ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದೂಗಳ ಸಾರಥ್ಯದಲ್ಲಿ ಮೊಹರಮ್

Last Updated 1 ಅಕ್ಟೋಬರ್ 2017, 6:51 IST
ಅಕ್ಷರ ಗಾತ್ರ

ನಾಡಿನ ಹಲವು ಭಾಗಗಳಲ್ಲಿ ಮೊಹರಂ ಆಚರಣೆಯ ನೇತೃತ್ವವನ್ನು ಮುಸ್ಲಿಮರು ವಹಿಸಿದ್ದರೆ ಕುಂದಗೋಳದಲ್ಲಿ ಶಾ ಹಟೇಲ್ ಪಾಶಾ ದರ್ಗಾದಲ್ಲಿ ಹಿಂದೂಗಳ ಸಾರಥ್ಯದಲ್ಲಿ ಪಂಜಾವನ್ನು ಪ್ರತಿಷ್ಠಾಪಿಸಿ ವೈಶಿಷ್ಟ್ಯಪೂರ್ಣವಾಗಿ ಮೊಹರಂ ಆಚರಣೆ ಮಾಡುವ ಮೂಲಕ ಹಿಂದೂ– ಮುಸ್ಲಿಮ್ ಭಾವೈಕ್ಯ ಮೆರೆಯಲಾಗುತ್ತಿದೆ.

ಕುಂದಗೋಳದ ತಾಲ್ಲೂಕು ಪಂಚಾಯ್ತಿ ಕಚೇರಿ ಪಕ್ಕದಲ್ಲಿರುವ ಶಾ ಹಟೇಲ್ ಪಾಶಾ ದರ್ಗಾದಲ್ಲಿ 140 ವರ್ಷಗಳಿಂದಲೂ ಪಟ್ಟಣದ ವೀರಶೈವ ಗಾಣಿಗ ಮನೆತನದ ಹೊಳಿ ಕುಟುಂಬದವರು ಮೊಹರಂ ಆಚರಣೆ ಮಾಡುತ್ತಾ ಬಂದಿರುವುದು ವಿಶೇಷವಾಗಿದೆ.

ಹಿನ್ನೆಲೆ: ಸ್ವಾತಂತ್ರ್ಯ ಪೂರ್ವದಲ್ಲಿ ಕುಂದಗೋಳ ಪಟ್ಟಣವು ಜಮಖಂಡಿಯ ಪಟವರ್ಧನರ ಆಳ್ವಿಕೆಯಲ್ಲಿದ್ದಾಗ ಪಟ್ಟಣದ ಗಾಣಿಗ ಮನೆತನದ ರಾಯಪ್ಪ ಹೊಳಿ ಎಂಬುವರಿಗೆ ಸೇರದ ಆಕಳು ಊರ ಹೊರಗಿನ ಅರಣ್ಯದಲ್ಲಿ ಲುಟಿನ್ ಶ್ಯಾವಲಿ ೆಂಬ ಮುಸ್ಲಿಮ್ ಸಂತನ ಬಳಿ ಪ್ರತಿ ನಿತ್ಯ ಹಾಲು ಸುರಿಸಿ ಬರುತ್ತಿತ್ತಂತೆ. ಈ ವಿಚಿತ್ರ ಘಟನೆಯನ್ನು ಕಂಡ ಹೊಳಿ ಕುಟುಂಬದವರು ಹಾಗೂ ಗ್ರಾಮದ ಹಿರಿಯರು ಆಶ್ಚರ್ಯಗೊಂಡು ಈ ಸಂತ ಸಾಧಾರಣ ವ್ಯಕ್ತಿಯಲ್ಲ ಎಂದು ತಿಳಿದು ಅಂದಿನಿಂದ ಸಂತನ ಬಗ್ಗೆ ಭಕ್ತಿಯನ್ನು ಬೆಳೆಸಿಕೊಂಡರು.

ಲುಟಿನ್ ಶ್ಯಾವಲಿ ನಿಧನರಾಗುವ ಮುನ್ನ ರಾಯಪ್ಪ ಹೊಳಿ ಅವರನ್ನು ಕರೆದು ತಮ್ಮ ಹತ್ತಿರ ಇದ್ದ ಪಂಜಾವನ್ನು ನೀಡಿ ಇಲ್ಲಿ ದರ್ಗಾವನ್ನು ಕಟ್ಟಿಸಿ ಅದರಲ್ಲಿ ಪಂಜಾವನ್ನು ಪ್ರತಿಷ್ಠಾಪಿಸಿ ಮೊಹರಂ ಆಚರಣೆ ಮಾಡಿದ ನಂತರ ಮನೆಯಲ್ಲಿಟ್ಟು ನಿತ್ಯ ಪೂಜೆ ಮಾಡಬೇಕು ಇದರಿಂದ ನಿಮ್ಮ ಕುಟುಂಬಕ್ಕೆ ಒಳ್ಳೆಯದಾಗುತ್ತದೆ ಎಂದು ಆಶೀರ್ವದಿಸಿದರು ಎಂದು ಹೇಳಲಾಗುತ್ತದೆ.

ಅಂದಿನಿಂದ ಇಲ್ಲಿ ಪಾಂಜಾ ಮೂರ್ತಿಯನ್ನು ಹೊಳಿ ಮನೆತನದವರೇ ಪ್ರತಿಷ್ಠಾಪಿಸಿ ಮೊಹರಂ ಅನ್ನು ಭಕ್ತಿಯಿಂದ ಆಚರಿಸುತ್ತಿದ್ದಾರೆ. ಪಂಜಾ ಪ್ರತಿಷ್ಠಾಪನೆ ಸಮಯದಲ್ಲಿ ಓದಿಕೆ ಮಾಡುವಾಗ ಮುಸ್ಲಿಮ್ ಧರ್ಮಗುರುಗಳು ಬರುತ್ತಾರೆ. ಉಳಿದ ಎಲ್ಲ ಉಸ್ತುವಾರಿಯನ್ನು ರಾಯಪ್ಪನ ಮೊಮ್ಮಗನಾದ ಸಿದ್ದಪ್ಪ ಮಾಡುತ್ತಾರೆ. ಮೊಹರಂ ಮುಕ್ತಾಯದ ನಂತರ ಪಂಜಾವನ್ನು ಮನೆಯಲ್ಲಿಟ್ಟು ಪ್ರತಿ ಗುರುವಾರ ಹಾಗೂ ಶುಕ್ರವಾರ ವಿಶೇಷ ಪೂಜೆ ಪುನಸ್ಕಾರಗಳನ್ನು ಮಾಡಲಾಗುತ್ತಿದೆ.

ಪ್ರತಿ ವರ್ಷ ಮೊಹರಂ ಬಂದಾಗ ಹೊಳಿ ಮನೆತನದವರು ದರ್ಗಾವನ್ನು ಹಾಗೂ ತಮ್ಮ ಮನೆಯನ್ನು ಸುಣ್ಣ ಬಣ್ಣ ಹಚ್ಚಿ ಶೃಂಗರಿಸುತ್ತಾರೆ. ನಂತರ ಮಡಿ ಉಡುಗೆಗಳಿಂದ ಮನೆಯಲ್ಲಿದ್ದ ಹಟೇಲ್ ಪಾಶಾ ಪಂಜಾವನ್ನು ಪ್ರತಿಷ್ಠಾಪಿಸುತ್ತಾರೆ.

‘ವರ್ಷಕ್ಕೊಮ್ಮೆ ಮೊಹರಂ ಬಂದಾಗ ಮಾತ್ರ ನಮ್ಮ ಹಿರಿಯರು ಹೇಗೆ ಹೇಳಿ ಹೋಗಿದ್ದಾರೋ ಅದನ್ನು ಮಾಡುತ್ತಾ ಬಂದಿದ್ದೇವೆ. ಈ ದರ್ಗಾದ ಎಲ್ಲ ಜವಾಬ್ದಾರಿ ನಮ್ಮದೇ ಇರುತ್ತದೆ. ಹಟೇಲ್ ಪಾಶಾ ಪಂಜಾವನ್ನು ಪ್ರತಿಷ್ಠಾಪಿಸಿದ ದಿನದಿಂದ ಕೊನೆಯ ದಿನ ದೇವರನ್ನು ಹೊಳೆಗೆ ಕಳಿಸುವವರಿಗೂ ಎಲ್ಲ ಕೆಲಸಗಳನ್ನು ನಾವೇ ಮಾಡುತ್ತೇವೆ.

ಓದಿಕೆ ಇದ್ದಾಗ ಮಾತ್ರ ಮುಸ್ಲಿಂ ಗುರುಗಳು ಬರುತ್ತಾರೆ. ಹೊಳೆಗೆ ಕಳಿಸುವ ಮುನ್ನಾ ದಿನ ಪಟ್ಟಣದಲ್ಲಿ ಪಂಜಾದ ಮೆರಣಿಗೆಯನ್ನು ಮಾಡುತ್ತೇವೆ’ ಎಂದು ದರ್ಗಾದ ಉಸ್ತುವಾರಿ ಹೊತ್ತ ಸಿದ್ದಪ್ಪ ಹೊಳಿ ತಿಳಿಸಿದರು. ಇದೇ ಅಕ್ಟೋಬರ್ 1ರಂದು ಪಟ್ಟಣದಲ್ಲಿ ಹಟೇಲ್ ಪಾಶಾ ಪಂಜಾದ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT