‘ಮೌಢ್ಯ ನಿಷೇಧ ಮಸೂದೆ ಜಾರಿಯಾಗಲಿ’

ಭಾನುವಾರ, ಜೂನ್ 16, 2019
26 °C

‘ಮೌಢ್ಯ ನಿಷೇಧ ಮಸೂದೆ ಜಾರಿಯಾಗಲಿ’

Published:
Updated:

ಕಲಬುರ್ಗಿ: ‘ಕರ್ನಾಟಕದಲ್ಲಿ ಅಂಧ ಶ್ರದ್ಧೆಗೆ ಕೊನೆ ಹಾಡಬೇಕು. ಬೆಳಗಾವಿ ಅಧಿವೇಶನದಲ್ಲಿ ಮೌಢ್ಯ ನಿಷೇಧ ಮಸೂದೆ ಮಂಡನೆ ಬಗ್ಗೆ ರಾಜ್ಯ ಸಚಿವ ಸಂಪುಟದಲ್ಲಿ ಚರ್ಚೆಯಾಗಿದ್ದು ಸ್ವಾಗತಾರ್ಹ. ಮಸೂದೆ ಮಂಡನೆಗೆ ಎಲ್ಲ ಪಕ್ಷಗಳು ಸಹಕಾರ ನೀಡಬೇಕು’ ಎಂದು ಸಂಸದ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಇಲ್ಲಿನ ಬುದ್ಧ ವಿಹಾರದಲ್ಲಿ ಶನಿವಾರ ನಡೆದ 62ನೇ ಧರ್ಮಚಕ್ರ ಪ್ರವರ್ತನ ಕಾರ್ಯಕ್ರಮದಲ್ಲಿ ಮಾತ ನಾಡಿದ ಅವರು,‘ಮಸೂದೆ ಜಾರಿಗೆ ಬಹಳ ಹಿಂದೆಯೇ ಸರ್ಕಾರ ದೃಢ ಸಂಕಲ್ಪ ಮಾಡಬೇಕಾಗಿತ್ತು. ಈಗಲಾದರೂ ಎಚ್ಚೆತ್ತುಕೊಂಡಿದೆ. ಮಸೂದೆ ಕಾಯ್ದೆಯಾಗಲು ದೊಡ್ಡ ಹೋರಾಟವನ್ನೇ ಮಾಡಬೇಕಾಗ ಬಹುದು’ ಎಂದು ಹೇಳಿದರು.

‘ಮಾಟ, ಮಂತ್ರ, ಜಾದೂ ಬೆತ್ತಲೆ ಸೇವೆ, ಎಂಜಲೆಲೆಯ ಮೇಲೆ ಹೊರಳಾಡುವುದು, ಉರುಳು ಸೇವೆ ಇವೆಲ್ಲ ಅಮಾಯಕರನ್ನು ಶೋಷಣೆ ಮಾಡುವ ಪದ್ಧತಿಗಳಾಗಿವೆ. ಎಲ್ಲ ನಾಯಕರು ಮೌಢ್ಯಗಳನ್ನು ಬಹಿರಂಗವಾಗಿ ವಿರೋಧಿಸುತ್ತಾರೆ. ಆದರೆ, ರಾಜ್ಯದಲ್ಲಿ ಮಸೂದೆ ಜಾರಿಯಾಗದಿರುವುದು ಬೇಸರದ ಸಂಗತಿ’ ಎಂದು ಹೇಳಿದರು.

‘ಡಾ.ಬಿ.ಆರ್.ಅಂಬೇಡ್ಕರ್ ಅವರು ಜೀವನದ ಉದ್ದಕ್ಕೂ ಮೌಢ್ಯವನ್ನು ವಿರೋಧಿಸಿಕೊಂಡು ಬಂದಿದ್ದರು. ಧರ್ಮದ ಹೆಸರಿನಲ್ಲಿನ ಶೋಷಣೆಗಳನ್ನು ಅವರು ಸಹಿಸುತ್ತಿರಲಿಲ್ಲ. ಹಿಂದೂ ಧರ್ಮದಲ್ಲಿನ ಶೋಷಣೆಗಳನ್ನು ಕಟುವಾಗಿ ವಿರೋಧಿಸುತ್ತಿದ್ದರು. ಹಿಂದೂ ಧರ್ಮ ಮೌಢ್ಯಗಳಿಂದ ಮುಕ್ತವಾಗಲಿದೆ ಎಂದು ಬಹಳ ವರ್ಷ ಕಾದರು. ಆದರೆ, ಆ ಆಶಯ ಕೈಗೂಡದೇ ಇದ್ದಾಗ ಬೌದ್ಧ ಧರ್ಮ ಸ್ವೀಕರಿಸಿದರು’ ಎಂದು ಹೇಳಿದರು.

‘ಅಂಬೇಡ್ಕರ್‌ ಅವರು ಬೌದ್ಧ ಧರ್ಮ ಸ್ವೀಕರಿಸುವ ಕಾರ್ಯಕ್ರಮದಲ್ಲಿ 5 ಲಕ್ಷ ಮಂದಿ ಸೇರಿದ್ದರು. ಸನಾತನವಾದಿಗಳ ನೆಲೆ ಹಾಗೂ ಆರ್‌ಎಸ್‌ಎಸ್‌ ಚಟುವಟಿಕೆಗಳ ಕೇಂದ್ರ ಸ್ಥಾನವಾಗಿದ್ದ ಮಹಾರಾಷ್ಟ್ರದ ನಾಗಪುರದಲ್ಲಿಯೇ ಬೌದ್ಧ ಧರ್ಮ ಸ್ವೀಕಾರ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಈ ಕಾರ್ಯಕ್ರಮ ಟೀಕಿಸಿದ್ದ ಆರ್‌ಎಸ್‌ಎಸ್‌ ಮುಖಂಡ ಗೋಳವಾರಕರ್‌ ಅವರಿಗೆ ಅಂಬೇಡ್ಕರ್‌ ಸೂಕ್ತ ಪ್ರತ್ಯುತ್ತರ ನೀಡಿದ್ದರು’ ಎಂದು ಹೇಳಿದರು.

‘ಸಂವಿಧಾನದ ಬೇರುಗಳನ್ನು ಸಡಿಲಗೊಳಿಸುವ ಪ್ರಯತ್ನಗಳು ದೇಶದಲ್ಲಿ ನಡೆದಿವೆ. ಧರ್ಮ ಸಹಿಷ್ಣುತೆ ಮರೆಯಾಗುತ್ತಿದೆ. ಮಾಂಸ ಸೇವಿಸುವವರನ್ನು ಹಿಡಿದು ಬಡಿಯಲಾಗುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆ ಹಾಳುಗೆಡವಲು ಹುನ್ನಾರಗಳು ನಡೆಯುತ್ತಿವೆ. ಭಾರತದಲ್ಲಿ ಪ್ರಜಾಪ್ರಭುತ್ವ ನಾಶವಾದರೆ ನಾವು ಸಾವಿರಾರು ವರ್ಷ ಹಿಂದಕ್ಕೆ ಹೋಗಬೇಕಾಗುತ್ತದೆ’ ಎಂದು ಕಳವಳ ವ್ಯಕ್ತಪಡಿಸಿದರು. ವಿಮರ್ಶಕ ಡಾ.ಜಿ.ಬಿ.ಹರೀಶ ಮಾತನಾಡಿ,‘ಬುದ್ಧನ ತತ್ವಗಳು ಪಾಲಿ ಭಾಷೆಯಲ್ಲಿವೆ. ಆದರೆ, ಬೌದ್ಧ ಧರ್ಮದಲ್ಲಿ ಸಂಸ್ಕೃತ ಹಾಗೂ ವೇದದ ಅಂಶಗಳನ್ನು ಸೇರ್ಪಡೆಗೊಳಿಸಲಾಗಿದೆ. ಬುದ್ಧನ ಉಪದೇಶಗಳನ್ನು ಸಂಸ್ಕೃತದಿಂದ ಪ್ರತ್ಯೇಕಗೊಳಿಸಬೇಕಾಗಿದೆ’ ಎಂದರು.

ಸಹಾಯಕ ಪ್ರಾಧ್ಯಾಪಕ ಡಾ.ಮೈತ್ರಿವೀರ ನಾಗಾರ್ಜುನ ಉಪನ್ಯಾಸ ನೀಡಿದರು. ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ಮಾತನಾಡಿದರು. ಪೂಜ್ಯ ಬಂತೇಜಿ ಬುದ್ಧ ವಂದನೆ ಬೋಧಿಸಿದರು. ಶಾಸಕ ಉಮೇಶ ಜಾಧವ್, ಮೇಯರ್ ಶರಣಕುಮಾರ ಮೋದಿ, ಅಂಬಾರಾಯ ಅಷ್ಟಗಿ, ಮಾಪಣ್ಣಗಂಜಗಿರಿ ಇದ್ದರು.

ಮಾರುತಿ ಮಾಲೆ ಸ್ವಾಗತಿಸಿ, ಪ್ರೊ.ಈಶ್ವರ ಇಂಗಿನ್‌ ವಂದಿಸಿ, ಪ್ರೊ.ಎಚ್‌.ಟಿ.ಪೋತೆ ನಿರೂಪಿಸಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry