ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಟೆಯ ಮೇಲೆ ಸಮೃದ್ಧ ಜಲನಿಧಿ

Last Updated 1 ಅಕ್ಟೋಬರ್ 2017, 9:06 IST
ಅಕ್ಷರ ಗಾತ್ರ

ಕೊಪ್ಪಳ: ಇತ್ತೀಚೆಗೆ ಸುರಿದ ಸಾಧಾರಣ ಮಳೆಗೆ ಕೊಪ್ಪಳ ಜಿಲ್ಲೆಯ ಕೋಟೆಯ ಮೇಲಿನ ಜಲಸಂಗ್ರಹಾಗಾರಗಳು ತುಂಬಿವೆ. ಉಕ್ಕಿ ಹರಿದ ನೀರು ಕೋಟೆಗಳ ಕೆಳಭಾಗದ ಕೆರೆಗಳಲ್ಲಿ ಸಂಗ್ರಹವಾಗಿದೆ. ಕೊಪ್ಪಳ ಕೋಟೆಯಲ್ಲಿ ಮೂರು ಸ್ತರದ ಜಲಸಂಗ್ರಹ ವ್ಯವಸ್ಥೆ ಇದೆ. ಇಲ್ಲಿಂದ ಉಕ್ಕಿ ಹರಿದ ನೀರು ಹುಲಿಕೆರೆಯನ್ನು ಸೇರುತ್ತದೆ. ಇದೇ ಕೆರೆಯಲ್ಲಿ ಸುತ್ತಲಿನ ಮೂರು ಬೃಹತ್‌ ಗುಡ್ಡಗಳ ನೀರು ಇಲ್ಲಿ ಸಂಗ್ರಹವಾಗುತ್ತದೆ.

ಮರ್ದಾನ್‌ಅಲಿ ದರ್ಗಾದ ಸಮೀಪದ ಕೊಳದಲ್ಲಿಯೂ ಇದೇ ವ್ಯವಸ್ಥೆ ಇದೆ. ಬಹದ್ದೂರ್‌ ಬಂಡಿ ಕೋಟೆಯ ಬಂಡೆಯ ಮೇಲಂತೂ ಕೆಲದಿನ ಜಲಪಾತವೇ ಸೃಷ್ಟಿಯಾಗಿತ್ತು. ಇರಕಲ್‌ಗಡಾ ಕೋಟೆಯ ಮೇಲ್ಭಾಗದ ಬಾವಿಯೂ ಭಾಗಶಃ ತುಂಬಿದೆ. ಇಲ್ಲಿಂದ ಹರಿದ ನೀರು ಗುಡ್ಡದ ಕೆಳಗಿರುವ ಕೆರೆಯಲ್ಲಿ ಸಂಗ್ರಹವಾಗುತ್ತದೆ.

ಗಂಗಾವತಿ ತಾಲ್ಲೂಕು ಜಬ್ಬಲಗುಡ್ಡ ಸಮೀಪದ ಕುಮಾರರಾಮನ ಕೋಟೆ, ಆನೆಗುಂದಿ ಸಮೀಪ ವಿಜಯನಗರದ ಅರಸರ ಕಾಲದ ಕೋಟೆಯೊಳಗಿನ ಪುಟ್ಟ ಜಲಸಂಗ್ರಹಾಗಾರಗಳಲ್ಲಿ ಸಮೃದ್ಧ ಜಲರಾಶಿ ಇದೆ.

‘ಈ ಶುದ್ಧ ನೀರನ್ನು ಸಂರಕ್ಷಿಸಿ ಬಳಸುವ ಕಾರ್ಯ ಆಗಬೇಕಿದೆ. ಕೆರೆಗಳಿಗೆ ನೀರು ತುಂಬುವ ಯೋಜನೆ ಈಗಾಗಲೇ ಜಾರಿಯಲ್ಲಿದೆ. ಅದೇ ಮಾರ್ಗದಲ್ಲಿ ಈ ಜಲರಾಶಿಯನ್ನೂ ಸಂರಕ್ಷಿಸಲು ಮುಂದಾಗಬೇಕು’ ಎಂದು ಕೋಟೆ ಪ್ರದೇಶದ ನಿವಾಸಿಗಳು ಹೇಳುತ್ತಾರೆ.

ಬಹದ್ದೂರ್‌ಬಂಡಿ ಕೋಟೆಯ ಕೆಳಭಾಗದ ಕೆರೆಯ ಸುತ್ತಮುತ್ತಲಿನ ಗಿಡಗಂಟೆ ತೆಗೆದು ಸ್ವಚ್ಛಗೊಳಿಸಬೇಕು. ಕೋಟೆಯ ಮೇಲ್ಭಾಗದಲ್ಲಿ ಜಲಮೂಲ ಮಲಿನವಾಗದಂತೆ ಎಚ್ಚರವಹಿಸಬೇಕು. ಕೊಪ್ಪಳ, ಇರಕಲ್‌ಗಡಾ ಕೋಟೆಯ ಮೇಲ್ಭಾಗ ಬಯಲು ಶೌಚ ಮಾಡುವುದು ನಿಲ್ಲಬೇಕು. ಕೋಟೆಗಳ ಮೇಲ್ಭಾಗದ ಬಾವಿಗಳನ್ನೂ ಸ್ವಚ್ಛಗೊಳಿಸಬೇಕು ಎಂದು ಸ್ಥಳೀಯ ನಾಗರಿಕರು ಒತ್ತಾಯಿಸುತ್ತಾರೆ.

ಕೋಟೆಯ ಕೆಳಗಿರುವ ಬಹದ್ದೂರ್‌ಬಂಡಿ, ಇರಕಲ್‌ಗಡಾ ಗ್ರಾಮಗಳು ಕುಡಿಯುವ ನೀರಿನ ತೀವ್ರ ಸಮಸ್ಯೆ ಎದುರಿಸುತ್ತಿವೆ. ಬಹದ್ದೂರ್‌ ಬಂಡಿಗೆ ಕುಡಿಯುವ ನೀರು ಪೂರೈಕೆ ಯೋಜನೆಗೆ ಇತ್ತೀಚೆಗೆ ಚಾಲನೆ ಸಿಕ್ಕಿದೆಯಾದರೂ ಸಮಸ್ಯೆ ಪರಿಹಾರವಾಗಿಲ್ಲ.

ಕೆರೆಗಳ ಪಾಡು: ಜಿಲ್ಲೆಯಲ್ಲಿ ಜಿಲ್ಲಾ ಪಂಚಾಯಿತಿ ಹಾಗೂ ಸಣ್ಣ ನೀರಾವರಿ ಇಲಾಖೆ ಅಧೀನದಲ್ಲಿ ಒಟ್ಟು ಸುಮಾರು 112 ಕೆರೆಗಳು ಇವೆ. ಕನಕಗಿರಿ ಭಾಗದಲ್ಲಿ ಕೆರೆ ತುಂಬುವ ಯೋಜನೆ ಜಾರಿಯಲ್ಲಿದೆ.

ಕೊಪ್ಪಳ- ಯಲಬುರ್ಗಾ ಭಾಗದ ಕೆರೆ ತುಂಬುವ ಯೋಜನೆಗೆ ಸೆ. 22ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಿದ್ದಾರೆ. ಆದರೆ ಎಲ್ಲ ಕೆರೆಗಳ ಹೂಳು ತೆಗೆಯದೇ ಕೇವಲ ಕೆರೆ ತುಂಬಿಸಿದರೆ ಏನು ಪ್ರಯೋಜನ ಎಂದು ರೈತರು ಕೇಳುತ್ತಾರೆ.

‘ಕೋಟೆಗಳ ಮೇಲಿನ ನೀರು ಸಂರಕ್ಷಿಸಿ ಕೆಳಭಾಗದ ಜನವಸತಿಗೆ ನೀಡುವುದು ಒಳ್ಳೆಯ ಪರಿಕಲ್ಪನೆ. ಜಿಲ್ಲಾ ಪಂಚಾಯಿತಿಯ ಮಾರ್ಗಸೂಚಿ ಪ್ರಕಾರ ಯಾವುದಾದರೂ ಅವಕಾಶವಿದ್ದರೆ ನೋಡಿಕೊಂಡು ಅದನ್ನು ಜಾರಿಗೊಳಿಸಲು ಪ್ರಯತ್ನಿಸುತ್ತೇನೆ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವೆಂಕಟರಾಜಾ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT