ನವ ತಾರೆಗಳ ಉಗಮಕ್ಕೆ ಹಾದಿ

ಭಾನುವಾರ, ಜೂನ್ 16, 2019
29 °C

ನವ ತಾರೆಗಳ ಉಗಮಕ್ಕೆ ಹಾದಿ

Published:
Updated:
ನವ ತಾರೆಗಳ ಉಗಮಕ್ಕೆ ಹಾದಿ

‘ಫುಟ್‌ಬಾಲ್‌ ಲೋಕದ ಯುವ ತಾರೆಗಳ ಉಗಮಕ್ಕೆ 17 ವರ್ಷದೊಳಗಿನವರ ವಿಶ್ವಕಪ್‌ ಟೂರ್ನಿ ಮಹತ್ವದ ವೇದಿಕೆಯಾಗಿದೆ. ಕಿರಿಯ ಆಟಗಾರರು ತಮ್ಮೊಳಗೆ ಹುದುಗಿರುವ ಪ್ರತಿಭೆಯನ್ನು ಜಗಜ್ಜಾಹೀರುಗೊಳಿಸಲು ಈ ಟೂರ್ನಿ ನೆರವಾಗಿದೆ’... ಬ್ರೆಜಿಲ್‌ನ ಫುಟ್‌ಬಾಲ್‌ ದಂತಕತೆ ರೊನಾಲ್ಡಿನೊ ಅವರು ಇತ್ತೀಚೆಗೆ ಹೇಳಿದ್ದ ಮಾತುಗಳಿವು.

ಕಿರಿಯರ ವಿಶ್ವಕಪ್‌ನ ಪ್ರಾಮುಖ್ಯತೆ ಎಂತಹುದು ಎಂಬುದು ರೊನಾಲ್ಟಿನೊ ಅವರ ಮಾತುಗಳಲ್ಲಿ ಸ್ಪಷ್ಟವಾಗುತ್ತದೆ.  ವಿಶ್ವಕಪ್‌ನಲ್ಲಿ ಮಿಂಚಿದ ಅನೇಕರು ಸೀನಿಯರ್‌ ವಿಭಾಗದಲ್ಲೂ ಮೋಡಿ ಮಾಡಿ ಫುಟ್‌ಬಾಲ್‌ ಜಗತ್ತಿನ ಕಣ್ಮಣಿಗಳಾಗಿದ್ದಾರೆ. ರೊನಾಲ್ಡಿನೊ, ಜರ್ಮನಿಯ ಮರಿಯೊ ಗೊಟ್ಜೆ, ಸ್ಪೇನ್‌ನ ಇಸ್ಕೊ ಹೀಗೆ ಈ ಪಟ್ಟಿ ದೊಡ್ಡದಿದೆ.

87 ವರ್ಷಗಳ ಇತಿಹಾಸದಲ್ಲಿ ಪುರುಷರ, ಮಹಿಳೆಯರ ಹಾಗೂ ಕಿರಿಯರ ವಿಭಾಗಗಳೂ ಸೇರಿದಂತೆ ಒಟ್ಟು 77 ವಿಶ್ವಕಪ್‌ ಟೂರ್ನಿಗಳು ಜರುಗಿವೆ. ಹೀಗಿದ್ದರೂ ಭಾರತಕ್ಕೆ ಟೂರ್ನಿಯಲ್ಲಿ ಆಡುವ ಇಲ್ಲವೆ ಆತಿಥ್ಯ ವಹಿಸುವ ಅವಕಾಶ ಸಿಕ್ಕಿರಲಿಲ್ಲ. ಆ ಕೊರಗು ಈಗ ನೀಗಿದೆ. ಈ ಬಾರಿಯ 17 ವರ್ಷದೊಳಗಿನವರ ವಿಶ್ವಕಪ್‌ ಭಾರತದ ನೆಲದಲ್ಲಿ ನಡೆಯುತ್ತಿದೆ. ಹೀಗಾಗಿ ಆತಿಥೇಯರಿಗೆ ಟೂರ್ನಿಯಲ್ಲಿ ಪದಾರ್ಪಣೆ ಮಾಡುವ ಅವಕಾಶವೂ ಸಿಕ್ಕಿದೆ.

ಘಾನಾ, ಬ್ರೆಜಿಲ್‌, ಚಿಲಿ, ಹೊಂಡುರಸ್‌ನಂತಹ ಬಲಿಷ್ಠ ತಂಡಗಳು ಟೂರ್ನಿಯಲ್ಲಿ ಆಡುತ್ತಿವೆ. ಹೀಗಾಗಿ ಭಾರತ ತಂಡ ಪ್ರಶಸ್ತಿ ಗೆಲ್ಲುತ್ತದೆ ಎಂದು ಹೇಳುವುದು ಕಷ್ಟ. ಆತಿಥೇಯ ಅಭಿಮಾನಿಗಳ ಬೆಂಬಲದೊಂದಿಗೆ ಕಣಕ್ಕಿಳಿಯುತ್ತಿರುವ ತಂಡ ಗುಂಪು ಹಂತದಲ್ಲಿ ಶ್ರೇಷ್ಠ ಆಟ ಆಡಿ 16 ರ ಘಟ್ಟಕ್ಕೆ ಲಗ್ಗೆ ಇಟ್ಟರೂ ಅದೊಂದು ಅಪೂರ್ವ ಸಾಧನೆಯಾಗಲಿದೆ. ಈ ಹಾದಿಯಲ್ಲಿ ತಂಡ ದಿಟ್ಟ ಹೆಜ್ಜೆ ಇಡಬೇಕಿದೆ.

*

ವಯಸ್ಸಿನ ವಂಚನೆ ಮತ್ತು ಉದ್ದೀಪನಾ ಮದ್ದು ಸೇವನೆ ತಡೆಗೆ ವಿಶೇಷ ಕ್ರಮ

ಫುಟ್‌ಬಾಲ್‌ನಲ್ಲಿ ವಯಸ್ಸಿನ ವಂಚನೆ ಮತ್ತು ನಿಷೇಧಿತ ಉದ್ದೀಪನಾ ಮದ್ದು ಸೇವನೆ ಪ್ರಕರಣಗಳು ಆರಂಭದಲ್ಲಿ ಹೆಚ್ಚು ಬೆಳಕಿಗೆ ಬರುತ್ತಿದ್ದವು. ವಯಸ್ಸಿನ ನಕಲಿ ಪ್ರಮಾಣ ಪತ್ರ ನೀಡಿ ವಂಚಿಸುವುದನ್ನು ನಿಯಂತ್ರಿಸುವ ಸಲುವಾಗಿ ಫಿಫಾ 2009ರಲ್ಲಿ ಎಂ.ಆರ್‌.ಐ ಸ್ಕ್ರೀನಿಂಗ್‌ ಪದ್ಧತಿ ಜಾರಿಗೊಳಿಸಿತ್ತು. ಇದು ಅನುಷ್ಠಾನಗೊಂಡ ನಂತರ ಈ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಇಳಿಕೆ ಕಂಡಿದೆ.

ಈ ಪ್ರಕ್ರಿಯೆ ಹೇಗಿರುತ್ತದೆ ಎಂಬುದರ ಬಗ್ಗೆ ಫಿಫಾ ವೈದ್ಯಕೀಯ ಮತ್ತು ಉದ್ದೀಪನಾ ತಡೆ ಅಧಿಕಾರಿ, ಕರ್ನಾಟಕದ ಕಿರಣ್‌ ಕುಲಕರ್ಣಿ ‘ಪ್ರಜಾವಾಣಿ’ ಜೊತೆ ಮಾತನಾಡಿದ್ದಾರೆ.

‘ವಯಸ್ಸಿನ ವಂಚನೆ ಪ್ರಕರಣಗಳು ಬಾಲಕರ ವಿಭಾಗದಲ್ಲಿ ಹೆಚ್ಚು ನಡೆದಿರುವುದು ಸಂಶೋಧನೆಯಿಂದ ಪತ್ತೆಯಾಗಿದೆ. ಹೀಗಾಗಿ ಬಾಲಕರಿಗೆ ಮಾತ್ರ ಎಂ.ಆರ್‌.ಐ ಸ್ಕ್ಯಾನಿಂಗ್‌ ಮಾಡಲಾಗುತ್ತದೆ. ಬಾಲಕಿಯರಿಗೆ ಇದು ಅನ್ವಯಿಸುವುದಿಲ್ಲ. ಪರೀಕ್ಷೆಯ ವೇಳೆ 16 ವರ್ಷದೊಳಗಿನವರ ಬಾಲಕರ ಎಡ ಮಣಿಕಟ್ಟಿನ ಭಾಗದ ಸ್ಕ್ಯಾನ್‌ ಮಾಡಲಾಗುತ್ತದೆ. ಈ ವೇಳೆ  ರೇಡಿಯಸ್‌ ಎಂಬ ಮೂಳೆ ಸಂಪೂರ್ಣವಾಗಿ ಜೋಡಣೆಯಾಗಿದೆಯೊ ಇಲ್ಲವೊ ಎಂಬುದನ್ನು ನೋಡುತ್ತೇವೆ. ಮೂಳೆ ಜೋಡಣೆಯಾಗಿದ್ದರೆ, ಆತ 16 ವರ್ಷ ಮೇಲ್ಪಟ್ಟವನಾಗಿರುತ್ತಾನೆ. ಇಲ್ಲದಿದ್ದರೆ 16 ವರ್ಷದೊಳಗಿನವನಾಗಿರುತ್ತಾನೆ’ ಎಂದು ಕಿರಣ್‌ ಹೇಳುತ್ತಾರೆ.

‘ವಿಶ್ವಕಪ್‌ ಅಥವಾ ಇತರ ಯಾವುದೇ ಟೂರ್ನಿಯಲ್ಲಿ ಪಾಲ್ಗೊಳ್ಳುವ ಮುನ್ನ ಮುಂಜಾಗ್ರತಾ ಕ್ರಮವಾಗಿ ಎಲ್ಲಾ ಫೆಡರೇಷನ್‌ಗಳು ಸಂಭಾವ್ಯ ತಂಡದಲ್ಲಿರುವ ಎಲ್ಲಾ ಆಟಗಾರರ ಎಂ.ಆರ್‌.ಐ ಸ್ಕ್ಯಾನಿಂಗ್‌ ಮಾಡಿಸುತ್ತವೆ.  ಇದರಲ್ಲಿ 16 ವರ್ಷ ಮೇಲ್ವಟ್ಟವರು ಕಂಡು ಬಂದರೆ ಅಂತಹ ಆಟಗಾರರನ್ನು ತಂಡದಿಂದ ಕೈಬಿಡುತ್ತಾರೆ. ಒಂದೊಮ್ಮೆ ಫೆಡರೇಷನ್‌ಗಳು  ಅವರನ್ನು ಟೂರ್ನಿಯಲ್ಲಿ ಆಡಿಸಿದ್ದು ಸಾಬೀತಾದರೆ ಆ ತಂಡಕ್ಕೆ ದೊಡ್ಡ ಮೊತ್ತದ ದಂಡ ಮತ್ತು ಎರಡು ವರ್ಷದವರೆಗೂ ನಿಷೇಧ ಹೇರುವ ಸಾಧ್ಯತೆಯೂ ಇದೆ’ ಎಂದರು.

‘ಪಂದ್ಯಗಳಿಗೂ ಮುನ್ನ ಪಂದ್ಯದ ಕಮಿಷನರ್‌ ಜೊತೆ ವೈದ್ಯಕೀಯ ಅಧಿಕಾರಿಯಾದವರು ಎಲ್ಲಾ ತಂಡಗಳ ಡ್ರೆಸಿಂಗ್‌ ಕೊಠಡಿಗಳಿಗೆ ಭೇಟಿ  ನೀಡುತ್ತಾರೆ. ಈ ವೇಳೆ  ಆಟಗಾರನ ಗಡ್ಡ, ಮೀಸೆ, ಸ್ನಾಯು ಮತ್ತು ಮೂಳೆಯ ಬೆಳವಣಿಗೆಗಳನ್ನು ಗಮನಿಸುತ್ತೇವೆ. ಈ ವೇಳೆ ಅನುಮಾನ ಬಂದರೆ ಅಂತಹವರ ಹೆಸರನ್ನು ಬರೆದುಕೊಂಡು, ಬಳಿಕ ಅಭ್ಯಾಸದ ವೇಳೆ  ಆ ಆಟಗಾರರ ಆಟವನ್ನು ವೀಕ್ಷಿಸುತ್ತೇವೆ. ಆಗಲೂ ಅನುಮಾನ ಬಂದರೆ ಅವರಿಗೆ ನಿಗದಿತ ದಿನದಂದು ಪರೀಕ್ಷೆಗೆ ಹಾಜರಾಗುವಂತೆ ಸಮನ್ಸ್‌ ನೀಡುತ್ತೇವೆ. ಪರೀಕ್ಷೆಗೆ ಹಾಜರಾದ ಆಟಗಾರನ  ಎಂ.ಆರ್‌.ಐ ಸ್ಕ್ಯಾನ್‌ಗಳ ಚಿತ್ರಗಳನ್ನು ಫಿಫಾದಿಂದ ನೇಮಕವಾಗಿರುವು ಮೂರು ಮಂದಿ ತಜ್ಞ ರೇಡಿಯಾಲಜಿಸ್ಟ್‌ಗಳಿಗೆ ಕೋಡಿಂಗ್‌ ಮಾಡಿ ಕಳುಹಿಸಲಾಗುತ್ತದೆ. ಆ ಚಿತ್ರಗಳು ಯಾರದು, ಆಟಗಾರ ಯಾವ ದೇಶದವನು ಎಂಬುದು ಯಾರಿಗೂ ಗೊತ್ತಿರುವುದಿಲ್ಲ. ಮೂರು ಮಂದಿಯ ಪೈಕಿ ಇಬ್ಬರು ವಯಸ್ಸಿನ ವಂಚನೆಯಾಗಿರುವುದನ್ನು ಖಾತ್ರಿ ಪಡಿಸಿದರೆ, ಆ ತಂಡವನ್ನು ಟೂರ್ನಿಯಿಂದಲೇ ಹೊರ ಹಾಕಲಾಗುತ್ತದೆ’ ಎಂದು ವಿವರಿಸಿದರು.

‘ಡೋಪಿಂಗ್‌ ಪರೀಕ್ಷೆಯೂ ಭಿನ್ನವಾಗಿರುತ್ತವೆ. ಪಂದ್ಯಕ್ಕೆ ಮುನ್ನ ಎಲ್ಲಾ ಆಟಗಾರರ ಪರೀಕ್ಷೆ ನಡೆಸುವುದು ತುಂಬಾ ಕಷ್ಟ. ಹೀಗಾಗಿ ಪಂದ್ಯದ ಮೊದಲರ್ಧದ ಬಳಿಕ ಎರಡೂ ತಂಡಗಳ ಮ್ಯಾನೇಜರ್‌ ಇಲ್ಲವೇ ಕೋಚ್‌ಗಳನ್ನು ಅನ್ನು ಕರೆದು ಒಂದು ತಂಡದಿಂದ ತಲಾ ನಾಲ್ಕು ಮಂದಿಯ ಹೆಸರಿರುವ ಚೀಟಿಯನ್ನು ಲಕ್ಕಿ ಡಿಪ್‌ನಂತೆ ಆಯ್ಕೆ ಮಾಡುತ್ತೇವೆ. 77 ನೇ ನಿಮಿಷದಲ್ಲಿ ಅವರನ್ನು ಮತ್ತೆ ಕರೆದು ಆ ಚೀಟಿಗಳನ್ನು ತೆರೆಯಲಾಗುತ್ತದೆ. ಅವುಗಳಲ್ಲಿ   ಯಾರ ಹೆಸರಿರುತ್ತದೆಯೊ ಅಂತಹ ಆಟಗಾರರ ಮೂತ್ರದ ಮಾದರಿಗಳನ್ನು ಸಂಗ್ರಹಿಸಿ ಅದನ್ನು ನವದೆಹಲಿಯಲ್ಲಿರುವ ರಾಷ್ಟ್ರೀಯ ಉದ್ದೀಪನಾ ಮದ್ದು ತಡೆ ಘಟದ ಪರೀಕ್ಷಾ ಕೇಂದ್ರಕ್ಕೆ ಕಳುಹಿಸುತ್ತೇವೆ. ಈ ವೇಳೆ ಉದ್ದೀಪನಾ ಮದ್ದು ಸೇವಿಸಿದ್ದು ಸಾಬೀತಾದರೆ ಅಂತಹ ಆಟಗಾರನ ಮೇಲೆ ಕಠಿಣ ಕ್ರಮ ಕೈಗೊಳ್ಳುತ್ತೇವೆ’ ಎಂದರು.

ಫಿಫಾ 17 ವರ್ಷದೊಳಗಿನ ವಿಶ್ವಕಪ್‌ ಆರಂಭದ ಹಿನ್ನೆಲೆ

ಆರಂಭ: 
ಸಿಂಗಪುರದಲ್ಲಿ ಮೊದಲು 16 ವರ್ಷದೊಳಗಿನವರಿಗಾಗಿ ಲಯನ್‌ ಸಿಟಿ ಕಪ್‌ ಫುಟ್‌ಬಾಲ್‌ ಚಾಂಪಿಯನ್‌ಷಿಪ್‌ ನಡೆಸಲಾಗುತ್ತಿತ್ತು. ಇದರಿಂದ ಪ್ರೇರಣೆಯಿಂದಾಗಿ ಫಿಫಾ 17 ವರ್ಷದೊಳಗಿನವರ ವಿಶ್ವಕಪ್‌ ಆರಂಭಿಸಿತು.

1985 – ಫಿಫಾ ಮೊದಲ ಬಾರಿಗೆ ಚೀನಾದಲ್ಲಿ 16 ವರ್ಷದೊಳಗಿನವರ ವಿಶ್ವಕಪ್‌ ಆಯೋಜಿಸಿತ್ತು.

1991ರಲ್ಲಿ ಫಿಫಾ, ಟೂರ್ನಿಯ ವಯೋಮಿತಿಯನ್ನು ಹೆಚ್ಚಿಸಿತು. ಹೀಗಾಗಿ 1991ರಿಂದ 17 ವರ್ಷದೊಳಗಿನವರ ವಿಶ್ವಕಪ್‌ ಆರಂಭವಾಯಿತು

2 ವರ್ಷಕ್ಕೊಮ್ಮೆ ಈ ವಿಶ್ವಕಪ್‌ ಟೂರ್ನಿಯನ್ನು ಆಯೋಜಿಸಲಾಗುತ್ತದೆ.

ಭಾಗವಹಿಸುವ ತಂಡಗಳು ಎಷ್ಟು?

1985ರಿಂದ 2005ರವರೆಗೆ ನಡೆದ ಟೂರ್ನಿಗಳಲ್ಲಿ ಒಟ್ಟು 16 ತಂಡಗಳು ಪ್ರಶಸ್ತಿಗಾಗಿ ಪೈಪೋಟಿ ನಡೆಸಿದ್ದವು. 2007ರಿಂದ ಈ ಸಂಖ್ಯೆಯನ್ನು 24ಕ್ಕೆ ಹೆಚ್ಚಿಸಲಾಯಿತು.

ಟೂರ್ನಿಯಲ್ಲಿ ಭಾಗವಹಿಸುವ ಒಟ್ಟು ತಂಡಗಳನ್ನು ಆರು ಗುಂಪುಗಳನ್ನಾಗಿ ವಿಭಾಗಿಸಲಾಗುತ್ತದೆ. ಗುಂಪು ಹಂತದಲ್ಲಿ ತಂಡಗಳು ಪರಸ್ಪರ ಒಮ್ಮೆ ಮುಖಾಮುಖಿಯಾಗುತ್ತವೆ. ಅಗ್ರ ಎರಡು ಸ್ಥಾನ ಗಳಿಸುವ ತಂಡಗಳು 16ರ ಘಟ್ಟಕ್ಕೆ ಲಗ್ಗೆ ಇಡುತ್ತವೆ.

ಹೆಚ್ಚುವರಿ ಸಮಯ ಇಲ್ಲ

ಸೀನಿಯರ್‌ ವಿಭಾಗದ ಟೂರ್ನಿಗಳಲ್ಲಿ 90 ನಿಮಿಷಗಳ ಅವಧಿ ಮುಗಿದ ಬಳಿಕ ಹೆಚ್ಚುವರಿ ಅವಧಿ ನೀಡಲಾಗುತ್ತದೆ. ಆದರೆ 17 ವರ್ಷದೊಳಗಿನವರ ವಿಶ್ವಕಪ್‌ ಟೂರ್ನಿಯಲ್ಲಿ ಈ ನಿಯಮ ಇಲ್ಲ. ನಿಗದಿತ ಅವಧಿಯಲ್ಲಿ ತಂಡಗಳು ಗೋಲು ಗಳಿಸಲು ವಿಫಲವಾದರೆ ವಿಜೇತರನ್ನು ನಿರ್ಧರಿಸಲು ಟೈ ಬ್ರೇಕರ್‌ ಅಥವಾ ಪೆನಾಲ್ಟಿ ಶೂಟೌಟ್‌ ಮೊರೆ ಹೋಗಲಾಗುತ್ತದೆ.

*

ಅಭಿಮಾನಿಗಳ ಮನ ಗೆದ್ದ ತಾರೆಯರು

17 ವರ್ಷದೊಳಗಿನವರ ವಿಶ್ವಕಪ್‌ನಲ್ಲಿ ಮೋಡಿ ಮಾಡಿ ಬಳಿಕ ಸೀನಿಯರ್‌ ತಂಡದಲ್ಲಿ ಸ್ಥಾನ ಗಳಿಸಿದ ಅನೇಕ ಆಟಗಾರರು ಫುಟ್‌ಬಾಲ್‌ ಲೋಕದಲ್ಲಿ ಅಚ್ಚಳಿಯದ ಹೆಜ್ಜೆಗುರುತುಗಳನ್ನು ಮೂಡಿಸಿದ್ದಾರೆ. ಈ ಪೈಕಿ ಕೆಲವರ ಪರಿಚಯ ಇಲ್ಲಿದೆ.

*1.ಮರಿಯೊ ಗೊಟ್ಜೆ, ಜರ್ಮನಿ

2014ರ ಫಿಫಾ ವಿಶ್ವಕಪ್‌ನಲ್ಲಿ ಜರ್ಮನಿ ತಂಡ ಪ್ರಶಸ್ತಿ ಎತ್ತಿಹಿಡಿಯುವಲ್ಲಿ ಮರಿಯೊ ಗೊಟ್ಜೆ ಪಾತ್ರ ನಿರ್ಣಾಯಕವಾದುದು. ಅರ್ಜೆಂಟೀನಾ ವಿರುದ್ಧದ ಫೈನಲ್‌ನಲ್ಲಿ ಮರಿಯೊ ಸೊಗಸಾದ ವಾಲಿ ಮೂಲಕ ಚೆಂಡನ್ನು ಗುರಿ ಸೇರಿಸಿದ್ದು ಸ್ಮರಣೀಯ ಕ್ಷಣಗಳಲ್ಲೊಂದು. 2009ರಲ್ಲಿ ನಡೆದಿದ್ದ 17 ವರ್ಷದೊಳಗಿನವರ ವಿಶ್ವಕಪ್‌ನಲ್ಲಿ ಜರ್ಮನಿಯನ್ನು ಪ್ರತಿನಿಧಿಸಿದ್ದ ಮರಿಯೊ 3 ಗೋಲು ಗಳಿಸಿ ಗಮನ ಸೆಳೆದಿದ್ದರು. 2010–11ರಲ್ಲಿ ಡಾರ್ಟ್‌ಮಂಡ್‌ ತಂಡ ಬುಂಡಸ್‌ಲೀಗ್‌ನಲ್ಲಿ ಚಾಂಪಿಯನ್‌ ಆಗುವಲ್ಲೂ ಗೊಟ್ಜ್‌ ಪ್ರಮುಖ ಪಾತ್ರ ನಿರ್ವಹಿಸಿದ್ದರು.

*2.ಇಸ್ಕೊ, ಸ್ಪೇನ್‌

ಎಳವೆಯಿಂದಲೇ ಫುಟ್‌ಬಾಲ್‌ ಬಗ್ಗೆ ವಿಶೇಷ ಪ್ರೀತಿ ಹೊಂದಿದ್ದ ಇಸ್ಕೊ, 2009ರ 17 ವರ್ಷದೊಳಗಿನವರ ವಿಶ್ವಕಪ್‌ನಲ್ಲಿ ಆಡಿ ಸೈ ಎನಿಸಿಕೊಂಡಿದ್ದರು. ಟೂರ್ನಿಯಲ್ಲಿ ಸ್ಪೇನ್‌ ತಂಡ ಮೂರನೇ ಸ್ಥಾನ ಗಳಿಸುವಲ್ಲಿ ಇಸ್ಕೊ ಪಾತ್ರವೂ ಮಹತ್ವದ್ದಾಗಿತ್ತು.

ಚೆಂಡನ್ನು ಮನಮೋಹಕ ರೀತಿಯಲ್ಲಿ ಡ್ರಿಬಲ್‌ ಮಾಡುತ್ತಾ ಎದುರಾಳಿ ತಂಡದ ರಕ್ಷಣಾ ಕೋಟೆಯನ್ನು ಭೇದಿಸುವ ಕಲೆಯನ್ನು ಕರಗತ ಮಾಡಿಕೊಂಡಿರುವ ಇಸ್ಕೊ, ಇತ್ತೀಚೆಗೆ ನಡೆದ ಇಟಲಿ ವಿರುದ್ಧದ ವಿಶ್ವಕಪ್‌ ಅರ್ಹತಾ ಟೂರ್ನಿಯ ಪಂದ್ಯದಲ್ಲೂ ಅಪೂರ್ವ ಸಾಮರ್ಥ್ಯ ತೋರಿದ್ದರು.

*3.ರೊನಾಲ್ಡಿನೊ, ಬ್ರೆಜಿಲ್‌

ಫುಟ್‌ಬಾಲ್‌ ಲೋಕದ ದಿಗ್ಗಜ ರೊನಾಲ್ಡಿನೊ ಕೂಡ ಕಿರಿಯರ ವಿಶ್ವಕ‍ಪ್‌ ಮೂಲಕ ಪ್ರವರ್ಧಮಾನಕ್ಕೆ ಬಂದ ಆಟಗಾರ. 1997ರಲ್ಲಿ ಬ್ರೆಜಿಲ್‌ ತಂಡ 17 ವರ್ಷದೊಳಗಿನವರ ವಿಶ್ವಕಪ್‌ನಲ್ಲಿ ಚೊಚ್ಚಲ ಪ್ರಶಸ್ತಿ ಗೆಲ್ಲುವಲ್ಲಿ ರೊನಾಲ್ಡಿನೊ ಪಾತ್ರ ಬಹುಮುಖ್ಯವಾದುದು. ಓವರ್‌ ಹೆಡ್‌ ಕಿಕ್‌, ಸೊಬಗಿನ ಡ್ರಿಬ್ಲಿಂಗ್‌ ಮತ್ತು ಚೆಂಡನ್ನು ತಲೆತಾಗಿಸಿ ಗುರಿ ಸೇರಿಸುವಲ್ಲಿ ಇವರು ನಿಸ್ಸೀಮರು.

*4.ಸೆಸ್ಕ್‌ ಫ್ಯಾಬ್ರೆಗಸ್‌, ಸ್ಪೇನ್‌

ಚುರುಕಿನ ಪಾಸ್ ಮತ್ತು ಕ್ಷಿಪ್ರಗತಿಯಲ್ಲಿ ಚೆಂಡನ್ನು ಗುರಿ ಮುಟ್ಟಿಸುವ ಕಲೆಗಳನ್ನು ಕರಗತ ಮಾಡಿಕೊಂಡಿರುವ ಫ್ಯಾಬ್ರೆಗಸ್‌, 16ನೇ ವಯಸ್ಸಿನಲ್ಲೇ ಪ್ರತಿಷ್ಠಿತ ಆರ್ಸೆನಾಲ್‌ ಕ್ಲಬ್‌ ಪರ ಆಡಲು ಆಯ್ಕೆಯಾಗಿದ್ದ ಪ್ರತಿಭಾವಂತ. 2003ರ 17 ವರ್ಷದೊಳಗಿನವರ ವಿಶ್ವಕಪ್‌ನಲ್ಲಿ ಸ್ಪೇನ್‌ ತಂಡ ರನ್ನರ್ಸ್‌ ಅಪ್‌ ಸ್ಥಾನ ಗಳಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಅವರು ಆ ನಂತರ ಫುಟ್‌ಬಾಲ್‌ ಜಗತ್ತಿಗೆ ಚಿರಪರಿಚಿತರಾಗಿದ್ದಾರೆ.

*

5.ನ್ವಾನ್‌ಕ್ವೊ ಕಾನು, ನೈಜೀರಿಯಾ

ಆಫ್ರಿಕಾದ ಶ್ರೇಷ್ಠ ಆಟಗಾರರಲ್ಲಿ ಒಬ್ಬರೆನಿಸಿರುವ ನ್ವಾನ್‌ಕ್ವೊ ಕಾನು ಕೂಡ ಕಿರಿಯರ ವಿಶ್ವಕಪ್‌ನಲ್ಲಿ ಅರಳಿದ ಪ್ರತಿಭೆ. 1993ರ ವಿಶ್ವಕಪ್‌ನಲ್ಲಿ ನೈಜೀರಿಯಾ ಪರ ಆಡಿ ಜಾದೂ ಮಾಡಿದ್ದರು. ಅದೇ ವರ್ಷ ಅಜಾಕ್ಸ್ ಕ್ಲಬ್‌ ಪರ ಆಡಿದ್ದ ಇವರು, 2003–04ರಲ್ಲಿ ಆರ್ಸೆನಾಲ್‌ ತಂಡವನ್ನು ಪ್ರತಿನಿಧಿಸಿದ್ದರು.

**

ಪಂದ್ಯಗಳು ನಡೆಯುವ ಕ್ರೀಡಾಂಗಣಗಳ ಪರಿಚಯ

1.ಜವಾಹರಲಾಲ್‌ ನೆಹರು ಕ್ರೀಡಾಂಗಣ, ಕೊಚ್ಚಿ

ರಾಜ್ಯ: ಕೇರಳ

ಉದ್ಘಾಟನೆ: 1996

ಒಡೆತನ: ಗ್ರೇಟರ್‌ ಕೊಚ್ಚಿ ಅಭಿವೃದ್ಧಿ ಪ್ರಾಧಿಕಾರ

ನವೀಕರಣ: 2017

ಸಾಮರ್ಥ್ಯ:41,748

ನಡೆಯುವ ಪಂದ್ಯಗಳು

ಡಿ ಗುಂಪಿನ 5 ಹಣಾಹಣಿ

ಸಿ ಗುಂಪಿನ 1 ಪಂದ್ಯ

ಕ್ವಾರ್ಟರ್‌ ಫೈನಲ್ ಸೇರಿದಂತೆ ಎರಡು ನಾಕೌಟ್‌ ಹೋರಾಟಗಳು.

ಅಭ್ಯಾಸದ ಮೈದಾನಗಳು

ಪನಂಪಿಲ್ಲಿ,  ಮಹಾರಾಜಾಸ್‌

ವೇಲಿ,  ಪ್ಯಾರೇಡ್‌

********

ಜವಾಹರಲಾಲ್‌ ನೆಹರು ಕ್ರೀಡಾಂಗಣ, ಮಡಗಾಂವ್‌

ರಾಜ್ಯ: ಗೋವಾ

ಉದ್ಘಾಟನೆ: 1989

ಮಾಲೀಕತ್ವ: ಗೋವಾ ಕ್ರೀಡಾ ಪ್ರಾಧಿಕಾರ

ಸಾಮರ್ಥ್ಯ: 19,080

ನಡೆಯುವ ಪಂದ್ಯಗಳು

ಸಿ ಗುಂಪಿನ 5 ಮತ್ತು ಡಿ ಗುಂಪಿನ 1

1 ಪ್ರೀ ಕ್ವಾರ್ಟರ್‌ ಫೈನಲ್‌

1 ಕ್ವಾರ್ಟರ್‌ ಫೈನಲ್‌

ಅಭ್ಯಾಸದ ಮೈದಾನಗಳು

ಜಿ.ಎಂ.ಸಿ. ಬ್ಯಾಂಬೊಲಿಮ್‌,  ಉತೋರ್ಡ

ಬೆನಾವುಲಿಮ್‌, ತಿಲಕ್‌ ಮೈದಾನ

*********

ಡಿ.ವೈ.ಪಾಟೀಲ ಕ್ರೀಡಾಂಗಣ, ನವಿ ಮುಂಬೈ

ರಾಜ್ಯ: ಮಹಾರಾಷ್ಟ್ರ.

ಉದ್ಘಾಟನೆ:2008

ಮಾಲೀಕತ್ವ:ಡಿ.ವೈ.ಪಾಟೀಲ ಕ್ರೀಡಾ ಅಕಾಡೆಮಿ

ನವೀಕರಣ: 2017

ಸಾಮರ್ಥ್ಯ: 55,000

ಎಷ್ಟು ಪಂದ್ಯಗಳು?

‘ಎ’ ಮತ್ತು ‘ಬಿ’ ಗುಂಪಿನ ಪಂದ್ಯಗಳು

1 ಪ್ರೀ ಕ್ವಾರ್ಟರ್‌ ಫೈನಲ್‌

1 ಸೆಮಿಫೈನಲ್‌

ಅಭ್ಯಾಸಕ್ಕೆ ಯಾವ ಮೈದಾನ?

ಡಿ.ವೈ.ಪಾಟೀಲ ಮೈದಾನ 1 ಮತ್ತು 2

ನವಿ ಮುಂಬೈ ಕ್ರೀಡಾ ಸಂಸ್ಥೆ ಮೈದಾನ

ಯಶವಂತ ರಾವ್‌ ಚವ್ಹಾಣ್‌ ಮೈದಾನ

********

ಜವಾಹರ ಲಾಲ್‌ ನೆಹರು ಕ್ರೀಡಾಂಗಣ

ರಾಜ್ಯ: ನವದೆಹಲಿ

ಆರಂಭ: 1982

ಒಡೆತನ: ಭಾರತೀಯ ಕ್ರೀಡಾ ಪ್ರಾಧಿಕಾರ

ನವೀಕರಣ: 2007–10

ಸಾಮರ್ಥ್ಯ: 60,254

ಎಷ್ಟು ಪಂದ್ಯಗಳು?

‘ಎ’ ಮತ್ತು ‘ಬಿ’ ಗುಂಪಿನ ಪಂದ್ಯಗಳು

16ರ ಘಟ್ಟದ ಎರಡು ಹಣಾಹಣಿ

ಎಲ್ಲಿ ಅಭ್ಯಾಸ?

ಜೆಎಲ್‌ಎನ್‌ ತರಬೇತಿ ಕೇಂದ್ರದ 1 ಮತ್ತು 2ನೇ ಮೈದಾನಗಳು.

ಸುದೇವ ತರಬೇತಿ ಕೇಂದ್ರ

ದೆಹಲಿ ವಿಶ್ವವಿದ್ಯಾಲಯದ ರಗ್ಬಿ ಮೈದಾನ

*********

ಸಾಲ್ಟ್‌ಲೇಕ್‌ ಕ್ರೀಡಾಂಗಣ/ ವಿವೇಕಾನಂದ ಯುವ ಭಾರತಿ ಕ್ರೀಡಾಂಗಣ

ರಾಜ್ಯ: ಪಶ್ಚಿಮ ಬಂಗಾಳ (ಕೋಲ್ಕತ್ತ)

ಆರಂಭ: 1984

ಮಾಲೀಕತ್ವ: ಪಶ್ಚಿಮ ಬಂಗಾಳ ಸರ್ಕಾರ

ನವೀಕರಣ: 2017

ಸಾಮರ್ಥ್ಯ: 66,687

ಎಷ್ಟು ಪಂದ್ಯಗಳು?

‘ಎಫ್‌’ ಗುಂಪಿನ 5 ಪಂದ್ಯಗಳು.

16ರ ಘಟ್ಟದ ಒಂದು ಹಣಾಹಣಿ.

1 ಕ್ವಾರ್ಟರ್‌ ಫೈನಲ್‌

ಮೂರನೇ ಸ್ಥಾನದ ಪಂದ್ಯ

ಫೈನಲ್‌

ಅಭ್ಯಾಸ ಎಲ್ಲಿ?

ಸಾಲ್ಟ್‌ ಲೇಕ್‌ ತರಬೇತಿ ಕೇಂದ್ರದ 1ಮತ್ತು 2ನೇ ಮೈದಾನಗಳು

ಭಾರತೀಯ ಕ್ರೀಡಾ ಪ್ರಾಧಿಕಾರ, ಬಿಢಾನ್‌ ನಗರ.

*******

ಇಂದಿರಾ ಗಾಂಧಿ ಅಥ್ಲೆಟಿಕ್ಸ್‌ ಕ್ರೀಡಾಂಗಣ/ಸರುಸಜಾಯ್‌ ಕ್ರೀಡಾಂಗಣ

ಸ್ಥಳ:ಗುವಾಹಟಿ, ಅಸ್ಸಾಂ

ಮಾಲೀಕತ್ವ: ಅಸ್ಸಾಂ ಸರ್ಕಾರ.

ನವೀಕರಣ: 2017

ಸಾಮರ್ಥ್ಯ: 35,000

ಎಷ್ಟು ಪಂದ್ಯಗಳು?

‘ಇ’ ಗುಂಪಿನ 5, ಎಫ್‌ ಗುಂಪಿನ 1 ಪಂದ್ಯ.

16ರ ಘಟ್ಟದ 1 ಹೋರಾಟ.

1 ಕ್ವಾರ್ಟರ್ ಫೈನಲ್‌ ಪಂದ್ಯ

1 ಸೆಮಿಫೈನಲ್‌

ಯಾವ ಸ್ಥಳದಲ್ಲಿ ಅಭ್ಯಾಸ?

ಐಜಿಎಐ ತರಬೇತಿ ಕೇಂದ್ರದ ಮೈದಾನ

ನೆಹರು ಕ್ರೀಡಾಂಗಣ

ಭಾರತೀಯ ಕ್ರೀಡಾ ಪ್ರಾಧಿಕಾರದ ಮೈದಾನ

ಎಲ್‌.ಎನ್‌.ಐ.ಪಿ.ಇ ತೆಪೆಸಿಯಾ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry