ಶುಕ್ರವಾರ, ಸೆಪ್ಟೆಂಬರ್ 20, 2019
25 °C

ಜಿಲ್ಲೆಯ ವಿವಿಧೆಡೆ ವಿಜಯದಶಮಿ ಸಂಭ್ರಮ

Published:
Updated:

ಬೀದರ್‌: ಜಿಲ್ಲೆಯ ವಿವಿಧೆಡೆ ಶನಿವಾರ ವಿಜಯದಶಮಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು. ನಗರದಲ್ಲಿ ಶ್ರೀ ರಾಮಲೀಲಾ ಉತ್ಸವ ಸಮಿತಿ ವತಿಯಿಂದ ಹನ್ನೊಂದನೇ ರಾಮಲೀಲಾ ಉತ್ಸವ ಆಚರಿಸಲಾಯಿತು. ಈ ಬಾರಿ ಉದಗಿರನ ಕಲಾವಿದರು ನಿರ್ಮಿಸಿದ್ದ ₹ 40 ಅಡಿ ಎತ್ತರದ ರಾವಣನ ಪ್ರತಿಕೃತಿ ದಹನ ಮಾಡಲಾಯಿತು.

ಇದಕ್ಕೂ ಮೊದಲು ಸ್ಟೆಪ್‌ ಆಫ್ ಡಾನ್ಸ್ ಗ್ರುಪ್‌ನ ನಾಗೇಶ ಹಾಗೂ ಕಲಾವಿದರು ದೇಶ ಭಕ್ತಿ ಗೀತೆಗೆ ನೃತ್ಯ ಮಾಡಿದರು. ಎಸ್.ಎಸ್.ಎಸ್. ಡಾನ್ಸ್ ಗ್ರುಪ್‌ನ ಕೃಷ್ಣ ಗೌಡ ಹಾಗೂ ಕಲಾವಿದರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಸಿಡಿಮದ್ದು ಪ್ರದರ್ಶನವೂ ನಡೆಯಿತು. ಕೇಂದ್ರೀಯ ವಿದ್ಯಾಲಯದ ವಿದ್ಯಾರ್ಥಿಗಳು ‘ರಾಮಲೀಲಾ’ ರೂಪಕ ಪ್ರದರ್ಶಿಸಿ ಪ್ರೇಕ್ಷಕರ ಗಮನ ಸೆಳೆದರು.

ಸಾಂಸ್ಕೃತಿಕ ಕಾರ್ಯಕ್ರಮ: ಶುಕ್ರವಾರ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಂಗಮೇಶ ಸ್ವಾಮಿ ಗಾಯನ ಪ್ರಸ್ತುತಪಡಿಸಿದರು. ರಾಜಕುಮಾರ ಸ್ವಾಮಿ ಬಂಪಳ್ಳಿ ತಬಲಾ ಸಾಥ್‌ ನೀಡಿದರು. ಸಂಗಮೇಶ ಅವರು ಭವಾನಿ ದೇವಿ ಹಾಗೂ ದೇಶಭಕ್ತಿ ಗೀತೆಗಳನ್ನು ಹಾಡಿ ಶ್ರೋತೃಗಳ ಮನತಣಿಸಿದರು.

ನೂಪುರ ನೃತ್ಯ ಅಕಾಡೆಮಿಯ ಉಷಾ ಪ್ರಭಾಕರ್ ನೇತೃತ್ವದ ತಂಡ ಮಹಿಷಿ ಮರ್ದಿನಿ ನೃತ್ಯ ಹಾಗೂ ಭರತನಾಟ್ಯ ಪ್ರದರ್ಶಿಸಿದರು. ಇದೇ ಸಂದರ್ಭದಲ್ಲಿ ಸಿಡಿಮದ್ದು ಪ್ರದರ್ಶನ ನಡೆಯಿತು. ರಾಕೆಟ್‌ ರೂಪದ ಪಟಾಕಿಗಳು ಬಾನಲ್ಲಿ ಚಿಮ್ಮಿ ಚಿತ್ತಾರ ಮೂಡಿಸಿ ಪ್ರೇಕ್ಷಕರ ಮನ ಸೆಳೆದವು.

ಪೊಲೀಸ್‌ ಇನ್‌ಸ್ಪೆಕ್ಟರ್‌ ಶರಣಬಸವೇಶ್ವರ ಅವರು ಸಂಗೀತ ನೃತ್ಯ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಎಲ್ಲರಿಗೂ ಪ್ರಮಾಣಪತ್ರ ವಿತರಿಸಿದರು. ಶ್ರೀ ರಾಮಲೀಲಾ ಉತ್ಸವ ಸಮಿತಿಯ ಈಶ್ವರಸಿಂಗ್ ಠಾಕೂರ್, ಚಂದ್ರಶೇಖರ ಗಾದಾ, ಮಹೇಶ್ವರ ಸ್ವಾಮಿ, ನಿಲೇಶ ರಕ್ಷ್ಯಾಳ ಹಾಗೂ ವಿನೋದ ಪಾಟೀಲ ಇದ್ದರು.

ವಿಶೇಷ ಪೂಜೆ: ನಗರದ ದೇವಿ ಕಾಲೊನಿ, ನೌಬಾದ್, ಭೀಮನಗರ, ಹಳ್ಳದಕೇರಿ, ವಿದ್ಯಾನಗರ, ಕುಂಬಾರವಾಡ, ಮಂಗಲಪೇಟ್‌ದ ಭವಾನಿ ಮಂದಿರ ಹಾಗೂ ಸ್ವಕುಳಸಾಳಿ ಸಮಾಜದ ದೇವಿ ಮಂದಿರದಲ್ಲಿ ವಿಶೇಷ ಪೂಜೆ ನಡೆಯಿತು. ಭಕ್ತರು ಕುಟುಂಬದೊಂದಿಗೆ ಬಂದು ದೇವಿಯ ದರ್ಶನ ಪಡೆದು ಹಣ್ಣು, ಕಾಯಿ ಹಾಗೂ ಬನ್ನಿ ಎಲೆ ಸಮರ್ಪಿಸಿದರು.

ಒಂಬತ್ತು ಹಾಗೂ ಐದು ದಿನಗಳ ಘಟ್ಟ ಸ್ಥಾಪನೆ ಮಾಡಿದ್ದವರು ಮನೆಯಲ್ಲಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಹೋಳಿಗೆ, ತುಪ್ಪ, ಬದನೆಕಾಯಿ ಪಲ್ಯ, ಚಪಾತಿ ಹಾಗೂ ಸಿಹಿ ತಿನಿಸುಗಳ ನೈವೇದ್ಯ ಸಮರ್ಪಿಸಿದರು. ಕುಟುಂಬದ ಸದಸ್ಯರು ಪರಸ್ಪರ ಬನ್ನಿ ಎಲೆಯನ್ನು ವಿನಿಮಯ ಮಾಡಿಕೊಂಡು ‘ಬಂಗಾರ ತೊಗೊಂಡು, ಬಂಗಾರದ್ಹಂಗ ಇರೋಣ’ ಎಂದು ಹೇಳುವ ಮೂಲಕ ಶುಭ ಕೋರಿದರು.

Post Comments (+)