ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿಣ್ಣೆ ಕುಸಿತ: ಪ್ರಯಾಣಿಕರ ಪರದಾಟ

Last Updated 1 ಅಕ್ಟೋಬರ್ 2017, 6:30 IST
ಅಕ್ಷರ ಗಾತ್ರ

ಹೊಸದುರ್ಗ: ತಾಲ್ಲೂಕಿನ ಕೆಲ್ಲೋಡು ಬಳಿ ವೇದಾವತಿ ನದಿಗೆ ಅಡ್ಡಲಾಗಿ ಕಟ್ಟಿದ್ದ ಬ್ರಿಡ್ಜ್‌ (ಸೇತುವೆ) ಪಕ್ಕದ ಮಣ್ಣಿನ ದಿಣ್ಣೆ ಗುರುವಾರ ರಾತ್ರಿ ಕುಸಿದಿದ್ದು ಸಂಚಾರ ವ್ಯವಸ್ಥೆ ಸ್ಥಗಿತವಾಗಿದೆ. ಕಡೂರು ಹಾಗೂ ತರೀಕೆರೆ ತಾಲ್ಲೂಕು ವ್ಯಾಪ್ತಿಯಲ್ಲಿ ಗುಡುಗು, ಸಿಡಿಲು ಸಹಿತ ಸುರಿದ ಮಳೆಗೆ ಹರಿದು ಬಂದ ನೀರಿನ ರಭಸಕ್ಕೆ ಈ ಅವಘಡ ಸಂಭವಿಸಿದೆ. ಗುರುವಾರ ಸಂಜೆ ಅರ್ಧದಷ್ಟು ನೀರು ತುಂಬಿದ್ದ ಇಲ್ಲಿನ 55 ಕೋಟಿ ಲೀಟರ್‌ ನೀರು ಸಂಗ್ರಹಣಾ ಸಾಮರ್ಥ್ಯದ ನದಿ ಬ್ಯಾರೇಜ್‌ ಶುಕ್ರವಾರ ಸಂಪೂರ್ಣ ಭರ್ತಿಯಾಗಿತ್ತು.

ಇಲ್ಲಿನ ವಾಹನ ಸಂಚಾರದ ಸೇತುವೆ ಸ್ವಲ್ಪ ಶಿಥಿಲವಾಗಿದ್ದು, ಮುಂಜಾಗೃತಾ ಕ್ರಮವಾಗಿ ಪೊಲೀಸರು ಸಂಚಾರ ವ್ಯವಸ್ಥೆ ಸ್ಥಗಿತಗೊಳಿಸಿದರು. ಹೊಸದುರ್ಗದಿಂದ ಮೈಸೂರು, ಬೆಂಗಳೂರು, ಹಾಸನ ಮಾರ್ಗವಾಗಿ ಹೋಗುವ ಬಸ್‌ಗಳು ಕೆಲ್ಲೋಡಿನಲ್ಲಿ, ಬರುವ ಬಸ್‌ಗಳು ಹ್ಯಾಂಡ್‌ಪೋಸ್ಟ್‌ನಲ್ಲಿ ನಿಲ್ಲುವಂತಾಯಿತು. ಇದರಿಂದ ಆಯುಧ ಪೂಜೆ ಹಾಗೂ ದಸರಾ ಹಬ್ಬಕ್ಕೆ ಬೇರೆ ಬೇರೆ ಊರುಗಳಿಗೆ ಹೋಗುವ ಪ್ರಯಾಣಿಕರು ಪರದಾಡುವಂತಾಯಿತು.

ಸಂಚಾರ ಮಾರ್ಗ ಬದಲಾವಣೆ: ಪ್ರಯಾಣಿಕರಿಗೆ ಅನುಕೂಲ ಮಾಡಿ ಕೊಡುವ ಉದ್ದೇಶದಿಂದ ಹೊಸದುರ್ಗದಿಂದ ಕೆಲ್ಲೋಡು–ಕನ್ನಾಗೊಂದಿ–ಕರ್ಲಮಾವಿನಹಳ್ಳಿ–ಬಲ್ಲಾಳಸಮುದ್ರ–ಕಲ್ಕೆರೆ–ಹ್ಯಾಂಡ್‌ಪೋಸ್ಟ್‌ ಮಾರ್ಗವಾಗಿ ಹಾಗೂ ತರೀಕೆರೆ, ಅಜ್ಜಂಪುರದಿಂದ ಬರುವ ವಾಹನಗಳಿಗೆ ಬೋಕಿಕೆರೆ–ಎಂ.ಜಿ.ದಿಬ್ಬ– ಮೆಟ್ಟಿನಹೊಳೆ–ಕರ್ಲಮಾವಿನಹಳ್ಳಿ ಮಾರ್ಗವಾಗಿ ಸಂಚಾರ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಸಬ್‌ಇನ್‌ಸ್ಪೆಕ್ಟರ್‌ ಗುರುಪ್ರಸಾದ್‌ ತಿಳಿಸಿದರು.

ಮರಳುಗಾರಿಕೆಯಿಂದ ದಿಣ್ಣೆ ಕುಸಿತ: ಇಲ್ಲಿನ ಕೃಷ್ಣರಾಜೇಂದ್ರ ಸೇತುವೆಯನ್ನು(ಬ್ರಿಡ್ಜ್‌) 1940ರಲ್ಲಿ ನಿರ್ಮಿಸಲಾಗಿತ್ತು. ಈ ಸೇತುವೆ ಮೇಲ್ಭಾಗ ಅಲ್ಲಲ್ಲಿ ಶಿಥಿಲವಾಗಿದ್ದು ಭಾರಿ ಗಾತ್ರದ ವಾಹನ ಸಂಚರಿಸಲು ತೊಂದರೆಯಾಗುತ್ತಿತ್ತು. ಪೂರಕ ಸಂಚಾರ ಮಾರ್ಗ ಕಲ್ಪಿಸಲು ಹಳೆಯ ಸೇತುವೆ ಪಕ್ಕದಲ್ಲಿ ಮತ್ತೊಂದು ಹೊಸ ಬ್ರಿಡ್ಜ್‌ ಕಾಮಗಾರಿಯನ್ನು 6 ತಿಂಗಳ ಹಿಂದೆ ಆರಂಭಿಸಲಾಯಿತು.

ಪಿಲ್ಲರ್‌ ಹಾಕಲು ಹಳೆಯ ಸೇತುವೆ ಪಕ್ಕದಲ್ಲಿಯೇ ಭಾರಿ ಪ್ರಮಾಣದಲ್ಲಿ ನದಿ ದಿಣ್ಣೆಯ ಮರಳನ್ನು ಹೊರಗೆ ತೆಗೆಯಲಾಗಿದೆ. ಜತೆಗೆ ಅವ್ಯಾಹತವಾಗಿ ಮರಳು ಗಣಿಗಾರಿಕೆ ನಡೆಸಿದ್ದರಿಂದ ಅವಘಡ ಸಂಭವಿಸಿದೆ. ‘ಮರಳುದಂಧೆ ನಿಲ್ಲಿಸದ ಪೊಲೀಸರು, ಜಿಲ್ಲಾಧಿಕಾರಿ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ದಿಣ್ಣೆ ಕುಸಿದು ಅಪಾಯ ಉಂಟಾದಾಗ ಬಂದಿದ್ದಾರೆ’ ಎಂದು ಕೆಲ್ಲೋಡು ಗ್ರಾಮಸ್ಥರು ದೂರಿದ್ದಾರೆ.

ಎಂಜಿನಿಯರ್‌ ನಿರ್ಲಕ್ಷ್ಯ: ‘ಹೊಸ ಬ್ರಿಡ್ಜ್‌ ಕಟ್ಟುವ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆ. ಬ್ರಿಡ್ಜ್‌ ಕಟ್ಟಲು ನದಿಯ ಮಧ್ಯದಲ್ಲಿ ಮಾತ್ರ ಹಳೆಯ ಸೇತುವೆ ಎತ್ತರಕ್ಕೆ 5 ಪಿಲ್ಲರ್‌ಗಳನ್ನು ಹಾಕಿ ಬಿಡಲಾಗಿದೆ. ಎರಡು ಬದಿಗೆ(ದಿಣ್ಣೆಗೆ) ಪಿಲ್ಲರ್‌ ಅಥವಾ ರಿವಿಟ್‌ಮೆಂಟ್‌ ಹಾಕಿಲ್ಲ. ಇಲ್ಲಿ ಸುಮಾರು 25 ಅಡಿ ಆಳದ ವರೆಗೆ ಮರಳು ಇದೆ. ಈ ಸ್ಥಳದಲ್ಲಿ ಮಳೆ ನೀರು ಸಂಗ್ರಹ ಆಗುತ್ತಿರುವುದರಿಂದ ದಿಣ್ಣೆ ಕುಸಿಯುತ್ತಿದೆ. ಇದಕ್ಕೆಲ್ಲಾ ಎಂಜಿನಿಯರ್‌ ನಿರ್ಲಕ್ಷ್ಯವೇ ಕಾರಣ’ ಎಂದು ಕೆಲ್ಲೋಡು ಗ್ರಾಮಸ್ಥರಾದ ಮಂಜಪ್ಪ, ರಂಗಸ್ವಾಮಿ ಕರಿಯಪ್ಪ, ಅರುಣ್‌ಕುಮಾರ್‌, ಚಿಕ್ಕಣ್ಣ, ರಾಜಪ್ಪ, ರಮೇಶ್‌ ಆರೋಪಿಸಿದ್ದಾರೆ.

ಮರಳು ತುಂಬಿದ ಜಿಲ್ಲಾಧಿಕಾರಿ: ವಿಷಯ ತಿಳಿಯುತ್ತಿದ್ದಂತೆ ಜಿಲ್ಲಾಧಿಕಾರಿ ವಿ.ವಿ.ಜೋತ್ಸ್ನಾ ಸ್ಥಳಕ್ಕೆ ಧಾವಿಸಿದರು. ಸಂಚಾರದ ಬ್ರಿಡ್ಜ್‌ ಪಕ್ಕದಲ್ಲಿ ಎರಡು ಕಡೆ ದಿಣ್ಣೆ ಕುಸಿದಿರುವುದನ್ನು ವೀಕ್ಷಿಸಿದ ಅವರು, ತಡೆಗೆ ಕೈಗೊಳ್ಳಬೇಕಾದ ಮುಂಜಾಗೃತಾ ಕ್ರಮಗಳ ಬಗ್ಗೆ ಎಂಜಿನಿಯರ್‌ಗಳ ಜತೆಗೆ ಚರ್ಚಿಸಿದರು. ಇನ್ನೂ ಹೆಚ್ಚಿಗೆ ದಿಣ್ಣೆ ಕುಸಿದರೆ ಬ್ರಿಡ್ಜ್‌ಗೆ ತೀವ್ರ ತೊಂದರೆಯಾಗುತ್ತದೆ. ಕುಸಿತ ನಿಯಂತ್ರಿಸಲು ಮರಳಿನ ಚೀಲಗಳನ್ನು ದಿಣ್ಣೆಗೆ ಹಾಕೋಣ ಎಂದು ಅಧಿಕಾರಿಗಳಿಗೆ ಸೂಚಿಸಿದರು. ಬಳಿಕ ತಾವೆ ಸಲಿಕೆ ಹಿಡಿದು ಖಾಲಿ ಸಿಮೆಂಟ್‌ ಚೀಲಗಳಿಗೆ ಮರಳು ತುಂಬಿದರು.

ಇದನ್ನು ವೀಕ್ಷಿಸಿದ ತಾಲ್ಲೂಕು ಮಟ್ಟದ ಅಧಿಕಾರಿಗಳು, ಸಾರ್ವಜನಿಕರು ಹಾಗೂ ಪುರಸಭೆ ಸಿಬ್ಬಂದಿ ಹಾಗೂ ಖಾಲಿ ಚೀಲಕ್ಕೆ ಮರಳು ತುಂಬಿ ಟ್ರ್ಯಾಕ್ಟರ್‌ ಸಹಾಯದಿಂದ ನದಿ ದಿಣ್ಣೆಗೆ ಹಾಕಿದರು. ‘ಜಿಲ್ಲಾಧಿಕಾರಿ ಬಂದಾಗ ಕಾರ್ಯ ಪ್ರವೃತ್ತರಾದ ತಾಲ್ಲೂಕು ಮಟ್ಟದ ಅಧಿಕಾರಿಗಳು ಈ ಕೆಲಸವನ್ನು ಗುರುವಾರ ಸಂಜೆಯೇ ಮಾಡಿದ್ದರೆ ಇಷ್ಟೊಂದು ಅವಘಡ ಸಂಭವಿಸುತ್ತಿರಲಿಲ್ಲ’ ಎನ್ನುತ್ತಾರೆ ಕೆಲ್ಲೋಡಿನ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ರಾಮಪ್ಪ.

ಮುಳುಗು ತಜ್ಞರು: ದಿಣ್ಣೆ ಕುಸಿತ ನಿಯಂತ್ರಿಸಲು ಹರಪ್ಪನಹಳ್ಳಿಯಿಂದ 40 ಮಂದಿ ಮುಳುಗು ತಜ್ಞರನ್ನು(ನೀರಿನಲ್ಲಿ ಕೆಲಸ ಮಾಡುವವರು) ಶನಿವಾರ ಕರೆಸಲಾಗಿದೆ. 15 ಟಿಪ್ಪರ್‌ಗಳ ಸಹಾಯದಿಂದ ಕಲ್ಲುಮಿಶ್ರಿತ ಕೆಂಪ್ಪು ಮಣ್ಣನ್ನು(ಗ್ರಾವೆಲ್‌) ದಿಣ್ಣೆಗೆ ಸುರಿಯಲಾಗುತ್ತಿದೆ. ಮುಳುಗು ತಜ್ಞರು ನೀರಿನಲ್ಲಿ ಕಲ್ಲುಮಿಶ್ರಿತ ಮಟ್ಟನ್ನು ಜೋಡಿಸುತ್ತಿದ್ದಾರೆ. ನಂತರ
ಹಿಟ್ಯಾಚಿಯಿಂದ ಬಿಗಿ ಮಾಡಲಾಗು
ತ್ತಿದೆ. ಇದರಿಂದ ದಿಣ್ಣೆ ಕುಸಿತ ನಿಯಂತ್ರಣ
ವಾಗುತ್ತಿದೆ ಎಂದು ತಹಶೀಲ್ದಾರ್‌ ಮಲ್ಲಿಕಾರ್ಜುನ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT