ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಂಪು ಕರಗಿ, ಹಸಿರು ಮಿನುಗಿ...

Last Updated 25 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಗಂಡಿ ಬಸವೇಶ್ವರ ಗುಡಿಯ ಬೆಟ್ಟದ ತುದಿಯಿಂದ ಕಾಣಿಸುವ ಬಳುಕುವ ನಾರಿಹಳ್ಳದ ಸೊಗಸೇ ಬೇರೆ. ಬೆಟ್ಟ ಶ್ರೇಣಿಗಳ ನಡುವೆ ಈ ಹಳ್ಳವೇ ಒಂದು ದ್ವೀಪವಾಗಿಬಿಟ್ಟಿದೆಯೇ ಎಂದು ಭಾಸವಾಗದೆ ಇರದು. ಆದರೆ ಅಲ್ಲಿ ನಿಂತು ಅದನ್ನು ಹಾಗೆ ನೋಡಿ ಬೆರಗಿನಿಂದ ಕಣ್ತುಂಬಿಕೊಳ್ಳಬಹುದೆಂದು ಬಹಳ ಮಂದಿಗೆ ತಿಳಿದಿಲ್ಲ’

–‘ಚಾರಣಿಗರ ಗುರು’ ಶ್ರೀನಿವಾಸ ರಾಮಘಡ ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದ ಫೋಟೊವನ್ನು ತೋರಿಸಿ ಹೀಗೆ ಪ್ರಬುದ್ಧ ನಗೆ ನಕ್ಕರು.

ಬಿಡುವು ದೊರೆತಾಗಲೆಲ್ಲ ಹುಡುಗರನ್ನು ಹಿಂದಿಕ್ಕಿಕೊಂಡು ಸಂಡೂರಿನ ಹತ್ತಾರು ಬೆಟ್ಟ ಶ್ರೇಣಿಗಳಿಗೆ ಟ್ರೆಕ್ಕಿಂಗ್‌ ಹೊರಡುವುದು ಅವರ ಹವ್ಯಾಸವಷ್ಟೇ ಅಲ್ಲ; ತಪಸ್ಸಿನಂಥ ಜೀವನಶೈಲಿ. ಅವರ ಜೊತೆಗೆ ಹೆಜ್ಜೆ ಹಾಕುವ ಹುಡುಗ–ಹುಡುಗಿಯರಿಗೂ ಅದೇ ಬದ್ಧತೆ.

ಈ ಬದ್ಧತೆಯನ್ನು ಅವರು ಸಂಡೂರಿನ ಕಡಿದಾದ ಅರಣ್ಯಗಳಲ್ಲಿ ನಡೆದು ರೂಢಿಸಿಕೊಂಡಿದ್ದಾರೆ. ದಟ್ಟಕಾಡಿನ ಸೊಗಸು ಮತ್ತು ಸಾಹಸದ ಮನೋವೃತ್ತಿ ಎರಡಕ್ಕೂ ಸಂಡೂರು ಜಾಗ ಮಾಡಿದೆ. ಇದು ‘ಉತ್ತರ ಕರ್ನಾಟಕದ ಆಕ್ಸಿಜನ್ ಟ್ಯಾಂಕ್‌’ ಎಂಬ ಖ್ಯಾತಿಯನ್ನೂ ಪಡೆದಿದೆ.

ಸಂಡೂರು ಎಂದರೆ ಅಕ್ರಮ ಗಣಿಗಾರಿಕೆ ಎಂಬುದೇ ಹೊರಗಿನ ಜನರ ಪ್ರಧಾನ ಗ್ರಹಿಕೆ. ಅದರ ಆಚೆಗೆ ಸಂಡೂರು ಭೂಮಿಯ ಮೇಲಿನ ಹಸಿರು ಸ್ವರ್ಗವಾಗಿಯೂ ಉಂಟು ಎಂಬುದನ್ನು ನೋಡಿ ತಿಳಿದ ಮಂದಿ ವಿರಳ. ಆದರೆ ಅದು ನಿಧಾನವಾಗಿ ನಶಿಸುತ್ತಿರುವ ಸ್ವರ್ಗ ಎಂದು ಹೇಳದೇ ವಿಧಿ ಇಲ್ಲ. ಬಳ್ಳಾರಿಯಿಂದ 60 ಕಿ.ಮೀ ದೂರದಲ್ಲಿರುವ ಸಂಡೂರು ಪಟ್ಟಣಕ್ಕೆ ಬಂದು ಅಲ್ಲಿಂದ ಕನಿಷ್ಠ 10 ಕಿ.ಮೀ ದಾಟಿದರೆ ತೆರೆದುಕೊಳ್ಳುವ ಲೋಕವೇ ಬೇರೆ.

ಸ್ವಾತಂತ್ರ್ಯಪೂರ್ವದ 30ರ ದಶಕದಲ್ಲಿ ಇಲ್ಲಿಗೆ ಭೇಟಿ ನೀಡಿದ್ದ ಮಹಾತ್ಮ ಗಾಂಧೀಜಿ ಸಂಡೂರಿನ ಸೆಪ್ಟೆಂಬರ್ ತಿಂಗಳ ಸೊಬಗನ್ನು ಕಂಡು ಉದ್ಗಾರ ತೆಗೆದಿದ್ದರು ಎಂದು ಇಲ್ಲಿನ ಜನ ಬಹು ಸಂಭ್ರಮದಿಂದ ಸ್ಮರಿಸುತ್ತಾರೆ. ಆ ರೀತಿಯಲ್ಲಿ ಅಲ್ಲಿನ ಹಸಿರು ವನಸಿರಿ ಗಾಂಧೀಜಿಯ ಕಣ್ಮನ ಸೆಳೆದಿತ್ತು. ಅದು ಹಳೇ ನೆನಪು. ದೇಶದ ಚರಿತ್ರೆಯು ಹೊಸ ವರ್ತಮಾನಕ್ಕೆ ಹೊರಳಿಕೊಳ್ಳುತ್ತಿದ್ದ ಕಾಲಘಟ್ಟ. ಪರಿಸರದ ಮೇಲೆ ಆಧುನಿಕತೆ ಮತ್ತು ಗಣಿಗಾರಿಕೆಯ ದಾಳಿ ಅಷ್ಟು ಅಮಾನವೀಯವಾಗಿ ಇರಲಿಲ್ಲ. ಅವರ ಆ ಮಾತನ್ನು ಇಂದಿನ ಪರಿಸ್ಥಿತಿಗೂ ಸಂಪೂರ್ಣವಾಗಿ ಅನ್ವಯಿಸಲು ಅಡ್ಡಿ ಏನಿಲ್ಲ. ಆದರೆ ಅಂದಿನ ಆ ಸಂಪತ್ತಿನ ಖಜಾನೆ ಬಹಳಷ್ಟು ಬರಿದಾಗಿದೆ.

(ಹಸಿರು ಹೊದ್ದ ಶ್ರೇಣಿಗಳ ನಡುವೆ ಆಟಿಕೆಯಂತೆ ಕಾಣುವ ಅದಿರು ಸಾಗಣೆ ಲಾರಿ  ಚಿತ್ರಗಳು: ಟಿ.ರಾಜನ್‌)

ಸಂಡೂರಿನ ಬೆಟ್ಟ ಶ್ರೇಣಿಗಳನ್ನು ದೂರದಿಂದ ನೋಡುತ್ತಿದ್ದರೆ, ದಟ್ಟ ಕಾನನದ ನಡುವೆ ಚಾರಣದ ನಡಿಗೆ ನಡೆಯುತ್ತಾ, ವಾಹನದಲ್ಲಿ ಕುಳಿತೋ ಪಯಣಿಸುತ್ತಿದ್ದರೆ ಕುವೆಂಪು ಅವರ ‘ಹಸುರತ್ತಲ್‌, ಹಸುರಿತ್ತಲ್, ಹಸುರೆತ್ತಲ್‌ ಕಡಲಿನಲಿ, ಹಸುರ್‌ಗಟ್ಟಿತೋ ಕವಿಯಾತ್ಮಂ ಹಸುರ್‌ನೆತ್ತರ್‌ ಒಡಲಿನಲಿ’ ಎಂಬ ಸಾಲು ನೆನಪಾಗದೇ ಇರದು. ಈ ಹಸಿರು ಸಂಭ್ರಮ, ಜುಲೈನಿಂದಲೇ ಆರಂಭ. ಹಳೆಯ ಪೊರೆ ಕಳಚಿ ಹೊಸತಾಗುವ ಹಂಬಲದ ಹಾವಿನಂತೆ ಸೆಪ್ಟೆಂಬರ್‌ನಲ್ಲಿ ತನ್ನ ಉಚ್ಛ್ರಾಯ ಸ್ಥಿತಿಗೆ ಏರುತ್ತದೆ ಎಂಬುದೇ ವಿಶೇಷ.

ಹಾಗೆ ನೋಡಿದರೆ, ಬೇಸಿಗೆ ಮತ್ತು ಬಿರುಬೇಸಿಗೆ ಎಂಬ ಎರಡು ಕಾಲಕ್ಕಷ್ಟೇ ತನ್ನನ್ನು ಒಪ್ಪಿಸಿಕೊಂಡಿರುವ ಬಳ್ಳಾರಿ ಜಿಲ್ಲೆಯ ಸಂಡೂರಿನ ಬೆಟ್ಟಶ್ರೇಣಿಗಳು ಮತ್ತು ಅವುಗಳ ನಡುವಿನ ದಟ್ಟ ಅರಣ್ಯ ಪ್ರದೇಶ ವರ್ಷದ ಬಹುತೇಕ ದಿನಗಳಲ್ಲಿ ಹಸಿರಾಗಿಯೇ ಇರುತ್ತದೆ. ಆದರೆ ಬೇಸಿಗೆ ಕಾಲದಲ್ಲಿ ಆ ಹಸಿರಿನ ಮೈಮೇಲೆ ಕೆಂದೂಳು ಅಡರಿಕೊಂಡಿರುತ್ತದೆ. ಬಿಸಿಲು ಹೊರಳಾಡುತ್ತಿರುತ್ತದೆ, ಒಮ್ಮೆ ಮಳೆ ಬಂದು ಮೈ ತೊಳೆದರೆ ಮತ್ತೆ ಹಸಿರು ಹೊನ್ನು ಮಿನುಗುತ್ತದೆ. ರಾತ್ರಿ ವೇಳೆ ಮಾತ್ರ ನಕ್ಷತ್ರಗಳು ಹೊಳೆಯುವಂತೆ ಸಂಡೂರು ಸೆಪ್ಟೆಂಬರ್‌ನಲ್ಲಿ ತನ್ನ ನಿಜರೂಪದಲ್ಲಿ ಕಂಗೊಳಿಸುತ್ತದೆ, ನವವಧುವಿನಂತೆ ಎಂಬುದು ಮಾತ್ರ ಕ್ಲೀಷೆ. ಅದು ಆಗ ಕರ್ನಾಟಕದ ಕಾಶ್ಮಿರ.

ಭಕ್ತಿ ವಿನಾಶದ ಬುದ್ಧಿಯನ್ನು ದಮನ ಮಾಡುತ್ತದೆ ಎಂಬ ಕಾರಣಕ್ಕೇ ಹಿರಿಯರು ಗುಡಿಗಳನ್ನು ಕಟ್ಟಿದರು ಎಂಬ ಮಾತಿದೆ. ಸಂಡೂರಿನ ಮೂರು ದಿಕ್ಕಿನಲ್ಲಿ 30,562 ಹೆಕ್ಟೇರ್‌ನಲ್ಲಿ ಹರಡಿರುವ ಅರಣ್ಯ ಕ್ಷೇತ್ರಗಳಾದ ರಾಮನಮಲೈ, ಸ್ವಾಮಿ ಮಲೈ ಮತ್ತು ತಿಮ್ಮಪ್ಪನ ಮಲೈನಲ್ಲಿ ಹಲವು ಪ್ರಸಿದ್ಧ ಗುಡಿಗಳೂ ಇವೆ. ಹೀಗಾಗಿ ಚಾರಣಿಗರು ನಡೆಯುವ ಮುನ್ನ ದಣಿವಾರಿಸಿಕೊಂಡು ಇಲ್ಲಿನ ದೇವರುಗಳಿಗೆ ಕೈಮುಗಿಯುವುದು ವಾಡಿಕೆ.‌

ರಾಮಸ್ವಾಮಿ ಗುಡಿ, ಕುಮಾರಸ್ವಾಮಿ ಗುಡಿ, ಹರಿಶಂಕರ ಗುಡಿ, ನವಿಲುಸ್ವಾಮಿ ಗುಡಿ, ಕಮತೂರು ಜನಾಂಗದ ಆರಾಧ್ಯ ದೇವತೆ ಅರಗಿನ ಮಲಿಯಮ್ಮ ಹಾಗೂ ತಿಮ್ಮಪ್ಪನಗುಡಿಗಳು ಸಂತ ಪರಂಪರೆಗೂ ಸಾಕ್ಷಿಯಾಗಿವೆ. ಏಕೆಂದರೆ ದೇಶದ ವಿವಿಧ ಭಾಗಗಳಿಂದ ಸಂತರು ಬಂದು ಇಲ್ಲಿ ತಂಗುತ್ತಿದ್ದ ನಿದರ್ಶನಗಳೂ ಉಂಟು. ಈಗ ಅವರ ಸಂಖ್ಯೆ ಕಡಿಮೆಯಾಗಿದೆ. ಇಂಥ ಸಂತರನ್ನು ನೋಡಿಕೊಂಡೇ ಇಲ್ಲಿ ರೈತರು ಕೃಷಿ ಚಟುವಟಿಕೆಗಳನ್ನು ಮಾಡುತ್ತಿದ್ದರು. ಈಗಲೂ ಮಾಡುತ್ತಿದ್ದಾರೆ.

ಕಾಯ್ದಿಟ್ಟ ಅರಣ್ಯ ಕ್ಷೇತ್ರಗಳನ್ನು 2005ರಲ್ಲಿ ಅಂದಿನ ಸರ್ಕಾರ ಡಿನೋಟಿಫೈ ಮಾಡಿದ ಬಳಿಕ ಅವೆಲ್ಲವೂ ಗಣಿಗಾರಿಕೆಗೆ ಮುಕ್ತವಾದವು. ಅಲ್ಲಿಂದ ಈ ಸ್ವರ್ಗದ ಚಹರೆ ಬದಲಾಗತೊಡಗಿತು.

‘ಅದಕ್ಕೂ ಮುನ್ನ ಈ ಬೆಟ್ಟ ಹೇಗಿತ್ತು’ ಎಂದು ಜನ ಸಂಗ್ರಾಮ ಪರಿಷತ್ತಿನ ಮುಖಂಡ ಶ್ರೀಶೈಲ ಆಲ್ದಹಳ್ಳಿ ಅವರನ್ನು ಕೇಳಿದರೆ, ‘ಮಧ್ಯಾಹ್ನ 12 ಗಂಟೆಗೆ ಕುಮಾರಸ್ವಾಮಿ ಗುಡಿಯಿಂದ ದೇವಗಿರಿಗೆ ಹೋಗಬೇಕೆಂದರೆ ವಾಹನಗಳ ಹೆಡ್‌ಲೈಟ್‌ ಆನ್‌ ಮಾಡಲೇಬೇಕಿತ್ತು. ಅಷ್ಟು ದಟ್ಟ ಮಂಜು ಭೂಮಿ ಆಕಾಶವನ್ನು ಆವರಿಸಿರುತ್ತಿತ್ತು. ಸಂಡೂರಿನಿಂದ ತಾರಾನಗರದವರೆಗೂ ಬಿಸಿಲೇ ಬೀಳದ ದಟ್ಟ ನೆರಳು ಅದು’ ಎಂದು ಉದ್ಗಾರ ಎಳೆಯುತ್ತಾರೆ.

(ಸದಾ ನೀರುಕ್ಕಿಸುವ ಹರಿಶಂಕರ ತೀರ್ಥ)

ಎಷ್ಟೊಂದು ತೀರ್ಥಕ್ಷೇತ್ರಗಳು: ‘ಈ ಅರಣ್ಯ ಕ್ಷೇತ್ರದಲ್ಲಿ ಅದೆಷ್ಟೊಂದು ಕೊಳ್ಳಗಳು ಮತ್ತು ತೀರ್ಥ ಕ್ಷೇತ್ರಗಳಿದ್ದವು’ ಎಂದು ಪರಿಷತ್ತಿನ ಟಿ.ಎಂ.ಶಿವಕುಮಾರ ಅಚ್ಚರಿ ವ್ಯಕ್ತಪಡಿಸುತ್ತಾರೆ.

‘ಹಲವೆಡೆ ಸದಾ ಕಾಲ ಇವತ್ತಿಗೂ ನೀರು ಹರಿದುಬರುತ್ತಿದೆ. ಕಾಡುಪ್ರಾಣಿಗಳು, ಪಕ್ಷಿಗಳಿಗೆ ವರ್ಷದ ಎಲ್ಲ ದಿನವೂ ಈ ತೀರ್ಥಕ್ಷೇತ್ರಗಳು ಮತ್ತು ಹಳ್ಳ–ಕೊಳ್ಳಗಳು ಬಾಯಾರಿಕೆ ನೀಗಿಸುವ ಬತ್ತದ ಜಲತಾಣಗಳಾಗಿದ್ದವು.

ಕುಮಾರಸ್ವಾಮಿ ಗುಡಿ ಸುತ್ತ ಅಗಸ್ತ್ಯ ತೀರ್ಥ, ಗಜತೀರ್ಥ, ಕೋಟಿ ತೀರ್ಥ, ಬ್ರಹ್ಮ ತೀರ್ಥ ಮತ್ತು ಹರಿಶಂಕರ ತೀರ್ಥ. ಎನ್‌ಎಂಡಿಸಿ ಗಣಿ ಪ್ರದೇಶದ ಮಲಿಯಮ್ಮನ ಗುಡಿ ಬಳಿ ಮಲ್ಲೆಮ್ಮನ ಕೊಳ್ಳ, ಗುಡಾನಿ ಕೊಳ್ಳ, ಕಟಾಸಿನ ಕೊಳ್ಳ, ಮಾವಿನ ಮರಕೊಳ್ಳ... ಎಷ್ಟೊಂದು ಜಲತಾಣಗಳು! ನವಿಲುಸ್ವಾಮಿ ಗುಡಿ ಬಳಿ ನಿರಂತರವಾಗಿ ಧುಮ್ಮಿಕ್ಕುವ ಜಲಪಾತವಿದೆ. ರಾಮಗಡದಲ್ಲಿ ರಾಮಗೊಳ್ಳ, ತಾಯಮ್ಮನ ಕೊಳ್ಳ, ತಿಮ್ಮಪ್ಪನಗುಡಿ ಬಳಿ ದೇವಗೊಳ್ಳ, ಕೋಟೆಕೊಳ್ಳವಿದ್ದು ಜಲಪಾತಗಳೂ ಇವೆ. ಟಿಎಂಎಲ್ ಕಂಪೆನಿ ಬಳಿ ಭೈರವ ತೀರ್ಥವಿದೆ. ಉಬ್ಬಳಗುಂಡಿ ಬಳಿ ವೀರಭದ್ರ ಗುಡಿಯಲ್ಲೂ ನೀರು ಬರುತ್ತದೆ, ಅಲ್ಲಿ ಯಾಣ ಮಾದರಿಯ ಶಿಲಾ ಬೆಟ್ಟಗಳು ಕಾಣುತ್ತವೆ.

ಕಮತೂರು ಬಳಿ ಮಾರಮ್ಮನ ಕಟ್ಟೆ, ಕೆಂಚಮ್ಮನ ಕೊಳ್ಳ, ರಸಸಿದ್ದಿನ ಪಡೆ, ಯಶವಂತನಗರದ ಸ್ವಾಮಿ ಕೊಳ್ಳ, ಆಲದ ಮರದಕೊಳ್ಳ, ಕರಡಿಕೊಳ್ಳ, ಚಿಕ್ಕಸವದಾರಿ ಕೊಳ್ಳ, ಹೊತ್ತೂರು ಟ್ರೇಡರ್ಸ್‌ ಬಳಿ ಏಕನಾಥ ಗುಡಿಯಲ್ಲೂ ಕೊಳ್ಳವಿದೆ. ಜೋಗಿನಾಥ ಕೊಳ್ಳ, ಮಾಳಗೊಳ್ಳ, ಸಿದ್ದರಾಮಸ್ವಾಮಿಕೊಳ್ಳ, ಮೀನುಗೊಳ್ಳ, ಬಡವರ ಧರ್ತಯ್ಯ ಕೊಳ್ಳ, ದೋಣಿಕೊಳ್ಳ... ಅಬ್ಬಾ ಎಷ್ಟೊಂದು ಕೊಳ್ಳಗಳು. ಅರಣ್ಯದ ಮೈದಡವಿದಷ್ಟೂ ಜಲಧಾರೆಗಳು ಚಿಮ್ಮುತ್ತವೆ. ಹಳ್ಳವಿರುವಲ್ಲಿ ಉಳಿದು ಕೊಳ್ಳಗಳಾಗುತ್ತವೆ.

ಇಂಥವುಗಳ ನಡುವೆ ನಾರಿಹಳ್ಳ ವಿಶ್ವಸುಂದರಿಯಂತೆ ಕಂಗೊಳಿಸುತ್ತದೆ. ಹಲವು ಗಂಡಿಗಳಿಂದ (ಶಿಲಾ ಬೆಟ್ಟಗಳ ನಡುವೆ ಹರಿದು ಬರುವ ನೀರಿನ ಸ್ಥಳ) ಹರಿದು ಬರುವ ನೀರು ನಾರಿಹಳ್ಳವನ್ನು ಸೇರುತ್ತದೆ. ಈ ಹಳ್ಳದಲ್ಲೇ ಕನ್ನಡದ ‘ಮಾನಸ ಸರೋವರ’ ಸಿನಿಮಾದ ಶೂಟಿಂಗ್‌ ನಡೆದಿತ್ತು ಎಂಬುದು ಜನರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದೆ. ಇಂಥ ನೆನಪುಗಳಿಗೆ ದಕ್ಕದೇ ಹೋದ ಅದೆಷ್ಟೋ ದೃಶ್ಯಕಾವ್ಯಗಳು ರಸಿಕರಿಗಷ್ಟೇ ವೇದ್ಯವಾಗುತ್ತವೆ.

ಜೀವ ಪ್ರಭೇದಗಳ ಜಾಲ... ಕಾಡು ಪ್ರಾಣಿ–ಪಕ್ಷಿ ಸಂಕುಲವೂ ಇಲ್ಲುಂಟು. ಗಣಿಗಾರಿಕೆಯ ವಿನಾಶಕಾರಿ ಸದ್ದು–ಗದ್ದಲದಿಂದಾಗಿ ಈಗ ಕಾಣುವುದು ಅಪರೂಪ. ಹಲವು ಅಳಿದಿರಬಹುದು.

ನೀಲಕುರಂಜಿಯಂಥ ಅಪರೂಪದ ಸಸ್ಯ ಪ್ರಭೇದಗಳು, ಶ್ರೀಗಂಧ, ಅರಳಿ, ತೇಗ, ಹೊನ್ನೆ, ಬಿದಿರು, ರುದ್ರವೇಣಿ–ಸಾಗವೇಣಿ, ಬಗುಣೆ ಮರ, ಬೆಟ್ಟದ ನೆಲ್ಲಿ, ಕಲ್ಲುಮಾವಿನಕಾಯಿ ಮರ, ಬಟ್ಟಲು ಮರ, ಬಾಗಿ ಮರ, ನೇರಳೆ, ಕಡಿಜಾಲಿ, ಕೆಂಪು ಜಾಲಿ, ಮೂಕಾರ್ತಿ ಮರ, ದಿಂಡಲ ಮರ, ತದಕಿನ ಮರ, ರಕ್ತಭೂತಳ ಮರಗಳು ಇಲ್ಲಿ ಉಂಟು.

(ಸಂಡೂರಿನ ಯಾಣ ಎಂದೇ ಖ್ಯಾತವಾದ ಉಬ್ಬಳ ಗಂಡಿ – ಚಿತ್ರ: ಶ್ರೀನಿವಾಸ ರಾಮಘಡ)

ಔಷಧಿ ಸಸ್ಯಗಳಾದ ಮುತ್ತುಗ, ಬಸವನಪಾದ, ಸರಸ್ವತಿ ಬಳ್ಳಿ, ಒಂದೆಲಗ, ದಾಮರಸೀಕೆ, ಮಯೂರ ಸೀಕೆ, ಹಂಸಧ್ವಜ, ನೀಲಧ್ವಜ, ಈಶ್ವರ ಬಳ್ಳಿ, ಮಾಲಿಂಗನ ಬಳ್ಳಿ, ಸುಗಂಧಿ ಬಳ್ಳಿ, ದಾಗಡೆ ಬಳ್ಳಿ, ಒಗಣೆ ಬಳ್ಳಿ, ಹ್ಯಾದೆ ಬಳ್ಳಿ, ಸೀಗೆ ಸೊಪ್ಪು, ಒಡವಿನ ಬಳ್ಳಿ, ಕಾಡುಗೆಣಸು, ಕಾಡು ಈರುಳ್ಳಿ, ಕಾಡು ವಿಳ್ಯದೆಲೆಯೂ ಉಂಟು.

ನವಿಲು, ಗೀಜಗ, ಚಿರತೆ, ಕಾಡುಕುರಿ, ಗುಳ್ಳೆ ನರಿ, ಮೊಲ, ಕಾಡು ಹಂದಿ, ಮುಳ್ಳು ಹಂದಿ, ಆಡವಿ, ಕಾಡುಕೋಳಿ, ಬುರ್ಲ ಹಕ್ಕಿ, ಮೈನಾ ಹಕ್ಕಿ, ಗೊರವಂಕ .....ಇವು ಬಲ್ಲವರ ತಿಳಿವಿಗೆ ಬಂದಿರುವ ಜೀವಪ್ರಭೇದಗಳು, ಕಾಣದೇ ಹೋದವು ಅದೆಷ್ಟೋ.

12 ವರ್ಷಕ್ಕೊಮ್ಮೆ ಮಾತ್ರ ಅರಳಿ ನಗುವ ನೀಲಕುರಂಜಿ ಹೂ ಈ ಬಾರಿಯ ಸೆಪ್ಟೆಂಬರ್‌ನಲ್ಲೇ ಈ ಕಾಡಿನಲ್ಲಿ ಮೋಹಕ ಲೋಕವನ್ನು ಸೃಷ್ಟಿಸಿತ್ತು. ‘ಅವುಗಳನ್ನು ನೋಡಲು ಬಂದ ಅರಸಿಕ ಪ್ರವಾಸಿಗರು ಮಾತ್ರ ನೋಡಿದ ಬಳಿಕ, ಅವುಗಳನ್ನು ಕಿತ್ತು ಮನೆಗೊಯ್ದರು. ಅವರ ಹೆಜ್ಜೆಗುರುತಿನ ಜಾಡಿನಲ್ಲಿ ಹೂವುಗಳ ಲೋಕ ಅಪ್ಪಚ್ಚಿಯಾಗಿತ್ತು’ ಎಂದು ಪಕ್ಷಿತಜ್ಞ ಸಮದ್ ಕೊಟ್ಟೂರು ವಿಷಾದಿಸುತ್ತಾರೆ.

ನೋಡುವ ನೋಟಗಳು... ಒಂದೊಂದು ಬೆಟ್ಟದ ತುದಿಯೂ ಹಸಿರು ಸಂಪತ್ತನ್ನು ಹೊಸಬಗೆಯಲ್ಲಿ ಕಾಣಿಸುತ್ತದೆ ಎಂಬುದು ವಿಶೇಷ. ಕಮತೂರು ದಾರಿಯಲ್ಲಿ ನಿಂತು ಕೆಳಗೆ ನೋಡಿದರೆ ನಂದಿಹಳ್ಳಿಯ ಸ್ನಾತಕೋತ್ತರ ಕೇಂದ್ರವು ಮರಗಳ ನಡುವೆ ನಿಂತ ಕಂಬಗಳಂತೆ ಕಾಣುತ್ತದೆ. ಪಕ್ಕಕ್ಕೆ ಕಣ್ಣು ಹೊರಳಿಸಿದರೆ ಬೆಟ್ಟದ ಮೈಯನ್ನು ಕತ್ತಿಯಿಂದ ಅಡ್ಡಡ್ಡ ಸೀಳಿದಂತೆ ಕಾಣುವ ಉದ್ದನೆಯ ರಸ್ತೆಯಲ್ಲಿ ಅದಿರು ಸಾಗಣೆ ಲಾರಿಯು ಪುಟ್ಟ ಅಟಿಕೆಯಂತೆ ಕಾಣುತ್ತದೆ.

ಬ್ರಿಟಿಷರ ನೆಚ್ಚಿನ ವೀಕ್ಷಣಾ ಕೇಂದ್ರವಾಗಿದ್ದ ರಾಮನ ಮಲೈನಲ್ಲಿ ನಿಂತರೆ ಹೊಸಪೇಟೆ ದಾಟಿ ಮರಿಯಮ್ಮನಹಳ್ಳಿಯವರೆಗೂ ದೃಷ್ಟಿ ಹರಿಸಬಹುದು. ಅಲ್ಲಿನ ರಾಮಗಡದಲ್ಲಿ ಈಗಲೂ ಬ್ರಿಟಿಷರ ಸಮಾಧಿಗಳಿವೆ. ಪ್ರವಾಸಿ ಮಂದಿರ ಪಾಳುಬಿದ್ದಿದೆ.

‘ಸೀ ಸಂಡೂರ್‌ ಇನ್‌ ಸೆಪ್ಟೆಂಬರ್’ ಎಂಬುದನ್ನು ಆ ತಿಂಗಳಲ್ಲಿ ಮಾತ್ರ ಸ್ಮರಿಸುವ ವಿಪರ್ಯಾಸವೂ ಇಲ್ಲಿ ಉಂಟು. ಈ ಕಾಲಮಾನದ ಚಹರೆಯಾಚೆಗೆ ಸಂಡೂರಿನ ಅರಣ್ಯ ಕ್ಷೇತ್ರವು ತನ್ನ ಒಡಲಿನ ಖನಿಜ ಸಂಪತ್ತನ್ನು ನಿರಂತರವಾಗಿ ಬಗೆದುಕೊಡುತ್ತಲೇ ಇದೆ. ‘ಇನ್ನೂ ಎಷ್ಟು ಖಾಲಿ ಮಾಡುವಿರಿ?’ ಎಂಬ ಸವಾಲನ್ನು ಮುಂದೊಡ್ಡುತ್ತಲೇ ಇದೆ. ಒಳತಿರುಳನ್ನು ಬಗೆದು ಉಳಿದ ತ್ಯಾಜ್ಯವನ್ನು ಗಣಿ ಕಂಪೆನಿಗಳು ಬೇಕಾಬಿಟ್ಟಿ ಸುರಿದದ್ದಕ್ಕೆ ಸಾಕ್ಷಿಯಾಗಿ ಹಸಿರು ಮಲೆಗಳಿಂದ ಇಳಿದ ಕೆಂಪು ಮಣ್ಣಿನ ರಾಶಿ ಕರಗದೇ ಉಳಿದಿದೆ. ಅದು ‘ನಾವು ಮಾಡಿದ್ದು ತರಚು ಗಾಯವಷ್ಟೇ. ಬೇರೇನಲ್ಲ’ ಎಂಬ ಗಣಿ ಕಂಪೆನಿಗಳ ಹುಂಬ ಸಮಜಾಯಿಷಿಯಂತೆ ಕಾಣುತ್ತದೆ.

ಹೀಗೆ, ಎಂದಿಗೂ ಕಾಡುವ ವಿಷಾದ, ಭರಿಸಲಾಗದಷ್ಟು ನಷ್ಟದ ನಡುವೆ ಸಂಡೂರು ತನ್ನ ಹಸಿರು ತಾಜಾತನವನ್ನು ಉಳಿಸಿಕೊಂಡಿದೆ ಎಂಬುದೇ ಅದ್ಭುತ ಸಂಗತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT