ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲ್ಲಳ್ಳಿ: ವೆಂಕಟೇಶ್ವರ ರಥೋತ್ಸವ ಸಂಭ್ರಮ

Last Updated 1 ಅಕ್ಟೋಬರ್ 2017, 5:15 IST
ಅಕ್ಷರ ಗಾತ್ರ

ಜಮಖಂಡಿ: ತಾಲ್ಲೂಕಿನ ಕಲ್ಲಳ್ಳಿಯಲ್ಲಿ ಶನಿವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ,ಅರ್ಚಕರು ಪಠಿಸಿದ ಮಂತ್ರಘೋಷಗಳ ಮಧ್ಯೆ ವೆಂಕಟೇಶ್ವರ ರಥೋತ್ಸವ ಸಂಭ್ರಮದಿಂದ ಜರುಗಿತು. ನವರಾತ್ರಿ ಉತ್ಸವ ಅಂಗವಾಗಿ ನಡೆದ ರಥೋತ್ಸವದಲ್ಲಿ ವೆಂಕಟೇಶ್ವರ ಮೂರ್ತಿಯನ್ನು ಇಟ್ಟು ಪೂಜೆ ಸಲ್ಲಿಸಿದ ಬಳಿಕ ಉತ್ಸವಕ್ಕೆ ಚಾಲನೆ ನೀಡಲಾಯಿತು.

ಜಾಗಟೆ ಸದ್ದು, ಘಂಟಾನಾದ, ಶಹನಾಯ್‌ ವಾದ್ಯಮೇಳ, ಕೊಂಬಿನ ಸಿಂಗ್‌ ಹಾಗೂ ವೇದಘೋಷಗಳೊಂದಿಗೆ ಜರುಗಿದ ಸಂಭ್ರಮದ ರಥೋತ್ಸವಕ್ಕೆ ನೆರೆದವರು ಸಾಕ್ಷಿಯಾದರು.

ಬಣ್ಣ ಬಣ್ಣದ ಬಟ್ಟೆ, ಬಾಳೆಕಾಯಿ ಗೊನೆಯುಳ್ಳ ಬಾಳೆಗಿಡ, ತರತರಹದ ಹೂಮಾಲೆ, ತುಳಸಿ ಮಾಲೆ, ಕಬ್ಬು, ಮಾವಿನ ತೋರಣ, ಕೇಸರಿ ಬಣ್ಣದ ಧ್ವಜಗಳಿಂದ ರಥ ಅಲಂಕಾರ ಮಾಡಲಾಗಿತ್ತು. ರಥದ ಮೇಲೆ ಕಳಸ ಇಡಲಾಗಿತ್ತು. ‘ವೆಂಕಟರಮಣ ಗೋವಿಂದ ಗೋವಿಂದ’ ಎಂಬ ಜಯಘೋಷ ಮುಗಿಲು ಮುಟ್ಟಿತ್ತು.

ಹಗಲು ದೀವಟಿಗೆ ಮತ್ತು ಚಾಮರ ರಥೋತ್ಸವಕ್ಕೆ ಮೆರಗು ನೀಡಿದ್ದವು. ರಥ ಮುಂದೆ ಸಾಗುತ್ತಿದ್ದಂತೆಯೇ ಬಾಳೆಹಣ್ಣು, ಕಲ್ಲು ಸಕ್ಕರೆ, ಖಾರೀಕ, ಕೊಬ್ಬರಿ ಚೂರು, ಬೆಂಡು ಬೆತ್ತಾಸುಗಳನ್ನು ಎಸೆದು ಭಕ್ತಿಸೇವೆ ಸಲ್ಲಿಸಿದರು.

ಭಕ್ತರು ತೆಂಗಿನಕಾಯಿ ಒಡೆದು, ಕರ್ಪೂರ ಹಚ್ಚಿ, ಊದುಬತ್ತಿ ಬೆಳಗಿ ರಥಕ್ಕೆ ನಮಿಸಿದರು. ನಂತರ ವೆಂಕಟೇಶ್ವರನ ದರ್ಶನ ಪಡೆದರು. ವಿಜಯ ದಶಮಿ ಕೂಡ ಇದೇ ಸಂದರ್ಭದಲ್ಲಿ ಜರುಗಿತು.

ದೇವಸ್ಥಾನ ಟ್ರಸ್ಟ್‌ನ ಆಡಳಿತಾಧಿಕಾರಿಯೂ ಆದ ತಹಶೀಲ್ದಾರ್‌ ಪ್ರಶಾಂತ ಚನಗೊಂಡ, ಅರ್ಚಕ ಮಹೇಶ ಪೂಜಾರ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಅ.1 ರಂದು ಗೋಪಾಳಕಾಲಾ ಹಾಗೂ ಅ.2 ರಂದು ಕಾಡೆಯೊಂದಿಗೆ ನವರಾತ್ರಿ ಉತ್ಸವದ ಕಾರ್ಯಕ್ರಮಗಳು ಮಂಗಲಗೊಳ್ಳಲಿವೆ.

ಬಂಡಿಗಣಿಯ ದಾನೇಶ್ವರ ಶ್ರೀಗಳು ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಿದ್ದರು. ಸಂಗೀತ ಸೇವೆ: ರಥೋತ್ಸವ ಅಂಗವಾಗಿ ಜಾನಮಟ್ಟಿಯ ರುದ್ರೇಶ ಜಾನಮಟ್ಟಿ,ಚಮಕೇರಿಯ ಸಂತೋಷ ಕುಂಬಾರ, ಕಲ್ಲಳ್ಳಿಯ ಮಹಾದೇವ ತಳವಾರ, ತಿಮ್ಮಣ್ಣ ಪೂಜಾರ, ಜಮಖಂಡಿಯ ಗುರುರಾಜ ಕಟ್ಟಿ ನಿರಂತರವಾಗಿ ಇಡೀ ದಿನ ಸಂಗೀತ ಸೇವೆ ಸಲ್ಲಿಸಿದರು.

ಉಚಿತ ಬಸ್ ಸೇವೆ: ಕಲ್ಲಳ್ಳಿಯ ನವರಾತ್ರಿ ಉತ್ಸವದ ಅಂಗವಾಗಿ ಶನಿವಾರ ನಡೆದ ರಥೋತ್ಸವ ಹಾಗೂ ವೆಂಕಟೇಶ್ವರ ದೇವಸ್ಥಾನದ ದರ್ಶನಕ್ಕೆ ಹೋಗಿ ಬರುವ ಭಕ್ತರಿಗಾಗಿ ಬಿಎಲ್‌ಡಿಇ ಸಂಸ್ಥೆಯಿಂದ ಉಚಿತ ಬಸ್‌ ಸೇವೆ ಒದಗಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT