ಅರೆಹೊಳೆ ಮಹಾಲಿಂಗೇಶ್ವರ ದೇವಾಲಯಕ್ಕೆ ಸಿಡಿಲು ಬಡಿದು ಹಾನಿ

ಮಂಗಳವಾರ, ಜೂನ್ 25, 2019
25 °C

ಅರೆಹೊಳೆ ಮಹಾಲಿಂಗೇಶ್ವರ ದೇವಾಲಯಕ್ಕೆ ಸಿಡಿಲು ಬಡಿದು ಹಾನಿ

Published:
Updated:

ಬೈಂದೂರು: ಬುಧವಾರ ಸಂಜೆ ಭಾರಿ ಮಳೆಯ ನಡುವೆ ಸಿಡಿದ ಸಿಡಿಲಿಗೆ ನಾವುಂದ ಗ್ರಾಮದ ಅರೆಹೊಳೆಯ ಮಹಾಲಿಂಗೇಶ್ವರ ದೇವಾಲಯದ ಶಿಖರಕ್ಕೆ ಹಾನಿ ಸಂಭವಿಸಿದೆ.

ಮಹಾಲಿಂಗೇಸ್ವರ, ಪಾರ್ವತಿ ಮತ್ತು ಗಣಪತಿ ದೇಗುಲಗಳ ಸಂಕೀರ್ಣವನ್ನು 12 ವರ್ಷಗಳ ಹಿಂದೆ ಗರ್ಭಗುಡಿಯ ಮುಚ್ಚಿಗೆಯ ವರೆಗೆ ಶಿಲಾಮಯವಾಗಿ ಮರು ನಿರ್ಮಿಸಿ ಮುಚ್ಚಿಗೆಯ ಮೇಲಿನ ಗೋಪುರವನ್ನು ಇಟ್ಟಿಗೆಗಳಿಂದ ರಚಿಸಿ ಅಲ್ಲಿ ವಿವಿಧ ದೇವತೆಗಳ ಮೂರ್ತಿಗಳನ್ನು ಅಳವಡಿಸಲಾಗಿತ್ತು.

ಸಿಡಿಲು ಈ ಭಾಗಕ್ಕೆ ಬಡಿದಿದ್ದು, ಗೋಪುರದ ನಾಲ್ಕೂ ದಿಕ್ಕುಗಳಲ್ಲಿ ಅಲ್ಲಲ್ಲಿ ಬಿರುಕುಗಳು ಕಂಡುಬಂದಿವೆ. ಗಾರೆ ಕಿತ್ತುಹೋಗಿದೆ. ಒಂದು ಮೂರ್ತಿ ಒಡೆದು ಕೆಳಕ್ಕೆ ಬಿದ್ದಿದ್ದು, ಕೆಲವು ಮೂರ್ತಿಗಳು ಭಿನ್ನವಾಗಿವೆ. ಈ ಸ್ಥಿತಿ ಸುತ್ತಲೂ ಕಂಡುಬಂದಿರುವುದರಿಂದ ಇಡೀ ಗೋಪುರ ಜಖಂಗೊಂಡಿರುವ ಸಾಧ್ಯತೆ ಇದೆ. ಪರಿಣತರು ನಿಕಟವಾಗಿ ಪರಿಶೀಲಿಸಿದ ಬಳಿಕ ಮಾತ್ರಹಾನಿಯ ಸ್ವರೂಪ ಮತ್ತು ಗಾತ್ರವನ್ನು ಖಚಿತಪಡಿಸಿಕೊಳ್ಳಬಹುದು ಎಂದು ಅರ್ಚಕ ನಾಗರಾಜ ಶಾಸ್ತ್ರಿ ಹೇಳಿದರು.

ಬಲೆಯ ರಾಟೆ ಹಿಡಿದು ಮೀನುಗಾರ ಸಾವು

ಬೈಂದೂರು: ಬುಧವಾರ ಸಂಜೆ ಮೀನುಗಾರಿಕೆ ಮುಗಿಸಿ ಮರವಂತೆಯ ಹೊರಬಂದರು ಪ್ರದೇಶಕ್ಕೆ ಬಂದ ಯಾಂತ್ರಿಕ ದೋಣಿಯನ್ನು ದಡಕ್ಕೆ ಎಳೆಯಲು ಬಳಸುತ್ತಿದ್ದ ರಾಟೆ ಬಡಿದು ಅಲ್ಲಿನ ಮೀನುಗಾರ ನರಸಿಂಹ ಖಾರ್ವಿ (49) ಮೃತಪಟ್ಟಿದ್ದಾರೆ.

ಪಾಲುಗಾ ರಿಕೆಯ ಮೇಲೆ ಸ್ವಂತ ದೋಣಿ ಯನ್ನೂ ನಡೆಸು ತ್ತಿದ್ದ ಅವರು ಸುರೇಶ ಖಾರ್ವಿ, ಮೋಹನ ಖಾರ್ವಿ ಹಾಗೂ ಮಹಿಳಾ ಕೂಲಿಯಾಳುಗಳ ಜತೆಸೇರಿ ತಮ್ಮ ದೋಣಿಯಿಂದ ಮೀನು ಕೆಳಗಿಳಿಸುತ್ತಿದ್ದಾಗ  ಬೇರೆ ದೋಣಿಯನ್ನು ಎಳೆಯಲು ಬಳಸಿದ್ದ ರಾಟೆಯ ಹಗ್ಗ ತುಂಡಾಗಿ ಅದರ ಭಾರವಾದ ರಾಟೆ ಇವರಿಗೆ ಬಡಿಯಿತು. ಅವರ ಎರಡೂ ಕಾಲುಗಳು ತೀವ್ರವಾಗಿ ಗಾಯಗೊಂಡುದಲ್ಲದೆ, ಅವರ ಮರ್ಮಾಂಗಕ್ಕೂ ಏಟು ಬಿತ್ತು. ಪ್ರಜ್ಞೆ ಕಳೆದುಕೊಂಡ ಅವರನ್ನು ಆಸ್ಪತ್ರೆಗೆ ಒಯ್ಯುತ್ತಿದ್ದಾಗ ಮೃತರಾದರು. ಕೂಲಿಯಾಳು  ಶಾರದಾ ಮೊಗವೀರ  ಎಂಬುವರ ಕಾಲಿಗೂ ಗಾಯಗಳಾಗಿವೆ.

ಸಮುದಾಯದ ಮುಂಚೂ ಣಿಯಲ್ಲಿದ್ದು ಸಾಮಾಜಿಕ ಮತ್ತು ಧಾರ್ಮಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದ ನರಸಿಂಹ ಖಾರ್ವಿ ಮೂರು ಅವಧಿಗೆ ಮರವಂತೆಯ ಮಹಾರಾಜಸ್ವಾಮಿ ವರಾಹ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರಾಗಿ ದುಡಿದಿದ್ದರು. ಸುರೇಶ ಎಂ. ಖಾರ್ವಿ ಅವರು ನೀಡಿರುವ ದೂರಿನಂತೆ ಗಂಗೊಳ್ಳಿ ಠಾಣೆಯಲ್ಲಿ ಆಕಸ್ಮಿಕ ಸಾವಿನ ಪ್ರಕರಣ ದಾಖಲಾಗಿದೆ.

ಮೂವರ ಬಂಧನ

ಬೈಂದೂರು : ನಾವುಂದ ಗ್ರಾಮದ ಮೂರು ಕಡೆ ಪೊಲೀಸರು ಪ್ರತ್ಯೇಕವಾಗಿ ದಾಳಿ ನಡೆಸಿ ಮಟ್ಕಾ ಹಣ ಸಂಗ್ರಹಿಸುತ್ತಿದ್ದ ಮೂವರನ್ನು ಬಂಧಿಸಿದ್ದಾರೆ. ನಾವುಂದ ಗ್ರಾಮದ ಎಂಜಿ ರೋಡ್ ಬಳಿ ಮಸ್ಕಿಯ ಭಾಸ್ಕರ ಪೂಜಾರಿ ಅವರಿಂದ ₹ 670 ಮತ್ತು ಚೀಟಿ ಹಾಗೂ ಇದೇ ಗ್ರಾಮದ ವಿನಾಯಕ ಹೋಟೆಲ್ ಬಳಿ ಉಳ್ಳೂರು ಗ್ರಾಮದ ಸೀತಾರಾಮ ಶೆಟ್ಟಿ ಅವರಿಂದ ₹ 550 ಮತ್ತು ಸಂಖ್ಯೆ ಬರೆದ ಚೀಟಿ ವಶಕ್ಕೆ ಪಡೆಯಿತು.

ಅನ್ನಪೂರ್ಣೇಶ್ವರಿ ಜನರಲ್ ಸ್ಟೋರ್ಸ್ ಮತ್ತು ಚೈನೀಸ್ ಫಾಸ್ಟ್‌ಫುಡ್ ಅಂಗಡಿ ಬಳಿ ಹಣ ಸಂಗ್ರಹಿಸುತ್ತಿದ್ದ ಕರ್ಕುಂಜೆ ಗ್ರಾಮದ ನೇರಳಕಟ್ಟೆಯ ಸುರೇಶ್ ಮೊಗವೀರ ಅವರನ್ನು ಬಂಧಿಸಿ ಅವರಿಂದ ₹ 1390 ಮತ್ತು ಚೀಟಿ ವಶಪಡಿಸಿಕೊಂಡರು.ಎಸ್‌ಐ ದೇವರಾಜ್ ಎಚ್‌. ಎಂ. ಮತ್ತು ಸಿಬ್ಬಂದಿ ಮತ್ತು ಉಡುಪಿ ಡಿಸಿಐಬಿ ಎಸ್‌ಐ ರೊಸಾರಿಯೊ ಡಿಸೋಜ ಮತ್ತು ಸಿಬ್ಬಂದಿ ಗುರುವಾರ ಕಾರ್ಯಾಚರಣೆ ನಡೆಯಿತು.

ಮಟ್ಕಾ: ಒಬ್ಬನ ಬಂಧನ

ಬೈಂದೂರು : ಶುಕ್ರವಾರ ಉಪ್ಪುಂದ ಗ್ರಾಮದ ಅಂಬಾಗಿಲು ಮಾರ್ಕೆಟ್ ಬಳಿ ಮಟ್ಕಾ ಹಣ ಸಂಗ್ರಹಿಸುತ್ತಿದ್ದ ಅಲ್ಲಿನ ಕಂಠದಮನೆ ರಾಘವೇಂದ್ರ ಗಾಣಿಗ ಎಂಬವರನ್ನು ಪೊಲೀಸರು ಬಂಧಿಸಿ, ಅವರು ಸಂಗ್ರಹಿಸಿದ್ದ ₹630 ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.

ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

ಬೈಂದೂರು : ಕಿರಿಮಂಜೇಶ್ವರ ಗ್ರಾಮದ ಕೊಡೇರಿಯಲ್ಲಿ ಶುಕ್ರವಾರ ಸಮುದ್ರದಲ್ಲಿ ಪಾತಿದೋಣಿಯಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಮೀನುಗಾರ ಸಮುದ್ರಕ್ಕೆ ಬಿದ್ದು ಮೃತರಾದರು. ನಾರಾಯಣ ಖಾರ್ವಿ ಮೃತರಾದವರು. ತಮ್ಮ ಈಶ್ವರ ಖಾರ್ವಿ ಜತೆ ಇದ್ದಾಗ ಅಲೆ ಅಪ್ಪಳಿಸಿ ದೋಣಿ ಮಗುಚಿದ್ದರಿಂದ ಘಟನೆ ನಡೆದಿದೆ. ಕುಂದಾಪುರ ಸರ್ಕಾರಿ ಆಸ್ಪತ್ರೆ ತಲಪುವ ಮೊದಲೇ ಅವರು ಮೃತರಾದರು. ಬೈಂದೂರು ಠಾಣೆಯಲ್ಲಿ ದೂರು ದಾಖಲಾಗಿದೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry