ಗುರುವಾರ , ಸೆಪ್ಟೆಂಬರ್ 19, 2019
26 °C

ಜಿಲ್ಲೆಯಲ್ಲಿ ವಿಪರೀತ ಹೆಚ್ಚಿದ ಡೆಂಗಿ

Published:
Updated:

ಚಿಕ್ಕಬಳ್ಳಾಪುರ: ಕಳೆದ ಎರಡು ತಿಂಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಅನಿರೀಕ್ಷಿತ ಮಳೆ ಜಿಲ್ಲೆಯ ಹವಾಮಾನದಲ್ಲಿ ವೈಪರಿತ್ಯ ಉಂಟು ಮಾಡಿದ್ದು, ಪರಿಣಾಮ ಜಿಲ್ಲೆಯಲ್ಲಿ ಡೆಂಗಿ ಪ್ರಕರಣ ವಿಪರೀತ ಹೆಚ್ಚಿದ್ದು, 70 ಜನರಲ್ಲಿ ಡೆಂಗಿ ಕಾಯಿಲೆ ಇರುವುದು ದೃಢಪಟ್ಟಿದೆ.

ಕಳೆದ ವರ್ಷ ಜಿಲ್ಲೆಯಲ್ಲಿ 38 ಡೆಂಗಿ ಪ್ರಕರಣಗಳು ವರದಿಯಾಗಿದ್ದವು. ಈ ಬಾರಿ ಅದರ ಪ್ರಮಾಣ ದುಪ್ಪಟಾಗಿದೆ. ಅನಿರೀಕ್ಷಿತ ಮಳೆಗೆ ನೀರು ಸಂಗ್ರಹ ತಾಣಗಳು ಹೆಚ್ಚಾಗಿದ್ದೆ ಡೆಂಗಿ ಇಷ್ಟೊಂದು ಪ್ರಮಾಣದಲ್ಲಿ ಉಲ್ಭಣಿಸಲು ಕಾರಣ ಎನ್ನುತ್ತಾರೆ ಆರೋಗ್ಯ ಇಲಾಖೆ ಅಧಿಕಾರಿಗಳು.

ಜಿಲ್ಲೆಯ ಆರು ತಾಲ್ಲೂಕುಗಳ ಪೈಕಿ ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿಯೇ ಡೆಂಗಿ ಪ್ರಕರಣಗಳು ಹೆಚ್ಚು (38) ವರದಿಯಾಗಿವೆ. ಶಿಡ್ಲಘಟ್ಟ ತಾಲ್ಲೂಕು ಡೆಂಗಿ ಪ್ರಕರಣಗಳಲ್ಲಿ ಎರಡನೇ (16) ಸ್ಥಾನದಲ್ಲಿದೆ. ಉಳಿದಂತೆ ಚಿಂತಾಮಣಿ ತಾಲ್ಲೂಕಿನಲ್ಲಿ 8, ಗೌರಿಬಿದನೂರು ತಾಲ್ಲೂಕಿನಲ್ಲಿ 5, ಬಾಗೇಪಲ್ಲಿ ತಾಲ್ಲೂಕಿನಲ್ಲಿ 2, ಗುಡಿಬಂಡೆ ತಾಲ್ಲೂಕಿನಲ್ಲಿ 1 ಡೆಂಗಿ ಪ್ರಕರಣ ಕಂಡುಬಂದಿದೆ.

ಈ ವರ್ಷ ಜಿಲ್ಲೆಯಲ್ಲಿ ಡೆಂಗಿ ಶಂಕೆಯ ಮೇಲೆ ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿ 2,748, ಗೌರಿಬಿದನೂರು ತಾಲ್ಲೂಕಿನಲ್ಲಿ 507, ಬಾಗೇಪಲ್ಲಿ ತಾಲ್ಲೂಕಿನಲ್ಲಿ 84, ಚಿಂತಾಮಣಿ ತಾಲ್ಲೂಕಿನಲ್ಲಿ 1873, ಶಿಡ್ಲಘಟ್ಟ ತಾಲ್ಲೂಕಿನಲ್ಲಿ 865 ಹಾಗೂ ಗುಡಿಬಂಡೆ ತಾಲ್ಲೂಕಿನಲ್ಲಿ 65 ಹೀಗೆ 6,142 ಜನರಿಂದ ರಕ್ತದ ಮಾದರಿ ಸಂಗ್ರಹಿಸಲಾಗಿತ್ತು. ಅದರಲ್ಲಿ 70 ಜನರಲ್ಲಿ ಡೆಂಗಿ ಇರುವುದು ದೃಢಪಟ್ಟಿದೆ.

ಮುಂಜಾಗ್ರತೆಯೇ ಮದ್ದು: ‘ಸಾಮಾನ್ಯವಾಗಿ ಜುಲೈ, ಆಗಸ್ಟ್‌ ಡೆಂಗಿ ಸೇರಿದಂತೆ ಸಾಂಕ್ರಾಮಿಕ ರೋಗಗಳ ಪ್ರಮಾಣ ಏರುಗತಿಯಲ್ಲಿರುತ್ತದೆ. ಅದು ಸೆಪ್ಟೆಂಬರ್‌ನಿಂದ ಚಳಿ ಕಾಣಿಸಿಕೊಳ್ಳಲು ಆರಂಭಿಸುತ್ತಿದ್ದಂತೆ ಇಳಿಮುಖವಾಗುತ್ತ ಬರುತ್ತದೆ. ಆದರೆ ಈ ಬಾರಿ ಮಳೆ ಬಿಟ್ಟು ಬಿಟ್ಟು ಅನಿರೀಕ್ಷಿತವಾಗಿ ಸುರಿದ ಪರಿಣಾಮ ವಾತಾವರಣದಲ್ಲಿ ವೈಪರೀತ್ಯ ಕಾಣಿಸಿಕೊಳ್ಳುವ ಜತೆಗೆ ನೀರು ಸಂಗ್ರಹ ತಾಣಗಳು ಹೆಚ್ಚಾದವು ಅದರಿಂದಾಗಿ ಇಷ್ಟೊಂದು ಡೆಂಗಿ ಪ್ರಕರಣಗಳು ವರದಿಯಾಗಿವೆ’ ಎನ್ನುತ್ತಾರೆ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಕೆ.ಬಾಬುರೆಡ್ಡಿ.

‘ಜನರು ವೈಯಕ್ತಿಕ ರೋಗ ನಿಯಂತ್ರಣ ವಿಧಾನಗಳನ್ನು ಅನುಸರಿಸುವ ಮೂಲಕ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಸಹಕಾರ ನೀಡಬೇಕು. ಸೊಳ್ಳೆಗಳು ಬರದಂತೆ ತಡೆಯಲು ಮನೆಗಳ ಕಿಟಕಿ, ಬಾಗಿಲುಗಳಿಗೆ ಜಾಲರಿ ಹಾಕಿಸಬೇಕು. ಮಲಗುವಾಗ ಸೊಳ್ಳೆ ಪರದೆಗಳನ್ನು ಉಪಯೋಗಿಸಬೇಕು. ಪೂರ್ಣ ಪ್ರಮಾಣದಲ್ಲಿ ಬಟ್ಟೆಗಳನ್ನು ಧರಿಸಬೇಕು. ಸೊಳ್ಳೆ ನಿರೋಧಕ ಕ್ರೀಮುಗಳು, ಕಾಯಿಲ್‌ಗಳನ್ನು ಬಳಸಬೇಕು. ಮುಖ್ಯವಾಗಿ ಮನೆಗಳ ಸುತ್ತ ಸ್ವಚ್ಛತೆ ಕಾಯ್ದುಕೊಳ್ಳಬೇಕು’ ಎಂದರು.

‘ನೀರಿನ ತೊಟ್ಟಿ, ಡ್ರಮ್‌, ಬ್ಯಾರಲ್‌, ಏರ್‌ ಕೂಲರ್‌ಗಳಲ್ಲಿ ನೀರು ನಾಲ್ಕೈದು ದಿನಗಳಿಗೂ ಹೆಚ್ಚು ಕಾಲ ನೀರು ಇರದಂತೆ ನೋಡಿಕೊಳ್ಳಬೇಕು. ಅನುಪಯುಕ್ತ ಟೈರ್‌, ಎಳೆನೀರಿನ ಚಿಪ್ಪು, ಒಡೆದ ಬಾಟಲುಗಳಲ್ಲಿ ಮಳೆ ನೀರು ಸಂಗ್ರಹವಾಗದಂತೆ ವಿಲೇವಾರಿ ಮಾಡಬೇಕು. ತೀವ್ರ ಜ್ವರ , ತಲೆನೋವು, ಕಣ್ಣುಗಳ ಹಿಂಭಾಗದಲ್ಲಿ ನೋವು, ಬಾಯಿ, ಮೂಗು, ವಸಡುಗಳಿಂದ ರಕ್ತಸ್ರಾವ ಡೆಂಗಿ ಜ್ವರದ ಲಕ್ಷಣಗಳಾಗಿವೆ. ಇಂತಹ ಲಕ್ಷಣಗಳು ಕಂಡುಬಂದ ತಕ್ಷಣವೇ ಜನರು ಸಮೀಪದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆಯಬೇಕು’ ಎಂದರು.

‘ಡೆಂಗಿ ಜ್ವರವು ವೈರಸ್‌ನಿಂದ ಹರಡುವ ಕಾಯಿಲೆಯಾಗಿದ್ದು, ಇದು ಈಡೀಸ್‌ ಈಜಿಪ್ಟೈ ಸೊಳ್ಳೆ ಕಡಿತದಿಂದ ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ. ಸಾಮಾನ್ಯವಾಗಿ ಈ ಸೊಳ್ಳೆ ಸ್ವಚ್ಛ ನೀರಿನಲ್ಲಿ ಸಂತಾನಾಭಿವೃದ್ಧಿ ಮಾಡುತ್ತದೆ. ವಿಶೇಷವೆಂದರೆ ಇದು ಹಗಲಿನಲ್ಲಿ ಮಾತ್ರ ಕಡಿಯುತ್ತದೆ. ಮನೆ ಪರಿಸರದಲ್ಲಿ ಸೊಳ್ಳೆ ಸಂತತಿ ಅಭಿವೃದ್ಧಿಯಾಗದಂತೆ ಸಾರ್ವಜನಿಕರು ಕೂಡ ನೋಡಿಕೊಂಡರೆ ಸಾಂಕ್ರಾಮಿಕ ಕಾಯಿಲೆಗಳು ನಿಯಂತ್ರಣದಲ್ಲಿರುತ್ತವೆ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಡಿ.ರವಿಶಂಕರ್ ಹೇಳಿದರು.

Post Comments (+)