ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಭೀಮ್‌’ ಹೋಲುವ ಮೊಬೈಲ್‌ ವಾಲೆಟ್‌ ‘ತೇಜ್‌’

Last Updated 26 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಗೂಗಲ್‌ ಸಂಸ್ಥೆ ಇತ್ತೀಚೆಗೆ ಹೊಸ ಪೇಮೆಂಟ್‌ ಆ್ಯಪ್‌ ‘ತೇಜ್‌’ (TEZ) ಬಿಡುಗಡೆ ಮಾಡಿದೆ. ಕೇಂದ್ರ ಸರ್ಕಾರದ ಎನ್‌ ಪಿ ಸಿ ಐ (National Payments Corporation of India) ಅಭಿವೃದ್ಧಿಪಡಿಸಿರುವ ಯುನಿಫೈಡ್‌ ಪೇಮೆಂಟ್ಸ್‌ ಇಂಟರ್‌ ಫೇಸ್‌ (ಯುಪಿಐ) ನೆರವಿನಿಂದ ತೇಜ್‌ ಕಾರ್ಯನಿರ್ವಹಿಸುತ್ತದೆ. ಯುಪಿಐ ಆ್ಯಪ್‌ ಭೀಮ್‌ಗೆ (BHIM) ಹೋಲಿಸಿದರೆ ತೇಜ್‌ ಆ್ಯಪ್‌ ನಲ್ಲಿ ಹೆಚ್ಚು ಭಾರತೀಯ ಭಾಷೆಗಳಿಲ್ಲ. ಭೀಮ್‌ ಆ್ಯಪ್‌ ನಲ್ಲಿ 12 ಭಾರತೀಯ ಭಾಷೆಗಳಿದ್ದರೆ ತೇಜ್‌ ನಲ್ಲಿ ಕೇವಲ 7 ಭಾರತೀಯ ಭಾಷೆಗಳಿವೆ. ಆದರೆ, ಭೀಮ್‌ ಗೆ ಹೋಲಿಸಿದರೆ ತೇಜ್‌ ಹೆಚ್ಚು ಮುಂದುವರಿದ ಆ್ಯಪ್‌ ಆಗಿದೆ. ಭೀಮ್‌ ಗಿಂತ ಹೆಚ್ಚು ಸರಳ ಆಯ್ಕೆಗಳು ತೇಜ್‌ ನಲ್ಲಿವೆ.

ಮೊಬೈಲ್‌ ಪೇಮೆಂಟ್‌ನ ವಿಷಯಕ್ಕೆ ಬಂದರೆ ಗೂಗಲ್‌ ಮೊಬೈಲ್ ವಾಲೆಟ್‌ ಅನ್ನು ಪರಿಚಯಿಸುತ್ತಿರುವುದು ಇದೇ ಮೊದಲೇನಲ್ಲ. ಗೂಗಲ್‌ ನ ‘ಆಂಡ್ರಾಯ್ಡ್‌ ಪೇ’ ಮೊಬೈಲ್‌ ವಾಲೆಟ್‌ ಈಗಾಗಲೇ ಹಲವು ರಾಷ್ಟ್ರಗಳಲ್ಲಿ ಬಳಕೆಯಲ್ಲಿದೆ. ರೆಸ್ಟೊರಂಟ್‌, ಮಳಿಗೆಗಳು ಸೇರಿದಂತೆ ಹಲವು ಖರೀದಿ ತಾಣಗಳಲ್ಲಿ ಇದು ಬಳಕೆಯಾಗುತ್ತಿದೆ. ಆದರೆ, ಭಾರತದ ಬಳಕೆದಾರರಿಗೆಂದೇ ವಿಶೇಷವಾಗಿ ತೇಜ್‌ ಆ್ಯಪ್ ಅನ್ನು ಅಭಿವೃದ್ಧಿಪಡಿಸಿರುವುದಾಗಿ ಗೂಗಲ್‌ ಹೇಳಿಕೊಂಡಿದೆ.

ಭಾರತದ ಬಹುತೇಕ ಬ್ಯಾಂಕ್‌ಗಳು ಯುಪಿಐ ಮೂಲಕ ಭೀಮ್‌ ಗೆ ಜೋಡಣೆಯಾಗಿವೆ. ಇನ್ನೂ ಕೆಲವು ಬ್ಯಾಂಕ್‌ಗಳು ಯುಪಿಐ ಲಕ್ಷಣಗಳನ್ನು ಒಳಗೊಂಡ ತಮ್ಮದೇ ಬ್ಯಾಂಕ್‌ ಆ್ಯಪ್‌ ಗಳನ್ನು ರೂಪಿಸಿವೆ. ಎನ್‌ಪಿಸಿಐ ಅಭಿವೃದ್ಧಿಪಡಿಸಿರುವ ಭೀಮ್‌ ಆ್ಯಪ್‌ ಅನ್ನು ಈವರೆಗೆ ಒಂದು ಕೋಟಿಗೂ ಹೆಚ್ಚು ಮಂದಿ ಬಳಸುತ್ತಿದ್ದಾರೆ.

ತೇಜ್ ಆ್ಯಪ್‌ ಬಳಸುವುದು ಸುಲಭ. ಪ್ಲೇಸ್ಟೋರ್‌ನಿಂದ  ಡೌನ್‌ ಲೋಡ್‌ ಮಾಡಿದ ಬಳಿಕ ನಿಮ್ಮ ಬ್ಯಾಂಕ್‌ ಖಾತೆಯೊಂದಿಗೆ ಜೋಡಣೆಯಾಗಿರುವ ಮೊಬೈಲ್‌ ನಂಬರ್‌ ಬಳಸಿ ತೇಜ್‌ ಆ್ಯಪ್‌ ಗೆ ಲಾಗ್‌ ಇನ್‌ ಆಗಬೇಕು. ಭೀಮ್ ಆ್ಯಪ್‌ ನಿಮ್ಮ ಮೊಬೈಲ್‌ ಸಂಖ್ಯೆಯನ್ನು ಆಟೊ ಡಿಟೆಕ್ಟ್‌ ಮಾಡುತ್ತದೆ. ಆದರೆ, ತೇಜ್‌ ಆ್ಯಪ್‌ ನಲ್ಲಿ ನೀವು ಹತ್ತು ಅಂಕೆಗಳ ಮೊಬೈಲ್‌ ಸಂಖ್ಯೆಯನ್ನು ಟೈಪ್‌ ಮಾಡಬೇಕಾಗುತ್ತದೆ. ಮೊಬೈಲ್‌ ನಂಬರ್‌ ನಮೂದಿಸಿ ಮುಂದಿನ ಹಂತಕ್ಕೆ ಓಕೆ ಗುಂಡಿ ಒತ್ತಿ ಸಮ್ಮತಿಸಿದರೆ ನಿಮ್ಮ ಮೊಬೈಲ್‌ ಗೆ ಒಟಿಪಿ (ಒನ್ ಟೈಮ್ ಪಾಸ್‌ ವರ್ಡ್‌) ಬರುತ್ತದೆ. ಒಟಿಪಿ ಪರಿಶೀಲನೆ ಆದ ಬಳಿಕ ಆ್ಯಪ್‌ ಗೆ ಪಾಸ್‌ ವರ್ಡ್‌ ಪಿನ್‌ ಸೆಟಿಂಗ್‌ ಕೇಳುತ್ತದೆ. ಇಲ್ಲಿ ನೀವು ನಿಮ್ಮ ಸ್ಮಾರ್ಟ್ ಫೋನ್ ನ ಲಾಕ್‌ಸ್ಕ್ರೀನ್‌ ಗೆ ಬಳಸಿರುವ ಪಿನ್‌ ಅನ್ನೇ ಬಳಸಬಹುದು. ಇಲ್ಲವೇ ಆ್ಯಪ್‌ ಗೆಂದೇ ಬೇರೆ ಪಿನ್‌ ಕೊಡಬಹುದು.

ಭೀಮ್‌ ಆ್ಯಪ್‌ ನಲ್ಲಿ ಇರುವಂತೆಯೇ ತೇಜ್‌ ನಲ್ಲೂ ಆ್ಯಪ್‌ ಮಿನಿಮೈಸ್‌ ಆದ ಬಳಿಕ ಮತ್ತೆ ಲಾಗ್‌ ಇನ್‌ ಕೇಳುತ್ತದೆ. ಸುರಕ್ಷತೆಯ ಕಾರಣಕ್ಕೆ ಈ ರೀತಿ ಪ್ರತಿ ಬಾರಿ ಆ್ಯಪ್‌ ಮಿನಿಮೈಸ್‌ ಆದಾಗಲೂ ಮತ್ತೆ ಲಾಗ್‌ ಇನ್‌ ಆಗುವುದು ಅನಿವಾರ್ಯ. ತೇಜ್‌ ಆ್ಯಪ್‌ ಗೆ ಬ್ಯಾಂಕ್‌ ಆಯ್ಕೆ ಹಾಗೂ ಬ್ಯಾಂಕ್‌ ಖಾತೆಯ ಆಯ್ಕೆ ಮಾಡಿಕೊಳ್ಳುವುದೂ ಭೀಮ್‌ ಆ್ಯಪ್‌ ನಂತೆಯೇ.

ಬ್ಯಾಂಕ್‌ ಆಯ್ಕೆ ಮಾಡಿಕೊಂಡ ಬಳಿಕ ನಿಮ್ಮ ಬ್ಯಾಂಕ್‌ ಖಾತೆಗೆ ಜೋಡಣೆಯಾಗಿರುವ ಮೊಬೈಲ್‌ ಸಂಖ್ಯೆಯ ಆಧಾರದ ಮೇಲೆ ಖಾತೆ ಸಂಖ್ಯೆಯ ಕೊನೆಯ ನಾಲ್ಕು ಅಂಕಿಗಳು ಕಾಣಿಸಿಕೊಳ್ಳುತ್ತವೆ. ನಿಮ್ಮ ಡೆಬಿಟ್‌ ಕಾರ್ಡ್‌ನ ಕೊನೆಯ 6 ಅಂಕಿಗಳನ್ನು ನಮೂದಿಸಿದ ಬಳಿಕ ಬ್ಯಾಂಕ್‌ ನಿಂದ ಸ್ವಯಂ ಪರಿಶೀಲನೆಯ ಪ್ರಕ್ರಿಯೆ ನಡೆಯುತ್ತದೆ. ಬ್ಯಾಂಕ್‌ ನ ಪರಿಶೀಲನೆಯು ಐದಾರು ಸೆಕೆಂಡ್‌ಗಳಲ್ಲಿ ಮುಗಿಯುತ್ತದೆ. ಈ ವೇಳೆ ನಿಮ್ಮ ಬ್ಯಾಂಕ್‌ ನಿಂದ ಒಟಿಪಿ ಬರುತ್ತದೆ. ಈ ಒಟಿಪಿ ನಮೂದಿಸಿ, ನಿಮ್ಮ ಇಮೇಲ್‌ ಆಯ್ಕೆ ಮಾಡಿಕೊಂಡರೆ ಲಾಗ್‌ ಇನ್‌ ಪ್ರಕ್ರಿಯೆ ಮುಗಿಯುತ್ತದೆ.

ನಿಮ್ಮ ಸಮೀಪದ ಸ್ಮಾರ್ಟ್‌ ಫೋನ್‌ ಜತೆಗೆ ಸಂಪರ್ಕ ಸಾಧಿಸಿ ಹಣ ವರ್ಗಾವಣೆ ಮಾಡಲು ತೇಜ್ ಆ್ಯಪ್‌ ಮೂಲಕ ಸಾಧ್ಯ. ಈ ವ್ಯವಸ್ಥೆ ಭೀಮ್‌ ಆ್ಯಪ್‌ ನಲ್ಲಿ ಇರಲಿಲ್ಲ. ಅಲ್ಲದೆ ತೇಜ್‌ ಆ್ಯಪ್‌ ನಿಮ್ಮ ಸ್ಮಾರ್ಟ್‌ಫೋನ್‌ನ ಮೈಕ್ರೊಫೋನ್‌ ಮತ್ತು ಸ್ಪೀಕರ್‌ ಮೂಲಕ ಅಲ್ಟ್ರಾಸೋನಿಕ್‌ ತರಂಗಗಳನ್ನು ಬಳಸಿ ಹತ್ತಿರದ ಸ್ಮಾರ್ಟ್‌ ಫೋನ್‌ ಜತೆ ಸಂಪರ್ಕ ಸಾಧಿಸುತ್ತದೆ. ಈ ವಿಧಾನದ ಮೂಲಕವೂ ಹಣ ವರ್ಗಾವಣೆ ಮಾಡಬಹುದು. ಭೀಮ್‌ ಆ್ಯಪ್‌ ನಲ್ಲಿ ಇಂಗ್ಲಿಷ್‌ ಜತೆಗೆ 12 ಭಾರತೀಯ ಭಾಷೆಗಳಿವೆ. ಕನ್ನಡ, ಹಿಂದಿ, ಬಂಗಾಳಿ, ಒಡಿಯಾ, ಪಂಬಾಬಿ, ಮರಾಠಿ, ಗುಜರಾತಿ, ತಮಿಳು, ತೆಲುಗು, ಮಲಯಾಳ, ಅಸ್ಸಾಮಿ ಮತ್ತು ಉರ್ದು. ಆದರೆ ಸದ್ಯ ತೇಜ್‌ ನಲ್ಲಿರುವುದು ಕೇವಲ 7 ಭಾರತೀಯ ಭಾಷೆಗಳು. ಕನ್ನಡ, ಹಿಂದಿ, ಬಂಗಾಳಿ, ಗುಜರಾತಿ, ಮರಾಠಿ, ತಮಿಳು ಮತ್ತು ತೆಲುಗು.

ಬ್ಯಾಂಕ್‌ ಖಾತೆ ಅಥವಾ ಮೊಬೈಲ್‌ ಸಂಖ್ಯೆ ಹಂಚಿಕೊಳ್ಳದೆಯೂ ಧ್ವನಿ ಇಲ್ಲವೇ ಕ್ಯುಆರ್‌ ಕೋಡ್‌ ತಂತ್ರಜ್ಞಾನದ ನೆರವಿನಿಂದ ಹಣ ವರ್ಗಾವಣೆಯ ಸೌಲಭ್ಯ ತೇಜ್‌ ಆ್ಯಪ್‌ ನಲ್ಲಿದೆ. ಈಗಾಗಲೇ ಭೀಮ್‌ ಆ್ಯಪ್ ಬಳಸುತ್ತಿರುವವರಿಗೆ ತೇಜ್‌ ಆ್ಯಪ್‌ ಭೀಮ್‌ ನ ಮುಂದುವರಿದ ಆವೃತ್ತಿಯಂತೆ ಕಂಡರೆ ಅಚ್ಚರಿಯಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT