6

ಬಹುಭಾಷೆ, ಸಂಸ್ಕೃತಿಗಳ ಸಂಗಮ ‘ಔರಾದ್‌’

Published:
Updated:
ಬಹುಭಾಷೆ, ಸಂಸ್ಕೃತಿಗಳ ಸಂಗಮ ‘ಔರಾದ್‌’

ದೇವಣಿ ತಳಿಯ ರಾಸುಗಳನ್ನು ಹುಡುಕುತ್ತಾ ಮಹಾರಾಷ್ಟ್ರ, ಕರ್ನಾಟಕ, ತೆಲಂಗಾಣ ರಾಜ್ಯಗಳ ಗಡಿಯಲ್ಲಿ ಸುತ್ತಾಡುತ್ತಿದ್ದೆ. ಆಗ ಕನ್ನಡ, ಮರಾಠಿ, ಉರ್ದು, ತೆಲುಗು ಭಾಷೆಗಳು ಪದೇಪದೇ ಕಿವಿ ಮೇಲೆ ಬೀಳುತ್ತಿದ್ದವು. ಅಲ್ಲಿಯ ಜನ ನನ್ನೊಂದಿಗೆ ತಮ್ಮದೇ ಭಾಷೆಯಲ್ಲಿ ಮಾತು ಶುರು ಮಾಡುತ್ತಿದ್ದರು. ನಾನು ಕನ್ನಡಿಗ ಎನ್ನುವುದು ಗೊತ್ತಾಗುತ್ತಿದ್ದಂತೆಯೇ ನನ್ನ ಭಾಷೆಯಲ್ಲಿ ಮಾತನಾಡುತ್ತಿದ್ದರು.

ಕೆಲವು ಸಂದರ್ಭಗಳಲ್ಲಿ ಒಬ್ಬನೇ ಗಡಿಭಾಗದಲ್ಲಿ ಸುತ್ತಾಡುವಾಗ ಬೇಕಾದುದನ್ನು ಸುಲಭವಾಗಿ ಕೇಳಿಪಡೆಯಲು ಸಾಧ್ಯವಾಗುತ್ತಿತ್ತು. ಏಕೆಂದರೆ ಅಲ್ಲಿ ವಾಸಿಸುವ ಜನರಿಗೆ ನನ್ನ ಭಾಷೆ ಗೊತ್ತಿದೆ.

ತೆಲಂಗಾಣದ ಚೌಕನಪಲ್ಲಿ ನಿವಾಸಿ, ಕನ್ನಡಿಗ ಶಂಕರ ಮಚಕೂರಿ ಅವರನ್ನು ಮಾತಿಗೆ ಎಳೆದಿದ್ದಾಗ, ಮಾತಿನ ನಡುವೆ ತಮಗೆ ‘ಚೌ ಭಾಷೆ’ (ನಾಲ್ಕು) ಬರುವುದಾಗಿ ಹೇಳಿದರು. ಗಡಿಪ್ರದೇಶದಲ್ಲಿ ವಾಸಿಸುವ ಜನ ‘ಚೌ ಭಾಷಿಗರೇ!’.

ಒಂದೇ ಊರಿನಲ್ಲಿ ಒಟ್ಟಾಗಿ ಬದುಕುವ ಕನ್ನಡಿಗರು, ಮರಾಠಿಗರು, ತೆಲುಗರು, ಉರ್ದು ಭಾಷಿಕರು ಎಲ್ಲರೂ ಎಲ್ಲರ ಭಾಷೆಯನ್ನು ಆಡುತ್ತಾರೆ. ಕನ್ನಡಿಗರು ಮನೆಯಲ್ಲಿ ಕನ್ನಡ ಮಾತನಾಡುತ್ತಾ, ಓಣಿಯಲ್ಲಿ ಮರಾಠಿಗರೊಂದಿಗೆ ಮರಾಠಿಯಲ್ಲಿ ಸಂಭಾಷಿಸುತ್ತಾ, ಬಜಾರ್‌ನಲ್ಲಿ ಉರ್ದುವಿನಲ್ಲಿ ವ್ಯವಹರಿಸುತ್ತಾ, ಹೊಲದಲ್ಲಿ ಕೂಲಿ ಕಾರ್ಮಿಕರ ಜೊತೆ ತೆಲುಗಿನಲ್ಲಿ ಹರಟೆ ಹೊಡೆಯುತ್ತಾ ಇರುತ್ತಾರೆ.

ಬೀದರ್‌ ಜಿಲ್ಲೆಯ ‘ಔರಾದ್‌ ತಾಲ್ಲೂಕು’ ರಾಜ್ಯದಲ್ಲಿ ವಿಶಿಷ್ಟ ಭೌಗೋಳಿಕ ಲಕ್ಷಣವನ್ನು ಹೊಂದಿದೆ. ಇದು ಉತ್ತರ ಮತ್ತು ಪಶ್ಚಿಮದಲ್ಲಿ ಮಹಾರಾಷ್ಟ್ರ, ಪೂರ್ವದಲ್ಲಿ ತೆಲಂಗಾಣ ರಾಜ್ಯದಿಂದ ಸುತ್ತುವರಿದಿದೆ. ಎರಡೂ ರಾಜ್ಯಗಳ ಭಾಷೆ, ಸಂಸ್ಕೃತಿಗಳ ಪ್ರಭಾವ ನಮ್ಮವರ ಮೇಲಾಗಿದೆ.

ಭಾಷೆ ಸಂವಹನದ ಅತ್ಯುತ್ತಮ ಸಾಧನ. ಆಶ್ಚರ್ಯವೆಂದರೆ ಇಲ್ಲಿ ಭಾಷೆ ಜನರನ್ನು ಒಡೆಯುವುದಿಲ್ಲ. ಸಂಬಂಧ ಬೆಳೆಯುವುದೇ ಭಾಷೆಯ ಮೂಲಕ. ಅಂದರೆ, ಗಡಿಭಾಗದ ಜನ ಪರಸ್ಪರ ಭಾಷೆಯನ್ನು ಕಲಿಯುತ್ತಾರೆ. ಭಾಷೆಯು ಸ್ನೇಹ, ಸಂಬಂಧವನ್ನು ಬೆಸೆಯುತ್ತದೆ; ಗಟ್ಟಿಗೊಳಿಸುತ್ತದೆ. ಭಾಷೆಯು ಬಹುಸಂಸ್ಕೃತಿ ಮತ್ತು ಜ್ಞಾನಕ್ಕೆ ಹೆಬ್ಬಾಗಿಲನ್ನೇ ತೆರೆಯುತ್ತದೆ.

ಸಾಹಿತಿ ಡಾ.ಯು.ಆರ್‌.ಅನಂತಮೂರ್ತಿ ಅವರು ಕಲಬುರ್ಗಿಯಲ್ಲಿ ಮಾತನಾಡುತ್ತಾ ‘ಗಡಿಭಾಗದಲ್ಲಿ ಹುಟ್ಟಿದವರು ಅದೃಷ್ಟವಂತರು. ಹುಟ್ಟಿದ ಮಾತ್ರಕ್ಕೇ ನಾಲ್ಕು ಭಾಷೆಗಳು ಅನಾಯಾಸವಾಗಿ ಬರುತ್ತವೆ. ಒಬ್ಬ ವ್ಯಕ್ತಿಗೆ ನಾಲ್ಕು ಭಾಷೆಗಳು ಬರುತ್ತವೆ ಎಂದರೆ, ಏಕಕಾಲಕ್ಕೆ ನಾಲ್ಕು ಜಗತ್ತಿನೊಂದಿಗೆ ಬದುಕುತ್ತಾನೆ, ಒಡನಾಡುತ್ತಾನೆ. ನಾಲ್ಕು ಜಗತ್ತಿನೊಂದಿಗೆ ಒಬ್ಬ ವ್ಯಕ್ತಿ ಬದುಕುವುದು ನಿಜಕ್ಕೂ ಅದ್ಭುತ’ ಎಂದಿದ್ದರು.

ಇಲ್ಲಿ ಕನ್ನಡದೊಂದಿಗೆ ಮರಾಠಿ, ಉರ್ದು, ತೆಲುಗು ಭಾಷೆಯ ಪದಗಳು ಸಹಜ ಎನ್ನುವಷ್ಟು ಮಿಳಿತಗೊಂಡಿವೆ. ಇವರ ಮಾತುಕತೆಯಲ್ಲಿ ಮರಾಠಿಯ ಆಯಿ (ಅಜ್ಜಿ), ಪೋರ (ಹುಡುಗ) ಪೋರಿ (ಹುಡುಗಿ), ಮೌಶಿ (ಚಿಕ್ಕಮ್ಮ), ನೆಗಣಿ (ನಾದಿನಿ), ಪನ್ನಾಸ್‌ (ಐವತ್ತು), ಶಂಬರ್ (ನೂರು) ಇರುತ್ತವೆ. ಉರ್ದುವಿನ ಪಾವು (ಕಾಲು), ದೀಡ್‌ (ಒಂದೂವರೆ), ದುಖಾನ್‌ (ಅಂಗಡಿ), ಜಂಡಾ (ಧ್ವಜ), ದವಾಖಾನೆ (ಆಸ್ಪತ್ರೆ) ಕಿರಾಯಿ (ಬಾಡಿಗೆ) ಪದಗಳು ಬಳಕೆ ಆಗುತ್ತವೆ. ತೆಲುಗಿನ ಅಂದಲಹೋಗ್ಯಾದ (ನಿಲುಕದೆಹೋಗ್ಯಾದ), ನಿನ್ನಗೂಡಾ ಬರ್ತಿನಿ (ನಿನ್ನ ಜತೆ ಬರ್ತಿನಿ), ಹೊಕ್ಯಾರ (ಹೋಗ್ಯಾರ), ನೀರು ಕೊಂಬರ (ನೀರು ಕುಡಿಯಿರಿ) ಇರುತ್ತವೆ. ಇವೆಲ್ಲವೂ ಉದಾಹರಣೆ ಅಷ್ಟೆ. ಯಾರಿಗೆ ಈ ಪದಗಳ ಪರಿಚಯ ಇರುವುದಿಲ್ಲವೋ ಅವರು ಮಾತುಕತೆಯನ್ನು ತಪ್ಪಾಗಿ ಅರ್ಥೈಸಿಕೊಳ್ಳುವ ಅಪಾಯವಿದೆ.

ಔರಾದ್‌ ತಾಲ್ಲೂಕಿನ ಯಾನಗುಂದ ಗ್ರಾಮದ ಕುಂಬಾರರ ಚಂದ್ರಮ್ಮ ಕತ್ತೆಗಳ ಮೇಲೆ ಮಡಕೆಗಳನ್ನು ಹೇರಿಕೊಂಡು ಹೊರಟಿದ್ದವರು ಮಾತಿಗೆ ಸಿಕ್ಕಿದರು. ‘ನಾನು ಚೌ ಭಾಷಾ ಆಡ್ತೀನ್ರಿ. ಎದುರಿನ ಮಂದಿ ಯಾವ ಭಾಷೆ ಆಡ್ತಾರೋ, ಅದೇ ಭಾಷೆಯನ್ನು ನಾನೂ ಆಡ್ತೀನಿ. ಇದರಿಂದ ವ್ಯಾಪಾರ ಸುಲಭ ಆಗತೈತಿ’ ಎಂದು ಹೇಳಿ ನಕ್ಕು ಹೊರಟರು.

ನಾಗನಪಲ್ಲಿ ನಮ್ಮ ರಾಜ್ಯದ ಗಡಿ ಗ್ರಾಮ. ಅಲ್ಲಿಂದ ನಾಲ್ಕು ಕಿಲೊಮೀಟರ್‌ ಕ್ರಮಿಸಿದರೆ ತೆಲಂಗಾಣದ ದೇಗಲವಾಡಿ ಸಿಗುತ್ತದೆ. ಅಲ್ಲಿ ಕಟ್ಟೆ ಮೇಲೆ ಕುಳಿತು ಹರಟೆಯಲ್ಲಿ ತೊಡಗಿದ್ದ ಮಾರುತಿ, ತಮಗೆ ಬಣಜಿಗರ ಭಾಷೆ ಬರುತ್ತದೆ ಎಂದರು. ‘ಅದು ಯಾವ ಭಾಷೆ’ ಎಂದು ಅಚ್ಚರಿಯಿಂದ ಕೇಳಿದೆ. ಜೊತೆಗೆ ಇದ್ದವರು ‘ಅದು ಕನ್ನಡವೆ. ಈ ಊರಿನಲ್ಲಿ ಬಣಜಿಗ ಲಿಂಗಾಯತರು ಇದ್ದಾರೆ. ಅವರು ಕನ್ನಡ ಮಾತನಾಡುವುದರಿಂದ ಹೀಗೆ ಕರೆಯುತ್ತಾರೆ’ ಎಂದು ತಿಳಿಸಿದರು.

ಅದೇ ಊರಿನ ಕೂಲಿ ಕಾರ್ಮಿಕ ಪಂಢರಿ ‘ನಾನು ದೇಶದ ಯಾವುದೇ ಮೂಲೆಗೆ ಹೋದರೂ ಉಪವಾಸದಿಂದ ಸಾಯುವುದಿಲ್ಲ. ಏಕೆಂದರೆ ನನಗೆ ನಾಲ್ಕು ಭಾಷೆಗಳು ಬರುತ್ತವೆ’ ಎಂದು ವಿಶ್ವಾಸದಿಂದ ಹೇಳಿದರು.

ಭಾಷೆ ಅವರವರ ಭಾವಕ್ಕೆ, ಅಗತ್ಯಕ್ಕೆ, ಅನಿವಾರ್ಯಕ್ಕೆ ತಕ್ಕನಾಗಿ ಬಳಕೆ ಆಗುವ ಅದ್ಭುತ ಸಾಧನ. ಇದನ್ನು ಚಂದ್ರಮ್ಮ ‘ವ್ಯವಹಾರಿಕ’ವಾಗಿಯೂ, ಪಂಢರಿ ‘ಅನ್ನ’ದ ಸಾಧನವಾಗಿಯೂ, ಕವಿ ವಿಕ್ರಂ ವಿಸಾಜಿ ‘ಜ್ಞಾನ’ದ ಕಣ್ಣಿನಿಂದಲೂ ನೋಡುತ್ತಾರೆ.

‘ಬೀದರ್‌ ಜಿಲ್ಲೆಯಲ್ಲಿ ಹಿಂದೆ ಹೆಚ್ಚಾಗಿ ಬಹುಭಾಷಾ ಕವಿಗೋಷ್ಠಿಗಳು ನಡೆಯುತ್ತಿದ್ದವು. ಅಲ್ಲಿ ಬಹುಭಾಷಾ ಕವಿಗೋಷ್ಠಿಗಳು ನಡೆದರೆ ಮಾತ್ರ ಸಭಾಂಗಣ ಭರ್ತಿಯಾಗುತ್ತಿತ್ತು. ನಾಲ್ಕು ಭಾಷೆಯ ಸಾಹಿತ್ಯ ಪ್ರಿಯರು ಅಲ್ಲಿ ಜಮಾಯಿಸುತ್ತಿದ್ದರು. ಅಧ್ಯಕ್ಷತೆ ವಹಿಸಿದ್ದವರು ಕನ್ನಡದಲ್ಲಿ ಮಾತು ಆರಂಭಿಸಿ, ಮರಾಠಿಯಲ್ಲಿ ಮುಂದುವರೆಸಿ, ಉರ್ದುವಿನಲ್ಲಿ ಬೆಳೆಸಿ, ತೆಲುಗುವಿನಲ್ಲಿ ಅಂತ್ಯಗೊಳಿಸುತ್ತಿದ್ದರು’ ಎಂದು ಕವಿ ವಿಕ್ರಂ ವಿಸಾಜಿ ನೆನಸಿಪಿಕೊಳ್ಳುತ್ತಾರೆ.

ಇಲ್ಲಿ ಭಾಷೆ ಮತ್ತು ಗಡಿ ಜಗಳ ಏಕೆ ಇಲ್ಲ ಎನ್ನುವುದು ಕಾಡುತ್ತಲೇ ಇತ್ತು. ಈ ಕುರಿತು ಗಡಿಭಾಗದಲ್ಲಿ ಅಡ್ಡಾಡುವಾಗ ಸಿಕ್ಕವರನ್ನು ವಿಚಾರಿಸಿದೆ. ಎಲ್ಲರೂ ‘ವೈವಾಹಿಕ ಸಂಬಂಧ’ಗಳತ್ತ ಕೈ ತೋರಿಸಿದರು! ಗಡಿಭಾಗದಲ್ಲಿ ಇರುವ ಕನ್ನಡಿಗರು ಮಹಾರಾಷ್ಟ್ರ, ತೆಲಂಗಾಣ ರಾಜ್ಯಗಳ ಸಮೀಪದ ಹಳ್ಳಿ, ಪಟ್ಟಣ, ನಗರಗಳಿಂದ ಸೊಸೆಯನ್ನು ತರುತ್ತಾರೆ. ಇದೇ ರೀತಿ ನಮ್ಮ ಹೆಣ್ಣು ಮಕ್ಕಳನ್ನು ಅಲ್ಲಿಗೆ ಕೊಡುತ್ತಾರೆ.

‘ನಮಗೆ ಯಾವ ತಂಟೆ, ತಕರಾರೂ ಬೇಡ. ನಾವು, ಅವರು ಬೀಗರು. ನಮ್ಮ ನಡುವೆ ಜಗಳವೇಕೆ?’ ಎಂದು ಕೇಳುತ್ತಾರೆ ಅಲ್ಲಿಯ ಜನ. ‘ಬೆಳಗಾವಿಯಲ್ಲಿ ಏಕೆ ಹೀಗೆ ಆಗುತ್ತಿಲ್ಲ’ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿಯಷ್ಟು ಸರಳ ಅನಿಸಲಿಲ್ಲ.

ಇಲ್ಲಿನ ಮದುವೆ ಸಮಾರಂಭದಲ್ಲಿ ಭಾಗವಹಿಸಿದರೆ ಪುರುಷರು ಬಣ್ಣ ಬಣ್ಣದ ಮುಂಡಾಸು ಸುತ್ತಿಕೊಂಡು, ಹಣೆಗೆ ಉದ್ದಕ್ಕೆ ತಿಲಕ ಇಟ್ಟುಕೊಂಡು ಓಡಾಡುತ್ತಿರುತ್ತಾರೆ. ಮದುವೆ ಹಿಂದಿನ ರಾತ್ರಿ ‘ಬಾರಾತ್‌’ ಇರುತ್ತದೆ. ಅಂದರೆ, ಮದುಮಗನನ್ನು ಕುದುರೆ ಮೇಲೆ ಕೂರಿಸಿ, ಬ್ಯಾಂಡ್‌ನವರು ನುಡಿಸುವ ಹಾಡುಗಳಿಗೆ ಕುಣಿದು, ಕುಪ್ಪಳಿಸುತ್ತಾ, ಆಕಾಶಕ್ಕೆ ಪಟಾಕಿಗಳನ್ನು ನೆಗೆಸುತ್ತಾ ಮೆರವಣಿಗೆ

ಯಲ್ಲಿ ಮದುವೆ ಮಂಟಪಕ್ಕೆ ಬರುವುದು. ಇದು ಉತ್ತರ ಭಾರತದಿಂದ ಮಹಾರಾಷ್ಟ್ರಕ್ಕೂ, ಅಲ್ಲಿಂದ ಇಲ್ಲಿಗೂ ಬಂದಿದೆ. ಈಗ ‘ಬಾರಾತ್‌’ ಇಲ್ಲದೇ ಮದುವೆಯೇ ಇಲ್ಲ ಎನ್ನುವಂತಾಗಿದೆ.‌

ಇಲ್ಲಿನ ವ್ಯಾಪಾರಿಗಳು ದೀಪಾವಳಿಯಿಂದ ಹೊಸದಾಗಿ ಲೆಕ್ಕದ ಪುಸ್ತಕವನ್ನು ಬರೆಯಲು ಶುರು ಮಾಡುತ್ತಾರೆ. ಇದೂ ಕೂಡ ಮಹಾರಾಷ್ಟ್ರದಿಂದ ಬಂದಿದೆ.

‘ಬತುಕಮ್ಮ’ ತೆಲಂಗಾಣದ ದೊಡ್ಡ ಹಬ್ಬ. ಇದನ್ನು ದಸರಾ ಸಂದರ್ಭದಲ್ಲಿ ಆಚರಿಸಲಾಗುತ್ತದೆ. ಮಹಿಳೆಯರು ಮಡಕೆಗಳನ್ನು ಬಗೆ ಬಗೆಯ ಹೂವುಗಳಿಂದ ಅಲಂಕರಿಸಿ, ಅವುಗಳನ್ನು ಸಂಜೆ ವೇಳೆ ನೀರು ಇರುವ ಕಡೆಗೆ ತೆಗೆದುಕೊಂಡು ಹೋಗುತ್ತಾರೆ. ಅಲ್ಲಿ ಪೂಜೆ ಮಾಡಿ ಹಾಡು ಹಾಡುತ್ತಾ ನೀರಿಗೆ ಬಿಡುತ್ತಾರೆ. ಈ ಹಬ್ಬವನ್ನು ಗಡಿಭಾಗದಲ್ಲಿರುವ ನಮ್ಮವರೂ ಆಚರಿಸುತ್ತಾರೆ.

ಔರಾದ್‌ ತಾಲ್ಲೂಕು ಆರ್ಥಿಕ ಮತ್ತು ಶೈಕ್ಷಣಿಕವಾಗಿ ತುಂಬಾ ಹಿಂದುಳಿದೆ. ಆದರೆ ಬಹುಭಾಷೆ ಮತ್ತು ಸಂಸ್ಕೃತಿ ದೃಷ್ಟಿಯಿಂದ ಶ್ರೀಮಂತವಾಗಿದೆ. ಒಟ್ಟಿನಲ್ಲಿ ನಾನು ಕಂಡುಕೊಂಡಿದ್ದು ಇಷ್ಟು– ಅವರಿಗೆ ತಮ್ಮದೇ ಭಾಷೆಯನ್ನು ಮಾತನಾಡಬೇಕು ಎಂಬ ಹಟವಿಲ್ಲ. ಎದುರಿನವರು ಯಾವ ಭಾಷೆಯನ್ನು ಆಡುತ್ತಾರೋ, ಅದೇ ಭಾಷೆಯಲ್ಲಿ ಮಾತನಾಡುತ್ತಾರೆ.

ಮೂರು ರಾಜ್ಯಗಳ ಗಡಿಯಲ್ಲಿ ಸುತ್ತಾಡುತ್ತಾ, ಜನರೊಂದಿಗೆ ಬೆರೆಯುತ್ತಾ, ಭೌಗೋಳಿಕ ಲಕ್ಷಣಗಳನ್ನು ಕಣ್ಣು ತುಂಬಿಕೊಳ್ಳುತ್ತಾ, ಅವುಗಳ ಬಗ್ಗೆ ಧ್ಯಾನಿಸುತ್ತಾ ಹೋದಂತೆಲ್ಲ ಹೊಸ ಬಗೆಯ ನೋಟ ನನ್ನದಾಗುತ್ತಿತ್ತು.

ಯಾವುದೇ ಒಂದು ಭಾಷೆ, ಸಂಸ್ಕೃತಿ, ಪಂಥ, ಜ್ಞಾನ ಪ್ರಕಾರವು ಒಂದೇ ದಿನದಲ್ಲಿ ಸೃಷ್ಟಿ ಆಗಿದ್ದಲ್ಲ. ಅವು ಸಾವಿರಾರು ವರ್ಷಗಳಿಂದ ವಿಕಾಸ ಹೊಂದುತ್ತಾ, ಕಾಲಕಾಲಕ್ಕೆ ಬದಲಾಗುತ್ತಾ, ಹೊಸದನ್ನು ಸೇರಿಸಿಕೊಳ್ಳುತ್ತಾ, ಬೆಳೆಯುತ್ತಲೇ ಇರುತ್ತವೆ.

ಇಂಗ್ಲಿಷ್‌ ಮೂಲಕ ಜಗತ್ತಿನ ಜ್ಞಾನವನ್ನು ಮೊಗೆದುಕೊಳ್ಳುತ್ತಾ, ಮರಾಠಿಯ ‘ಅಭಂಗ’(ವಿಠಲನ ಕುರಿತಾದ ಪದ್ಯ)ಗಳಿಗೆ ತಾಳ ಹಾಕುತ್ತಾ, ಉರ್ದುವಿನ ಶಾಯಿರಿಗಳಿಗೆ ‘ವ್ಹಾ..ವ್ಹಾ..’ ಹೇಳುತ್ತಾ, ತೆಲುಗಿನ ‘ಬಾಹುಬಲಿ’ ಸಿನಿಮಾ ಸೃಷ್ಟಿಸುವ ‘ಫ್ಯಾಂಟಸಿ’ಯಲ್ಲಿ ಮುಳುಗುತ್ತಾ, ಕನ್ನಡದ ವಚನಗಳನ್ನು ಅರಿಯುತ್ತಾ, ವಿಸ್ತಾರವಾಗುತ್ತಾ ಹೋಗಬಹುದು.

ಯಾವುದೇ ಭಾಷೆ, ಸಂಸ್ಕೃತಿ, ಪಂಥ, ಹೋರಾಟ, ಚಳವಳಿ, ಸಂಘರ್ಷ ‘ಗಡಿ ಸಂಬಂಧ’ವನ್ನು ಬೆಸೆಯಬೇಕೇ ಹೊರತು, ದಬ್ಬಾಳಿಕೆ, ದೌರ್ಜನ್ಯ, ಒತ್ತಾಯ, ರಾಜಕೀಯ ಹಿತಾಸಕ್ತಿಯಿಂದ ತುಂಡರಿಸಬಾರದು ಎಂದೆನಿಸತೊಡಗಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry