ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣಕಾಸು ಸಲಹೆಗೆ ‘ವೆಲ್ತ್‌ ಆ್ಯಪ್‌’

Last Updated 26 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಸಿರಿವಂತರ ಸಂಪತ್ತನ್ನು ಸಮರ್ಪಕವಾಗಿ ನಿರ್ವಹಿಸಲು ಹಣಕಾಸು ಸಲಹೆಗಾರರು ನೆರವಾಗುತ್ತಾರೆ. ಮಧ್ಯಮ ವರ್ಗದವರು ಮತ್ತು ಸಾಮಾನ್ಯ ಹೂಡಿಕೆದಾರರಿಗೆ ಇಂತಹ ಸಲಹೆಗಾರರ ಸೇವೆಯ ಅಗತ್ಯವೂ ಹೆಚ್ಚಾಗಿ ಕಂಡುಬರುವುದಿಲ್ಲ. ಮಹಾನಗರಗಳ ಆಚೆಗಿನ ಎರಡನೆ ಹಂತದ ನಗರಗಳಾದ ಶಿವಮೊಗ್ಗ, ಮೈಸೂರು, ಮಂಗಳೂರಿನಂತಹ ನಗರಗಳಲ್ಲಿ ಇಂತಹ ಹೂಡಿಕೆದಾರರು ಗಮನಾರ್ಹ ಸಂಖ್ಯೆಯಲ್ಲಿ ಇದ್ದಾರೆ. ಇವರಿಗೆಲ್ಲ ವೈಯಕ್ತಿಕ ಹಣಕಾಸು ಸಲಹೆ ನೀಡುವ ಉದ್ದೇಶದಿಂದಲೇ ‘ವೆಲ್ತ್‌ ಆ್ಯಪ್‌’ ಕಾರ್ಯೋನ್ಮುಖವಾಗಿದೆ.

ದೇಶದ ಒಟ್ಟಾರೆ ಜನಸಂಖ್ಯೆಯಲ್ಲಿನ ಸರಿಸುಮಾರು 30 ಕೋಟಿ ಜನರು ಸಾಕಷ್ಟು ವರಮಾನ ಗಳಿಸುತ್ತಾರೆ. ಅವರಲ್ಲಿ ಹಣ ವೆಚ್ಚ ಮಾಡುವ ಮತ್ತು ಉಳಿತಾಯದ ಸಾಮರ್ಥ್ಯವೂ ಇರುತ್ತದೆ. ಆದರೆ, 1.5 ಕೋಟಿ ಜನರು ಮಾತ್ರ ಸಾಂಪ್ರದಾಯಿಕ ಉಳಿತಾಯ ಯೋಜನೆಗಳಿಗೆ ಹೊರತಾದ ಮಾರ್ಗದಲ್ಲಿ ಹಣ ಹೂಡಿಕೆಯತ್ತ ಗಮನ ಹರಿಸಿದ್ದಾರೆ. ಇದಕ್ಕೆ ಬೇರೆ, ಬೇರೆ ಕಾರಣಗಳಿವೆ.

‘ಕುಣಿಗಲ್‌, ಗೌರಿಬಿದನೂರುನಂತಹ ಸಣ್ಣ ನಗರಗಳಲ್ಲಿನ ತಿಂಗಳಿಗೆ ₹ 12 ರಿಂದ ₹ 18 ಸಾವಿರದವರೆಗೆ ದುಡಿಯುವವರಲ್ಲಿಯೂ ಇತರ ಹೂಡಿಕೆ ವಿಧಾನಗಳ ಬಗ್ಗೆ ಕುತೂಹಲ ಇದ್ದೇ ಇರುತ್ತದೆ. ಆದರೆ, ಸೂಕ್ತ ಸಲಹೆ ಇಲ್ಲದೇ ಅವರು ಖಚಿತ ನಿರ್ಧಾರಕ್ಕೆ ಬರಲು ಸಾಧ್ಯವಾಗುತ್ತಿಲ್ಲ.  ಹೆಚ್ಚಿನ ಜನರು ಚಿಟ್‌ ಫಂಡ್‌, ಅಂಚೆ ಕಚೇರಿ ಉಳಿತಾಯದಂತಹ ಸಾಂಪ್ರದಾಯಿಕ ವಿಧಾನಗಳಲ್ಲಿ ಹೂಡಿಕೆಗೆ ಹೆಚ್ಚಿನ ಒಲವು ಹೊಂದಿದ್ದಾರೆ. ಇದಕ್ಕಿಂತ ಸಾಕಷ್ಟು ಉತ್ತಮ ಲಾಭ ತಂದುಕೊಡುವ ಹೂಡಿಕೆ ಅವಕಾಶಗಳು ಇರುವುದು ಅವರ ಗಮನಕ್ಕೆ ಬಂದಿಲ್ಲ. ಬಂದಿದ್ದರೂ ಹೇಗೆ ಮುಂದುವರೆಯಬೇಕು ಎನ್ನುವುದರ ಬಗ್ಗೆ ಅನುಮಾನಗಳಿವೆ. ಆ ಕೊರತೆಯನ್ನು ತುಂಬಿಕೊಡಲು ’ವೆಲ್ತ್‌ ಆ್ಯಪ್‌’ ನೆರವಾಗುತ್ತಿದೆ’ ಎಂದು ಈ ಹಣಕಾಸು ತಂತ್ರಜ್ಞಾನ ಸಂಸ್ಥೆಯ ಸಹ ಸ್ಥಾಪಕ ಗೌರವ ಧವನ್‌ ಹೇಳುತ್ತಾರೆ.

(ಗೌರವ್ ಧವನ್‌)

ನಿರ್ದಿಷ್ಟ ವರಮಾನ ಹೊಂದಿದವರಿಗೆ ಹಣ ಹೂಡಿಕೆಯ ಇತರ ಲಾಭದಾಯಕ ಅವಕಾಶಗಳ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. ವೆಲ್ತ್‌ಆ್ಯಪ್‌ನ ಅಂತರ್ಜಾಲ ತಾಣ ಮತ್ತು ಮೊಬೈಲ್‌ ಕಿರುತಂತ್ರಾಂಶ ಮೂಲಕ ನೋಂದಾಯಿಸಿ ಖಾತೆ ತೆರೆದು ಮ್ಯೂಚುವಲ್‌ ಫಂಡ್‌ಗಳಲ್ಲಿ ಹಣ ತೊಡಗಿಸಬಹುದಾಗಿದೆ. ಇಲ್ಲಿ ಕನಿಷ್ಠ ಹೂಡಿಕೆ  ₹ 100 ಇದೆ.  ಗರಿಷ್ಠ ಹೂಡಿಕೆಗೆ ಯಾವುದೇ ಮಿತಿಗಳಿಲ್ಲ. ಆಧಾರ್‌ ಮೂಲಕ ಇಂತಹ ಗ್ರಾಹಕರ ಹೆಸರು, ವಿಳಾಸ, ಬ್ಯಾಂಕ್‌ ಖಾತೆ ವಿವರಗಳನ್ನು ದೃಡೀಕರಿಸಿದ ನಂತರ ಹೂಡಿಕೆದಾರರು ಸುಲಭವಾಗಿ ತಮ್ಮ ವಹಿವಾಟು ಆರಂಭಿಸಬಹುದು.

ಗ್ರಾಹಕರನ್ನು ಡಿಜಿಟಲ್‌ ಮಾಧ್ಯಮದ ಮೂಲಕ  ಸಂಪರ್ಕಿಸಲಾಗುತ್ತಿದೆ. ಸಣ್ಣ ನಗರ ಮತ್ತು ಪಟ್ಟಣಗಳಲ್ಲಿನ ಹೂಡಿಕೆದಾರರ ಅನುಕೂಲಕ್ಕಾಗಿ ಸ್ಥಳೀಯ ಭಾಷೆಯಲ್ಲಿಯೇ ವ್ಯವಹರಿಸಲಾಗುತ್ತಿದೆ. ಆದರೆ, ಮೊಬೈಲ್‌ ಆ್ಯಪ್‌ ಮಾತ್ರ ಇಂಗ್ಲಿಷ್‌ನಲ್ಲಿ ಇರುತ್ತದೆ.

‘ದೇಶದಲ್ಲಿ ಸಂಪತ್ತು ನಿರ್ವಹಣೆಯ (ಎಎಂಸಿ) 34 ಸಂಸ್ಥೆಗಳು ಮತ್ತು ಅವುಗಳ 5 ಸಾವಿರಕ್ಕೂ ಹೆಚ್ಚು ಸ್ಕೀಮ್‌ಗಳಿವೆ. ಹೂಡಿಕೆದಾರರ ಆದ್ಯತೆ, ಅಗತ್ಯ ಆಧರಿಸಿ ಎಲ್ಲಿ ಹಣ ಹೂಡಿಕೆ ಮಾಡಬಹುದು ಎನ್ನುವುದರ ಬಗ್ಗೆ ‘ವೆಲ್ತ್‌ಆ್ಯಪ್‌’ ಮಾರ್ಗದರ್ಶನ ಮಾಡುತ್ತಿದೆ. ಈ ಸಲಹೆಯು ಹೂಡಿಕೆದಾರರಿಗೆ ಇಷ್ಟವಾಗದಿದ್ದರೆ ಅದನ್ನು ತಿರಸ್ಕರಿಸಿ ಸ್ವಂತ ನಿರ್ಧಾರಕ್ಕೆ ಬರಲೂ ಇಲ್ಲಿ ಅವಕಾಶ ಇದೆ’ ಎಂದು ಗೌರವ್‌ ಧವನ್‌ ವಿವರಣೆ ನೀಡುತ್ತಾರೆ.

ಆರಂಭದಲ್ಲಿ ಹೂಡಿಕೆದಾರರಲ್ಲಿ ಮನೆ ಮಾಡಿರುವ ಅನುಮಾನಗಳನ್ನು ದೂರ ಮಾಡಲು ಪ್ರಯತ್ನಿಸಲಾಗುತ್ತಿದೆ. ತಮ್ಮೆಲ್ಲ ಗೊಂದಲಗಳ ದೂರವಾದ ನಂತರವೇ ಹೂಡಿಕೆದಾರರು  ಸ್ವಇಚ್ಛೆಯಿಂದ ‘ವೆಲ್ತ್‌ ಆ್ಯಪ್‌’ನಲ್ಲಿ ಹೆಸರು ನೋಂದಾಯಿಸಬಹುದು. ಇದಕ್ಕಾಗಿ ಅವರು ಯಾವುದೇ ಶುಲ್ಕ ಪಾವತಿಸಬೇಕಾಗಿಲ್ಲ. ಹೆಚ್ಚುವರಿ ಮೌಲ್ಯವರ್ಧಿತ ಸೇವೆಗಳಿಗೆ ಒಂದು ಬಾರಿಗೆ ಇಲ್ಲವೆ ವಾರ್ಷಿಕ ಲೆಕ್ಕದಲ್ಲಿ ಸೇವಾ ಶುಲ್ಕ ಪಾವತಿಸುವ ಸೌಲಭ್ಯವೂ ಇಲ್ಲಿದೆ. ಗ್ರಾಹಕರ ಪ್ರತಿ ಹೂಡಿಕೆಗೆ ಮ್ಯೂಚುವಲ್‌ ಫಂಡ್‌ನಿಂದ ಶುಲ್ಕ ಪಡೆಯುವ ಮೂಲಕ ತನ್ನ ವಹಿವಾಟು ನಿರ್ವಹಿಸಲಿದೆ.  ಹೂಡಿಕೆದಾರರ ಹಣ ಹೂಡಿಕೆ ಆಧರಿಸಿ ಫಂಡ್‌ ಹೌಸ್‌ಗಳು ’ವೆಲ್ತ್‌ಆ್ಯಪ್‌ಗೆ ಶುಲ್ಕ ಪಾವತಿಸುತ್ತವೆ.

ಇತ್ತೀಚೆಗೆ ಮ್ಯೂಚುವಲ್‌ ಫಂಡ್‌ಗಳಿಗೆ ಸಂಬಂಧಿಸಿದಂತೆ ಷೇರು ನಿಯಂತ್ರಣ ಮಂಡಳಿಯು (ಸೆಬಿ) ಕಟ್ಟುನಿಟ್ಟಿನ ಕ್ರಮಗಳನ್ನು ರೂಪಿಸಿದೆ. ವಹಿವಾಟು ಪಾರದರ್ಶಕವಾಗಿದೆ. ಇತ್ತೀಚಿನ ದಿನಗಳಲ್ಲಿ ಮ್ಯೂಚುವಲ್‌ ಫಂಡ್‌ ವಹಿವಾಟು ಗಮನಾರ್ಹವಾಗಿ ಬೆಳೆಯುತ್ತಿದೆ. ಇಲ್ಲಿ ಹಣ ಹೂಡಿಕೆ ಮಾಡಿದವರಿಗೆ ಉತ್ತಮ ಪ್ರತಿಫಲವನ್ನು ನಿರೀಕ್ಷಿಸಬಹುದಾಗಿದೆ ಎಂದು ಧವನ್ ಹೇಳುತ್ತಾರೆ. ಮಾಹಿತಿಗೆ https://wealthapp.com ಕ್ಕೆ ಭೇಟಿ ನೀಡಬಹುದು. ಮೊಬೈಲ್ ಕಿರುತಂತ್ರಾಂಶ ‘Wealthapp’ ಡೌನ್‌ಲೋಡ್‌ ಮಾಡಿಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT