ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲೆಯಲ್ಲಿ ಶ್ರೀಮಂತ, ಬದುಕಿನಲ್ಲಿ ಬಡವ

Last Updated 1 ಅಕ್ಟೋಬರ್ 2017, 6:11 IST
ಅಕ್ಷರ ಗಾತ್ರ

ಗುಡಿಬಂಡೆ: ರಾಜ್ಯದ ಅತ್ಯಂತ ಹಿಂದುಳಿದ ತಾಲ್ಲೂಕು ಎಂಬ ಹಣೆಪಟ್ಟಿ ಹೊಂದಿರುವ ಗುಡಿಬಂಡೆ ಅಭಿವೃದ್ದಿಯಲ್ಲಿ ಹಿಂದುಳಿದಿರಬಹುದು ಆದರೆ ಕಲೆಯಲ್ಲಿ ತನ್ನದೆಯಾದ ಕೆಲವು ಇತಿಹಾಸ ಪುಟಗಳನ್ನು ಹೊಂದಿದೆ. ಈ ನೆಲಮೂಲದ ಪ್ರಾಚೀನ ಜಾನಪದ ಕಲೆಗಳನ್ನು ಉಳಿಸಿ ಬೆಳೆಸಲು ಮುಖವೀಣೆ ಆಂಜಿನಪ್ಪ ಅವರಂತಹ ಅಗಣಿತ ಮೇರು ಕಲಾವಿದರು ಗುಡಿಬಂಡೆ ಕೀರ್ತಿಯನ್ನು ಎಲ್ಲೆಡೆ ಹಬ್ಬಿಸಿದ್ದಾರೆ.

ತುಮಕೂರು ಜಿಲ್ಲೆ ಮಧುಗಿರಿ ತಾಲ್ಲೂಕಿನ ಚಿಕ್ಕದಾಳವಟ್ಟ ಎಂಬ ಗ್ರಾಮದ ತಿಮ್ಮಮ್ಮ, ತಿಮ್ಮಪ್ಪ ದಂಪತಿ ಪುತ್ರರಾದ ಆಂಜಿನಪ್ಪ ಅವರು ಸುಮಾರು 50ವರ್ಷಗಳಿಂದ ಗುಡಿಬಂಡೆಯ ತಾಲ್ಲೂಕಿನ ದಪ್ಪರ್ತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗವಿಕುಂಟಹಳ್ಳಿ (ಕಾಟೈಗಾರಹಳ್ಳಿ) ಎಂಬ ಕುಗ್ರಾಮದಲ್ಲಿ ಪತ್ನಿ ಲಕ್ಷಮ್ಮ ಅವರೊಂದಿಗೆ ಬದುಕು ಸಾಗಿಸುತ್ತಿದ್ದಾರೆ.

ತಮ್ಮ ಪೂರ್ವಜರು ಹೊಟ್ಟೆಪಾಡಿಗಾಗಿ ನುಡಿಸುತ್ತಿದ್ದ ಮುಖವೀಣೆಯಂತಹ ಅದ್ಭುತ ಪ್ರಾಚೀನ ಜಾನಪದ ಕಲೆಯನ್ನು ಮೈಗೂಡಿಸಿಕೊಂಡು, ಹಳ್ಳಿಯಿಂದ ದೆಹಲಿವರೆಗೆ ಅದರ ಪ್ರದರ್ಶನ ನೀಡುತ್ತ ಪ್ರೇಕ್ಷಕ ಗಣವನ್ನು ಬೆರಗಿನಲ್ಲಿ ಮುಳುಗಿಸುವ ಈ ವೀಣೆಯ ಮಾಂತ್ರಿಕನಿಗೆ ಇಂದಿಗೂ ವಾಸಿಸಲು ಸುಸಜ್ಜಿತವಾದ ಒಂದು ಮನೆ ಇಲ್ಲ. ಮಹಾನ್‌ ಕಲಾವಿದನೊಬ್ಬ ಇವತ್ತು ಸೂರಿಗಾಗಿ ಅವರಿವರ ಮುಂದೆ ಬೇಡಿಕೊಳ್ಳುವ ಗತಿ ಬಂದಿರುವುದು ನೋವಿನ ಸಂಗತಿ.

ಸಂಗೀತವನ್ನು ಶಾಸ್ತ್ರೀಯವಾಗಿ ಅಭ್ಯಾಸ ಮಾಡಿರುವ ಆಂಜಿನಪ್ಪ ಅವರು ‘ಕನಗಾಂಗಿಯ’ ದಿಂದ ಹಿಡಿದು ‘ರಸಿಕಪ್ರಿಯ’ ತನಕ 72 ಮೇಳಕರ್ತ ರಾಗಗಳನ್ನು ಸುಲಲಿತವಾಗಿ ಮುಖವೀಣೆಯಲ್ಲಿ ನುಡಿಸುತ್ತಾರೆ. ರಾಜ್ಯ ಮಾತ್ರವಲ್ಲದೆ ನೆರೆಯ ತಮಿಳುನಾಡು, ಆಂಧ್ರಪ್ರದೇಶ, ಕೇರಳ ರಾಜ್ಯಗಳಲ್ಲಿ ಕೂಡ ಇವರು ಪ್ರದರ್ಶನ ನೀಡಿದ್ದು ಉಂಟು.

ಶಿಕ್ಷಣ ತಜ್ಞ ಎಚ್ ನರಸಿಂಹಯ್ಯ, ನಟ ರಾಜಕುಮಾರ್, ಗಾಯಕ ಘಂಟಸಾಲ, ಧರ್ಮಸ್ಥಳದ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆ ಅವರು ಸೇರಿದಂತೆ ಅನೇಕರ ಎದುರು ತಮ್ಮ ವಿಶಿಷ್ಟ ಕಲೆಯನ್ನು ಪ್ರದರ್ಶಿಸಿ ಭೇಷ್ ಎನಿಸಿಕೊಂಡಿದ್ದು ತಮ್ಮ ಜೀವನದ ಅವಿಸ್ಮರಣೀಯ ನೆನಪು ಎನ್ನುತ್ತಾರೆ ಆಂಜಿನಪ್ಪ.

ಇವರ ಕಲೆಯನ್ನು ಮೆಚ್ಚಿ ಈವರೆಗೆ ಅಗಣಿತ ಸಂಘ ಸಂಸ್ಥೆಗಳು ಮಠಗಳು ಸನ್ಮಾನಿಸಿವೆ. ದುರ್ದೈವವೆಂದರೆ ಆಂಜಿನಪ್ಪ ಅವರಿಗೆ ಸಂದಿರುವ ಸನ್ಮಾನಗಳಲ್ಲಿ ಬಂದಿರುವ ಸ್ಮರಣಿಕೆಗಳನ್ನು ಜೋಡಿಸಿಡಲು ಅವರಿಗೊಂದು ಚಿಕ್ಕ ಮನೆ ಕೂಡ ಇಲ್ಲ. ಜೋಪಡಿಯಲ್ಲಿ ಜೀವನ ನಡೆಸುವ ಸ್ಥಿತಿಯಲ್ಲಿರುವ ಈ ದೊಡ್ಡ ಕಲಾವಿದನಿಗೆ ದೊರೆಯಬೇಕಾದ ನಿಜವಾದ ಗೌರವ ಈವರೆಗೆ ದೊರೆತಿಲ್ಲ.

ಜಾನಪದ ಯಕ್ಷಗಾನ ಅಕಾಡಮಿ ಪ್ರಶಸ್ತಿ, ದೂರದರ್ಶನ ಕೊಡಮಾಡುವ ಚಂದನ ಪ್ರಶಸ್ತಿ, ಜಾನಪದ ಕಲಾಶ್ರೀ ಪ್ರಶಸ್ತಿ, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ನೀಡುವ ರಾಜ್ಯೋತ್ಸವ ಪ್ರಶಸ್ತಿ, ಜಿಲ್ಲಾ ಪ್ರಶಸ್ತಿ, ಎಲ್.ಎಚ್. ಆರ್ ಪತ್ರಿಕಾ ಪ್ರಶಸ್ತಿ, ಆದರ್ಶ ಶೃಂಗ ಪ್ರಶಸ್ತಿ, ಜಾನಪದ ಲೋಕೋತ್ಸವ ಪ್ರಶಸ್ತಿ, ಶಾರದ ಪ್ರಶಸ್ತಿ, ಉನ್ನತಿ ಜಾನಪದ ಕಲಾಶ್ರೀ ಪ್ರಶಸ್ತಿ, ಮೇಳಾದೇವಿ ಉತ್ಸವ ಪ್ರಶಸ್ತಿ ಸೇರಿದಂತೆ ಹತ್ತಾರು ಪ್ರಶಸ್ತಿಗಳು ಇವರಿಗೆ ಸಂದಿವೆ.

ಜೀವನದ ಸಂಧ್ಯಾಕಾಲದಲ್ಲಿರುವ ಆಂಜೀನಪ್ಪ ಅವರಿಗೆ ಸೂರಿಲ್ಲ ಎನ್ನುವ ಕೊರಗು ಸಂದಿರುವ ಪ್ರಶಸ್ತಿಗಳ ಸಂತಸವನ್ನು ಕಳೆದು ಹಾಕಿದೆ. ಇನ್ನಾದರೂ ಜಿಲ್ಲಾಡಳಿತ ಅಥವಾ ಸರ್ಕಾರ ಈ ಮೇರು ಕಲಾವಿದನಿಗೆ ಮನೆ ಕಟ್ಟಿಸಿಕೊಟ್ಟು ನೆಮ್ಮದಿ, ಘನತೆಯಿಂದ ಬದುಕುವ ವ್ಯವಸ್ಥೆ ಮಾಡಿಕೊಡಬೇಕು ಎನ್ನುವುದು ಪ್ರಜ್ಞಾವಂತ ನಾಗರಿಕರ ಆಗ್ರಹವಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT