ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಓದಿಗೆ ಬೇಡ ರಜೆ...

Last Updated 1 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಕ್ಕಳೇ, ಕಳೆದ ನಾಲ್ಕು ತಿಂಗಳಿನಿಂದ ನೀವೆಲ್ಲರೂ ಶಾಲೆಯಲ್ಲಿ ನಿಮ್ಮ ತರಗತಿಗೆ ಸಂಬಂಧಿಸಿದ ವಿವಿಧ ವಿಷಯಗಳಲ್ಲಿ ಇರುವ ಪಾಠಗಳನ್ನು ಕಲಿಯುವುದರಲ್ಲಿ ತೀವ್ರವಾಗಿ ನಿಮ್ಮನ್ನು ತೊಡಗಿಸಿಕೊಂಡಿದ್ದೀರಿ. ಪಾಠಗಳಿಗೆ ಸಂಬಂಧಿಸಿದ ಹಲವಾರು ಚಟುವಟಿಕೆಗಳಲ್ಲಿ ಭಾಗವಹಿಸಿದ್ದೀರಿ. ಜೊತೆಗೆ, ವಿವಿಧ ಕ್ರೀಡೆಗಳಲ್ಲಿ, ಸ್ಪರ್ಧೆಗಳಲ್ಲಿ ನಿಮ್ಮ ಪ್ರಾವೀಣ್ಯವನ್ನೂ ಪ್ರದರ್ಶಿಸಿದ್ದೀರಿ.

ಹಲವು ಕಿರು ಪರೀಕ್ಷೆಗಳನ್ನು ಬರೆದಿದ್ದೀರಿ. ಬಹುಶಃ, ಈ ಲೇಖನವನ್ನು ಓದುವ ವೇಳೆಗೆ ನಿಮ್ಮ ಮಧ್ಯಂತರ ಪರೀಕ್ಷೆಯೂ ಮುಗಿದಿರುತ್ತದೆ. ನಿಮಗೀಗ ಏಕತಾನತೆಯಿಂದ ಸ್ವಲ್ಪ ವಿರಾಮದ ಅವಶ್ಯಕತೆ ಇದೆ. ಅದಕ್ಕಾಗಿ, ನೀವೆಲ್ಲಾ ಕಾತರದಿಂದ ಕಾಯುತ್ತಿರುವ ರಜಾ ಅವಧಿಯೊಂದು ಇನ್ನೇನು ಪ್ರಾರಂಭವಾಗಲಿದೆ, ಅಲ್ಲವೇ?

ಈ ರಜಾ ಅವಧಿಯನ್ನು ಬರಿಯ ವಿಶ್ರಾಂತಿ, ವಿರಾಮಗಳಿಗೆ ಬಳಸಿಕೊಳ್ಳುವ ಬದಲು ಉಪಯುಕ್ತವಾಗಿ ಕಳೆಯಬಹುದಲ್ಲವೆ? ಸುಮಾರು ಎರಡು ವಾರಗಳ ಈ ರಜಾ ಅವಧಿಯನ್ನು ಹೇಗೆ ನಿಮ್ಮ ವ್ಯಕ್ತಿತ್ವವನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಸದುಪಯೋಗ ಪಡಿಸಿಕೊಳ್ಳಬಹುದೆಂಬುದನ್ನು ಯೋಚಿಸೋಣವೇ?

ಓದುವ ಹವ್ಯಾಸ ಬೆಳೆಸಿಕೊಳ್ಳಿ
ಶಾಲೆ ನಡೆಯುತ್ತಿದ್ದಾಗ ಭಾನುವಾರ ಹಾಗೂ ರಜಾದಿನಗಳನ್ನು ಹೊರತುಪಡಿಸಿ, ಪ್ರತಿ ನಿತ್ಯ 6ರಿಂದ 8 ಗಂಟೆಗಳ ಅವಧಿಯನ್ನು ನೀವು ಶಾಲೆಯಲ್ಲಿ ಕಳೆಯುತ್ತಿದ್ದಿರಿ. ಬರುವ ರಜೆಯಲ್ಲಿ ಮನೆಯಲ್ಲಿ ಈ ಅವಧಿಯನ್ನು ಹೇಗೆ ಕಳೆಯಬಹುದು? ನಿಮ್ಮ ಪೋಷಕರು ಕೆಲವು ದಿನಗಳಿಗೆ ಸೀಮಿತವಾಗಿ ಯಾವುದಾದರೂ ಪ್ರವಾಸದ ಯೋಜನೆಯನ್ನು ಹಾಕಿರಬಹುದು. ಹಾಗಿದ್ದಲ್ಲಿ ಹೋಗಿ ಬನ್ನಿ. ಕ್ರೀಡೆ, ಮನೋರಂಜನೆಗಳಿಗೂ ಕೊಂಚ ಸಮಯ ಮೀಸಲಿಡಿ. ಅದರ ನಂತರ? ಉಳಿದ ರಜಾ ಅವಧಿಯನ್ನು ಉತ್ತಮ ಓದಿನ ಹವ್ಯಾಸವನ್ನು ಬೆಳೆಸಿಕೊಳ್ಳಲು ಉಪಯೋಗಿಸಬಹುದು.

ಬಹುತೇಕ ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಮಕ್ಕಳಿಗೆ ರಜೆ ಅವಧಿಯಲ್ಲಿ ಪ್ರವಾಸ ಬಿಟ್ಟರೆ, ನಂತರದ ಆದ್ಯತೆ ತಮ್ಮ ಆಸಕ್ತಿಯ ವಿಷಯಗಳಲ್ಲಿ ಪುಸ್ತಕಗಳನ್ನು ಓದುವುದು. ನಮ್ಮ ದೇಶವೂ ಇದಕ್ಕೆ ಹೊರತಲ್ಲ. ಸಂಶೋಧನೆಯೊಂದರ ಪ್ರಕಾರ, ಅಮೆರಿಕದಲ್ಲಿ ನೂರಕ್ಕೆ ನಲವತ್ತರಷ್ಟು ಮಕ್ಕಳು ರಜೆಯಲ್ಲಿ ಇಂಥ ಪುಸ್ತಕಗಳನ್ನು ಓದುವ ಹವ್ಯಾಸವನ್ನು ತಪ್ಪದೇ ಪಾಲಿಸುತ್ತಿದ್ದಾರೆ.

ರಜೆಯ ಅವಧಿಯಲ್ಲಿ ಓದುವುದನ್ನು ನಿಲ್ಲಿಸಿದ ವಿದ್ಯಾರ್ಥಿಗಳು ರಜೆಯ ನಂತರದ ಅವಧಿಯಲ್ಲಿ ಶಾಲೆಯಲ್ಲಿನ ಕಲಿಕಾ ಸಾಮರ್ಥ್ಯದಲ್ಲಿ ಹಿಂದೆ ಬಿದ್ದಿರುವುದನ್ನು ಈ ಸಂಶೋಧನೆಗಳು ತೋರಿಸಿವೆ. ಹೀಗಾಗಿ, ರಜೆ ಪ್ರಾರಂಭವಾಗುತ್ತಿದ್ದಂತೆ ಪೋಷಕರು ತಮ್ಮ ಮಕ್ಕಳಿಗೆ ’ಹಾಲಿಡೇ ರೀಡಿಂಗ್ ಗಿಫ್ಟ್’ ಎಂದು ಉತ್ತಮ ಪುಸ್ತಕಗಳನ್ನು ಕೊಡುಗೆಯಾಗಿನೀಡುವ ಪದ್ಧತಿ ಅಲ್ಲಿ ಜಾರಿಯಲ್ಲಿದೆ.

ವಿಶ್ವದ ಎಲ್ಲೆಡೆ ಪಾಲಿಸಲಾಗುತ್ತಿರುವ ವಿವಿಧ ಕಲಿಕಾ ಪದ್ಧತಿಗಳಲ್ಲಿ ಕೇಳುವುದು, ಮಾತನಾಡುವುದು, ಓದುವುದು ಹಾಗೂ ಬರೆಯುವುದು ಈ ನಾಲ್ಕು ಕೌಶಲಗಳಿಗೆ ಹೆಚ್ಚಿನ ಒತ್ತನ್ನು ನೀಡಲಾಗಿದೆ. ವಿದ್ಯಾರ್ಥಿಯ ವಯೋಸಹಜವಾದ ಮಾನಸಿಕ ಹಾಗೂ ಬೌದ್ಧಿಕ ಬೆಳವಣಿಗೆಯಲ್ಲಿ ಈ ನಾಲ್ಕು ಕೌಶಲಗಳು ಅತ್ಯಂತ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಈ ಕೌಶಲಗಳನ್ನು ಅಭಿವೃದ್ಧಿ ಪಡಿಸುವಲ್ಲಿ ಶಾಲೆಯಲ್ಲಿ ಶಿಕ್ಷಕರ ಪಾತ್ರ ಎಷ್ಟು ಪ್ರಮುಖವೋ, ಮನೆಯಲ್ಲಿ ಪೋಷಕರ ಪಾತ್ರವೂ ಅಷ್ಟೇ ಮುಖ್ಯವಾಗುತ್ತದೆ. ಹೀಗಾಗಿ, ಮಕ್ಕಳ ರಜಾ ಅವಧಿಯ ಓದಿನಲ್ಲಿ ಪೋಷಕರು ಪೂರಕವಾದಂತಹ ವಾತಾವರಣವನ್ನು ನಿರ್ಮಿಸಿಕೊಡುವುದು ಇಂದಿನ ಅತಿ ದೊಡ್ಡ ಅವಶ್ಯಕತೆ ಹಾಗೂ ಜವಾಬ್ದಾರಿಯಾಗಿದೆ.

ಓದಿನ ಆಯ್ಕೆ ಹೇಗೆ?
ರಜೆಯ ಓದಿಗೆ ಯಾವ ವಿಷಯ ಅಥವಾ ಪುಸ್ತಕವನ್ನು ಆಯ್ಕೆ ಮಾಡಿಕೊಳ್ಳಲಿ? ಈ ಪ್ರಶ್ನೆ ನಿಮ್ಮನ್ನು ಕಾಡಬಹುದು. ಇದಕ್ಕೆ ನೀವೇ ಉತ್ತರ ಹುಡುಕಿಕೊಳ್ಳಬೇಕು. ನಿಮ್ಮ ಪಾಠಗಳಿಂದ ಹೊರತಾದ, ನಿಮಗೆ ಆಸಕ್ತಿ, ಕುತೂಹಲಗಳಿರುವ ವಿಷಯಗಳನ್ನು ನಿರ್ಧರಿಸಿಕೊಳ್ಳಿ. ನಿಮ್ಮಲ್ಲಿ ಕೆಲವರಿಗೆ ಇಂಗ್ಲಿಷ್ ಅಥವಾ ಕನ್ನಡ ಭಾಷೆಯ ಸಾಹಿತ್ಯದ ಮೇಲೆ ಒಲವಿರಬಹುದು.

ಕೆಲವರಿಗೆ ವಿಜ್ಞಾನದ ವಿವಿಧ ವಿಷಯಗಳಲ್ಲಿ ಆಸಕ್ತಿ ಇರಬಹುದು ಅಥವಾ ವಿಜ್ಞಾನಿಗಳ ಬಗ್ಗೆ ತಿಳಿದುಕೊಳ್ಳುವ ಕುತೂಹಲವಿರಬಹುದು. ಕೆಲವರು ಸಾಹಸಗಾಥೆಗಳನ್ನು ಇಷ್ಟಪಡಬಹುದು ಅಥವಾ ಕಾಲ್ಪನಿಕ ವೈಜ್ಞಾನಿಕ ಕಥೆಗಳನ್ನು ಇಷ್ಟಪಡಬಹುದು. ಆಯ್ಕೆ ನಿಮ್ಮದು. ರಜಾ ಅವಧಿಯ ಓದಿಗೆ ಒಂದು ಪಟ್ಟಿಯನ್ನು ತಯಾರಿಸಿಕೊಳ್ಳಿ. ಈ ನಿಟ್ಟಿನಲ್ಲಿ ಸೂಕ್ತ ಪುಸ್ತಕಗಳನ್ನು ಪಟ್ಟಿ ಮಾಡಲು ನಿಮ್ಮ ಶಿಕ್ಷಕರು ನಿಮಗೆ ನೆರವಾಗುತ್ತಾರೆ. ನಂತರ, ಶಾಲೆಯ ಗ್ರಂಥಭಂಡಾರಕ್ಕೆ ಭೇಟಿ ನೀಡಿ ನಿಮ್ಮ ಆಸಕ್ತಿಯ ಕ್ಷೇತ್ರದಲ್ಲಿರುವ ಪುಸ್ತಕಗಳ ಸಂಗ್ರಹವನ್ನು ಪರಿಶೀಲಿಸಿ.

ಅಗತ್ಯ ಬಿದ್ದರೆ ಗ್ರಂಥಪಾಲಕರ ನೆರವು ಪಡೆದುಕೊಳ್ಳಿ. ಶಾಲೆಯ ಗ್ರಂಥ ಭಂಡಾರದಲ್ಲಿ ನಿಮ್ಮ ಆಸಕ್ತಿಯ ಪುಸ್ತಕ ಲಭ್ಯವಿಲ್ಲದಿದ್ದಲ್ಲಿ, ನಿಮ್ಮ ಬಡಾವಣೆಯಲ್ಲಿರುವ ಸಾರ್ವಜನಿಕ ಗ್ರಂಥಾಲಯವನ್ನು ಸಂಪರ್ಕಿಸಿ. ಸದಸ್ಯತ್ವ ಪಡೆದುಕೊಳ್ಳಿ. ಎಲ್ಲಿಂದಾದರೂ ಸಂಬಂಧಿಸಿದ ಪುಸ್ತಕವನ್ನು ಪಡೆದುಕೊಂಡು ಓದಲು ಪ್ರಾರಂಭಿಸಿ.

ದಿನಕ್ಕೆ ಕನಿಷ್ಠ ಎರಡು ಗಂಟೆಗಳನ್ನಾದರೂ ನೀವು ಆಯ್ಕೆ ಮಾಡಿರುವ ಪುಸ್ತಕವನ್ನು ಓದಲು ಮೀಸಲಿಡಿ. ಓದುವಾಗ ಅರ್ಥವಾಗದ ಕಠಿಣ ಪದಗಳೇನಾದರೂ ಇದ್ದಲ್ಲಿ, ಅವುಗಳನ್ನು ಪಟ್ಟಿ ಮಾಡಿಕೊಳ್ಳಿ. ಉತ್ತರ ಪಡೆಯಲು ನಿಮ್ಮ ಪೋಷಕರ ಸಹಾಯ ಪಡೆದುಕೊಳ್ಳಿ. ಅಗತ್ಯ ಬಿದ್ದಲ್ಲಿ, ಡಿಕ್ಷನರಿಯ ನೆರವಿನಿಂದ ಪರಿಹಾರವನ್ನು ಕಂಡುಕೊಳ್ಳಿ. ಓದುವ ಸಂದರ್ಭದಲ್ಲಿ ಮೊಬೈಲ್, ಟೀವಿ ಮುಂತಾದುವುಗಳಿಂದ ಆಕರ್ಷಿತರಾಗಬೇಡಿ.

ನೀವು ಸಾಹಿತ್ಯದ ಕೃತಿಗಳನ್ನು ಓದಲು ಆಯ್ಕೆ ಮಾಡಿಕೊಂಡಿದ್ದಲ್ಲಿ, ಆ ಕೃತಿಯನ್ನು ರಚಿಸಿದ ಸಾಹಿತಿಯ ಬಗ್ಗೆಯೂ ತಿಳಿದುಕೊಳ್ಳಿ. ಅವರ ಇತರ ರಚನೆಗಳ ಬಗ್ಗೆಯೂ ಮಾಹಿತಿ ಸಂಗ್ರಹಿಸಿದಲ್ಲಿ, ಮುಂದೆ ಆ ಕೃತಿಗಳನ್ನು ಓದುವ ಅವಕಾಶಗಳನ್ನು ನೀವೇ ಒದಗಿಸಿಕೊಳ್ಳಬಹುದು. ಇದರಿಂದ, ನಿಮ್ಮ ಆಸಕ್ತಿಯ ಭಾಷೆಯ ಸಾಹಿತ್ಯದ ಶ್ರೀಮಂತಿಕೆಯ ಪರಿಚಯ ನಿಮಗಾಗುತ್ತದೆ.

ಇಂಗ್ಲೀಷ್ ಮತ್ತು ಕನ್ನಡದ ಉತ್ಕೃಷ್ಟ ಕೃತಿಗಳನ್ನು ಓದುವುದರಿಂದ ಸಾಹಿತ್ಯದ ಬಗ್ಗೆ ನಿಮಗಿರುವ ಜ್ಞಾನವು ವಿಸ್ತಾರಗೊಳ್ಳುತ್ತದೆ. ಜೊತೆಗೆ, ನಿಮ್ಮ ಭಾಷಾ ಪರಿಣಿತಿಯೂ ಹೆಚ್ಚುತ್ತಾ ಹೋಗುತ್ತದೆ. ಅಂಥ ಕೃತಿಗಳಲ್ಲಿ ಕಂಡು ಬರುವ ಹೊಸ ಪದಗಳ ಜೊತೆಗೆ ಕೃತಿಕಾರ ಬಳಸಿರುವ ಉಪಮೆ, ಅಲಂಕಾರಗಳ ಪರಿಚಯವೂ ನಿಮಗಾಗುತ್ತದೆ.

ನಿಮ್ಮ ಆಸಕ್ತಿಯ ಕ್ಷೇತ್ರ ವಿಜ್ಞಾನವಾಗಿದ್ದಲ್ಲಿ, ವಿಜ್ಞಾನ ಮತ್ತು ತಂತ್ರಜ್ಞಾನದ ವಿವಿಧ ಕ್ಷೇತ್ರಗಳಲ್ಲಿ ಇತ್ತೀಚಿನ ಬೆಳವಣಿಗೆಗಳನ್ನು ಪರಿಚಯ ಮಾಡಿ
ಕೊಡುವ ಕೃತಿಗಳನ್ನು ಆಯ್ದುಕೊಳ್ಳಿ. ಇದರಿಂದ, ನಿಮ್ಮ ಪಾಠದಲ್ಲಿರುವ ವಿಷಯಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಯನ್ನು ಗಳಿಸಿಕೊಳ್ಳಬಹುದು. ಜೊತೆಗೆ, ನಿಮ್ಮ ಭವಿಷ್ಯದ ಅದ್ಯಯನ ಕ್ಷೇತ್ರದ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳುವುದಕ್ಕೆ ಸಹಾಯವಾಗುತ್ತದೆ. ಇದರ ಜೊತೆಯಲ್ಲಿಯೇ, ಸಂಬಂಧಿಸಿದ ವಿಜ್ಞಾನಿಗಳ ಪರಿಚಯವೂ ನಿಮಗಾಗುತ್ತದೆ. ಅವರ ಸಾಧನೆಗಳನ್ನು ತಿಳಿದುಕೊಳ್ಳುವುದರ ಜೊತೆಗೆ, ಆ ಹಾದಿಯಲ್ಲಿ ಅವರು ಎದುರಿಸಿದ ಸವಾಲುಗಳು ಹಾಗೂ ಎಡರು ತೊಡರುಗಳನ್ನೂ ಪರಿಚಯ ಮಾಡಿಕೊಂಡಂತಾಗುತ್ತದೆ.

ಒಂದು ವೇಳೆ, ನೀವು ಇತಿಹಾಸವನ್ನು ಇಷ್ಟಪಡುತ್ತೀರಾದರೆ, ನಮ್ಮ ದೇಶದ ಭವ್ಯ ಇತಿಹಾಸವನ್ನು ಪರಿಚಯ ಮಾಡಿಕೊಡುವ ಉತ್ತಮ ಕೃತಿಗಳನ್ನು ಆಯ್ಕೆ ಮಾಡಿಕೊಳ್ಳಿ. ನಮ್ಮ ದೇಶದ ಹಾಗೂ ರಾಜ್ಯದ ಸಂಸ್ಕೃತಿ ಹಾಗೂ ಪರಂಪರೆಗಳ ಪರಿಚಯ ನಿಮಗೆ ಇರಬೇಕಾದ್ದು ಅತ್ಯಗತ್ಯ. ರಾಷ್ಟ್ರಪ್ರಜ್ಞೆಯನ್ನು ಮೈಗೂಡಿಸಿಕೊಳ್ಳುವುದಕ್ಕೆ ಇಂಥ ಅಧ್ಯಯನ ನೆರವಾಗುತ್ತದೆ.

ನಿಮ್ಮ ಪಟ್ಟಿಯಲ್ಲಿ ಆದರ್ಶ ವ್ಯಕ್ತಿಗಳ ಆತ್ಮಕಥೆಯನ್ನೋ ಅಥವಾ ಅವರ ಬಗ್ಗೆ ಬೇರೆಯವರು ಬರೆದಿರುವ ಜೀವನಚರಿತ್ರೆಗಳನ್ನು ಓದುವುದೂ ಸಹ ಸೇರಿರಲಿ. ಅವರ ಜೀವನಾನುಭವಗಳು ನಿಮಗೆ ಸ್ಫೂರ್ತಿ ಹಾಗೂ ಪ್ರೇರಣೆಯನ್ನು ನೀಡಬಲ್ಲವು.

ನಿಮ್ಮ ಓದು ಬರಿಯ ಪುಸ್ತಕಗಳಿಗೆ, ಗ್ರಂಥಗಳಿಗೆ ಸೀಮಿತವಾಗಬೇಕಿಲ್ಲ. ನಿಮ್ಮ ಆಸಕ್ತಿಯ ಕ್ಷೇತ್ರಗಳಿಗೆ ಸಂಬಂಧಿಸಿದ ಹಲವಾರು ನಿಯತಕಾಲಿಕಗಳು ಪ್ರಕಟವಾಗುತ್ತಿವೆ. ಅವುಗಳನ್ನು ಓದುವ ಹವ್ಯಾಸವನ್ನೂ ಬೆಳೆಸಿಕೊಳ್ಳಿ.

ನಿಮ್ಮ ಮಾನಸಿಕ ಹಾಗೂ ಬೌದ್ಧಿಕ ಬೆಳವಣಿಗೆಗೆ ಪೂರಕವಾದ ಯಾವುದೇ ಸಾಹಿತ್ಯವನ್ನು ರಜೆಯಲ್ಲಿ ಮಾತ್ರವಲ್ಲ, ಸಾಧ್ಯವಾದಾಗಲೆಲ್ಲ ಓದುವ ಅಭ್ಯಾಸವನ್ನು ರೂಢಿಸಿಕೊಳ್ಳುವುದು ನಿಮ್ಮ ವ್ಯಕ್ತಿತ್ವ ವಿಕಸನಗೊಳ್ಳುವುದಕ್ಕೆ ಸಹಾಯ ಮಾಡುತ್ತದೆ.

ನೀವು ಖಂಡಿತ ಬದಲಾಗುತ್ತೀರಿ!
ರಜೆಯಲ್ಲಿ ಓದುವ ಹವ್ಯಾಸವನ್ನು ನೀವು ಬೆಳೆಸಿಕೊಂಡಿದ್ದೇ ಆದಲ್ಲಿ, ಅದರ ನಿಶ್ಚಿತ ಪ್ರಭಾವ ಹಾಗೂ ಪರಿಣಾಮಗಳನ್ನು ಶೀಘ್ರದಲ್ಲಿಯೇ ನೀವು ಕಾಣುತ್ತೀರಿ. ನಿಮ್ಮ ಯೋಚನಾ ಶಕ್ತಿ ಹರಿತವಾಗುವುದರ ಜೊತೆಗೆ, ಶಾಲೆಯಲ್ಲಿನ ನಿಮ್ಮ ಕಲಿಕಾ ಪ್ರಕ್ರಿಯೆಗೆ ಉತ್ತಮ ಅಡಿಪಾಯ ದೊರಕುತ್ತದೆ. ಹೊಸ ಅನುಭವಗಳಿಗೆ ನಿಮ್ಮನ್ನು ನೀವು ಒಡ್ಡಿಕೊಳ್ಳಲು ಪ್ರಾರಂಭಿಸುತ್ತೀರಿ. ಹೊಸ ಮಾಹಿತಿಯನ್ನು ಗಳಿಸಿಕೊಳ್ಳುತ್ತೀರಿ. ವಿಷಯಗಳನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳುವ ಸಾಮರ್ಥ್ಯವನ್ನು ಪಡೆಯುತ್ತೀರಿ. ಹೊಸ ಬಗೆಯ ಹವ್ಯಾಸ ಹಾಗೂ ಪ್ರವೃತ್ತಿಗಳನ್ನು ಬೆಳೆಸಿಕೊಳ್ಳುತ್ತೀರಿ. ಸಮಸ್ಯೆಗಳನ್ನು ಪರಿಹರಿಸುವ ಹೊಸ ಮಾರ್ಗಗಳನ್ನು ತಿಳಿದುಕೊಳ್ಳುತ್ತೀರಿ.

ನಿಮ್ಮ ಈ ಓದಿನ ಹವ್ಯಾಸವು ನಿಮ್ಮ ಜೀವನಶೈಲಿಯಲ್ಲಿ ಗಮನಾರ್ಹವಾದ ಬದಲಾವಣೆಗಳನ್ನು ತರಬಹುದು. ಮುಂದೆ ನೀವು ಯಾವುದಾದರೂ ಕಾರ್ಯಯೋಜನೆಯನ್ನು ಪ್ರಾರಂಭಿಸುವ ಮುನ್ನ ತೆಗೆದುಕೊಳ್ಳಬೇಕಾದ ಎಚ್ಚರಿಕೆಯ ಕ್ರಮಗಳನ್ನು ರೂಪಿಸುವಲ್ಲಿ ಓದಿನ ಅನುಭವವು ನೆರವಾಗುತ್ತದೆ. ನೀವು ಓದಿಕೊಂಡಿರುವ ವ್ಯಕ್ತಿಗಳ ಅನುಭವಗಳು ಈ ನಿಟ್ಟಿನಲ್ಲಿ ನಿಮಗೆ ದಾರಿದೀಪವಾಗಬಹುದು.
ಇಂಥ ಓದಿನಿಂದಾಗುವ ಇನ್ನೊಂದು ಪ್ರಮುಖ ಪ್ರಯೋಜನವೆಂದರೆ, ನಿಮ್ಮ ಸಂವಹನ ಸಾಮರ್ಥ್ಯದಲ್ಲಿ ಉಂಟಾಗುವ ಬದಲಾವಣೆಗಳು.

ನಿಮ್ಮ ಭಾಷಾಪ್ರಯೋಗ, ಪದಗಳ ಉಚ್ಚಾರ ಹಾಗೂ ಶೈಲಿಗಳು ಸುಧಾರಿಸುವುದರ ಜೊತೆಗೆ ನಿಮ್ಮಲ್ಲಿ ಆತ್ಮವಿಶ್ವಾಸವೂ ವೃದ್ಧಿಯಾಗುತ್ತ ಹೋಗುತ್ತದೆ. ನಿಮ್ಮ ಕಲ್ಪನಾಶಕ್ತಿ, ಸೃಜನಶೀಲತೆ ಹಾಗೂ ಕ್ರಿಯಾಶೀಲತೆಗಳೂ ಅಭಿವೃದ್ಧಿಯಾಗುತ್ತದೆ. ನಿಮ್ಮ ಮೆದುಳು ವಿವಿಧ ಬಗೆಯ ವಿಷಯಗಳಿಗೆ ಸ್ಪಂದಿಸಲು ಪ್ರಾರಂಭಿಸುವುದರಿಂದ ನಿಮ್ಮ ನೆನಪಿನ ಶಕ್ತಿಯೂ ಹೆಚ್ಚಾಗುತ್ತದೆ.

ಪಾಠ್ಯಕ್ಕೆ ಹೊರತಾದ ಓದಿನಿಂದ ಇಷ್ಟೆಲ್ಲ ಪ್ರಯೋಜನಗಳಿವೆ ಎಂದ ಮೇಲೆ ಇನ್ನೇಕೆ ಯೋಚಿಸುತ್ತೀರಿ? ರಜೆ ಪ್ರಾರಂಭವಾಗುವ ಮುನ್ನವೇ ದೃಢ ನಿರ್ಧಾರವನ್ನು ಮಾಡಿ. ಈ ಬಾರಿಯ ರಜಾ ಅವಧಿಯನ್ನು ಸದುಪಯೋಗಪಡಿಸಿಕೊಳ್ಳಿ. ಶಾಲೆಯ ಪಾಠಗಳನ್ನು ಪುನರ್ಮನನ ಮಾಡುವುದರ ಜೊತೆಗೆ ನಿಮ್ಮ ಆಸಕ್ತಿಯ ಕ್ಷೇತ್ರದಲ್ಲಿ ಕನಿಷ್ಠ ಒಂದಾದರೂ ಪುಸ್ತಕವನ್ನು ಓದಿ ಮುಗಿಸಿ. ರಜೆ ಮುಗಿಯುತ್ತಿದ್ದಂತೆ ಹೊಸ ಹುರುಪಿನಿಂದ ಶಾಲೆಗೆ ಮರಳಿ ನಿಮ್ಮ ಕಲಿಕಾ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT