ನನ್ನ ಜೀವನವೇ ನನ್ನ ಸಂದೇಶ

ಶನಿವಾರ, ಮೇ 25, 2019
32 °C

ನನ್ನ ಜೀವನವೇ ನನ್ನ ಸಂದೇಶ

Published:
Updated:
ನನ್ನ ಜೀವನವೇ ನನ್ನ ಸಂದೇಶ

ವಿಧಾನ ಸೌಧ ಮತ್ತು ವಿಕಾಸ ಸೌಧದ ಮಧ್ಯದ ವಿಶಾಲವಾದ ಜಾಗದಲ್ಲಿ ರಾಷ್ಟ್ರಪಿತನ ಬೃಹತ್ 27 ಅಡಿ ಎತ್ತರದ ಕಂಚಿನ ಧ್ಯಾನಾಸಕ್ತ ಭಂಗಿಯ 'ನನ್ನ ಜೀವನವೇ ನನ್ನ ಸಂದೇಶ' ಅಡಿಬರಹದ ಪ್ರತಿಮೆ ಇದೆ.

2014ರ ಗಾಂಧಿ ಜಯಂತಿಯಂದು ಅನಾವರಣಗೊಂಡ ಈ ಪ್ರತಿಮೆಯ ಭಂಗಿ ಗಮನಸೆಳಯುವಂತಿದೆ. ಸ್ವಾತಂತ್ರ್ಯ ಸಂಗ್ರಾಮದ ನೆನಪಿಗಾಗಿ ಪ್ರತಿಮೆಯ ಬಹುದೊಡ್ಡ ಪೀಠದ (ಚೌಕ ಬುನಾದಿಯ) ಮುಂಭಾಗದಲ್ಲಿ ಗಾಂಧಿ ಮಹಾತ್ಮನನ್ನು ಒಳಗೊಂಡ ಹೋರಾಟದ ಸನ್ನಿವೇಶ ಚಿತ್ರಣವಿದೆ.

ಖ್ಯಾತ ಶಿಲ್ಪಿ ರಾಮ್ ವಂಜಿ ಸುತಾರ್ ಕೆತ್ತನೆಯ ಈ ಸುಂದರ ಲೋಹದ ಶಿಲ್ಪ, ಅಮೃತಶಿಲೆಯನ್ನೂ ಒಳಗೊಂಡ ಗ್ರಾನೈಟ್ ಪೀಠವು ಅಧಿಕಾರದ ಕೇಂದ್ರಸ್ಥಾನವಿರುವ ಪರಿಸರಕ್ಕೆ ಅನನ್ಯ ಮೆರುಗು ನೀಡಿದೆ.

ಸಂಜೆಯ ತಂಪಿನಲ್ಲಿ ಪ್ರತಿಮೆಯ ಹಿಂಬದಿಯಿಂದ ಬೀಳುತ್ತಿದ್ದ ಇಳಿಬಿಸಿಲಿನ ಎದುರು ಈ ದೃಶ್ಯವನ್ನು ಕ್ಯಾಮೆರಾದಲ್ಲಿ ಸೆರೆಹಿಡಿದವರು, ಕುಮಾರಸ್ವಾಮಿ ಬಡಾವಣೆಯ ಟೀಚರ್ಸ್ ಕಾಲೊನಿಯ ಬಿ.ಆರ್.ವಿಶ್ವನಾಥ್.

ವೃತಿಯಲ್ಲಿ ಸಿನಿಮಾಟೋಗ್ರಾಫರ್ ಆಗಿರುವ ವಿಶ್ವನಾಥ್ ಅವರಿಗೆ ಸ್ಟಿಲ್ ಛಾಯಾಗ್ರಹಣ ಹವ್ಯಾಸ. ಈ ಚಿತ್ರ ತೆಗೆಯಲು ಬಳಸಿದ ಕ್ಯಾಮೆರಾ ಕೆನಾನ್ 5ಡಿ (ಮಾರ್ಕ್ 2), 24- 105 ಎಂ.ಎಂ. ಫೋಕಲ್ ಲೆಂಗ್ತ್ ನ ಜೂಂ ಲೆನ್ಸ್. ಚಿತ್ರ ತೆಗೆಯಲು ಲೆನ್ಸ್ ಫೋಕಲ್ ಲೆಂಗ್ತ್ 35 ಎಂ.ಎಂ.,  ಅಪರ್ಚರ್ F 6.3 , ಷಟರ್ ವೇಗ 1/40 ಸೆಕೆಂಡ್,  ಐ.ಎಸ್.ಒ 160,  ಡಿಲೇ- ರಿಲೀಸ್ ಬಟನ್ ಮತ್ತು ಟ್ರೈಪಾಡ್ ಬಳಕೆಯಾಗಿದೆ.

ಚಿತ್ರವನ್ನು ವಿಶ್ಲೇಷಿಸಲು ಹೊರಟಾಗ ಹೊಳೆದ ಅಂಶಗಳು ಇವು...

* ಈ ಬಗೆಯ ಹೊರಾಂಗಣ ವಿಷಯಾದಾರಿತ ಚಿತ್ರಣದ ಸಂದರ್ಭದಲ್ಲಿ ಮುಖ್ಯವಸ್ತು ಫೋಕಸ್ ಆಗುವುದು ಸಹಜ. ಅದು ಎಲ್ಲಿದೆ ಎಂಬ ಮಾಹಿತಿ ನೀಡಬಲ್ಲ ಹಿನ್ನೆಲೆ ಮತ್ತು ಮುಖ್ಯವಸ್ತುವಿನ ಎತ್ತರ- ಅಗಲ ಎಷ್ಟು ಎಂಬುದನ್ನು ಸೂಚಿಸಬಲ್ಲ ಅಂಶಗಳೂ ಸಹ ಫೋಕಸ್ ಆಗಬೇಕಾದ್ದು ಅಗತ್ಯ. ಈ ಚಿತ್ರದಲ್ಲಿ ವೈಡ್ ಆ್ಯಂಗಲ್ ಮತ್ತು ಸಣ್ಣ ಅಪರ್ಚರ್ ದೆಸೆಯಿಂದ ಈ ಅಂಶಗಳು ಚನ್ನಾಗಿ ಮೂಡಿವೆ.

* ಕ್ಯಾಮೆರಾದ ಕೋನವು ಚೌಕಟ್ಟಿನಲ್ಲಿ ಕಾಣಿಸುವ ಪರಿಚಿತ ಹಿನ್ನೆಲೆ (ವಿಧಾನ ಸೌಧದ ಭಾಗ) ಮತ್ತು ಮುನ್ನೆಲೆಯ ವಸ್ತುಗಳ (ಈರ್ವರು ನೋಡುಗರು) ಹೋಲಿಕೆಯಿಂದ ವಸ್ತುವಿನ ಗಾತ್ರದ ಹೆಚ್ಚಳವನ್ನು ತೋರಿಸಬಲ್ಲ ಅಂತರಭಾಸವನ್ನು (ಪರ್‌ಸ್ಪೆಕ್ಟಿವ್) ಸ್ಪಷ್ಟಪಡಿಸುವಂತಿದೆ.

* ಕಡಿಮೆ ಬೆಳಕಿನ ಸಂದರ್ಭವಾಗಿದ್ದರಿಂದ, 1/40 ಸೆಕೆಂಡಿನ ಕಡಿಮೆ ಷಟರ್ ವೇಗ ಅನಿವಾರ್ಯ. ಈ ಸೆಟ್ಟಿಂಗ್ಸ್‌ನಲ್ಲಿ ಚಿತ್ರವು ಶೇಕ್ ಆಗುವ ಸಾಧ್ಯತೆ ಇದೆ. ಹೀಗಾಗಿ ಟ್ರೈಪಾಡ್ ಮತ್ತು ’ಡಿಲೇ- ರಿಲೀಸ್ ಬಟನ್’ ಉಪಯೋಗಿಸಲಾಗಿದೆ.

* ಚಿತ್ರದ ಚೌಕಟ್ಟು ಅಗಲವಾಗಿ ಹರಡದೇ (ಲ್ಯಾಂಡ್ ಸ್ಕೇಪ್ ಮಾದರಿಯಲ್ಲಿ), ಲಂಬವಾಗಿ (ವರ್ಟಿಕಲ್) ಪ್ರಸ್ತುತಪಡಿಸಿರುವುದು ಪರಿಣಾಮಕಾರಿಯಾಗಿದೆ.

* ಧ್ಯಾನಸ್ಥ ಯೋಗಿಯಂತೆ ಕುಳಿತ ಗಾಂಧಿ ಮಹಾತ್ಮನ ಶಾಂತ – ಪರಿಪೂರ್ಣ ಮನಸ್ಥಿತಿಯನ್ನು ಭಾವಪೂರ್ಣವಾಗಿ ರೂಪಿಸುವಲ್ಲಿ ಶಿಲ್ಪಿ   ರಾಮ್ ವಂಜಿ ಸುತಾರ್ ಪಟ್ಟಿರುವ ಶ್ರಮ ಅಸಾಧಾರಣ. ಅದನ್ನು ಸಮರ್ಪಕವಾಗಿ ಕ್ಯಾಮೆರಾದಲ್ಲಿ ಸೆರೆಹಿಡಿದು, ಅದೇ ಭಾವ ವೈಶಿಷ್ಠ್ಯತೆಗಳನ್ನು ಛಾಯಾಚಿತ್ರದಲ್ಲೂ ಪರಿಣಾಮಕಾರಿಯಾಗಿ ರೂಪಿಸುವುದು ಛಾಯಾಚಿತ್ರಕಾರರ ತಾಂತ್ರಿಕ ಮತ್ತು ಕಲಾತ್ಮಕ ಪರಿಣಿತಿಗೆ ಸವಾಲು. ಈ ಅಂಶವು ಚಿತ್ರದಲ್ಲಿ ಜಯಗಳಿಸಿರುವುದು ವಿಶೇಷ.

* ಹಿಂಬದಿಯಿಂದ ಬಂದ ಸಂಜೆಯ ತಿಳಿ ಇಳಿ ಸೂರ್ಯನ ಬೆಳಕು ಮತ್ತು ಮುಂಬದಿಯಿಂದ ಆಗಸದಲ್ಲಿ ಅಲ್ಲಲ್ಲಿ ಹರಡಿರುವ ಬಿಳಿಮೋಡಗಳಿಂದ ಪ್ರತಿಫಲನವಾಗಿರುವ ಬೆಳಕಿನ ಛಾಯೆಗಳು ಇಡೀ ಪ್ರತಿಮೆಗೆ ಮೂರು ಆಯಾಮದ (ತ್ರೀ ಡಿ) ರೂಪಿಕೆಯನ್ನು ನೀಡಿವೆ. ಸೂಕ್ಷ್ಮವಾಗಿ ಮನಮುಟ್ಟುವ ಬೋಧಕತೆಯನ್ನು (ಇನ್ಫಿನಿಟಿ) ಹೊಮ್ಮಿಸುವಲ್ಲಿ ಸಹಕಾರಿಯಾಗಿದೆ. ಕಡು ಬಿಸಿಲಿನಲ್ಲಾಗಿದ್ದರೆ, ಪ್ರತಿಮೆಯ ಉಬ್ಬುತಗ್ಗುಗಳಲ್ಲಿ ನೆರಳು ಬೆಳಕಿನ ವೈರುಧ್ಯ (ಕಾಂಟ್ರಾಸ್ಟ್) ಹೆಚ್ಚಾಗಿಬಿಡುತ್ತಿತ್ತು.

*

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry