7

ಹಬ್ಬಕ್ಕೆ ಸವಿರುಚಿ

Published:
Updated:
ಹಬ್ಬಕ್ಕೆ ಸವಿರುಚಿ

ನವರಾತ್ರಿ ಹಿನ್ನೆಲೆಯಲ್ಲಿ ನಗರ ಹೊರವಲಯದಲ್ಲಿರುವ ಸಾದಹಳ್ಳಿಯ 'ಕ್ಲಾರ್ಕ್ಸ್ ಎಕ್ಸೋಟಿಕಾ’ದ 'ಆ್ಯಂಬ್ರೂಸಿಯಾ’ ರೆಸ್ಟೊರೆಂಟ್ ಹೊಸ ಬಗೆಯ ಖಾದ್ಯಗಳನ್ನು ಆಹಾರ ಪ್ರಿಯರಿಗೆ ಉಣಬಡಿಸುತ್ತಿದೆ. ಉತ್ತರ ಭಾರತ ಶೈಲಿ ಹಾಗೂ ದಕ್ಷಿಣದ ಸಾಂಪ್ರದಾಯಿಕ ಖಾದ್ಯಗಳು ನವರಾತ್ರಿ ವಿಶೇಷದ ಮೆನುವಿನಲ್ಲಿವೆ.

ಹಬ್ಬದ ಊಟ ಪ್ರಾರಂಭವಾಗುವುದು ಸಾಬುದಾನ ಚಾಪ್ ಸ್ಟಾಟರ್‌ನಿಂದ. ಸಬ್ಬಕ್ಕಿ ಬಳಸಿ ಮಾಡಿದ ಚಾಪ್ ಉದ್ದಿನವಡೆಯಂತೆ ಕಂಡರೂ ರುಚಿ  ಭಿನ್ನ. ಜೊತೆಗೆ ಕೊಡುವ ಪುದೀನಾ ಚಟ್ನಿಯನ್ನು ಚಾಪ್‌ಗೆ ಸವರಿ ಸವರಿ ಬಾಯಿಗಿಟ್ಟರೆ, ಇದೊಂದನ್ನೇ ಹೊಟ್ಟೆ ತುಂಬಾ ತಿಂದುಬಿಡೋಣ ಎನಿಸುತ್ತೆ.

ಹುಳಿ, ಖಾರ, ಸಿಹಿ ಒಟ್ಟಾಗಿ ನಾಲಗೆ ಮೇಲೆ ನಲಿದಾಡುವಂತೆ ಮಾಡಿಸುತ್ತದೆ ಗೆಣಸಿನಿಂದ ಮಾಡಿದ ದುಂಡನೆಯ ಜಿಮಿಕಂದ್ ಕಿ ಗುಲೋಟಿ. ಇದರ ಜೊತೆಗೆ ನೀಡುವ ಬೀಟ್‌ರೂಟ್ ಚಟ್ನಿಯು ಗುಲೋಟಿಯ ರುಚಿ ಹೆಚ್ಚಿಸುತ್ತದೆ. ಮೆದುವಾದ ಈ ಗುಲೋಟಿ, ಸ್ಟಾಟರ್‌ಗಳ ಪೈಕಿ ಉತ್ತಮ ಎನಿಸುತ್ತದೆ.

ನಂತರದ ಸರದಿ ಅರ್ಬಿ ಕೀ ಸೀಖ್‌ನದ್ದು. ಜಗಿಯುವಾಗ ಸ್ವಲ್ಪ ಲೋಳೆ-ಲೋಳೆ ಅನುಭವ ನೀಡುವ ಸೀಖ್ ಅನ್ನು ಜೊತೆಗೆ ನೀಡುವ ಚಟ್ನಿಗಳ ಜೊತೆ ತಿಂದರೆ ಮಾತ್ರವೇ ರುಚಿ ಎನಿಸುತ್ತದೆ.

ಮೇನ್ ಕೋರ್ಸ್‌ನ ಪ್ರಮುಖ ಖಾದ್ಯ ಸಾಬುದಾನ ತಾಲಿಪಟ್ಟು. ಬಣ್ಣ ಮತ್ತು ನೋಟದಲ್ಲಿ ಇದು ಬೇಳೆ ಹೋಳಿಗೆಯನ್ನು ಹೋಲುತ್ತದೆ ಈ ಸಬ್ಬಕ್ಕಿ ತಾಲಿಪಟ್ಟು. ನುಣ್ಣಗೆ ರುಬ್ಬಿದ ಸಬ್ಬಕ್ಕಿಯನ್ನು ಹೂರಣದಂತೆ ಬಳಸಿ ಮಾಡಿದ ತಾಲಿಪಟ್ಟು ಮೊದಲು ಸಪ್ಪೆ ಎನಿಸಿದರೂ ಹೂರಣದಲ್ಲಿ ಬೆರೆತ ಖಾರದ ಅಂಶ ನಾಲಗೆಗೆ ತಗುಲುತ್ತಲೇ ಅದರ ರುಚಿ ಅನುಭವಕ್ಕೆ ಬಂದು ಮತ್ತೊಂದಕ್ಕೆ ತೆಗೆದುಕೊಳ್ಳಲು ಕೈ ಮುಂದಕ್ಕೆ ಚಾಚುವಂತಾಗುತ್ತದೆ.

ಸಬ್ಬಕ್ಕಿ, ಕಡಲೇ ಬೀಜ, ಬೇಯಿಸಿದ ಆಲೂಗಡ್ಡೆ ಹೋಳು, ಜೀರಿಗೆ, ಮೆಣಸು, ಕೊತ್ತಂಬರಿಗಳನ್ನು ಹಾಕಿ ಮಾಡಿದ ಸಾಬೂದಾನ ಕಿಚಡಿ ಇಷ್ಟವಾಗದೇ ಇರದು.  ನಂತರ ಬಡಿಸುವ ಪೂರಿ ಮತ್ತು ಅದರೊಟ್ಟಿಗೆ ನೀಡುವ ಬಾಳೆಕಾಯಿ ಬಳಸಿ ಮಾಡಿದ ಕೋಫ್ತಾ ಬಾಯಿಗಿಟ್ಟರೆ ಒಗರು ಭರಿತ ಖಾರದ ಅನುಭವ ನೀಡುತ್ತದೆ.

ನಂತರ ತಟ್ಟೆಗೆ ಬರುವ ಸನ್ವಾಕ್ ಕೆ ಕಟ್ಟಾ ಚಾವಲ್ ಹುಳಿ ಮತ್ತು ಖಾರದ ಸಮತೋಲಿತ ಮಿಳಿತ. ವಿಶಿಷ್ಟ ಸಣ್ಣ ಅಕ್ಕಿಯಿಂದ ಮಾಡಿದ ಕಟ್ಟಾ ಚಾವಲ್‌ನ ರುಚಿ ಬಹುಕಾಲ ನಾಲಗೆಯಿಂದ ಇಳಿಯುವುದೇ ಇಲ್ಲ.

(ಸುರೇಶ್ ಬಾಬು, ಮುಖ್ಯ ಬಾಣಸಿಗ)

ನಂತರದ್ದು ಅನ್ನ ಸಾರಿನ ಸರದಿ. ಇಲ್ಲಿಯೂ ಶೆಫ್ ಸುರೇಶ್ ಬಾಬು ಭಿನ್ನ ಪ್ರಯೋಗ ಮಾಡಿದ್ದಾರೆ. ಉದ್ದ ಅಕ್ಕಿಯ ಉದುರು-ಉದುರು ಅನ್ನಕ್ಕೆ ಬಿಸಿ ಬಿಸಿ ಆಲೂರಸಮ್ ಸಾಂಬಾರ್ ನೀಡಲಾಗುತ್ತದೆ.  ದಕ್ಷಿಣ ಭಾರತದ ಸಾಂಬಾರ್‌ಗಿಂತಲೂ ವಿಶಿಷ್ಟ ರುಚಿ ಇರುವ ಈ ಸಾಂಬಾರ್. ಉತ್ತರ ಭಾರತದದ ಕರ‍್ರಿಗಳನ್ನು ನೆನಪಿಸುತ್ತವೆ.

ಊಟದ ಕೊನೆಗೆ ಡೆಸರ್ಟ್‌ಗಳ ಸರದಿ. ಸಮತೋಲಿತ ಸಿಹಿ ಎನಿಸುವ ಖರ್ಜೂರದಿಂದ ಮಾಡಿದ ಫಿರ್ನಿ. ಸಿಂಗಾಡೆ ಕಾ ಹಲ್ವಾ. ಅಮರನಾಥ ಖೀರ್ ನವರಾತ್ರಿ ವಿಶೇಷ ಊಟಕ್ಕೆ ಅತ್ಯುತ್ತಮ ಮುಕ್ತಾಯ ನೀಡುತ್ತವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry