ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಾವಳಿ ಕರ್ನಾಟಕವೆಂಬ ಭಾವಿಸಿದ ಜನಪದ

Last Updated 26 ಸೆಪ್ಟೆಂಬರ್ 2017, 19:50 IST
ಅಕ್ಷರ ಗಾತ್ರ

ಕರಾವಳಿ ಕರ್ನಾಟಕದಲ್ಲಿ ಕಳೆದ ಕೆಲವು ದಶಕಗಳಿಂದ ಭೀಕರವಾಗಿ ವ್ಯಾಪಿಸುತ್ತಿರುವ, ನಮ್ಮೆಲ್ಲರನ್ನೂ ನಿಧಾನವಾಗಿ ಆದರೆ ನಿಸ್ಸಂಶಯವಾಗಿ ಕಬಳಿಸುತ್ತಿರುವ ಕೋಮುವಾದ ಎನ್ನುವ ವಿದ್ಯಮಾನದ ಬಗ್ಗೆ ಕೆಲವು ವಿಚಾರಗಳ ವಿಶ್ಲೇಷಣೆ ಇಲ್ಲಿದೆ.

ಕೋಮುವಾದದ ಕುರಿತು ನಾವು ಕಳೆದ ಅನೇಕ ವರ್ಷಗಳಿಂದ ವಿಮರ್ಶೆಯ ಮಾತುಗಳನ್ನಾಡುತ್ತಾ ಬಂದಿದ್ದೇವೆ. ಕೋಮು ಹಿಂಸೆಯ ಸಂದರ್ಭದಲ್ಲಿ ಶಾಂತಿ, ಸಾಮರಸ್ಯದ ಘೋಷಣೆಗಳನ್ನು ಕೂಗಿದ್ದೇವೆ. ಕೋಮುಗಲಭೆಗಳನ್ನು ನಿಯಂತ್ರಿಸುವುದು ಹೇಗೆ, ಸಮುದಾಯಗಳ ನಡುವೆ ಸೌಹಾರ್ದ ಸಾಧಿಸುವುದು ಹೇಗೆ, ಧರ್ಮ ಹಾಗೂ ರಾಜಕಾರಣದ ನಡುವೆ ಎಲ್ಲಿ ಮತ್ತು ಹೇಗೆ ಗೆರೆಗಳನ್ನು ಎಳೆಯಬೇಕು ಎಂದು ಚರ್ಚಿಸಿದ್ದೇವೆ.

ಪ್ರಜಾತಂತ್ರ, ಸೆಕ್ಯುಲರ್‌ವಾದ, ಕಾನೂನಿನ ಆಡಳಿತ, ಸಮುದಾಯಗಳ ಸ್ವಾಯತ್ತತೆ ಎಂಬಿತ್ಯಾದಿ ಮೌಲಿಕ ವಿಚಾರಗಳ ಕುರಿತು ಚಿಂತನೆ ನಡೆಸಿದ್ದೇವೆ. ಇಡೀ ದೇಶದ ಚರಿತ್ರೆಯನ್ನು ಮರುಸಂಘಟಿಸಿ ಈ ಮೌಲಿಕ ವಿಚಾರಗಳು ಹೇಗೆ ನಮ್ಮ ಸಾಂಸ್ಕೃತಿಕ ಬಳುವಳಿಗಳು ಎನ್ನುವುದನ್ನು ತೋರಿಸಿಕೊಡಲು ಪ್ರಯತ್ನಿಸಿದ್ದೇವೆ. ಧರ್ಮ-ದೇವರು, ಪಾಪ-ಪುಣ್ಯಗಳ ಕುರಿತು ಅತ್ಯಂತ ನಿರಾಸಕ್ತನಾದವನೂ ಧರ್ಮವೆಂದರೇನು, ಸಂಸ್ಕೃತಿ ಎಂದರೇನು, ಯಾವ ಬಗೆಯಾದ ಸಾಮಾಜಿಕ, ಸಾಂಸ್ಕೃತಿಕ ಮೌಲ್ಯಗಳು ನಮ್ಮ ಸಾರ್ವಜನಿಕ ಜೀವನದ ಅಡಿಪಾಯವಾಗಿರಬೇಕು ಎಂದು ಚಿಂತನೆ ನಡೆಸುವಂತೆ ಕೋಮುವಾದ ನಮ್ಮನ್ನು ಪ್ರಚೋದಿಸಿದೆ. ಇವೆಲ್ಲದರ ಹೊರತಾಗಿಯೂ, ದಿನಕಳೆದಂತೆ ಕೋಮುವಾದದ ತಾತ್ವಿಕತೆ ನಮ್ಮ ಸಾರ್ವಜನಿಕ ಜೀವನದ ಲೋಕಾಭಿರಾಮ ತಿಳಿವಳಿಕೆಯಾಗಿ ಬೇರುಬಿಡುತ್ತಿದೆ.


ಮತಾಂತರ, ಮುಸ್ಲಿಮರು, ದನದ ಮಾಂಸ ಸೇವನೆ, ಭಯೋತ್ಪಾದನೆ, ದೇಶ ದ್ರೋಹ ಎಂಬಿತ್ಯಾದಿ ವಿಚಾರಗಳಿಗೆ ಸಂಬಂಧಿಸಿದಂತೆ ಏಕಘನಾಕಾರದ ವೈಚಾರಿಕ ಮೊನಚು ಕಳೆದುಕೊಂಡ ಅವಿಮರ್ಶಿತ ಧೋರಣೆಗಳು ಈಗ ನಮ್ಮ ಸಾರ್ವಜನಿಕ ಅಭಿಪ್ರಾಯದ ಅವಿಭಾಜ್ಯ ಅಂಗಗಳಾಗಿವೆ. ಕೆಲ ವರುಷಗಳ ಹಿಂದೆ ಮಂಗಳೂರಿನಲ್ಲಿ ನಡೆದ ಪಬ್ ದಾಳಿಯ ಘಟನೆಯ ಸೂತ್ರಧಾರ ಪ್ರಮೋದ್ ಮುತಾಲಿಕ್ ಸಂದರ್ಶನವೊಂದರಲ್ಲಿ ಮಂಗಳೂರಿನ ಬಹುತೇಕ ತಂದೆತಾಯಿಯರು ತನ್ನ ಸಂಸ್ಕೃತಿ ರಕ್ಷಣೆಯ ಈ ಮಹತ್ಕಾರ್ಯವನ್ನು ಶ್ಲಾಘಿಸಿದ್ದಾರೆ ಎಂದು ಹೆಮ್ಮೆಯಿಂದ ಉದ್ಗರಿಸಿದ್ದಾರೆ. ಮಂಗಳೂರಿನ ಸಾರ್ವಜನಿಕ ವಲಯ ಬಹುಮಟ್ಟಿಗೆ ಈ ಘಟನೆಗೆ ಮೌನ ಸಮ್ಮತಿಯನ್ನು ಸೂಚಿಸಿದೆ ಎನ್ನುವುದು ದಿಗ್ಭ್ರಾಂತಿ ಹುಟ್ಟಿಸುವ ಸಂಗತಿ. ಈ ಘಟನೆಯ ಮೊದಲು ಹಾಗೂ ನಂತರ ಇಂತಹ ಅನೇಕ ಸಂಗತಿಗಳು ಕರಾವಳಿ ಕರ್ನಾಟಕದಲ್ಲಿ ನಡೆಯುತ್ತಿವೆ.

ಹುಡುಗ-ಹುಡುಗಿಯರು ಧರ್ಮಭೇದವನ್ನು ಮರೆತು ಪರಸ್ಪರರ ಬಗ್ಗೆ ಆಕರ್ಷಿತರಾಗುತ್ತಾರೆ, ಮತ-ಭೇದಗಳ ಎಲ್ಲೆಗಳನ್ನು ದಾಟಿ ನಡೆವ ಪ್ರೇಮ ವ್ಯವಹಾರಗಳು ವಿವಾಹಗಳಲ್ಲಿ ಕೊನೆಗೊಂಡು ಅನರ್ಥ ಸಂಭವಿಸುತ್ತದೆ, ಅನ್ಯಮತೀಯರು ಮತಾಂತರದ ದೊಡ್ಡ ಹುನ್ನಾರವನ್ನೇ ಹಾಕಿದ್ದಾರೆ, ಒಂದು ಕಡೆ ಮುಸ್ಲಿಮರು ಇನ್ನೊಂದು ಕಡೆ ಕ್ರಿಶ್ಚಿಯನ್ನರು ವಿಶಿಷ್ಟ ರೀತಿಗಳಲ್ಲಿ ಮತಾಂತರದಲ್ಲಿ ತೊಡಗಿರುವುದರಿಂದ ಹಿಂದೂಗಳು ಅಲ್ಪಸಂಖ್ಯಾಕರಾಗುತ್ತಿದ್ದಾರೆ. ಗೋವು ಹಿಂದೂ ಧರ್ಮದ ಪಾವಿತ್ರ್ಯದ ಸಂಕೇತ. ಆದ್ದರಿಂದ, ಗೋಹತ್ಯೆ ನಿಷೇಧ ಅತ್ಯಂತ ಸಮಂಜಸವಾದದ್ದು, ಮುಸ್ಲಿಮರಿಗೆ ದೇಶಾಭಿಮಾನವಿಲ್ಲ ಎಂಬಿತ್ಯಾದಿ ವಿಚಾರಗಳು ಸಾರ್ವಜನಿಕ ಅಭಿಪ್ರಾಯದಲ್ಲಿ ಸರ್ವಮಾನ್ಯತೆ ಗಳಿಸಿವೆ.

ಇವನ್ನೆಲ್ಲಾ ಏಕೆ ಬರೆಯುತ್ತಿದ್ದೇವೆಂದರೆ ಕೋಮುವಾದ ಮತ್ತದರ ಅನೇಕಾನೇಕ ಅಭಿವ್ಯಕ್ತಿಗಳು ಕೇವಲ ಕೆಲವು ಸಂಘಟನೆಗಳ ಕುತಂತ್ರ ಮಾತ್ರವಾಗಿರದೆ ಕರಾವಳಿಯ ನಾವೆಲ್ಲರೂ ಮೌನವಾಗಿ ಒಪ್ಪಿಕೊಂಡಿರುವ ಅಥವಾ ಖಾಸಗಿಯಾಗಿ ಹಂಚಿಕೊಳ್ಳುತ್ತಿರುವ ವಿಚಾರಗಳೇ ಆಗಿವೆ. ಅಂದರೆ ಇಂದು ನಾವು ಹೆಚ್ಚುಹೆಚ್ಚಾಗಿ ಬಳಸುತ್ತಿರುವ ನಾಗರಿಕ ಸಮಾಜ ಎನ್ನುವ ಪದಪ್ರಯೋಗದ ನೆಲೆಯಲ್ಲಿ ಹೇಳುವುದಾದರೆ ಕರಾವಳಿ ಕರ್ನಾಟಕದ ನಾಗರಿಕ ಸಮಾಜ ಕೋಮುವಾದಿಯಾಗಿ ಪರಿವರ್ತಿತವಾಗಿದೆ. ಆದ್ದರಿಂದ, ಕೋಮುವಾದವೆನ್ನುವುದು ಕೆಲವು ಸಂಘಸಂಸ್ಥೆಗಳ ಹುನ್ನಾರ ಮಾತ್ರವಾಗಿರದೆ, ಇಡೀ ಸಾರ್ವಜನಿಕ ವಲಯವನ್ನು ಆಕ್ರಮಿಸಿಕೊಂಡಿರುವ ಮನೋಧರ್ಮವಾಗಿ ಕಾಣಿಸುತ್ತಿದೆ.

ಕೋಮುವಾದದ ಸಂಕೀರ್ಣ ಸ್ವರೂಪದ ಈ ಚರ್ಚೆಯಲ್ಲಿ ಒಂದು ಅಂಶವನ್ನು ಒತ್ತಿ ಹೇಳಬೇಕಾಗಿದೆ. ಅದು ಕೋಮುವಾದವನ್ನು ಎದುರಿಸುವಲ್ಲಿ ನಾವು ಕಟ್ಟಿಕೊಂಡಿರುವ ಕೋಮು ಸೌಹಾರ್ದದ ರಾಜಕಾರಣದ ಕುರಿತಾದದ್ದು. ಹಾಗೆ ನೋಡಿದರೆ, ಕೋಮು ಸೌಹಾರ್ದದ ರಾಜಕಾರಣಕ್ಕೂ, ಸೆಕ್ಯುಲರ್‌ವಾದ ಪ್ರತಿಪಾದಿಸುವ ಮೌಲಿಕ ರಾಜಕಾರಣಕ್ಕೂ ಅರ್ಥಾರ್ಥ ಸಂಬಂಧವಿಲ್ಲ.

ಗಟ್ಟಿಯಾಗಿ ಬೇರು ಬಿಟ್ಟಿರುವ ಕೋಮುವಾದಿ ಸಂಘಟನೆಗಳನ್ನು, ಅವುಗಳ ಅಸ್ಮಿತೆಗಳನ್ನು ಮತ್ತು ಅವು ನಡೆಸುವ ರಾಜಕಾರಣಗಳನ್ನು; ನಾವು ತಾತ್ವಿಕವಾಗಿ ಅದರದ್ದೇ ಭಾವವಾದ ಕೋಮು ಸೌಹಾರ್ದ ಎನ್ನುವ ಪರಿಕಲ್ಪನೆಯಿಂದ ವಿರೋಧಿಸಲು ಯತ್ನಿಸುತ್ತಿದ್ದೇವೆ. ಇದರಿಂದಾಗಿ ಕೋಮುವಾದದ ವಿರುದ್ಧದ ನಮ್ಮ ಪ್ರತಿಕ್ರಿಯೆಗಳು ಅದೇ ವಿನಾಶಕಾರಿ ಪ್ರವೃತ್ತಿಯ ಪ್ರತಿಬಿಂಬವಾಗಿ ಕಾಣಿಸುತ್ತವೆ. ಆದ್ದರಿಂದ, ಸೆಕ್ಯುಲರ್‌ವಾದದ ನೆಲೆಯಿಂದ ನಾವು ನಡೆಸಬೇಕಾದ್ದು ಕೋಮು ಸೌಹಾರ್ದದ ರಾಜಕಾರಣವನ್ನಲ್ಲ.

ಬದಲಾಗಿ, ಎಲ್ಲ ಬಗೆಯ ಸಮುದಾಯಗಳನ್ನು ಪ್ರಜಾಸತ್ತಾತ್ಮಕಗೊಳಿಸುವ ಮತ್ತು ಅವುಗಳ ನಡುವೆ ಅರ್ಥಪೂರ್ಣ ವೈಚಾರಿಕ ಸಂವಾದಗಳನ್ನು ಬೆಳೆಸುವ ಹೊಸ ಬಗೆಯ ಮೌಲಿಕ ರಾಜಕೀಯವನ್ನು. ಅಂದರೆ ಸಮುದಾಯಗಳ ನಡುವೆ ಹದಗೆಟ್ಟಿರುವ ಸಂಬಂಧಗಳ ಕಾರಣಗಳನ್ನು ಅರಿಯುವುದು, ಅವುಗಳಿಗೆ ಸೂಕ್ತವಾದ ಪರಿಹಾರಗಳನ್ನು ಹುಡುಕುವುದು ಮತ್ತು ಆ ಮೂಲಕ ಸಮುದಾಯಗಳ ನಡುವೆ ಅರ್ಥಪೂರ್ಣವಾದ ಸಂಬಂಧಗಳನ್ನು ಏರ್ಪಡಿಸುವುದು ಸೆಕ್ಯುಲರ್‌ವಾದಿ ಮೌಲಿಕ ರಾಜಕಾರಣದ ಕಾರ್ಯತಂತ್ರದ ನೆಲೆಗಟ್ಟಾಗಬೇಕು. ಸಮುದಾಯಗಳನ್ನು ಪ್ರಜಾತಾಂತ್ರಿಕಗೊಳಿಸುವುದು ಮತ್ತು ಅವುಗಳ ನಡುವೆ ವಿಮರ್ಶಾತ್ಮಕ ಸಂಬಂಧಗಳನ್ನು ಬೆಳೆಸುವುದಷ್ಟೇ ಸೆಕ್ಯುಲರ್‌ವಾದವಲ್ಲ.

ಅದು ಸೆಕ್ಯುಲರ್‌ವಾದದ ಭಾರತೀಯ ಸಂದರ್ಭದ ಒಂದು ನಿರ್ದಿಷ್ಟ ಕಾರ್ಯವೈಖರಿ ಅಷ್ಟೇ. ಸೆಕ್ಯುಲರ್‌ವಾದವೆನ್ನುವುದು ಒಂದು ವ್ಯಾಪಕವಾದ, ಸಂಕೀರ್ಣವಾದ ಮತ್ತು ಬೇರೆಬೇರೆ ಸಮಾಜಗಳಲ್ಲಿ ಬೇರೆಬೇರೆ ರೂಪಾಂತರಗಳನ್ನು ಹೊಂದುತ್ತಿರುವ ತೆರೆದ ಅಂಚಿನ ವಿಶ್ವಾತ್ಮಕ ದೃಷ್ಟಿ. ಅದು ದಿನೇದಿನೇ ಸಂಕೀರ್ಣಗೊಳ್ಳುತ್ತಿರುವ ಆಧುನಿಕ ಸಮಾಜಗಳಲ್ಲಿ ವೈವಿಧ್ಯ ಮತ್ತು ಬಹುಸಂಸ್ಕೃತೀಯತೆಯನ್ನು ನ್ಯಾಯಸಮ್ಮತವಾಗಿ ನಿರ್ವಹಿಸುವ ಮತ್ತು ಸಂಪನ್ಮೂಲಗಳನ್ನು ಸಮಾನತೆಯ ನೆಲೆಯಲ್ಲಿ ವಿತರಿಸುವ ಕಾರ್ಯತಂತ್ರಗಳನ್ನು ನಿರೂಪಿಸುವ ಒಂದು ರಾಜಕೀಯ ತತ್ವಜ್ಞಾನ.

ಕೋಮುವಾದವನ್ನು ಚಾರಿತ್ರಿಕ ಪರಿಪ್ರೇಕ್ಷ್ಯದಲ್ಲಿ ಅರ್ಥಮಾಡಿಕೊಳ್ಳುವ ಹಾಗೂ ಅದರ ವಿರುದ್ಧ ಸೆಕ್ಯುಲರ್ ನೆಲೆಯ ಕ್ರಿಯಾತ್ಮಕವಾದ ನಡುಪ್ರವೇಶವನ್ನು ನಡೆಸಲು ಯತ್ನಿಸುವ ನಾವು, ನಮ್ಮ ಪ್ರದೇಶದ ಚರಿತ್ರೆಯನ್ನು ಹಾಗೂ ಅದು ಒಡಮೂಡಿಸಿದ ಕೂಡು-ಕಟ್ಟಿನ ಸಂಸ್ಕೃತಿಯನ್ನು ಸೌಹಾರ್ದದ ನೆಲೆಯಲ್ಲಿ ಮರುಸಂಘಟಿಸುತ್ತೇವೆ. ಹಾಗೆ ಮಾಡುವಾಗ ಈ ಕೂಡು-ಕಟ್ಟಿನ ಒಡಕುಗಳನ್ನು ನಾವು ಗಮನಿಸುವುದಿಲ್ಲ. ಕರಾವಳಿ ಕರ್ನಾಟಕದ ಚರಿತ್ರೆಯನ್ನು ನಾವು ಪುನರ್ ಸಂಘಟಿಸುವ ಕ್ರಮವನ್ನೇ ನೋಡೋಣ. ಕರಾವಳಿ ಕರ್ನಾಟಕವನ್ನು ನಾವು ಅನೇಕ ಸಂಸ್ಕೃತಿಗಳ, ಧಾರ್ಮಿಕ ಪರಂಪರೆಗಳ, ಜಾತಿ-ಸಮುದಾಯಗಳ ಹಾಗೂ ಭಾಷಾ ಅಸ್ಮಿತೆಗಳ ಕೂಡಲಸಂಗಮವಾಗಿ ಪರಿಭಾವಿಸುತ್ತೇವೆ. ಹಾಗಾಗಿ ಕರಾವಳಿ ಕರ್ನಾಟಕ, ಕೋಮುಸಾಮರಸ್ಯದ ಶ್ರೇಷ್ಠ ನಿದರ್ಶನವಾಗಿ ನಮಗೆ ಕಾಣಿಸುತ್ತದೆ.

ಈ ಬಗೆಯ ಸದ್ಭಾವನೆಯ ಚರಿತ್ರೆಯ ಮೌಲಿಕ ಆಶಯಗಳನ್ನು ನಾವು ಪ್ರಶ್ನಿಸುವಂತಿಲ್ಲ. ಹಾಗಿದ್ದೂ ಈ ಸಾಮಾಜಿಕ ವಾಸ್ತವದ ಯಥಾರ್ಥತೆಯನ್ನು ನಾವು ಪರಿಶೀಲನೆಗೆ ಒಳಪಡಿಸಬೇಕಾಗುತ್ತದೆ. ಕರಾವಳಿ ಕರ್ನಾಟಕ ನಾವಂದುಕೊಂಡಂತೆ ಯಾವತ್ತೂ ಸಮುದಾಯ ಸೌಹಾರ್ದದ ಮೇರು ಉದಾಹರಣೆಯಾಗಿ ಇದ್ದಿರಲಿಲ್ಲ. ಎಲ್ಲ ಪ್ರದೇಶಗಳಂತೆ ಅನೇಕ ಬಗೆಯ ಧಾರ್ಮಿಕ, ಸಾಮುದಾಯಿಕ ಹಾಗೂ ಜಾತೀಯ ವೈಷಮ್ಯಗಳು ಇಲ್ಲಿ ಆಗಿಂದಾಗ್ಗೆ ತಲೆ ಎತ್ತುತ್ತಿದ್ದವು ಎನ್ನುವುದು ಅನೇಕ ಚಾರಿತ್ರಿಕ ಸಂಗತಿಗಳಿಂದ ನಮ್ಮ ಅರಿವಿಗೆ ಬರುತ್ತದೆ. ಕರಾವಳಿ ಕರ್ನಾಟಕ ಎನ್ನುವ ಭೂಭಾಗ ಇತರ ಅನೇಕ ಪ್ರದೇಶಗಳಂತೆ ವಿವಿಧ ಬಗೆಯ ವಿರೋಧಾಭಾಸಗಳ, ಅಸಮತೋಲನಗಳ ಒಂದು ಪ್ರದೇಶ.

ಅನೇಕ ಬಗೆಯ ವಿಶಿಷ್ಟತೆ ಹಾಗೂ ವಿಷಮತೆಗಳ ಒಂದು ಒಕ್ಕೂಟ. ಹಾಗಾಗಿ, ಕರಾವಳಿ ಕರ್ನಾಟಕದ ಇಂದಿನ ಕೋಮುವಾದದ ವೃತ್ತಾಂತ ಸ್ವರ್ಗಸದೃಶವಾದ ಸಮಾಜವೊಂದು ಕೋಮುವಿಷಮತೆಯ ನರಕಕ್ಕೆ ಪತನ ಹೊಂದಿದ ಕಥೆಯಲ್ಲ. ಬದಲಾಗಿ ನಿರ್ದಿಷ್ಟವಾದ ಸಮಾಜವೊಂದು ತನ್ನ ಬಾಹ್ಯ ಹಾಗೂ ಆಂತರಿಕ ಒತ್ತಡ ಮತ್ತು ಚಲನೆಗಳಿಂದ ಪಡೆದುಕೊಂಡ ನಿರ್ದಿಷ್ಟ ಸಾಂಸ್ಕೃತಿಕ ರೂಪ. ಆದ್ದರಿಂದ ಕರಾವಳಿ ಕರ್ನಾಟಕದ ಕೋಮುವಾದದ ವೃತ್ತಾಂತವನ್ನು ಹೆಚ್ಚು ಸಮಂಜಸವಾದ ತಾತ್ವಿಕ ಚೌಕಟ್ಟಿನಲ್ಲಿಟ್ಟು ನೋಡುವ ಅಗತ್ಯವಿದೆ.

ಈ ಹಿನ್ನೆಲೆಯಲ್ಲಿ, ಕರಾವಳಿ ಕರ್ನಾಟಕದಲ್ಲಿ ಬೇರು ಬಿಟ್ಟಿರುವ ಆಧುನಿಕತೆಯ ರೂಪು-ರೇಷೆಗಳನ್ನು ಹಾಗೂ ಅದರ ಚಾರಿತ್ರಿಕ ನಿರ್ದಿಷ್ಟತೆಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸೋಣ. ಕರಾವಳಿ ಕರ್ನಾಟಕ, ಮನೋಭಾವದ ನೆಲೆಯಲ್ಲಿ ಬಹಳ ಮೊದಲಿನಿಂದಲೂ ಆಧುನೀಕರಣದ ಪ್ರಕ್ರಿಯೆಗೆ ಪೂರಕವಾದ ನೆಲೆಯಾಗಿ ಕಂಡುಬರುತ್ತದೆ. ವ್ಯಾಪಾರ-ವಹಿವಾಟು ಈ ಪ್ರದೇಶದಲ್ಲಿ ಬಹಳ ಮೊದಲಿನಿಂದಲೂ ನೆಲೆಗೊಂಡಿರುವ ಕಸುಬು. ಹಾಗಾಗಿ, ಇಲ್ಲಿ ಬಲುಬೇಗನೆ ಮತ್ತು ವಿಶೇಷ ಅಡೆ-ತಡೆಗಳಿಲ್ಲದೆ ಒಂದು ವಿಶಿಷ್ಟ ಬಗೆಯ ವ್ಯಾಪಾರಿ ಆಧುನಿಕತೆ ಬೇರುಬಿಟ್ಟಿದೆ.

ಹೋಟೆಲ್ ಮತ್ತು ಬ್ಯಾಂಕಿಂಗ್‌ನಂತಹ ಕಸುಬುಗಾರಿಕೆಗಳು ಇಲ್ಲಿ ರಕ್ತಗತವಾಗಿರುವಂತೆ ಕಾಣಿಸುತ್ತದೆ. ಕೃಷಿ ಕ್ಷೇತ್ರ ಕೂಡ ಇಲ್ಲಿ ಬಲು ಬೇಗನೆ ವ್ಯಾಪಾರೀಕರಣಕ್ಕೆ ಒಳಗಾಯಿತು. ಚಾರಿತ್ರಿಕ ನಿರ್ದಿಷ್ಟವಾದ ವ್ಯಾಪಾರ ವಹಿವಾಟುಗಳು ಸೃಷ್ಟಿಸಿದ ವಿಶಿಷ್ಟ ಬಗೆಯ ಬಂಡವಾಳವಾದಿ ಆಧುನಿಕತೆ ಕರಾವಳಿ ಕರ್ನಾಟಕದ ಮನೋಭಾವವನ್ನು ರೂಪಿಸಿದೆ. ಆದ್ದರಿಂದಲೇ, ಕರ್ನಾಟಕದ ಉಳಿದೆಲ್ಲರಿಗಿಂತಲೂ ಬಹಳ ಬೇಗನೆ ಅಭಿವೃದ್ಧಿಯ ಮಂತ್ರವನ್ನು ನಾವು ಬಾಯಿಪಾಠ ಮಾಡಿಕೊಂಡಿದ್ದೇವೆ. ನಮ್ಮನ್ನು ನಾವು ಅತ್ಯಂತ ಜಾಣರು ಹಾಗೂ ಅಭಿವೃದ್ಧಿಶೀಲರು ಎಂದು ಕರೆದುಕೊಳ್ಳುತ್ತಾ ನಮ್ಮ ವೈದ್ಯಕೀಯ, ಎಂಜಿನಿಯರಿಂಗ್ ಹಾಗೂ ಬಿಸಿನೆಸ್ ಆಡಳಿತದ ಸಂಸ್ಥೆಗಳನ್ನು ಈ ಜಾಣತನದ ಹಾಗೂ ಅಭಿವೃದ್ಧಿಶೀಲತೆಯ ಸಂಕೇತಗಳಾಗಿ ಎತ್ತಿ ತೋರಿಸುತ್ತೇವೆ. ಅಭಿವೃದ್ಧಿಶೀಲತೆಯ ಮತ್ತು ಜಾಗತೀಕರಣದ ಕಣ್ಣು ಕುಕ್ಕುವ ಬೆಳಕಿನಡಿ ವಿಶಾಲಗೊಳ್ಳುತ್ತಿರುವ ಮತ್ತು ವಿಕಾರಗೊಳ್ಳುತ್ತಿರುವ ನಮ್ಮ ಸಾಮಾಜಿಕ ಹಾಗೂ ಸಾಂಸ್ಕೃತಿಕ ಬಿರುಕುಗಳನ್ನು ನಾವು ಹೆಚ್ಚು ಕಡಿಮೆ ಅವಗಣಿಸಿದ್ದೇವೆ.

ಕರಾವಳಿ ಕರ್ನಾಟಕದ ಅದರಲ್ಲೂ ವಿಶೇಷವಾಗಿ ದಕ್ಷಿಣ ಕನ್ನಡದ ಕುರಿತು ನಾವು ಮುಂದಿಟ್ಟ ತಣ್ಣನೆಯ ಈ ನಿರಾಶದಾಯಕ ನಿರೂಪಣೆ ನಮ್ಮ ಊರಿನ ಘನತೆಯನ್ನು ಕಡಿಮೆ ಮಾಡುವ ದೃಷ್ಟಿಯಿಂದ ಮಾಡಿದ್ದಲ್ಲ. ಬದಲಾಗಿ, ನಮ್ಮ ಪ್ರದೇಶವನ್ನು ಅದರ ಚಾರಿತ್ರಿಕ ನಿರ್ದಿಷ್ಟತೆಯಲ್ಲಿ ಗುರುತಿಸುವ ಮತ್ತು ಅಲ್ಲಿ ಕಂಡು ಬರುವ ಸಾಮಾಜಿಕ ಒಡಕುಗಳಿಗೆ ಕಾರಣಗಳನ್ನು ಹುಡುಕುವ ದೃಷ್ಟಿಯಿಂದ ಮಾಡಿದ್ದಾಗಿದೆ. ಹಾಗೆ ಮಾಡುವಾಗ, ನಮ್ಮ ಊರಿನ , ಪ್ರಜಾಸತ್ತಾತ್ಮಕ ನೆಲೆಗಳು ಮತ್ತು ಈ ನೆಲೆಗಳು ಒಡಮೂಡಿಸುವ ಹೋರಾಟದ ಸಾಧ್ಯತೆಗಳ ಅರಿವು ನಮಗಿದೆ. ನಮ್ಮ ಪ್ರದೇಶದ ಸಾಧ್ಯಾಸಾಧ್ಯತೆಗಳನ್ನು ಸಾಂಸ್ಕೃತಿಕ ನಿಬಿಡತೆಯ ಸೆಕ್ಯುಲರ್‌ವಾದಿ ಚೌಕಟ್ಟಿನಲ್ಲಿ ಅರಿಯುವುದು ಹಾಗೂ ಆ ಮೂಲಕ ದಕ್ಷಿಣ ಕನ್ನಡವನ್ನು ಒಂದು ಪ್ರಜಾತಾಂತ್ರಿಕ ಜನಪದವಾಗಿ ಭಾವಿಸುವುದು ಈ ಲೇಖನದ ಅತ್ಯಂತ ನಡುವಿನ ಕಾಳಜಿಯಾಗಿದೆ.

ಈ ನಿಟ್ಟಿನಲ್ಲಿ ಕರಾವಳಿ ಕರ್ನಾಟಕದಲ್ಲಿ ಸೆಕ್ಯುಲರ್ ಚಿಂತನೆಯ ಕಾರ್ಯರೂಪಗಳನ್ನು ಈ ಕೆಳಗಿನಂತೆ ಮುಂದಿಡಲು ಬಯಸುತ್ತೇವೆ. ಸೆಕ್ಯುಲರ್ ಚಿಂತನೆಯ ಎದುರಾಳಿಗಳು ಎಂದು ನಾವು ಪರಿಭಾವಿಸುವ ಜನರ, ಪಕ್ಷಗಳ ಮತ್ತು ಸಂಘಟನೆಗಳ ವಿರುದ್ಧ ಭಾವಾವೇಶದಿಂದ ಕೂಗಾಡುವ ಬದಲು ಒಂದು ಮನೋಧರ್ಮವಾಗಿ ನಮ್ಮನ್ನು ವ್ಯಾಪಿಸಿಕೊಂಡಿರುವ ಕೋಮುವಾದದ ಸಹಸ್ರಾವತಾರಗಳ ಕುರಿತು ಒಂದು ವಿಶ್ಲೇಷಣಾತ್ಮಕ ದೃಷ್ಟಿಕೋನವನ್ನು ಬೆಳೆಸಿಕೊಳ್ಳುವುದು ನಮ್ಮೆಲ್ಲರ ಅತ್ಯಂತ ಮುಖ್ಯವಾದ ಗುರಿಯಾಗಬೇಕು. ಅಂತೆಯೇ, ನಮ್ಮ ಸುತ್ತಲಿನ ಸಾಮಾಜಿಕ ವಾಸ್ತವದ ಒಡಕುಗಳನ್ನು ನಿಷ್ಠುರತೆಯಿಂದ ಗುರುತಿಸಿ, ಆ ಒಡಕುಗಳನ್ನು ಮತ್ತು ಅವು ಸೃಷ್ಟಿಸಿದ ಸಾಂಸ್ಕೃತಿಕ ವೈಷಮ್ಯವನ್ನು ಹೊಡೆದೋಡಿಸುವ ಅಸಲು ಕಸುಬುಗಳ ಕುರಿತು ನಾವು ನಿರಂತರವಾಗಿ ಚಿಂತನೆ ನಡೆಸಬೇಕು. ಸಮುದಾಯಗಳ ಒಳಗೆ ಮತ್ತು ಸಮುದಾಯಗಳ ನಡುವೆ ಪ್ರಜಾತಾಂತ್ರಿಕ ವೈಚಾರಿಕ ಸಂವಾದಗಳನ್ನು ನಡೆಸುವ ದಾರಿಗಳನ್ನು ಕಂಡುಕೊಳ್ಳಬೇಕು.

ಸಮುದಾಯಗಳ ನಡುವೆ ಇರಲೇಬೇಕಾದ ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಪರಸ್ಪರಾವಲಂಬನೆಯ ಅನಿವಾರ್ಯವನ್ನು ನಿರಂತರವಾಗಿ ಬಿಂಬಿಸಬೇಕು. ನಮ್ಮ ಸಂಪ್ರದಾಯಗಳಲ್ಲಿ, ಧಾರ್ಮಿಕ ಶ್ರದ್ಧೆಗಳಲ್ಲಿ ಇರುವ ಪ್ರಜಾತಾಂತ್ರಿಕ ಮತ್ತು ಮಾನವೀಯ ಅಂಶಗಳನ್ನು ಬೆಳಕಿಗೆ ತಂದು ಅವುಗಳಲ್ಲಿ ಇರಬಹುದಾದ ಅಮಾನವೀಯ ಹಾಗೂ ಹಿಂಸಾತ್ಮಕ ಅಂಶಗಳನ್ನು ತಿರಸ್ಕರಿಸುವ ಧೀಮಂತಿಕೆಯನ್ನು ಬೆಳೆಸಿಕೊಳ್ಳಬೇಕು. ಹೀಗೆ ಮಾಡಿದಾಗ, ಒಂದು ಸಶಕ್ತವಾದ ಸ್ವ-ಪ್ರತಿಫಲನಶೀಲವಾದ ಹಾಗೂ ಪ್ರಜಾತಾಂತ್ರಿಕವಾದ ನಾಗರಿಕ ಸಮಾಜವೊಂದು ಕರಾವಳಿ ಕರ್ನಾಟಕದಲ್ಲಿ ನೆಲೆಯೂರಬಹುದು.

ರಾಜಾರಾಮ ತೋಳ್ಪಾಡಿ   ನಿತ್ಯಾನಂದ ಬಿ. ಶೆಟ್ಟಿ
(ಲೇಖಕರು ಅನುಕ್ರಮವಾಗಿ ಮಂಗಳೂರು ಮತ್ತು ತುಮಕೂರು ವಿಶ್ವವಿದ್ಯಾಲಯಗಳಲ್ಲಿ ಪ್ರಾಧ್ಯಾಪಕರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT