7

ಶುದ್ಧ ಆ್ಯಂಡ್ರಾಯ್ಡ್ ಫೋನ್

ಯು.ಬಿ. ಪವನಜ
Published:
Updated:
ಶುದ್ಧ ಆ್ಯಂಡ್ರಾಯ್ಡ್ ಫೋನ್

ಭಾರತದಲ್ಲಿ ಪ್ರಚಲಿತವಾಗಿರುವ ಹಲವು ಚೀನಾ ಕಂಪೆನಿಗಳಲ್ಲಿ ಶಿಯೋಮಿಯೂ ಒಂದು. ಈ ಕಂಪೆನಿ ಇದು ತನಕ ನೀಡುವ ಬೆಲೆಗೆ ಉತ್ತಮ ಎನ್ನಬಹುದಾದ ಉತ್ಪನ್ನಗಳನ್ನೇ ನೀಡುತ್ತ ಬಂದಿದೆ. ಮೇಕ್ ಇನ್ ಇಂಡಿಯಾ ಘೋಷಣೆಯಂತೆ ಚೀನಾದ ಈ ಕಂಪೆನಿ ಈಗ ಭಾರತದಲ್ಲೂ ಫೋನ್ ತಯಾರಿಸುತ್ತಿದೆ. ಈ ಕಂಪೆನಿಯ ಹಲವು ಉತ್ಪನ್ನಗಳನ್ನು ನಾವು ವಿಮರ್ಶೆ ಮಾಡಿದ್ದೇವೆ. ಶಿಯೋಮಿಯವರ ಎಲ್ಲ ಫೋನ್‌ಗಳಲ್ಲಿ ತಮ್ಮದೇ ಯೂಸರ್ ಇಂಟರ್‌ಫೇಸ್, ಅಂದರೆ ಶುದ್ಧ ಆ್ಯಂಡ್ರಾಯ್ಡ್ ಮೇಲೆ ತಮ್ಮದೇ ಹೊದಿಕೆ ಇರುತ್ತಿತ್ತು. ಈಗ ಪ್ರಥಮ ಬಾರಿಗೆ ಅವರು ಒಂದು ಶುದ್ಧ ಆ್ಯಂಡ್ರಾಯ್ಡ್ ಫೋನ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದಾರೆ. ಅದುವೇ ಶಿಯೋಮಿ ಎಂಐ ಎ1 (Xiaomi Mi A1). ಇದು ನಮ್ಮ ಈ ವಾರದ ಗ್ಯಾಜೆಟ್.

ರಚನೆ, ವಿನ್ಯಾಸ ಚೆನ್ನಾಗಿದೆ. ಲೋಹದ ದೇಹವಿದೆ. 2.5D ಪರದೆ ಇದೆ. ಅಂದರೆ ಪರದೆಯು ಬದಿಗಳಲ್ಲಿ ಸ್ವಲ್ಪ ವಕ್ರವಾಗಿದೆ. ಹಿಂದುಗಡೆ ಕವಚ ತೆಗೆಯಲು ಸಾಧ್ಯವಿಲ್ಲ. ಈ ಕವಚ ತುಂಬ ದೊರಗೂ ಅಲ್ಲ, ತುಂಬ ನಯವೂ ಅಲ್ಲ. ಬದಿಗಳು ಸ್ವಲ್ಪ ವಕ್ರವಾಗಿವೆ. ಹೆಚ್ಚಿಗೆ ಒಂದು ಕವಚ ಹಾಕಿಕೊಂಡರೆ ಉತ್ತಮ. ಬಲಭಾಗದಲ್ಲಿ ಆನ್/ಆಫ್ ಮತ್ತು ವಾಲ್ಯೂಮ್ ಬಟನ್‌ಗಳಿವೆ. ಮೇಲ್ಗಡೆ ಅವಕೆಂಪು (infrared) ದೂರನಿಯಂತ್ರಕದ ಕಿಟಕಿ ಇದೆ. ಇದನ್ನು ಬಳಸಿ ನಿಮ್ಮ ಮನೆಯ ಟಿ.ವಿ., ಆಂಪ್ಲಿಫೈಯರ್, ಇತ್ಯಾದಿ ಉಪಕರಣಗಳನ್ನು ನಿಯಂತ್ರಿಸಬಹುದು.

ಕೆಳಭಾಗದಲ್ಲಿ ಯುಎಸ್‌ಬಿ-ಸಿ ಕಿಂಡಿ ಮತ್ತು ಸ್ವಲ್ಪ ದೂರದಲ್ಲಿ 3.5 ಮಿ.ಮೀ ಇಯರ್‌ಫೋನ್ ಕಿಂಡಿ ಇದೆ. ಎಡಭಾಗದಲ್ಲಿ ಸಿಮ್ ಮತ್ತು ಮೆಮೊರಿ ಕಾರ್ಡ್ ಹಾಕಲು ಚಿಕ್ಕ ಟ್ರೇ ಇದೆ. ‌ಇದರಲ್ಲಿ ಎರಡು ನ್ಯಾನೋ ಸಿಮ್ ಅಥವಾ ಒಂದು ನ್ಯಾನೋ ಸಿಮ್ ಮತ್ತು ಮೆಮೊರಿ ಕಾರ್ಡ್ ಹಾಕಬಹುದು. ಇದರಲ್ಲಿ ಎರಡು ಪ್ರಾಥಮಿಕ ಕ್ಯಾಮೆರಾಗಳಿವೆ ಹಾಗೂ ಅವು ಮೇಲ್ಗಡೆ ಮೂಲೆಯಲ್ಲಿವೆ. ಪಕ್ಕದಲ್ಲಿ ಫ್ಲಾಶ್ ಇದೆ. ಹಿಂಬದಿಯಲ್ಲಿ ಮೇಲ್ಗಡೆ ಮಧ್ಯಭಾಗದಲ್ಲಿ ಬೆರಳಚ್ಚು ಸ್ಕ್ಯಾನರ್ ಇದೆ. ಇದು 5.5 ಇಂಚು ಗಾತ್ರದ ಪರದೆಯ ಫೋನ್. ಒಟ್ಟಿನಲ್ಲಿ ಸುಂದರ ಫೋನ್ ಎನ್ನಬಹುದು.

ಇದರಲ್ಲಿರುವುದು ಎಂಟು ಹೃದಯಗಳ ಪ್ರೊಸೆಸರ್. ಇದರ ಅಂಟುಟು ಬೆಂಚ್‌ಮಾರ್ಕ್ 63377 ಇದೆ. ಅಂದರೆ ಇದು ಮಧ್ಯಮ ವೇಗದ ಫೋನ್. ಬಹುತೇಕ ಆಟಗಳನ್ನು ಆಡುವ ಅನುಭವ ತೃಪ್ತಿದಾಯಕವಾಗಿದೆ. ಅತಿ ಶಕ್ತಿಯನ್ನು ಬೇಡುವ ಮೂರು ಆಯಾಮದ ಮೇಲ್ದರ್ಜೆಯ ಆಟಗಳನ್ನು ಆಡುವಾಗ ಮಾತ್ರ ವೇಗ ಸ್ವಲ್ಪ ಕಡಿಮೆಯಾಯಿತು ಎಂದು ಅನ್ನಿಸಬಹುದು. ಆದರೂ ಒಂದು ಸಲಕ್ಕೆ ಒಂದೇ ಕೆಲಸ ಮಾಡಿದರೆ ತೃಪ್ತಿದಾಯಕವಾಗಿಯೇ ಆಡಬಹುದು ಹೈಡೆಫಿನಿಶನ್ ಮತ್ತು ಅಲ್ಟ್ರಾಹೈಡೆಫಿನಿಶನ್ (4k) ವಿಡಿಯೊ ವೀಕ್ಷಣೆ ಮಾಡಬಹುದು.

ಎರಡು ಪ್ರಾಥಮಿಕ ಕ್ಯಾಮೆರಾ ಇರುವ ಫೋನ್‌ಗಳು ಮಾರುಕಟ್ಟೆಗೆ ಇತ್ತೀಚೆಗೆ ಹಲವಾರು ಬಂದಿವೆ. ಈ ಫೋನ್ ಆ ತಂಡವನ್ನು ಸೇರುತ್ತಿದೆ. ಶಿಯೋಮಿ ಕಂಪೆನಿಯಿಂದ ಎರಡು ಪ್ರಾಥಮಿಕ ಕ್ಯಾಮೆರಾ ಇರುವ ಫೋನ್ ಇದು ಪ್ರಥಮ. ಇದರಲ್ಲಿ 2x ಅಪ್ಟಿಕಲ್ ಝೂಮ್ ಮತ್ತು 10x ಡಿಜಿಟಲ್ ಝೂಮ್ ಇವೆ. ಎರಡು ಲೆನ್ಸ್‌ಗಳಲ್ಲಿ ಒಂದು ಟೆಲಿಫೋಟೊ ಮತ್ತು ಇನ್ನೊಂದು ವೈಡ್ ಆ್ಯಂಗಲ್. ಬುದ್ಧಿವಂತ ತಂತ್ರಾಂಶವನ್ನು ಬಳಸಿ ಈ ಕ್ಯಾಮೆರಾ ಪೋರ್ಟ್ರೈಟ್ ಮೋಡ್‌ನಲ್ಲಿ ಉತ್ತಮ ಫೋಟೊ ತೆಗೆಯುತ್ತದೆ.

ಇತ್ತೀಚೆಗಿನ ಹಲವು ಫೋನ್ ಕ್ಯಾಮೆರಾಗಳಲ್ಲಿ ಈ ಸವಲತ್ತು ಇದೆ. ಈ ಸವಲತ್ತು ಬಳಸಿದಾಗ ವಸ್ತು ಮಾತ್ರ ನಿಖರವಾಗಿ ಕಂಡು ಹಿನ್ನೆಲೆ ಮಸುಕಾಗಿ ಬರುತ್ತದೆ. ಪರೀಕ್ಷಿಸಿದಾಗ ಈ ವಿಧಾನದಲ್ಲಿ ಕೆಲವು ಸಲ ಹಿನ್ನೆಲೆಯನ್ನು ಮಸುಕಾಗಿಸಲು ಸೋಲುವುದು ಕಂಡುಬಂತು. ಏನಾಗುತ್ತಿದೆಯೆಂದು ಪರೀಕ್ಷಿಸಿದಾಗ ಅದು ವಸ್ತುವಿಗೆ ಫೋಕಸ್ ಮಾಡಲು ಸ್ವಲ್ಪ ತಡವರಿಸುತ್ತಿದ್ದುದು ವೇದ್ಯವಾಯಿತು. ವಿಡಿಯೊ ಚಿತ್ರೀಕರಣ ಚೆನ್ನಾಗಿದೆ. ಇದು 4k ವಿಡಿಯೊ ಚಿತ್ರೀಕರಣ ಕೂಡ ಮಾಡಬಲ್ಲುದು. ಒಟ್ಟಿನಲ್ಲಿ ಹೇಳುವುದಾದರೆ ಈ ಬೆಲೆಯ ಕ್ಯಾಮೆರಾಗಳಲ್ಲಿ ಇದು ಉತ್ತಮ ಕ್ಯಾಮೆರಾ ಫೋನ್ ಎನ್ನಬಹುದು.

ಇದರ ಆಡಿಯೊ ಇಂಜಿನ್ ಚೆನ್ನಾಗಿದೆ. ಇಯರ್‌ಫೋನ್ ನೀಡಿಲ್ಲ. ನಿಮ್ಮಲ್ಲಿ ಉತ್ತಮ ಇಯರ್‌ಫೋನ್ ಅಥವಾ ಹೆಡ್‌ಫೋನ್ ಇದ್ದಲ್ಲಿ ಅದನ್ನು ಜೋಡಿಸಿ ಉತ್ತಮ ಸಂಗೀತದ ಅನುಭವ ಪಡೆಯಬಹುದು. ತುಂಬ ಶಕ್ತಿಯನ್ನು ಬೇಡುವ ಆಟವನ್ನು ತುಂಬ ಹೊತ್ತು ಆಡಿದಾಗ, ತುಂಬ ಹೊತ್ತು ಕ್ಯಾಮೆರಾ ಬಳಸಿದಾಗ, ಅದರಲ್ಲೂ ವಿಡಿಯೊ ಚಿತ್ರೀಕರಣ ಮಾಡಿದಾಗ, ಫೋನ್ ಚಾರ್ಜ್ ಮಾಡುವಾಗ, ಫೋನ್ ಸ್ವಲ್ಪ ಬಿಸಿಯಾಗುತ್ತದೆ. ಬ್ಯಾಟರಿ ಬಳಕೆ ತೃಪ್ತಿದಾಯಕವಾಗಿದೆ. ಇದು ಬಳಸುತ್ತಿರುವುದು ಶುದ್ಧ ಆ್ಯಂಡ್ರಾಯ್ಡ್. ಶಿಯೋಮಿಯವರ ಎಂಐಯುಐ ಇದರಲ್ಲಿಲ್ಲ. ಒಟ್ಟಿನಲ್ಲಿ ಹೇಳುವುದಾದರೆ ನೀಡುವ ಹಣಕ್ಕೆ ತೃಪ್ತಿ ಕೊಡುವ ಫೋನ್ ಎನ್ನಬಹುದು.

ಗುಣವೈಶಿಷ್ಟ್ಯಗಳು

ಪ್ರೋಸೆಸರ್ 2.0 ಗಿಗಾಹರ್ಟ್ಸ್ ವೇಗದ ಎಂಟು ಹೃದಯಗಳ ಪ್ರೋಸೆಸರ್ (Snapdragon 625)

ಗ್ರಾಫಿಕ್ಸ್ ಪ್ರೋಸೆಸರ್ Adreno 506

ಮೆಮೊರಿ 4 + 64 ಗಿಗಾಬೈಟ್ಮೈ

ಕ್ರೊಎಸ್‌ಡಿ ಮೆಮೊರಿ ಸೌಲಭ್ಯ ಇದೆ

ಪರದೆ 5.5 ಇಂಚು ಗಾತ್ರದ 1080 x 1920 ಪಿಕ್ಸೆಲ್ಕ್ಯಾ

ಮರ 12 + 12 ಮೆಗಾಪಿಕ್ಸೆಲ್ ಎರಡು ಪ್ರಾಥಮಿಕ + ಫ್ಲಾಶ್

5 ಮೆಗಾಪಿಕ್ಸೆಲ್ ಸ್ವಂತೀ

ಸಿಮ್ 2 ನ್ಯಾನೊ ಅಥವಾ 1 ನ್ಯಾನೊ ಮತ್ತು ಮೈಕ್ರೊಎಸ್‌ಡಿ ಮೆಮೊರಿ ಕಾರ್ಡ್ಬ್ಯಾ

ಟರಿ 3080 mAh

ಗಾತ್ರ 155.4 x 75.8 x 7.3 ಮಿ.ಮೀ.

ತೂಕ 165 ಗ್ರಾಂಬೆರಳಚ್ಚು ಸ್ಕ್ಯಾನರ್ ಇದೆ

ಅವಕೆಂಪು ದೂರನಿಯಂತ್ರಕ (Infrared remote) ಇದೆ

ಎಫ್.ಎಂ. ರೇಡಿಯೋ ಇಲ್ಲ

ಎನ್‌ಎಫ್‌ಸಿ ಇಲ್ಲ

4 ಜಿ ವಿಓಎಲ್‌ಟಿಇ (4G VoLTE) ಇದೆ

ಇಯರ್‌ಫೋನ್ ‌ಇಲ್ಲ

ಯುಎಸ್‌ಬಿ ಓಟಿಜಿ ಬೆಂಬಲ ಇದೆ

ಕಾರ್ಯಾಚರಣ ವ್ಯವಸ್ಥೆ ಆಂಡ್ರಾಯ್ಡ್ 7.0

ಬೆಲೆ ₹14,999

ವಾರದ ಆ್ಯಪ್:

ಸುಳ್ಳು ವಾಟ್ಸ್‌ಆ್ಯಪ್ ಮಾತುಕತೆ

ವಾಟ್ಸ್‌ಆ್ಯಪ್ ಯಾರಿಗೆ ಗೊತ್ತಿಲ್ಲ? ಸ್ಮಾರ್ಟ್‌ಫೋನ್ ಇರುವವ ರಾಗಿದ್ದು, ವಾಟ್ಸ್‌ಆ್ಯಪ್ ಚಾಟ್ ಮಾಡದವರೇ ಇಲ್ಲವೇನೋ? ಹಲವು ಸಂದರ್ಭಗಳಲ್ಲಿ ವಾಟ್ಸ್‌ಆಪ್ ಸಂದೇಶವನ್ನೇ ದಾಖಲೆಯಾಗಿ ನೀಡುವವರಿದ್ದಾರೆ. ಇರಲಿ. ಈ ವಾಟ್ಸ್‌ಆ್ಯಪ್ ಸಂದೇಶ ಅಥವಾ ಚಾಟ್ ದಾಖಲೆಯೇ ಸುಳ್ಳಾಗಿದ್ದರೆ? ಅದು ಹೇಗೆ ಅಂತೀರಾ? ಬಹಳ ಸರಳ. ಗೂಗಲ್‌ ಪ್ಲೇ ಸ್ಟೋರಿಗೆ ಹೋಗಿ WhatsFake (Fake Conversations) ಹುಡುಕಿ ಅಥವಾ http://bit.ly/gadgetloka297 ಜಾಲತಾಣಕ್ಕೆ ಭೇಟಿ ನೀಡಿ ಈ ಕಿರುತಂತ್ರಾಂಶವನ್ನು ಹಾಕಿಕೊಳ್ಳಿ.

ಯಾರ ಜೊತೆ ಯಾವ ಮಾತುಕತೆ (ಚಾಟ್) ಮಾಡಿದ್ದೇನೆ ಎಂಬ ವಿವರ ಬೇಕೋ ಅದನ್ನು ಸೃಷ್ಟಿ ಮಾಡಿ! ಈಗ ಇದರ ಸ್ಕ್ರೀನ್‌ಶಾಟ್ ತೆಗೆದು ಅವರಿಗೇ ಕಳುಹಿಸಿ! ನೀನು ನನ್ನನ್ನು ಸಿನಿಮಾಕ್ಕೆ ಕರೆದುಕೊಂಡು ಹೋಗುತ್ತೇನೆ ಎಂದು ಮಾತುಕೊಟ್ಟಿದ್ದೆ, ನೋಡು ದಾಖಲೆ ಇಲ್ಲಿದೆ, ಎಂದು ನಿಮ್ಮ ಸ್ನೇಹಿತನನ್ನು ಫೂಲ್ ಮಾಡಬಹುದು!

ಚಂದ್ರಶೇಖರ ಅವರ ಪ್ರಶ್ನೆ: ₹2,000ಗೆ ಉತ್ತಮವಾದ ಇಯರ್‌ಬಡ್ ಸೂಚಿಸಿ.

ಉ:  ಸೆನ್‌ಹೈಸರ್ ಸಿಎಕ್ಸ್ 275 ಎಸ್

ಹೊಸ ಐಫೋನ್ 10ರಲ್ಲಿ ನಿಮ್ಮ ಮುಖವೇ ಪಾಸ್‌ವರ್ಡ್. ಇದರ ಬಗ್ಗೆ ಇನ್ನೊಂದು ನಗೆಹನಿ – ಒಮ್ಮೆ ಒಂದು ಕೋಣೆಯಲ್ಲಿ ಹಲವು ಮಂದಿ ಇದ್ದಾಗ ವಿದ್ಯುತ್ ಸರಬರಾಜು ನಿಂತುಹೋಗಿ ಕತ್ತಲೆಯಾಗುತ್ತದೆ. ಎಲ್ಲರೂ ತಮ್ಮ ತಮ್ಮ ಫೋನಿನ ಟಾರ್ಚ್ ಆನ್ ಮಾಡುತ್ತಾರೆ. ಐಫೋನ್ 10 ಇರುವಾತ ಇತರರನ್ನು ಕೇಳಿಕೊಳ್ಳುತ್ತಾನೆ –‘ದಯವಿಟ್ಟು ನನ್ನ ಮುಖಕ್ಕೆ ಟಾರ್ಚ್ ಬೆಳಕು ನೀಡಿ. ನನ್ನ ಫೋನನ್ನು ಅನ್‌ಲಾಕ್ ಮಾಡಬೇಕಾಗಿದೆ’

ಗ್ಯಾಜೆಟ್ ಸುದ್ದಿ:

ಅನುವಾದಿಸುವ ಇಯರ್‌ಫೋನ್

ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ಅನುವಾದ ಮಾಡುವ ತಂತ್ರಾಂಶಗಳು ಮತ್ತು ಕಿರುತಂತ್ರಾಂಶಗಳು ಬೇಕಾದಷ್ಟಿವೆ. ಮಾತನಾಡಿದ ಧ್ವನಿಯನ್ನೇ ಅರ್ಥಮಾಡಿಕೊಂಡು ಧ್ವನಿಯಿಂದ ಪಠ್ಯಕ್ಕೆ ಪರಿವರ್ತಿಸಿ ಇನ್ನೊಂದು ಭಾಷೆಗೆ ಅನುವಾದಿಸಿ ಮತ್ತೆ ಆ ಭಾಷೆಯ ಪಠ್ಯದಿಂದ ಅದನ್ನು ಪುನಃ ಧ್ವನಿಗೆ ಪರಿವರ್ತಿಸಿ ಕೊಡುವ ಹಾಗಿದ್ದರೆ ಉತ್ತಮವಲ್ಲವೇ? ಅಷ್ಟು ಮಾತ್ರವಲ್ಲ ಈ ಧ್ವನಿಯನ್ನು ನೇರವಾಗಿ ಕಿವಿಗೇ ನೀಡುವಂತಿದ್ದರೆ? ಅದು ಒಂದು ಭಾಗವಾಯಿತು. ಇನ್ನೊಂದು ಭಾಗದಲ್ಲಿ ಮಾತನಾಡಲೂ ಕಿವಿಗೆ ಜೋಡಿಸುವ ಬ್ಲೂಟೂತ್ ಸಾಧನವಾಗಿದ್ದರೆ ಇನ್ನೂ ಚೆನ್ನಲ್ಲವೇ? ಹೌದು. ಈಗ ಅಂತಹ ಸಾಧನ ಬಂದಿದೆ.

ಇದರಲ್ಲಿ ಎರಡು (ಒಂದು ಜೊತೆ) ಇಯರ್‌ಫೋನ್‌ಗಳಿವೆ. ಬೇರೆ ಬೇರೆ ಭಾಷೆ ಮಾತನಾಡುವ ಇಬ್ಬರು (ಉದಾ- ಇಂಗ್ಲಿಷ್‌ ಮತ್ತು ಚೀನೀ) ಒಂದೊಂದು ಇಯರ್‌ಫೋನ್‌ಗಳನ್ನು ತಮ್ಮ ತಮ್ಮ ಕಿವಿಗಳಿಗೆ ಜೋಡಿಸಿಕೊಂಡು ಮಾತನಾಡಬೇಕು. ಅವರವರ ಭಾಷೆಯಲ್ಲಿ ಮಾತನಾಡಿದುದನ್ನು ಆಯಾ ಇಯರ್‌ ಫೋನ್ ಜೊತೆಗೆ ಇರುವ ಸ್ಮಾರ್ಟ್‌ಫೋನ್‌ಗೆ ವರ್ಗಾಯಿಸಿ ಅದರಲ್ಲಿರುವ ಕಿರುತಂತ್ರಾಂಶ ಅದನ್ನು ಇನ್ನೊಂದು ಭಾಷೆಗೆ ಪರಿವರ್ತಿಸಿ ಅದನ್ನು ಧ್ವನಿಯನ್ನಾಗಿಸಿ ಇನ್ನೊಬ್ಬರಿಗೆ ಕೇಳಿಸುತ್ತದೆ. ಈ ಸಾಧನ ಸದ್ಯ ತಯಾರಿಯಲ್ಲಿದೆ. ಸದ್ಯಕ್ಕೆ ಇದರಲ್ಲಿ ಭಾರತೀಯ ಭಾಷೆಗಳಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry