ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಡಿ ಹರಿದ ಕದರಮಂಗಲ ಕೆರೆ

Last Updated 1 ಅಕ್ಟೋಬರ್ 2017, 10:16 IST
ಅಕ್ಷರ ಗಾತ್ರ

ಚನ್ನಪಟ್ಟಣ: ಒಂದು ವಾರದಿಂದ ಸತತ ಸುರಿಯುತ್ತಿರುವ ಮಳೆಯಿಂದಾಗಿ ತಾಲ್ಲೂಕಿನ ಗಡಿಭಾಗದ ಕದರಮಂಗಲ ಗ್ರಾಮದ ಕೆರೆ ಭರ್ತಿಯಾಗಿ ಕೋಡಿ ಹರಿದಿದೆ.
25 ವರ್ಷಗಳ ಹಿಂದೆ ಮಳೆಯಿಂದ ತುಂಬಿದ್ದ ಈ ಕೆರೆ ಈಗ ಮಳೆಯಿಂದಾಗಿ ಮತ್ತೆ ತುಂಬಿ ಕೋಡಿ ಹರಿದಿದ್ದು, ನೀರು ಮೈತುಂಬಿಕೊಂಡು ಕಂಗೊಳಿಸುತ್ತಿದೆ. ಮೂರು ದಿನಗಳಿಂದ ಹೆಚ್ಚುವರಿ ನೀರು ತಾಲ್ಲೂಕಿನ ಬೇವೂರು ಮಂಡ್ಯ ಗ್ರಾಮದ ಕೆರೆಗೆ ಹರಿಯುತ್ತಿದೆ.

ತಾಲ್ಲೂಕಿನ ಇಗ್ಗಲೂರಿನ ಎಚ್.ಡಿ.ದೇವೇಗೌಡ ಬ್ಯಾರೇಜ್ ನಿಂದ ಎರಡು ವರ್ಷಗಳ ಹಿಂದೆ ಈ ಕೆರೆಗೆ ನೀರು ಹರಿಸಲಾಗಿತ್ತು. ಆಗ ಕೆರೆ ಅರ್ಧದಷ್ಟು ಮಾತ್ರ ತುಂಬಿತ್ತು. ನಂತರ ಮತ್ತೆ ಕೆರೆ ನೀರಿಲ್ಲದೆ ಒಣಗಿತ್ತು. ಈಗ ಈ ಭಾಗದಲ್ಲಿ ಸತತ ಮಳೆಯಾದ ಕಾರಣ ಕೆರೆ ಈಗ ಮೈತುಂಬಿಕೊಂಡಿದ್ದು, ಈ ಭಾಗದ ಜನರಲ್ಲಿ ಹರ್ಷ ಮೂಡಿಸಿದೆ.

ಕದರಮಂಗಲ ಗ್ರಾಮವು ರಾಮನಗರ, ಮಂಡ್ಯ ಹಾಗೂ ತುಮಕೂರು ಜಿಲ್ಲೆಗಳ ಗಡಿ ಭಾಗದಲ್ಲಿದೆ. ಈ ಕೆರೆಗೆ ಎರಡು ದಶಕಗಳ ಹಿಂದೆಯೇ ಹೇಮಾವತಿ ನದಿಯಿಂದ ನೀರು ಹರಿಸಲು ಸರ್ವೆ ಕಾರ್ಯ ನಡೆಸಲಾಗಿತ್ತು. ಆದರೆ ಅದು ಇಂದಿಗೂ ಸಾಕಾರವಾಗಿಲ್ಲ ಎಂದು ಗ್ರಾಮದವರೆ ಆದ ರೈತಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್.ಲಕ್ಷ್ಮಣಸ್ವಾಮಿ ತಿಳಿಸಿದ್ದಾರೆ.

ಈಗ ಮಳೆಯಿಂದಾಗಿ ನೀರು ತುಂಬಿದೆ. ಮುಂದಿನ ವರ್ಷ ಏನಾಗುತ್ತೆ ಎಂದು ಹೇಳಲಾಗುವುದಿಲ್ಲ. ಆದ್ದರಿಂದ ಈ ಯೋಜನೆಗೆ ಮತ್ತೆ ಚಾಲನೆ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಈ ಕೆರೆಯಲ್ಲಿ ಏರಿ, ತೂಬು ಹಾಗೂ ಕೋಡಿ, ಹೂಳು ಸಮಸ್ಯೆ ಇದೆ. ಸಣ್ಣ ನೀರಾವರಿ ಇಲಾಖೆ ಈ ಕಡೆ ಗಮನ ಹರಿಸಿಲ್ಲ. ಈಗ ಕೆರೆ ಭರ್ತಿಯಾಗಿರುವ ಈ ಸಂದರ್ಭದಲ್ಲಿ ಈ ಎಲ್ಲಾ ಸಮಸ್ಯೆಗಳ ಪರಿಹಾರಕ್ಕೆ ಮುಂದಾಗಬೇಕು ಎಂದು ಮನವಿ ಮಾಡಿದ್ದಾರೆ.

ಏರಿ ಸ್ವಲ್ಪ ಸಡಿಲವಾಗಿರುವ ಕಾರಣ ಅದು ಒಡೆದು ಹೋದರೆ ಸಮಸ್ಯೆ ಎದುರಾಗುತ್ತದೆ. ಇದಕ್ಕೂ ಮೊದಲು ಎಚ್ಚೆತ್ತುಕೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಗ್ರಾಮಸ್ಥರಿಂದ ಬಾಗಿನ: ಗ್ರಾಮದ ಮುಖಂಡರು, ಗ್ರಾಮಸ್ಥರು, ಮಹಿಳೆಯರು ಗುರವಾರ ಬಾಗಿನ ಅರ್ಪಿಸಿದರು.

ಗ್ರಾಮದ ದೇವಾಲಯದ ಅರ್ಚಕರ ನೇತೃತ್ವದಲ್ಲಿ ವಿಶೇಷ ಪೂಜೆ ನಡೆಸಿ ಬಾಗಿನ ಸಲ್ಲಿಸಿ ಸಿಹಿ ಹಂಚಲಾಯಿತು. ಮುಂದಿನ ದಿನಗಳಲ್ಲಿಯೂ ಕೆರೆ ತುಂಬಿ ಈ ಭಾಗದ ಕೃಷಿ ಚಟುವಟಿಕೆಗೆ ಅನುಕೂಲ ಆಗಲಿ ಎಂದು ಗ್ರಾಮಸ್ಥರು ಪ್ರಾರ್ಥಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT