ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಸುಗಳನ್ನೂ ಕಾಡುವ ರೇಬಿಸ್

Last Updated 25 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

‘ಗ್ಲೋಬಲ್ ಅಲಯನ್ಸ್‌ ಫಾರ್ ರೇಬಿಸ್ ಕಂಟ್ರೋಲ್’ ಸಂಸ್ಥೆ ಪ್ರತಿವರ್ಷ ಸೆಪ್ಟೆಂಬರ್ 28ರಂದು ವಿಶ್ವ ರೇಬಿಸ್ ದಿನವೆಂದು ಆಚರಿಸುತ್ತದೆ. ರೇಬಿಸ್ ಕೇವಲ ನಾಯಿಗೆ ಬರುವ ಕಾಯಿಲೆ ಎಂದೂ ಜೊಲ್ಲು ಸೋರಿಸಿಕೊಂಡು ದಾರಿಯಲ್ಲಿ ಸಿಗುವ ಪ್ರಾಣಿಗಳನ್ನು ಕಚ್ಚುವ ಹುಚ್ಚು ನಾಯಿ ಕಾಯಿಲೆ ಇದಾಗಿದೆಯೆಂದೂ ಬಹುತೇಕರ ಗ್ರಹಿಕೆ. ಈ ಕಾಯಿಲೆ ಹಸುಗಳಿಗೆ ಸಹ ಬರುತ್ತದೆ ಎಂದು ಬಹಳಷ್ಟು ರೈತರಿಗೆ ತಿಳಿದೇ ಇಲ್ಲ.

ರೇಬಿಸ್‌ ಕಾಯಿಲೆಯಿಂದ ಬಳಲುವ ಹಸುಗಳಿಗೆ ಏನೋ ಸಮಸ್ಯೆ ಇದೆ ಎಂದು ರೈತರು ಅವುಗಳ ಬಾಯಿಗೆ ಕೈಹಾಕಿ ಪರೀಕ್ಷಿಸುವುದು ಅಥವಾ ಕೆಮ್ಮುತ್ತಿದೆ ಎಂದು ಚಿಕಿತ್ಸೆ ಮಾಡಿಸುವುದು ಇದೆ. ಹಸುಗಳ ಕೆಲವಷ್ಟು ಉಸಿರಾಟದ ಸಮಸ್ಯೆಗಳ ಲಕ್ಷಣಗಳು ಸಹ ಇದೇ ರೀತಿ ಇರುವುದರಿಂದ ಪಶುವೈದ್ಯರು ಅಂತಹ ಸಮಸ್ಯೆಗೆ ಕೊಡುವಂತಹ ಚಿಕಿತ್ಸೆಯನ್ನೇ ಮಾಡಿರುವ ಸಾಧ್ಯತೆ ಇರುತ್ತದೆ.

ಒಂದುವೇಳೆ ಪಶುವೈದ್ಯರು ಕಾಯಿಲೆಯನ್ನು ಗುರುತಿಸಿ ಅದಕ್ಕೆ ಯಾವುದೇ ಚಿಕಿತ್ಸೆ ಇಲ್ಲ ಎಂದು ತಿಳಿ ಹೇಳಿದರೂ ರೈತರು ನಂಬುವುದಿಲ್ಲ. ಕಾಯಿಲೆಯ ಗುಣಲಕ್ಷಣಗಳು ಉಲ್ಬಣಗೊಂಡಾಗ ಮಾತ್ರ ಅವರಿಗೆ ಅರಿವಾಗುತ್ತದೆ. ಎಮ್ಮೆ, ಮೇಕೆ ಹಾಗೂ ಕುರಿಗಳಿಗೂ ಈ ಕಾಯಿಲೆ ಬರುತ್ತದೆ.

ರೇಬಿಸ್ ಕಾಯಿಲೆ ಎಲ್ಲಾ ಬಿಸಿರಕ್ತದ ಪ್ರಾಣಿಗಳಿಗೆ ಬರುವಂತಹ ಕಾಯಿಲೆ ಹಾಗೂ ಮಾರಣಾಂತಿಕ ಆಗಿರುತ್ತದೆ. ಇದು ವೈರಸ್‌ನಿಂದ ಬರುವ ಹಾಗೂ ನರಮಂಡಲದ ಮೇಲೆ ಪ್ರಭಾವ ಬೀರುವಂತಹ ಕಾಯಿಲೆಯಾಗಿದ್ದು, ಈ ಸಮಸ್ಯೆಯಿಂದ ನರಳುತ್ತಿರುವ ಪ್ರಾಣಿಯ ಜೊಲ್ಲಿನ ಸಂಪರ್ಕದಿಂದ ಅದು ಹರಡುತ್ತದೆ.

ಕೇಂದ್ರ ನರಮಂಡಲವನ್ನು ಘಾಸಿಗೊಳಿಸುವ ಕಾಯಿಲೆ ಇದಾಗಿದೆ. ಸಾಮಾನ್ಯವಾಗಿ ಕಚ್ಚುವುದರಿಂದ ಅಥವಾ ಕಣ್ಣು, ಮೂಗು, ಬಾಯಿ ಹಾಗೂ ಗಾಯವಾದ ಚರ್ಮವು ಪ್ರಾಣಿಯ ಜೊಲ್ಲಿನ ಸಂಪರ್ಕ ಹೊಂದಿದಾಗ ಕಾಯಿಲೆ ಹರಡುತ್ತದೆ. ಯಾವ ಜಾಗದಲ್ಲಿ ಕಚ್ಚಿದೆ ಎಂಬುದರ ಮೇಲೆ ಕಾಯಿಲೆ ಎಷ್ಟು ಬೇಗ ಬರಬಹುದು ಎಂಬುದು ನಿರ್ಧಾರವಾಗುತ್ತದೆ. ಮೆದುಳಿನ ಹತ್ತಿರದ ಜಾಗಗಳಿಗೆ ಕಚ್ಚುವುದರಿಂದ ವೈರಸ್ ಮೆದುಳನ್ನು ಬೇಗ ಪ್ರವೇಶಿಸುತ್ತದೆ.

ನಿಮ್ಮ ಹಸುವು ಉಸಿರಾಡಲು ಕಷ್ಟಪಡುತ್ತಿದೆಯೇ ಅಥವಾ ಗಂಟಲಿನಲ್ಲಿ ಏನೋ ಸಿಕ್ಕಿಹಾಕಿಕೊಂಡಿದೆ ಎಂಬ ಲಕ್ಷಣ ಕಾಣಿಸುತ್ತಿದೆಯೇ? ಹಾಗಿದ್ದಲ್ಲಿ ಹಸುವಿನ ಬಾಯಿಗೆ ಕೈ ಹಾಕುವ ಮುಂಚೆ ಯೋಚಿಸಿ, ಇದು ರೇಬಿಸ್ ಕಾಯಿಲೆಯ ಲಕ್ಷಣ ಇರಬಹುದು. ಮೊದಲು ಹಸುವಿನ ದೈನಂದಿನ ಚಲನವಲನಗಳನ್ನು ಪರಿಶೀಲಿಸಿ. ಒಂದು ಪ್ರಮುಖ ಲಕ್ಷಣವೆಂದರೆ ಹಠಾತ್ತಾಗಿ ದೈನಂದಿನ ನಡವಳಿಕೆಗಳಲ್ಲಿ ಕಾಣುವ ವ್ಯತ್ಯಾಸ.

ಬಹಳಷ್ಟು ಸೌಮ್ಯವಾಗಿದ್ದ ಹಸು ಇದ್ದಕ್ಕಿದ್ದಂತೆ ಆಕ್ರಮಣಕಾರಿಯಾಗಿ ವರ್ತಿಸುವುದು, ಬೇರೆ ಪ್ರಾಣಿಗಳನ್ನು, ಪ್ರಮುಖವಾಗಿ ನಾಯಿಗಳನ್ನು ಕಂಡರೆ ಆಕ್ರಮಣ ಮಾಡಲು ಹೋಗುವುದು, ಜೋರಾದ ಸಪ್ಪಳ ಹಾಗೂ ಓಡಾಟಗಳಿಗೆ ತುಂಬ ಉದ್ವೇಗವಾಗಿ ವರ್ತಿಸುವುದು, ವಿಲಕ್ಷಣವಾಗಿ ಆಕಳಿಸುವುದು ಹಾಗೂ ಜೋರಾಗಿ ಕೂಗುವುದು, ಉಗ್ರರೂಪದ ರೇಬಿಸ್ ರೋಗದ ಲಕ್ಷಣಗಳಿವು. ಹಾಗೆಯೇ ಸೌಮ್ಯರೂಪದ ರೇಬಿಸ್ ರೋಗದ ಲಕ್ಷಣಗಳೇನೆಂದರೆ ಗಂಟಲು, ಗುದದ್ವಾರ, ಬಾಲದ ಪಾರ್ಶ್ವವಾಯು. ಜೊಲ್ಲು ಸೋರುವಿಕೆ, ಹಲ್ಲು ಕಡಿಯವುದು ಹಾಗೂ ಹೊಟ್ಟೆ ಉಬ್ಬರ ಸಹ ಕಂಡು ಬರುತ್ತದೆ.

ಕಾಯಿಲೆಯ ಲಕ್ಷಣ ಕಾಣಿಸಿಕೊಂಡ ಮೇಲೆ ಯಾವುದೇ ಚಿಕಿತ್ಸೆ ಇರುವುದಿಲ್ಲ. ಹಸುಗಳಿಗೆ ಸಾಮಾನ್ಯವಾಗಿ ಕಾಯಿಲೆ ಬರುವುದು ರೇಬಿಸ್‌ಪೀಡಿತ ನಾಯಿ, ಬೆಕ್ಕು, ಬಾವಲಿ ಹಾಗೂ ಮಾಂಸಾಹಾರಿ ಕಾಡು ಪ್ರಾಣಿಗಳ ಕಡಿತದಿಂದ. ಕಚ್ಚಿದ ತಕ್ಷಣ ಲಸಿಕೆ ಹಾಕಿಸಿದರೆ ಕಾಯಿಲೆ ತಡೆಗಟ್ಟಬಹುದು. ಆದರೆ, ಬಹಳಷ್ಟು ರೈತರಿಗೆ ಹಸುಗಳಿಗೆ ಹೀಗೆ ರೇಬಿಸ್‌ಪೀಡಿತ ನಾಯಿ/ಬೆಕ್ಕು ಕಚ್ಚಿರುವ ಮಾಹಿತಿ ಇರುವುದಿಲ್ಲ. ಆದ್ದರಿಂದ ಹಸುಗಳನ್ನು ಆದಷ್ಟು ಬಿಡಾಡಿಯಾಗಿ ಬಿಡದೆ ಸಾಕಬೇಕಾಗುತ್ತದೆ. ರೋಗ ತಡಗಟ್ಟಲು ಕಾಯಿಲೆ ಪೀಡಿತ ಪ್ರದೇಶಗಳ ನಾಯಿ ಹಾಗೂ ಬೆಕ್ಕುಗಳಿಗೆ ಲಸಿಕೆಯನ್ನು ಮುಂಚಿತವಾಗಿ ಹಾಕಿಸುವುದು ಒಳಿತು.⇒v

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT