಸುವುದಕ್ಕೇ ನಾನು ಸುಮಾರು ಎರಡು ತಿಂಗಳು ತೆಗೆದುಕೊಂಡೆ. ಸದ್ಯ ಹೈದರಾಬಾದ್‌ನಲ್ಲಿ ಚಿತ್ರೀಕರಣ ನಡೆಯುತ್ತಿದ್ದು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದೇನೆ.

ಸದ್ಯ ಯಾವೆಲ್ಲಾ ಪ್ರಾಜೆಕ್ಟ್‌ ಕೈಲಿದೆ?

ಸಿಕ್ಕಾಪಟ್ಟೆ. ವಿಂಟರ್‌ ಫೆಸ್ಟಿವ್‌ ಹಾಗೂ ಬ್ರೈಡಲ್‌ ಸಂಗ್ರಹಕ್ಕಾಗಿ ವಿನ್ಯಾಸ ಮಾಡುತ್ತಿದ್ದೇನೆ. ಜೊತೆಗೆ ‘ಮಣಿಕರ್ಣಿಕಾ’ ಸಿನಿಮಾ ವಸ್ತ್ರವಿನ್ಯಾಸ ಜವಾಬ್ದಾರಿಯೂ ಇದೆ.

ಫೆಸ್ಟಿವ್‌ ಸಂಗ್ರಹದ ಬಗ್ಗೆ ಹೇಳಿ...

ಇತ್ತೀಚೆಗಷ್ಟೇ ನನ್ನ ವಸ್ತ್ರವಿನ್ಯಾಸದಲ್ಲಿ ಎಂಬ್ರಾಯ್ಡರಿ ಕುಸುರಿಯನ್ನು ಪರಿಚಯಿಸಿದ್ದೇನೆ. ಫೆಸ್ಟಿವ್‌ ಕಲೆಕ್ಷನ್‌ನಲ್ಲಿ ಎಂಬ್ರಾಯ್ಡರಿಗೆ ಹೆಚ್ಚು ಆದ್ಯತೆ ನೀಡಿದ್ದೇನೆ. ಇತ್ತೀಚೆಗೆ ನೇಕಾರರೊಂದಿಗೂ ಕೆಲಸ ಮಾಡುತ್ತಿದ್ದು ಫೆಸ್ಟಿವ್‌ ಸಂಗ್ರಹದಲ್ಲಿ ಶ್ರೀಕಲಾಹಸ್ತಿ, ಕಾಂಜೀವರ, ಬನಾರಸಿ, ಪೈಥಾನಿ ಹಾಗೂ ಕಲಂಕರಿ ವಿನ್ಯಾಸಗಳೂ ಮಿಂಚಲಿವೆ.

ಯಾವ ಸೆಲೆಬ್ರಿಟಿಗೆ ವಸ್ತ್ರ ವಿನ್ಯಾಗೊಳಿಸಲು ಹೆಚ್ಚು ಇಷ್ಟ ಪಡುತ್ತೀರಿ?

ತುಂಬಾ ಜನರೊಂದಿಗೆ ಕೆಲಸ ಮಾಡಿದ್ದೇನೆ. ಅಂದಹಾಗೆ ಪ್ರತಿಯೊಬ್ಬರೂ ವೈಯಕ್ತಿಕವಾಗಿ ವಸ್ತ್ರವಿನ್ಯಾಸಕರ ಮೊರೆ ಹೋಗಿದ್ದು ವಿಶೇಷ ಛಾಪು ಮೂಡಿಸಿಕೊಂಡಿದ್ದಾರೆ. ಅನೇಕ ವರ್ಷದಿಂದ ನಾನು ಇದೇ ಕ್ಷೇತ್ರದಲ್ಲಿದ್ದು ಹಳಬರ ಹೆಸರು ಹೇಳಬೇಕೆಂದರೆ ರೇಖಾ ಹಾಗೂ ಶ್ರೀದೇವಿ ಅವರಿಗೆ ದಿರಿಸು ವಿನ್ಯಾಸಗೊಳಿಸುವುದು ಹೆಚ್ಚು ಖುಷಿ ನೀಡುತ್ತದೆ.

ಹೆಮ್ಮೆ ತಂದ ಕೆಲಸ ಯಾವುದು?

ಎಲ್ಲಾ ಪ್ರಾಜೆಕ್ಟ್‌ಗಳೂ ಖುಷಿ ನೀಡಿವೆ. ಹೆಚ್ಚಿನ ಎಲ್ಲಾ ವಿನ್ಯಾಸಗಳು ಛಾಪು ಮೂಡಿಸಿ ಅಸ್ಮಿತೆ ಗಳಿಸಿ ಕೊಂಡಿವೆ. ವಿನ್ಯಾಸಕನಿಗೆ ಇದಕ್ಕಿಂತ ಹೆಚ್ಚಿನ ಹೆಮ್ಮೆ ಇನ್ನೇನು ಬೇಕು.

ಸೋಮಾರಿತನ ಕಾಡಿದ ದಿನ ಏನು ಮಾಡುತ್ತೀರಿ?

ನಿಜ ಹೇಳಬೇಕೆಂದರೆ ಒಂದು ದಿನ ರಜೆ ತೆಗೆದುಕೊಳ್ಳುವುದೂ ನನಗೆ ಇಷ್ಟವಾಗುವುದಿಲ್ಲ. ಕೆಲಸ ಮಾಡುವುದು ಎಂದರೆ ಹೆಚ್ಚು ಖುಷಿ. ಎಲ್ಲೇ ಹೋಗಲಿ ನನ್ನೊಂದಿಗೆ ವಿನ್ಯಾಸ ಮಾಡುವ ನೋಟ್‌ಪ್ಯಾಡ್‌, ಪೆನ್ಸಿಲ್‌ ನನ್ನ ಜೊತೆಗೆ ಒಯ್ಯುತ್ತೇನೆ. ಅಷ್ಟಕ್ಕೂ ನಾನು ಬ್ಯುಸಿ ಇಲ್ಲದ ದಿನ ಪೇಂಟ್‌ ಮಾಡುವುದರಲ್ಲಿ ಸಮಯ ಕಳೆಯುತ್ತೇನೆ.

ವಿನ್ಯಾಸ ಸ್ಫೂರ್ತಿಗಾಗಿ ನೀವು ಓಡಾಡುವ ಸ್ಥಳ?

ನಾನು ಪ್ರಕೃತಿ ಪ್ರಿಯೆ. ಹೊಸ ಯೋಚನೆ ಹುಟ್ಟುವ ಕಾಲವೂ ನನಗೆ ಹೆಚ್ಚು ಇಷ್ಟ. ಹೀಗಾಗಿ ರೋಮ್‌ಗೆ ಆಗಾಗ ಭೇಟಿ ನೀಡುತ್ತೇನೆ.

16 ವರ್ಷದವರಿಗೆ ಹಾಗೂ 60 ವರ್ಷದವರಿಗೆ ಸಲಹೆ ನೀಡಿ ಎಂದರೆ?

ಅನುಭವಗಳೇ ನಮ್ಮನ್ನು ಹೆಚ್ಚು ಸದೃಢಗೊಳಿಸುತ್ತವೆ ಹಾಗೂ ವೃತ್ತಿಪರರನ್ನಾಗಿಸುತ್ತವೆ. ವಸ್ತುಗಳನ್ನು ವಿಭಿನ್ನ ರೀತಿಯಲ್ಲಿ ನೋಡುವ ಒಳಗಣ್ಣನ್ನು ನೀಡುತ್ತವೆ. ಅದಕ್ಕಿಂತಲೂ ಮಿಗಿಲಾಗಿ ಅಧ್ಯಯನ ಮಾಡಿ. ತಳಹದಿಯ ಗಟ್ಟಿತನದ ಬಗ್ಗೆ ಅರಿತು ಅದರ ಮೇಲೆ ಹೊಸತನ್ನು ನಿರ್ಮಿಸಿ. ನಿಮ್ಮ ಮಿತಿ ಹಾಗೂ ಅವಶ್ಯಕತೆಯನ್ನು ಸರಿಯಾಗಿ ಅರಿತುಕೊಳ್ಳಿ. ಅನುಭವದೊಂದಿಗೆ, ನೀವು ಯಾವ ವಿಷಯದಲ್ಲಿ ಸಬಲರೋ ಅದೇ ದಾರಿಯಲ್ಲಿ ಸಾಗಿ. ಖಂಡಿತವಾಗಿಯೂ ಪರಿಶ್ರಮ ಯಶಸ್ಸು ತಂದುಕೊಡುತ್ತದೆ.

ಪ್ರಾಜೆಕ್ಟ್‌ ಒಪ್ಪಿಕೊಳ್ಳುವುದಕ್ಕೂ ಮುಂಚೆ ನೀವು ಕೇಳುವ ಪ್ರಶ್ನೆಗಳು?

ಸಿನಿಮಾ ಎಂದಾದರೆ ಸ್ಕ್ರಿಪ್ಟ್‌ ಕೈಯಲ್ಲಿರುತ್ತದೆ. ಅದನ್ನು ಪೂರ್ತಿಯಾಗಿ ಓದಿ, ನಿರ್ದೇಶಕರ ಚಿಂತನೆಯನ್ನು ಅರ್ಥೈಸಿಕೊಳ್ಳುತ್ತೇನೆ. ಆತ ಪಾತ್ರಗಳನ್ನು ಯಾವ ರೀತಿ ನೋಡಲು ಇಚ್ಛಿಸುತ್ತಾನೆ ಎನ್ನುವುದರ ಮೇಲೆ ವಿನ್ಯಾಸಕ್ಕೆ ಹೆಚ್ಚು ಬಲ ಬರುತ್ತದೆ. ಮದುವಣಗಿತ್ತಿ ಸಂಗ್ರಹಕ್ಕಾದರೆ ಮದುಮಗಳೊಂದಿಗೆ ಕುಳಿತು, ಅವಳ ಮನಸ್ಥಿತಿಯನ್ನು ಅರ್ಥೈಸಿಕೊಳ್ಳುತ್ತೇನೆ. ಆಕೆಯ ಹಿನ್ನೆಲೆ ತಿಳಿದುಕೊಳ್ಳುತ್ತೇನೆ. ಆ ವಿನ್ಯಾಸ ಸಮಯಾತೀತವಾಗಿರಬೇಕು ಹಾಗೂ ಬೇರೆ ಸಂದರ್ಭದಲ್ಲಿಯೂ ಧರಿಸುವಂತಿರಬೇಕು. ಅಂತೆ ವಿನ್ಯಾಸಗೊಳಿಸುತ್ತೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT