ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

184 ಹಳ್ಳಿಗೆ ಕುಡಿಯುವ ನೀರು ಸರಬರಾಜು

Last Updated 1 ಅಕ್ಟೋಬರ್ 2017, 8:50 IST
ಅಕ್ಷರ ಗಾತ್ರ

ಮಾಲೂರು: ಈಚೆಗೆ ಸುರಿದ ಮಳೆಯಿಂದ ತಾಲ್ಲೂಕಿನ ಮಾರ್ಕಂಡಯ್ಯ ಡ್ಯಾಂನಲ್ಲಿ ಶೇ 50ರಷ್ಟು ನೀರು ತುಂಬಿದ್ದು, ಈ ಭಾಗದ ಸಾರ್ವಜನಿಕರಿಗೆ ಖುಷಿ ತಂದಿದೆ.
ತಾಲ್ಲೂಕಿನ 184 ಗ್ರಾಮಗಳಿಗೆ ಕುಡಿಯುವ ನೀರು ಸರಬರಾಜು ಮಾಡಲು ₹ 43.22 ಕೋಟಿ ವೆಚ್ಚದಲ್ಲಿ ಮಾರ್ಕಂಡಯ್ಯ ಡ್ಯಾಂ ಕಾಮಗಾರಿ ಪೂರ್ಣಗೊಂಡು 4 ವರ್ಷಕಳೆದರೂ ಮಳೆಯ ಕೊರತೆಯಿಂದ ಈ ಭಾಗದ ಜನಕ್ಕೆ ನೀರಿನ ಸೌಕರ್ಯ ಕಲ್ಪಿಸಲು ಸಾಧ್ಯವಾಗಲಿಲ್ಲ.

2008ರಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಡ್ಯಾಂ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದ್ದರು. ಹೈದರಾಬಾದಿನ ಗುತ್ತಿಗೆದಾರ ಮೇಸಾಯಿ ಸುಧೀರ್ ಐದು ವರ್ಷಗಳಲ್ಲಿ ಕಾಮಗಾರಿ ಪೂರ್ಣಗೊಳಿಸಿದರು. ಮಳೆಯ ಅಭಾವದಿಂದ ಮಾರ್ಕಂಡಯ್ಯ ಕೆರೆಯಲ್ಲಿ ನೀರು ಶೇಖರಣೆಯಾಗಿರಲ್ಲಿಲ್ಲ. ಈಚೆಗೆ ಸುರಿದ ಮಳೆಯಿಂದ ಮಾರ್ಕಂಡಯ್ಯ ಕೆರೆ ಅರ್ಧದಷ್ಟು ಭರ್ತಿಯಾಗಿದೆ. ಇದರಿಂದ ನನೆಗುದಿಗೆ ಬಿದ್ದಿದ್ದ ಮಾರ್ಕಂಡಯ್ಯ ಕುಡಿಯುವ ನೀರಿನ ಯೋಜನೆಗೆ ಮತ್ತೆ ಶಕ್ತಿ ಬಂದಂತಾಗಿದೆ.

ಮಾರ್ಕಂಡಯ್ಯ ಜಲಾನಯನ ವಿಸ್ತಿರ್ಣ 19.71 ಚ.ಮೀ ಇದ್ದು, ಜಲಾಶಯದ ನೀರಿನ ಪ್ರಮಾಣ 553.61 ಎಂ.ಸಿ.ಎಫ್.ಟಿಗಳಾಗಿರುವುದರಿಂದ ಅಚ್ಚುಕಟ್ಟು ಪ್ರದೇಶಕ್ಕೆ ಒಳಪಡುವ ನೀರಿನ ಸಾಮರ್ಥ್ಯ 448.69 ಎಂ.ಸಿ.ಎಫ್.ಟಿಗಳಾಗಿವೆ. ಜಲಾಶಯದಲ್ಲಿನ ಉಳಿಕೆ ನೀರಿನ ಸಾಮರ್ಥ್ಯ 104.92 ಎಂ.ಸಿ.ಎಫ್.ಟಿಗಳಾಗಿರುತ್ತದೆ.

ಕೆರೆಯಿಂದ ತಾಲ್ಲೂಕಿನ ಟೇಕಲ್ ಗ್ರಾಮದವರೆಗೆ 14 ಕಿ.ಮೀ ಪೈಪ್ ಅಳವಡಿಸಿ ಜಾಕ್‌ವಾಲ್‌ನಿಂದ ನೀರು ಪಂಪು ಮಾಡಿ ಟೇಕಲ್ ಸಮೀಪವಿರುವ ಟ್ಯಾಂಕರ್‌ಗೆ ಹರಿಸಿ ಗುರುತ್ವಾಕರ್ಷಣೆ ಮೂಲಕ ತಾಲ್ಲೂಕಿನ ಗ್ರಾಮಗಳಿಗೆ ಪೈಪ್ ಮುಖಾಂತರ ಸರಬರಾಜು ಮಾಡಲಾಗುವುದು. ಉಳಿದ ನೀರನ್ನು ಜತೆಗೆ ರಾಂಪುರ, ದಿನ್ನಹಳ್ಳಿ, ಮಂಗಾಪುರ ಸೇರಿದಂತೆ ಬೆಡ್ಡಶೆಟ್ಟಹಳ್ಳಿಯಲ್ಲಿನ ಟ್ಯಾಂಕ್‌ಗಳಿಗೆ ಹರಿಸಲಾಗುವುದು.

ಸುಮಾರು ವತ್ಷಗಳಿಂದ ತಾಲ್ಲೂಕಿನಲ್ಲಿ ಬರ ಪರಿಸ್ಥಿತಿ ಆವರಿಸಿತ್ತು. ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದ ಜನತೆ ನೀರಿಗಾಗಿ ಪರಿತಪ್ಪಿಸುತ್ತಿದ್ದರು. ಅಂತರ್ಜಲ ಮಟ್ಟ ಕುಸಿದು 1,500 ಅಡಿ ಕೊಳವೆ ಬಾವಿ ಕೊರೆಸಿದರೂ ನೀರು ಲಭ್ಯವಾಗುತ್ತಿಲ್ಲ.

ತಾಲ್ಲೂಕಿನ ಟೇಕಲ್ ಹೋಬಳಿ ವ್ಯಾಪ್ತಿಯ ಕೆರೆಗಳು ತುಂಬಿ ಕೋಡಿ ಹೋಗುವ ಮೂಲಕ ಮಾರ್ಕಂಡಯ್ಯ ಕೆರೆ ಸೇರುತ್ತಿದೆ. ಇದರಿಂದ ಕೆಲ ಗ್ರಾಮಗಳಿಗೆ ಶಾಶ್ವತ ಕುಡಿಯುವ ನೀರು ಸಿಗುತ್ತಿದೆ ಎಂಬ ಭರವಸೆ ಮೂಡಿದೆ.

‘ಒಂದು ಭಾರಿ ಕೆರೆ ತುಂಬಿದರೇ ನಾಲ್ಕು ವರ್ಷಗಳ ಕಾಲ 184 ಗ್ರಾಮಗಳಿಗೆ ಕುಡಿಯುವ ನೀರು ಸರಬರಾಜು ಮಾಡಬಹುದು’ ಎಂದು ಜಿಲ್ಲಾ ಪಂಚಾಯಿತಿ ಸಹಾಯ ಎಂಜಿನಿಯರ್ ಅಮರಪ್ಪ ಹೋಸಪೇಟೆ ತಿಳಿಸಿದ್ದಾರೆ.

‘ಮಾರ್ಕಂಡಯ್ಯ ಕೆರೆ ತುಂಬಿ ಆರೇಳು ವರ್ಷಗಳೇ ಕಳೆದಿದೆ. ಈಗ ಶೇ 50ರಷ್ಟು ಭಾಗ ಡ್ಯಾಂ ತುಂಬಿದ್ದು, ಜನಕ್ಕೆ ನೀರು ಹರಿಸಲು ಸರ್ಕಾರ ಮುಂದಾಗಬೇಕು’ ಶಾಶ್ವತ ನೀರಾವರಿ ಸಮಿತಿಯ ಸಂಚಾಲಕ ಡಾ.ಗೋಪಾಲಗೌಡ ಒತ್ತಾಯಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT