ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಕ್ಷಾಂತರ ಸಂಬಳದ ಹುದ್ದೆ ತೊರೆದು ಸೇನೆಗೆ ಸೇರ್ಪಡೆ

Last Updated 1 ಅಕ್ಟೋಬರ್ 2017, 5:33 IST
ಅಕ್ಷರ ಗಾತ್ರ

ಗೋಕಾಕ: ಕೈಯಲ್ಲಿ ಪ್ರತಿ ತಿಂಗಳೂ ಬರುತ್ತಿದ್ದ ಒಂದೂವರೆ ಲಕ್ಷ ರೂಪಾಯಿ ಸಂಬಳದ ನೌಕರಿ ತ್ಯಜಿಸಿ ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಆಗಿ ಸೇವೆಗೆ ಸೇರುವ ಮೂಲಕ ಗೋಕಾಕ ತಾಲ್ಲೂಕಿನ ಯಾದವಾಡ ಗ್ರಾಮದ ಕಂಪ್ಯೂಟರ್‌ ಸೈನ್ಸ್‌ ಎಂಜಿನಿಯರಿಂಗ್‌ ಪದವೀಧರ ಶ್ರೇಯಸ್‌ ಸುಧೀಂದ್ರ ಇಟ್ನಾಳ ಅವರು ಇತರರಿಗೆ ಮಾದರಿಯಾಗಿದ್ದಾರೆ.

ಶ್ರೇಯಸ್‌ ಅವರ ತಂದೆ ಸುಧೀಂದ್ರ ಹಣಮಂತರಾವ್‌ ಇಟ್ನಾಳ ಅವರು ಕೂಡ ಮೊದಲು ಮಹಾವಿದ್ಯಾಲಯದಲ್ಲಿ ಹೊಂದಿದ್ದ ಪ್ರೊಫೆಸರ್‌ ಸ್ಥಾನ ತ್ಯಜಿಸಿ ಭಾರತೀಯ ಸೇನೆ ಸೇರಿ ಇದೀಗ ಬ್ರಿಗೇಡಿಯರ್‌ ಹುದ್ದೆಯಲ್ಲಿದ್ದಾರೆ. ಇದೀಗ ತಂದೆ ಹಾಕಿಕೊಟ್ಟ ಮಾರ್ಗದಲ್ಲೇ ಮಗನೂ ಹೆಜ್ಜೆ ಹಾಕುವ ಮೂಲಕ ಜಿಲ್ಲೆಯ ಯುವಕರಿಗೆ ನಿದರ್ಶನ ಎಂದರೆ ತಪ್ಪಾಗಲಾರದು ಎನ್ನುತ್ತಾರೆ ಇಟ್ನಾಳ ಕುಟುಂಬವನ್ನು ಅತಿ ಸನಿಹದಿಂದ ಬಲ್ಲ ಯುವ ಧುರೀಣ ಈಶ್ವರ ಕತ್ತಿ.

ಪುಣೆಯ ಆರ್ಮಿ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಾಜಿ (ಎ.ಐ.ಟಿ.) ಕಾಲೇಜಿನ ಕಂಪ್ಯೂಟರ್‌ ಸೈನ್ಸ್‌ ಎಂಜಿನಿಯರಿಂಗ್‌ ಪದವಿ ಸಂಪಾದಿಸಿ ಆರಂಭದ ಎರಡು ವರ್ಷ ಅಡೋಬ್‌ ಕಂಪೆನಿಯಲ್ಲಿ ಸೇವೆ ಸಲ್ಲಿಸಿ, ತದನಂತರ ವಿಶ್ವ ಪ್ರಖ್ಯಾತ ‘ಗೂಗಲ್‌’ ಸಂಸ್ಥೆಯಲ್ಲಿ ಅಮೆರಿಕದಲ್ಲಿ ಕೆಲಸ ನಿರ್ವಹಿಸುತ್ತಲೇ ಅಲ್ಲಿಂದಲೇ ಸೇನಾ ನೇಮಕಾತಿ ಘಟಕ ನಡೆಸಿದ ಪರೀಕ್ಷೆ ಬರೆದು ಉತ್ತೀರ್ಣಗೊಂಡು ಸೇನಾ ನೌಕರಿ ಸೇರುವ ಮೂಲಕ ಇತರರನ್ನು ಬೆರಗುಳಿಸಿದ್ದಾರೆ ಶ್ರೇಯಸ್‌ ಇಟ್ನಾಳ.

ಇದೀಗ ಸತತ ಹನ್ನೊಂದು ತಿಂಗಳ ಕಠಿಣ ಪರಿಶ್ರಮದಿಂದ ಕೂಡಿದ ತರಬೇತಿಯನ್ನು ಪೂರೈಸಿ ಸದ್ಯಕ್ಕೆ ಗುರ್ಖಾ ರೆಜಿಮೆಂಟ್‌ನಲ್ಲಿ ಕಾರ್ಯ ಸಲ್ಲಿಸುತ್ತಿದ್ದು, ಅದರೊಂದಿಗೆ ಎಲೆಕ್ಟ್ರಾನಿಕ್ಸ್‌ ಮತ್ತು ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ವಿಭಾಗದಲ್ಲಿ ಸೇವೆ ಸಲ್ಲಿಸುವ ಮೂಲಕ ಗೋಕಾಕ ತಾಲ್ಲೂಕಿನ ಕೀರ್ತಿ ಪತಾಕೆಯನ್ನು ಎಲ್ಲೆಡೆ ಹಾರಿಸಿದ್ದಾರೆ ಎನ್ನುತ್ತಾರೆ ಕತ್ತಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT