ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧರೆಗೆ ಬಂದ ವರ್ಷಧಾರೆ ಮನಕೆ ತಂತು ಹರ್ಷಧಾರೆ

Last Updated 1 ಅಕ್ಟೋಬರ್ 2017, 10:35 IST
ಅಕ್ಷರ ಗಾತ್ರ

ಹುಲಿಯೂರುದುರ್ಗದಂಥ ಬಯಲು ನಾಡಿನಲ್ಲೂ ಈ ಬಾರಿಯ ವರ್ಷಧಾರೆ ಕಣ್ಣು ಬಿಟ್ಟ ಕಡೆಯೆಲ್ಲ ಸೃಷ್ಟಿಸಿರುವ ಹಸಿರು, ಜಲಧಾರೆಯ ದೃಶ್ಯ ವೈಭವ ಮನಸೆಳೆಯುಂತೆ ಮಾಡಿದೆ. ಬೇಸಿಗೆಯಲ್ಲಿ ಒಣಗಿದ್ದ ಕಾಡಿನ ಮರಗಳು ಕೊನರೊಡೆದಿವೆ. ಚಿಗುರೊಡೆದಿರುವ ಕುರುಚಲು ಗಿಡಗಂಟಿಗಳು ನವವಧುವಿನಂತೆ ಹರಿದ್ವರ್ಣ ಪೋಷಾಕು ಧರಿಸಿ ಸಿಂಗಾರಗೊಂಡಿವೆ. ವನಸುಮಗಳೂ ಬಯಲಿನ ನವಸುಮಗಳೂ ಪುಷ್ಪರಾಗ ಹಾಡತೊಡಗಿವೆ. ಚಲಿಸುವ ಮೋಡಗಳ ಬಿಸಿಲು ನೆರಳಿನ ಆಟ, ತಂಗಾಳಿಯ ಆರ್ದ್ರ ಅನುಭವ ಕ್ಷಣಕ್ಷಣವೂ ಮೈಮನ ತಣಿಸುತ್ತಲೇ ಜತೆ ಸಾಗುತ್ತವೆ.

ಇಲ್ಲಿನ ಕಾಡಂಚಿನ ಗ್ರಾಮಗಳ ಹೊರವಲಯದ ಹೊಲಬಯಲುಗಳಲ್ಲಿ ಆಹಾರಕ್ಕಾಗಿ ಆಗಾಗ ಠಳಾಯಿಸುತ್ತಿದ್ದ ನವಿಲು, ಚಿಗರೆ, ಮೊಲ, ಚಿರತೆ ಕಾಡುಹಂದಿಗಳು ಈಗ ತಮ್ಮದೇನು ಹಂಗೆಂದು ಅರಣ್ಯಲೋಕದಲ್ಲಿ ನಿರುಮ್ಮಳವಾಗಿ ವಿಹರಿಸಿಕೊಂಡಿವೆ.

ಒಂದಷ್ಟು ಬಿಡುವು ಮಾಡಿಕೊಂಡು ಹೊರಸಂಚಾರದ ಹೆಸರಿನಲ್ಲಿ ಮನೆಯಿಂದ ಕಾಲ್ತೆಗೆದರೆ ಪ್ರಕೃತಿಯ ಜತೆ ಒಡನಾಡಿದ ಅನುಭೂತಿ ಖಂಡಿತ ನಮ್ಮದಾಗುತ್ತದೆ. ವಿಶೇಷ ಕಾಸ್ಟ್ಯೂಮ್‌ಗಳಾಗಿ ಮೊಣಕಾಲು ಮಟ್ಟದ ಬೂಟು, ತಲೆಗೊಂದು ಹ್ಯಾಟು ಮೈಗೊಂದು ರೈನ್‌ಕೋಟ್‌ ಧರಿಸಿಕೊಂಡರೆ ಕ್ಷೇಮ. ಇನ್ನು ಬೆನ್ನೇರುವ ಕ್ಯಾರಿ ಬ್ಯಾಗ್ ಒಳಗೆ ಅವಶ್ಯಕತೆಗೆ ಅನುಸಾರವಾಗಿ ಕುರುಕು ತಿಂಡಿ, ಲಘು ಉಪಹಾರ, ಮಿನರಲ್ ವಾಟರ್ ಇತ್ಯಾದಿ ಪರಿಕರಗಳನ್ನು ತುಂಬಿಕೊಂಡು ಹೊರಟರೆ ಅನುಸರಿಸಿ ಹೊರಟ ಪಿಕ್ನಿಕ್ ಪರಿಪೂರ್ಣ ಅನುಭೂತಿ ತಂದುಕೊಡುವುದು ನಿಶ್ಚಿತ.

ನಮ್ಮ ಮನೋದೈಹಿಕ ಭಾಗವೇ ಆಗಿರುವ ಸ್ಮಾರ್ಟ್ ಫೋನ್, ಆಂಡ್ರಾಯ್ಡ್, ಮೊಬೈಲುಗಳು ಸದಾ ಜತೆಗೇ ಇರುತ್ತವಾದ್ದರಿಂದ ತಿರುಗಾಡಿದಲ್ಲೆಲ್ಲ ಸೆರೆಯಾದ ಫೋಟೊ, ವಿಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ, ಪತ್ರಿಕೆಗಳು ದೃಶ್ಯ ಮಾಧ್ಯಮಗಳಲ್ಲಿ ಸಾರ್ವತ್ರಿಕ ವೀಕ್ಷಣೆಗೆ ಹರಿಯಬಿಟ್ಟು ಷೇರ್ ಮಾಡಿಕೊಂಡರೆ ಒಂದು ಬಗೆಯ ಸಾರ್ಥಕತೆಯೂ, ಅನುಸರಿಸುವ ಬಳಗದ ಸಹಸದಸ್ಯರ ಲೈಕ್‌ಗಳನ್ನು ದಂಡಿಯಾಗಿ ತಮ್ಮದಾಗಿಸಿಕೊಳ್ಳಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT