ಶುಕ್ರವಾರ, ಸೆಪ್ಟೆಂಬರ್ 20, 2019
29 °C

ನವರಾತ್ರಿ ಆಚರಣೆಗೆ ಸಂಭ್ರಮದ ತೆರೆ

Published:
Updated:
ನವರಾತ್ರಿ ಆಚರಣೆಗೆ ಸಂಭ್ರಮದ ತೆರೆ

ಯಾದಗಿರಿ: ನವರಾತ್ರಿ ಹಿನ್ನೆಲೆಯಲ್ಲಿ ನಗರದಲ್ಲಿ ಒಂಭತ್ತು ದಿನಗಳಿಂದ ಜರುಗಿದ ದಸರಾ ಆಚರಣೆಗೆ ಮಂಗಳವಾರ ಸಂಜೆ ಸಂಭ್ರಮದಿಂದ ತರೆ ಕಂಡಿತು. ನಗರದ ಸ್ಟೇಷನ್ ಹಿಂದೂ ಸೇವಾಸಮಿತಿ ಆಶ್ರಯದಲ್ಲಿ ಪಾರಂಪರಿಕವಾಗಿ ನಡೆಯುವ ದಸರಾ ಮಹೋತ್ಸವ ಒಂಭತ್ತು ದಿನ ನಿರಂತರವಾಗಿ ವಿಜೃಂಭಣೆಯಿಂದ ಆಚರಿಸಲಾಯಿತು.

ನಗರದ ರೈಲು ನಿಲ್ದಾಣದಿಂದ ಶಾಸ್ತ್ರಿ ವೃತ್ತದವರೆಗೂ ಝಗಮಗಿಸುವ ವಿದ್ಯುತ್ ದೀಪಾಲಂಕಾರ ಜನರ ಗಮನ ಸೆಳೆದವು. ಭವಾನಿದೇವಿ ಮೂರ್ತಿಗೆ ನಿತ್ಯ ವಿಶೇಷ ಪೂಜೆ ಮತ್ತು ಹೋಮ, ಹವನಗಳು ಜರುಗಿದವು.

ವಿಜಯದಶಮಿ ದಿನವಾದ ಶನಿವಾರದಂದು ಭವಾನಿದೇವಿ ಪುತ್ಥಳಿಯ ಮೆರವಣಿಗೆಯನ್ನು ದೇವಸ್ಥಾನದಿಂದ ಬನ್ನಿ ಮಂಟಪದವರೆಗೆ ಸಕಲ ಮಂಗಲವಾದ್ಯಗಳು ಮತ್ತು ಮಾತೆಯರ ಕಳಶಗಳೊಂದಿಗೆ ನಡೆಸಲಾಯಿತು. ನಗರದ ಶಾಸ್ತ್ರಿ ವೃತ್ತದಲ್ಲಿ ಸಾವಿರಾರು ಜನ ಮೆರವಣಿಗೆಯಲ್ಲಿ ಪಾಲ್ಗೊಂಡು ಅಂಬಾ ಭವಾನಿ ದೇವಿಯ ದರ್ಶನ ಪಡೆದರು.

ಸಂಜೆ 7ಕ್ಕೆ ಆರಂಭಗೊಂಡ ಮೆರವಣಿಗೆ ವಿಜೃಂಭಣೆಯಿಂದ ನಡೆದ ಬನ್ನಿ ಮಂಟಪ ಸೇರಿತು. ‘ದುರ್ಗಾ ಮಾತಾಕೀ ಜೈ’ ಎಂದು ಯುವಕರು ಜಯಘೊಷ ಮೊಳಗಿಸಿದರು. ನಂತರ ಜನರು ಪರಸ್ಪರ ಬನ್ನಿ ವಿನಿಮಯ ಮಾಡಿಕೊಳ್ಳುವ ಮೂಲಕ ವಿಜಯದಶಮಿ ಹಬ್ಬದ ಶುಭಾಶಯ ಕೋರಿದರು.

ತುಳಜಾಪುರಕ್ಕೆ ಪಾದಯಾತ್ರೆ: ದುರ್ಗಾದೇವಿಯ ದರ್ಶನ ಪಡೆದ ಯುವಕರ ದಂಡು ಯಾದಗಿರಿಯಿಂದ ತುಳಜಾಪುರಕ್ಕೆ ಪಾದಯಾತ್ರೆ ಬೆಳೆಸಿತು. ಒಂದು ಸಾವಿರಕ್ಕೂ ಹೆಚ್ಚಿನ ಯುವಕರು ಪ್ರತಿವರ್ಷ ನಗರದಿಂದ ತುಳಜಾಪುರಕ್ಕೆ ಪಾದಯಾತ್ರೆ ಹಮ್ಮಿಕೊಳ್ಳುವುದು ಸಂಪ್ರದಾಯ.

ಅನ್ನ ಸಂತರ್ಪಣೆ: ತುಳಜಾಪುರಕ್ಕೆ ಪಾದಯಾತ್ರೆ ಕೈಗೊಂಡ ಯಾತ್ರಾರ್ಥಿಗಳಿಗೆ ನಗರದ ಸುಭಾಷ್ ವೃತ್ತ, ಜಿಲ್ಲಾಡಳಿತ ಭವನ, ಎಸ್.ಪಿ.ಕಚೇರಿ ರಸ್ತೆ ಯುದ್ದಕ್ಕೂ ಬಿಸಿಬಿಸಿ ಉಪ್ಪಿಟ್ಟು, ಕೇಸರಿಬಾತ್, ಹಣ್ಣು, ಟೀ ಪಾಫಿ, ಬಿಸ್ಕತ್ ವಿತರಿಸಿದರು. ಕೆಲವೆಡೆ ಅನ್ನ ಸಂತರ್ಪಣೆಯೂ ನಡೆಯಿತು. ಐದು ವರ್ಷಗಳಿಂದ ನಗರದಲ್ಲಿ ಈ ಪದ್ಧತಿ ನಡೆಯುತ್ತಾ ಬಂದಿದೆ ಎಂದು ಹಿಂದೂ ಸೇವಾ ಸಮಿತಿ ಸದಸ್ಯರು ತಿಳಿಸಿದರು.

ಗೆಳೆಯರ ಬಳಗದಿಂದ ಬಾದಾಮಿ ಹಾಲು ವಿತರಣೆ: ಇಲ್ಲಿನ ಮುದ್ನಾಳ ರಸ್ತೆ ತಿರುವು ಸಮೀಪ ರಾಜ್ಯ ಹೆದ್ದಾರಿಯಲ್ಲಿ ಬಿಜೆಪಿ ಯುವ ಮುಖಂಡ ಅರುಣಕುಮಾರ ಗೌಡಗೇರಾ ತುಳಜಾಪುರ ಪಾದಯಾತ್ರೆ ಕೈಗೊಂಡ ಭಕ್ತರಿಗೆ ಬಾದಾಮಿ ಹಾಲು, ಬಿಸ್ಕಟ್ ವಿತರಿಸಿದರು. ಜೈ ಕರವೇ ಸಂಘಟನೆಯ ಶ್ರೀಕಾಂತ್ ಭೀಮನಳ್ಳಿ, ಅರುಣ ಮಾಸನ್ ಗೆಳೆಯರ ಬಳಗ ಸಾಥ್ ನೀಡಿತು.

ಹಿಂದೂ ಸೇವಾ ಸಮಿತಿ ಪದಾಧಿಕಾರಿಗಳು ಕಾರ್ಯಕ್ರಮ ನೇತೃತ್ವ ವಹಿಸಿ, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಂಡರು. ಪೊಲೀಸರು ಬಿಗಿ ಬಂದೋಬಸ್ತ್‌ ಏರ್ಪಡಿಸಿದ್ದರು.

Post Comments (+)