7
ಬಸವಾದಿ ಶರಣಪ್ರಣೀತವಾದ ಲಿಂಗಾಯತವು ಪರಿವರ್ತನಪರವಾಗಿದೆ ಮಾತ್ರವಲ್ಲ ಜೀವಪರವಾಗಿದೆ. ಪರಿವರ್ತನೆ ತರಲು ಮತ್ತು ಪರಿವರ್ತನೆ ಆಗಲು ಇಲ್ಲಿ ಸಂಪೂರ್ಣ ಅವಕಾಶಗಳಿವೆ

ಲಿಂಗಾಯತವು ಸ್ವತಂತ್ರಧರ್ಮ ಹೇಗೆ?

Published:
Updated:
ಲಿಂಗಾಯತವು ಸ್ವತಂತ್ರಧರ್ಮ ಹೇಗೆ?

ಧರ್ಮವು ಮೌಲ್ಯಗಳ ಮೊತ್ತ ಮತ್ತು ಸಂಕಲನ. ಬದುಕಿಗೆ ಬೇಕಾಗಿರುವ ನೀತಿ ನಿರೂಪಣೆ. ಸರ್ವ ದಾರ್ಶನಿಕರು ಆರಂಭದಲ್ಲಿ ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸುತ್ತ ಹೋದರು. ಅವರ ನಂತರ ಅವರು ಸಾರಿದ ಸಂದೇಶಗಳು ಧರ್ಮದ ಸ್ವರೂಪವನ್ನು ಪಡೆದುಕೊಂಡವು. ಬಸವಾದಿ ಶರಣರು ಬೋಧಿಸಿದ ತತ್ತ್ವಗಳು ವಿಶ್ವಮಾನ್ಯವಾಗಿದ್ದು, ನಂತರ ಅವುಗಳು ಜಾತಿ-ಮತದ ಚೌಕಟ್ಟಿನಲ್ಲಿ ಬಂಧಿತವಾದವು. ಅವರು ಬೋಧಿಸಿದ್ದು ಸತ್ಪಥ, ಶರಣಪಥ, ವಿಶ್ವಪಥ.

ಫ.ಗು. ಹಳಕಟ್ಟಿ, ಶಿ.ಶಿ.ಬಸವನಾಳ, ನಂದಿಮಠ, ಹರ್ಡೇಕರ್ ಮಂಜಪ್ಪ, ಉತ್ತಂಗಿ ಚೆನ್ನಪ್ಪ ಮುಂತಾದವರು ವಚನಗಳನ್ನು ಕುರಿತು ಆಳವಾದ ಅಧ್ಯಯನ ಮಾಡಿದ್ದಾರೆ. ಲಿಂಗಾಯತ ಪ್ರತ್ಯೇಕ ಧರ್ಮದ ಬೇಡಿಕೆ ಈಗ ಪುನಃ ಬಲ ಪಡೆದುಕೊಂಡಿದೆ. ಕೆಲವರು ಲಿಂಗಾಯತವು ಹಿಂದೂಧರ್ಮದ ಒಂದು ಪ್ರಭೇದವೆಂದು ವ್ಯಾಖ್ಯಾನಿಸುತ್ತಿದ್ದಾರೆ. ಈ ಬಗ್ಗೆ ಸ್ಪಷ್ಟ ಮಾಹಿತಿ ಇದ್ದವರು, ಲಿಂಗಾಯತವು ಸ್ವತಂತ್ರಧರ್ಮ ಆಗುವ ಎಲ್ಲ ಆಶಯಗಳನ್ನು ಹೊಂದಿದೆ ಎಂದು ಧೈರ್ಯವಾಗಿ ಪ್ರತಿಪಾದಿಸತೊಡಗಿದ್ದಾರೆ. ಈ ಗೊಂದಲವನ್ನು ನಿವಾರಿಸುವ ನಿಟ್ಟಿನಲ್ಲಿ ಲಿಂಗಾಯತವು ಸ್ವತಂತ್ರಧರ್ಮ ಹೇಗೆ ಎಂಬುದನ್ನು ಸ್ಪಷ್ಟಪಡಿಸುವ ಅಗತ್ಯವಿದೆ.

ಭಾರತದಲ್ಲಿ ಆವಿರ್ಭವಿಸಿರುವ ಎಲ್ಲ ಧರ್ಮಗಳಿಗೂ ವೈದಿಕ ಅರ್ಥಾತ್ ಹಿಂದೂ ಧರ್ಮ ಅವಕಾಶ ಮಾಡಿಕೊಟ್ಟಿದೆ. ಸಿಂಧೂ ಶಬ್ದವು ಹಿಂದೂ ಶಬ್ದದ ಉಗಮಕ್ಕೆ ಕಾರಣವಾಗಿದೆ. ಹಿಂದೂ ಎಂಬುದು ಬದುಕಿನ ವಿಧಾನವೆಂದು ಅರ್ಥೈಸಬಹುದಾದರೂ ಅದರೊಳಗಿನ ಪ್ರತಿಯೊಂದು ಜಾತಿ ತನ್ನದೇ ಆದ ಸಂಸ್ಕೃತಿಯನ್ನು ಹೊಂದಿದೆ. ಹಿಂದೂ ಧರ್ಮವು ಮನುಶಾಸ್ತ್ರ ಪ್ರಣೀತವಾಗಿದ್ದು, ಶ್ರೇಣೀಕೃತ ಸಮಾಜವನ್ನು ರಚಿಸಿಕೊಂಡಿತು. ಮುಂದೆ ಅದರಲ್ಲಿನ ಕೆಲವೊಂದು ನ್ಯೂನತೆಗಳನ್ನು ಪ್ರಶ್ನಿಸಿ, ಕೆಲವೊಂದು ಪ್ರಮುಖ ಸಮುದಾಯಗಳು ಹೊರಬಂದು, ಪ್ರತ್ಯೇಕವಾಗಿ ಜೈನಧರ್ಮ, ಬೌದ್ಧಧರ್ಮ ಮತ್ತು ಸಿಖ್‌ ಧರ್ಮವೆಂದು ಗುರುತಿಸಿಕೊಂಡವು. ಅವುಗಳಿಗೆ ಅಲ್ಪಸಂಖ್ಯಾತವೆಂಬ ಕಾರಣಕ್ಕಾಗಿ ವಿಶೇಷ ಮೀಸಲಾತಿ ನೀಡಲಾಯಿತು.

900 ವರ್ಷಗಳಷ್ಟು ಹಿಂದೆ ಬಸವಾದಿ ಶರಣರು ಸಮಾಜ ಸುಧಾರಣೆಗಾಗಿ ಕ್ರಾಂತಿ ನಡೆಸಿದರು. ಕುಲಹದಿನೆಂಟು ಜಾತಿಯ ಕಸುಬುದಾರರನ್ನು ಕೂಡಿಸಿಕೊಂಡು ಶರಣಸಮಾಜವನ್ನು ರಚಿಸಿದರು. ಅವರು ಸ್ಥಾಪಿಸಿದ್ದು ಶರಣಧರ್ಮವೆಂದಾಯಿತು. ನಂತರದ ದಿನಗಳಲ್ಲಿ ಅದು ಒಂದು ಸ್ಪಷ್ಟ ರೂಪವನ್ನು ಪಡೆಯುತ್ತ ಹೋಯಿತು. ಪಾಶ್ಚಿಮಾತ್ಯ ಜಗತ್ತಿನ ಕೆಲವಿದ್ವಾಂಸರು ಈ ಸಂಬಂಧ ಅಧ್ಯಯನ ಮಾಡಿದ್ದಾರೆ. ಅದನ್ನು ಅವರು ಲಿಂಗಾಯತವೆಂದು ಗುರುತಿಸಿದ್ದು, ಅದರ ಅಡಿಯಲ್ಲಿ 70 ಉಪಜಾತಿಗಳಿವೆ. ಧರ್ಮದೊಟ್ಟಿಗೆ ಕೆಲವೊಂದು ಸಂಸ್ಕಾರಗಳು ಸೇರಿಕೊಂಡಿವೆ. ಸಂಸ್ಕಾರಗಳೆಂದರೆ ಧಾರ್ಮಿಕ ವಿಧಾನಗಳು. ಮಾನವ ತಾನು ಜನನದಿಂದ ಮರಣದವರೆಗೆ ಹಲವಾರು ಸಂಸ್ಕಾರಗಳನ್ನು ರೂಪಿಸಿಕೊಂಡಿದ್ದಾನೆ. ಅದರಂತೆ ಲಿಂಗಾಯತ ಧರ್ಮದಲ್ಲೂ ಕೆಲವು ಸಂಸ್ಕಾರಗಳಿವೆ.

ಲಿಂಗಾಯತ ಧರ್ಮ ಸಂಸ್ಕಾರವು ಮಗು ತಾಯಿಯ ಗರ್ಭದಲ್ಲಿರುವಾಗಲೇ ಆರಂಭ ಆಗುತ್ತದೆ. 8ನೇ ತಿಂಗಳಲ್ಲಿ ಜಂಗಮಮೂರ್ತಿಗಳು ಅಥವಾ ವಿರಕ್ತ ಮಠಾಧೀಶರಿಂದ ಗರ್ಭಸ್ಥ ಶಿಶುವಿಗೆ ಲಿಂಗಧಾರಣೆ ನೆರವೇರಿಸಲಾಗುತ್ತದೆ. ತಾಯಿಯ ಹೊಟ್ಟೆಯ ಮೇಲೆ ವಿಭೂತಿ ಹಚ್ಚಿ, ರಟ್ಟೆಗೆ ಪೀಟಕಲಿಂಗವನ್ನು ಚಿಕ್ಕದಾದ ವಸ್ತ್ರದಲ್ಲಿ ಕಟ್ಟಲಾಗುತ್ತದೆ. ಮುಂದೆ ತಾಯಿಯು ತನ್ನ ಇಷ್ಟಲಿಂಗವನ್ನು ಪೂಜಿಸುವುದರ ಜತೆಗೆ ಮಗುವಿಗೆ ನೀಡಿದ ಇಷ್ಟಲಿಂಗವನ್ನೂ ಪೂಜಿಸುತ್ತ ಹೋಗುತ್ತಾಳೆ.

ಮಗುವು ಗರ್ಭದಿಂದ ಹೊರಬಂದಾಗ, ಲಿಂಗವನ್ನು ತೊಟ್ಟಿಲಿಗೆ ಕಟ್ಟುವ ಪರಂಪರೆ, ದೊಡ್ಡದಾಗುತ್ತ ಹೋದಂತೆ ಕೊರಳಿಗೆ ಕಟ್ಟುವ ಪರಿಪಾಟ ಇದೆ. 12ನೇ ವರ್ಷ ತುಂಬಿದ ಸಂದರ್ಭದಲ್ಲಿ ಜಂಗಮ ಅಥವಾ ಮಠಾಧೀಶರಿಂದ ದೀಕ್ಷೆಯನ್ನು ಕೊಡಿಸಲಾಗುತ್ತದೆ. ದಿನಕ್ಕೆ ಒಮ್ಮೆಯಾದರೂ ಸ್ನಾನಾದಿಗಳನ್ನು ಪೂರೈಸಿಕೊಂಡು ಲಿಂಗಧ್ಯಾನ ಮಾಡುವಂತೆ ಬೋಧಿಸಲಾಗುತ್ತದೆ. ಓಂನಮಃಶಿವಾಯ (ಅಷ್ಟಾಕ್ಷರ) ಅಥವಾ ಶಿವಾಯನಮಃ(ಪಂಚಾಕ್ಷರ) ಮಂತ್ರವನ್ನು ಕಿವಿಯಲ್ಲಿ ಉಸುರಲಾಗುತ್ತದೆ. ಈ ಪದ್ಧತಿಯು ಲಿಂಗಾಯತದಲ್ಲಿ ಮಾತ್ರವಿದ್ದು, ಹಿಂದೂ ಪರಂಪರೆಯಲ್ಲಿ ಇರುವುದಿಲ್ಲ.

ಲಿಂಗಾಯತ ಮತ್ತು ಅದರ ಉಪಜಾತಿಗಳಿಗೆಲ್ಲ ಇದೇ ಸಂಸ್ಕಾರ. ಮುಂದೆ ಮಗು ದೊಡ್ಡದಾಗುತ್ತ ಹೋದಂತೆಲ್ಲ ಕೇಶಕರ್ತನ (ಜವುಳ) ಮಾಡಿಸಲಾಗುತ್ತದೆ. ಜವಳಕ್ಕೆ ಮುನ್ನವಾಗಲೀ ಅಥವಾ ನಂತರವಾಗಲೀ ನಾಮಕರಣ ಶಾಸ್ತ್ರ. ಅಂದು ಮನೆಗೆ ಜಂಗಮ ಮೂರ್ತಿಯನ್ನು ಬರಮಾಡಿಕೊಂಡು, ಮಗುವಿನ ಹಣೆಗೆ ವಿಭೂತಿ ಹಚ್ಚಿ, ಬಸವಜಲವನ್ನು ಅನುಗ್ರಹಿಸಿ, ಮೂರು ಸಾರಿ ಕಿವಿಯಲ್ಲಿ ಹೆಸರನ್ನು ಗಟ್ಟಿಯಾಗಿ ಹೇಳಲಾಗುತ್ತದೆ. ಮುತ್ತೈದೆಯರು ಆರತಿ ಮಾಡುತ್ತಾರೆ. ಮನೆಯಲ್ಲಿ ಹಬ್ಬದ ವಾತಾವರಣ. ಈ ಸಂಸ್ಕಾರ ಸಹ ಹಿಂದೂ ಅಥವಾ ವೈದಿಕ ಧರ್ಮಕ್ಕಿಂತ ವಿಭಿನ್ನವಾದುದು.

ನೂತನ ಮನೆಯನ್ನು ನಿರ್ಮಿಸಿದಾಗ ‘ಗೃಹಪ್ರವೇಶ’ ನೆರವೇರಿಸಲಾಗುತ್ತದೆ. ವೈದಿಕ ಪರಂಪರೆಯಲ್ಲಿ ಅಗ್ನಿಯನ್ನು ದೇವರೆಂದು ಪೂಜಿಸಲಾಗುತ್ತದೆ. ಗೃಹಪ್ರವೇಶ, ವಿವಾಹ ಮತ್ತಿತರ ಧಾರ್ಮಿಕ ವಿಧಾನಗಳನ್ನು ನೆರವೇರಿಸಲು ಅಗ್ನಿಸಾಕ್ಷಿ ಅನಿವಾರ್ಯ. ವೈದಿಕತೆಯ ಪ್ರಭಾವಕ್ಕೆ ಒಳಗಾದ ಕೆಲ ವೀರಶೈವರಲ್ಲೂ ಗೃಹಪ್ರವೇಶದಂತಹ ಸಂದರ್ಭದಲ್ಲಿ ಹೋಮ ಮಾಡುತ್ತಾರೆ. ವೀರಶೈವ ಮತ್ತು ವೈದಿಕ ಪರಂಪರೆಯಲ್ಲಿ ಹಸುವನ್ನು ಮನೆಗೆ ಕರೆತಂದು, ಅದನ್ನು ಪೂಜಿಸಿ, ದವಸ-ಧಾನ್ಯಗಳನ್ನು ತಿನ್ನಲು ಕೊಡುತ್ತಾರೆ. ಆಕಸ್ಮಿಕವಾಗಿ ಅದು ಸಗಣಿಯನ್ನು ಹಾಕಿದರೆ, ಪುಣ್ಯಪ್ರಾಪ್ತಿಯೆಂದು ಭಾವಿಸಲಾಗುತ್ತದೆ. ಅದೇ ಲಿಂಗಾಯತ (ಬಸವ) ಪರಂಪರೆಯಲ್ಲಿ ಗೃಹಪ್ರವೇಶಕ್ಕೆ ಬದಲಾಗಿ ‘ಗುರು ಪ್ರವೇಶ’. ಸ್ವಾಮಿಗಳು, ಅನುಭಾವಿಗಳು ಮತ್ತು ಶರಣರನ್ನು ಅಂದು ಮನೆಗೆ ಬರಮಾಡಿಕೊಂಡು, ಅವರ ಲಿಂಗಪೂಜೆ ಇತ್ಯಾದಿ ನೆರವೇರಿಸಿ ‘ಅನುಭಾವಗೋಷ್ಠಿ’ಯನ್ನು ಜರುಗಿಸಲಾಗುತ್ತದೆ.

ಸರ್ವಧರ್ಮಗಳಲ್ಲಿ ಧ್ಯಾನ, ಪ್ರಾರ್ಥನೆ, ಪೂಜೆ, ಯೋಗದ ಕಲ್ಪನೆ ಇರುವಂತೆ ಲಿಂಗಾಯತ ಧರ್ಮದಲ್ಲಿ ಏಕದೇವತಾರಾಧನೆ. ಅಂದರೆ, ಒಬ್ಬ ದೇವರ ಆರಾಧನೆ ಅಥವಾ ಉಪಾಸನೆ. ಬಹುದೇವತಾರಾಧನೆಯು ಒಂದು ಧಾರ್ಮಿಕ ವ್ಯಭಿಚಾರ ಎನ್ನುತ್ತದೆ ಶರಣಸಂಸ್ಕೃತಿ. ಬಹುದೇವತಾ ಆರಾಧನೆಯು ಸಿದ್ಧಾಂತಕ್ಕೆ ವಿರುದ್ಧವಾದುದೆನ್ನುತ್ತಾರೆ ಬಸವಣ್ಣ-

ನಂಬಿದ ಹೆಂಡತಿಗೆ ಗಂಡನೊಬ್ಬನೆ ಕಾಣಿರೋ

ನಂಬಬಲ್ಲ ಭಕ್ತಂಗೆ ದೇವನೊಬ್ಬನೆ ಕಾಣಿರೋ

ಬೇಡ ಬೇಡ, ಅನ್ಯ ದೈವದ ಸಂಗ ಹೊಲ್ಲ!

ಬೇಡ ಬೇಡ, ಪರದೈವದ ಸಂಗ ಹೊಲ್ಲ!

ಬೇಡ ಬೇಡ, ಅನ್ಯ ದೈವವೆಂಬುದು ಹಾದರ ಕಾಣಿರೋ

ಕೂಡಲಸಂಗಮದೇವ ಕಂಡಡೆ ಮೂಗ ಕೊಯ್ವ ಕಾಣಿರೊ

ಎಕದೇವತಾರಾಧನೆಗೆ ಶರಣರು ಕಂಡುಕೊಂಡ ಮಾರ್ಗವೆಂದರೆ, ಇಷ್ಟಲಿಂಗದೊಂದಿಗಿನ ಧ್ಯಾನ-ಅನುಸಂಧಾನ. ಶಿವಯೋಗ ಅಥವಾ ಲಿಂಗಾಂಗ ಯೋಗವೆಂತಲೂ ಕರೆಯಲಾಗುತ್ತದೆ. ಯೋಗ ಮತ್ತು ಶಿವಯೋಗದ ನಡುವೆ ಸಾಕಷ್ಟು ವ್ಯತ್ಯಾಸ. ಯೋಗವು ಶಾರೀರಿಕ ತಾಲೀಮುಗಳಿಗೆ ಮೀಸಲಾದರೆ, ಶಿವಯೋಗಾನುಸಂಧಾನವು ಶರೀರ, ಇಂದ್ರಿಯ ಮತ್ತು ಬುದ್ಧಿಗೆ ಸಂಬಂಧಿಸಿದ್ದು.

ಗೃಹಪ್ರವೇಶ ನಂತರದ ಸಂಸ್ಕಾರವೇ ವಿವಾಹ ಮಹೋತ್ಸವ. ಅದನ್ನು ಶರಣ ಪರಂಪರೆಯಂತೆ ಜರುಗಿಸಲಾಗುತ್ತಿದ್ದು, ಒಂದು ಸಾಹಿತ್ಯ ಸಮಾವೇಶದಂತೆ ನಡೆಸಲಾಗುತ್ತದೆ. ವಿವಾಹ ಪದ್ಧತಿಯನ್ನು ಕಲ್ಯಾಣ ಮಹೋತ್ಸವವನ್ನಾಗಿ ಸಂಘಟಿಸಲಾಗುತ್ತದೆ.

ಈ ಹಿನ್ನೆಲೆಯಲ್ಲಿ ಮುರುಘಾಮಠದ ವತಿಯಿಂದ 27 ವರ್ಷಗಳಿಂದ ಬಸವಾದಿ ಶರಣ ಪರಂಪರೆಯ ಕಲ್ಯಾಣ ಮಹೋತ್ಸವವನ್ನು ಪ್ರತಿತಿಂಗಳು ಐದನೇ ತಾರೀಕು ನೆರವೇರಿಸಲಾಗುತ್ತಿದೆ. ಸುಮಾರು 14 ಸಾವಿರ ಜೋಡಿಗಳು ದಾಂಪತ್ಯ ಜೀವನಕ್ಕೆ ಪ್ರವೇಶಿಸಿದ್ದು ಒಂದು ದಾಖಲೆ. ಇಲ್ಲಿ ಶುದ್ಧ ಕನ್ನಡದಲ್ಲಿ (ವಚನಗಳ ಮುಖಾಂತರ) ಕಲ್ಯಾಣ ಪದ್ಧತಿಯನ್ನು ನೆರವೇರಿಸಲಾಗುತ್ತಿದ್ದು, ಯಾವ ಆಡಂಬರವೂ ಇರುವುದಿಲ್ಲ.

ವರನಿಂದ ವಧುವಿನ ಕೊರಳಿಗೆ ಮಾಂಗಲ್ಯವನ್ನು ಕಟ್ಟಿಸುವಂತೆ, ಸಮಾನತೆಯ ಸಂಕೇತವಾಗಿ (ಶರಣ ಪದ್ಧತಿಯಂತೆ) ವಧುವಿನಿಂದ ವರನ ಕೊರಳಿಗೆ ರುದ್ರಾಕ್ಷಿಯನ್ನು ಕಟ್ಟಿಸಲಾಗುತ್ತದೆ. ಬಹುಮುಖ್ಯವಾಗಿ ವಧು-ವರರಿಗೆ ಪ್ರತಿಜ್ಞಾವಚನ ಬೋಧಿಸಲಾಗುತ್ತದೆ.

ಧಾರ್ಮಿಕ ಸಂಸ್ಕಾರವು ಧರ್ಮದ ಒಂದು ಮಹತ್ವದ ಹೆಜ್ಜೆ. 12ನೇ ಶತಮಾನದ ಶರಣರ ಮಾದರಿಯಂತೆ 20–21ನೇ ಶತಮಾನದಲ್ಲಿ ತಳಮೂಲದ ಜನಾಂಗಗಳು, ಜಂಗಮೇತರರು (ಲಿಂಗಾಯತರ ಉಪಜಾತಿಗಳು) ಮತ್ತು ಲಿಂಗಾಯತೇತರರಿಗೆ (ಸರ್ವಜನಾಂಗದವರು) ಧಾರ್ಮಿಕ ದೀಕ್ಷೆ-ಲಾಂಛನ ನೀಡಲಾಗಿದೆ.

ಋತುಮತಿ ಮತ್ತು ಸೀಮಂತ (ಕುಪ್ಪಸ) ಕಾರ್ಯದಲ್ಲೂ ಕೆಲವೊಂದು ಸಂಸ್ಕಾರಗಳಿದ್ದು, ಅವನ್ನು ಲಿಂಗಾಯತ ಪರಂಪರೆಯ ಚೌಕಟ್ಟಿನೊಳಗೆ ಆಚರಿಸಲಾಗುತ್ತದೆ. ಮಾನವ ಬದುಕು ಅಂತಿಮ ಆಗುವುದು ಮರಣದೊಂದಿಗೆ. ಮುಸ್ಲಿಂ, ಕ್ರೈಸ್ತ, ಬೌದ್ಧ ಧರ್ಮಗಳಲ್ಲಿ ಶವಗಳನ್ನು ಹೂಳುವ ಪದ್ಧತಿ ಇದೆ. ಹಿಂದೂ ಪದ್ಧತಿಯಂತೆ ಅಗ್ನಿಸ್ಪರ್ಶ. ಲಿಂಗಾಯತ ಧರ್ಮದ ಆಚರಣೆಯಂತೆ ಸಮಾಧಿಗೆ ಮುನ್ನ ಮೃತ ಶರೀರಕ್ಕೆ ಸ್ನಾನಾದಿಗಳನ್ನು ಮಾಡಿಸಿ, ಸೂಕ್ತವಾದ ಸ್ಥಳದಲ್ಲಿ ಕೂಡ್ರಿಸಲಾಗುತ್ತದೆ. ಕೆಲವು ಪ್ರದೇಶಗಳಲ್ಲಿ ಉದ್ದಕ್ಕೆ ಮಲಗಿಸಲಾಗುತ್ತದೆ. ಉತ್ತರ ಕರ್ನಾಟಕದಲ್ಲಿ ಬಹುತೇಕ ಲಿಂಗಶರೀರವನ್ನು ಸಿದ್ಧಾಸನದಲ್ಲಿ ಕೂಡ್ರಿಸಿ, ಪೂಜಿಸಲಾಗುತ್ತದೆ.

ಮರಣವು ಅಮಂಗಲ ಎಂಬ ಭಾವನೆ ಇದ್ದು, ಅದನ್ನು ಒಂದು ಸೂತಕವೆಂದು ಪರಿಗಣಿಸಲಾಗುತ್ತದೆ. ಆದರೆ ಲಿಂಗಾಯತ ಧರ್ಮದಲ್ಲಿ ಅದರಲ್ಲೂ ಬಸವಣ್ಣನವರ ವಚನದಂತೆ- ಮರಣವನ್ನು ಮಹಾನವಮಿಯಂತೆ ಆಚರಿಸಲಾಗುತ್ತದೆ. ಊರಲ್ಲಿರುವ ಮಠಾಧೀಶರನ್ನು ಕರೆಸಿಕೊಂಡು, ಲಿಂಗಪೂಜೆ ಇತ್ಯಾದಿ ನೆರವೇರಿಸುತ್ತ, ಭಾಗವಹಿಸಿದವರಿಗೆಲ್ಲ ಮಹಾಪ್ರಸಾದದ ವ್ಯವಸ್ಥೆ ಏರ್ಪಡಿಸಲಾಗುತ್ತದೆ. ಒಂದೆಡೆ ಶಿವಭಜನೆ (ಅಹೋರಾತ್ರಿ ಭಜನೆ) ಮತ್ತೊಂದೆಡೆ ಶಿವಾನುಭವ ಚಿಂತನೆ. ಈ ಸಂಸ್ಕಾರವು ದುಃಖದ ವಾತಾವರಣವನ್ನು ಮರೆಸುತ್ತದೆ. ಮೂರು ದಿನ, ಹನ್ನೊಂದು ದಿನ ಇಲ್ಲವೇ ಇಪ್ಪತ್ತೊಂದನೇ ದಿನದಲ್ಲಿ ಸ್ಮರಣೋತ್ಸವ ಇಲ್ಲವೇ ಗುರು ಲಿಂಗ ಜಂಗಮಾರಾಧನೆ. ಒಂದೆರಡು ಗಂಟೆಯ ಸಮಾರಂಭದಲ್ಲಿ ಲಿಂಗೈಕ್ಯರ ಗುಣಗಾನ. ಬಂದವರಿಗೆಲ್ಲ ಆರೋಗಣೆ (ಅನ್ನಸಂತರ್ಪಣೆ). ಹೀಗೆ ಜನನದಿಂದ ಮರಣದವರೆಗಿನ ಸಂಸ್ಕಾರಗಳು ವಿಭಿನ್ನವಾಗಿದ್ದು, ತನ್ನದೇ ಆದ ಸಂಸ್ಕತಿಯೊಂದಿಗೆ ಲಿಂಗಾಯತ ವಿಶ್ವವು ಮುಂದುವರಿಯುತ್ತ ಸಾಗಿದೆ.

ರಾಷ್ಟ್ರಮಟ್ಟಕ್ಕೆ ಹೋಲಿಸಿದಾಗ ಲಿಂಗಾಯತರು ಅಲ್ಪಸಂಖ್ಯಾತರು. ಉಪಪಂಗಡಗಳು ಸೇರಿಕೊಂಡು, ಎಲ್ಲ ಪ್ರಭೇದಗಳ ಲಿಂಗಾಯತರು ಒಂದಿಲ್ಲೊಂದು ಕಾಯಕ ನಿರ್ವಹಿಸುತ್ತ ಜೀವನ ನಡೆಸುತ್ತ ಬಂದಿರುತ್ತಾರೆ. ಲಿಂಗಾಯತರಲ್ಲಿ ಕೆಲವರು ಮಾತ್ರ ಉಳ್ಳವರಿರಬಹುದು. ಬಹುತೇಕರು ಮಧ್ಯಮ ವರ್ಗದವರಿದ್ದಾರೆ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಬಡವರಿದ್ದಾರೆ.

ಒಂದು ಧರ್ಮ ಎನಿಸಿಕೊಳ್ಳಬೇಕಾದರೆ, ಆ ಧರ್ಮಕ್ಕೆ ಸ್ಥಾಪಕರಿರಬೇಕು. ಶರಣರು ಹೊಸ ಸಿದ್ಧಾಂತದ ಪ್ರತಿಪಾದಕರು. 12ನೇ ಶತಮಾನದ ಶರಣರೇ ಮುಂದಾಗಿ ಬಸವಣ್ಣನವರನ್ನು ತಮ್ಮ ನೇತಾರನೆಂದು ಒಪ್ಪಿಕೊಂಡಿರುತ್ತಾರೆ.

ಆದ್ದರಿಂದ ಬಸವಣ್ಣನವರು ಲಿಂಗಾಯತಧರ್ಮದ ಗುರು ಮಾತ್ರವಲ್ಲ ಅವರ ವಿಚಾರಗಳು ವಿಶ್ವವೇ ಒಪ್ಪುವಂತಿವೆ. ಧರ್ಮವೆನಿಸಿಕೊಳ್ಳಲು ಧಾರ್ಮಿಕ ಸಂವಿಧಾನ ಇರಬೇಕು. ಶರಣರ ವಚನಗಳೇ ಲಿಂಗಾಯತ ಧರ್ಮಕ್ಕೆ ಸಂವಿಧಾನ. ಅವುಗಳೇ ಧರ್ಮಗ್ರಂಥ. ಧರ್ಮಕ್ಷೇತ್ರವಾಗಿ ಬಸವಕಲ್ಯಾಣ, ಕೂಡಲಸಂಗಮ, ಉಳವಿ, ಕದಳಿವನ, ಸೊಲ್ಲಾಪುರ ಮತ್ತಿತರ ಶರಣಕ್ಷೇತ್ರಗಳಿವೆ. ಈ ತತ್ತ್ವ-ಸಿದ್ಧಾಂತವನ್ನು ಪ್ರತಿಪಾದಿಸುತ್ತ ಬಂದಿರುವ ಮಠ-ಪೀಠಗಳಿವೆ. ಶ್ರೀಗುರುಬಸವಲಿಂಗಾಯನಮಃ ಎಂಬುದು ಇವರ ಮಂತ್ರ.

ಲಿಂಗಾಯತವು ಒಂದು ಜಾತಿ ಆಗಿರದೆ ತತ್ತ್ವ ಆಗಿದೆ. ಬಸವಾದಿ ಶರಣರು ಪ್ರತಿಪಾದಿಸಿದ ತತ್ತ್ವಗಳು ವಿಶ್ವಮಾನ್ಯವಾಗಿದ್ದು, ಸರ್ವರೂ ಒಪ್ಪುವಂತಿವೆ. ಸಮ ಸಮಾಜದ ನಿರ್ಮಾಣದ ಹಾದಿಯಲ್ಲಿ ಬುದ್ಧ-ಬಸವಣ್ಣ-ಗಾಂಧಿ ಮತ್ತು ಅಂಬೇಡ್ಕರ್ ವಿಚಾರಗಳು ಇಡೀ ಭಾರತವನ್ನು ಒಗ್ಗೂಡಿಸುತ್ತವೆ. ತನ್ಮೂಲಕ ಒಂದು ಭಾವೈಕ್ಯ ಭಾರತವನ್ನು ನಿರ್ಮಿಸಲು ಸಾಧ್ಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry