ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಬರ ‘ಅಟೆಂಪ್ಟ್‌ ಟು ಮರ್ಡರ್’

Last Updated 1 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಹೊಸಬರೆಲ್ಲ ಸೇರಿಕೊಂಡು ಒಂದು ಹೊಸ ಸಿನಿಮಾ ಮಾಡುತ್ತಿದ್ದಾರೆ. ಸಿನಿಮಾದ ಹೆಸರು ‘ಅಟೆಂಪ್ಟ್ ಟು ಮರ್ಡರ್’. ಇದನ್ನು ಚುಟುಕಾಗಿ ‘ಎಟಿಎಂ’ ಎಂದೂ ಕರೆದುಕೊಂಡಿದೆ ಚಿತ್ರತಂಡ. ಈ ಚಿತ್ರದ ನಿರ್ದೇಶಕರು ಅಮರ್. ಈ ಮೊದಲು ಕೆಲವು ಕಿರುಚಿತ್ರಗಳನ್ನು ನಿರ್ದೇಶಿಸಿದ ಅನುಭವ ಇದೆಯಾದರೂ, ಸಿನಿಮಾ ನಿರ್ದೇಶನದ ಕೆಲಸ ಇವರಿಗೆ ಹೊಸದು.

‘ನೈಜಕಥೆಯನ್ನು ಆಧರಿಸಿ ಎಟಿಎಂ ಚಿತ್ರ ಮಾಡಿದ್ದೇವೆ. ಬೆಂಗಳೂರು ಹಾಗೂ ಮೈಸೂರಿನಲ್ಲಿ ಸಿನಿಮಾ ಚಿತ್ರೀಕರಣ ನಡೆದಿದೆ. ಸಿನಿಮಾ ನಿರ್ದೇಶನ ನನಗೆ ಹೊಸ ಕೆಲಸವಾದರೂ, ಏನಾಗುತ್ತದೆಯೋ ಎಂಬ ಭಯ ನನಗಿಲ್ಲ’ ಎಂದು ಅಮರ್. ‘ಕನ್ನಡದಲ್ಲಿ ಒಂದು ಆ್ಯನಿಮೇಷನ್ ಸಿನಿಮಾ ಮಾಡಬೇಕು ಎಂಬ ಆಸೆಯೂ ನನಗೆ ಇದೆ’ ಎಂದು ಹೇಳಿದರು. ಅಂದಹಾಗೆ, ಇವರಿಗೆ ಥ್ರಿಲ್ಲರ್ ಸಿನಿಮಾಗಳು ಬಹಳ ಇಷ್ಟವಂತೆ.

ಈ ಸಿನಿಮಾಕ್ಕೆ ಹಣ ಹೂಡಿಕೆ ಮಾಡಿದವರು ಎಸ್.ವಿ.ನಾರಾಯಣ್. ‘ಅಮರ್ ಅವರು ನಿರ್ದೇಶನ ಕ್ಷೇತ್ರಕ್ಕೆ ಹೊಸಬರಾಗಿದ್ದರೂ, ಒಮ್ಮೆ ಮಾತ್ರ ಅವರಿಂದ ಕಥೆ ಕೇಳಿಸಿಕೊಂಡು, ಸಿನಿಮಾ ಕೆಲಸ ಶುರು ಮಾಡಿ ಎಂದು ಹೇಳಿದೆ. ಸಿನಿಮಾದ ಕಥೆಯನ್ನು ಕೇಳಿಸಿಕೊಂಡಾಗಲೇ ಸಿನಿಮಾ ನಿರ್ಮಾಣ ಮಾಡುವ ಧೈರ್ಯ ಬಂತು ನನಗೆ’ ಎಂದು ನಾರಾಯಣ್ ಹೇಳಿದರು. ಅಂದಹಾಗೆ, ನಾರಾಯಣ್‌ ಅವರು ಸಿನಿಮಾ ನಿರ್ಮಾಣ ಮಾಡುತ್ತಿರುವುದು ಇದೇ ಮೊದಲು.

‘ಎಟಿಎಂ’ ಸಿನಿಮಾದಲ್ಲಿ ಒಂದು ಪ್ರೇಮ ಕಥೆಯ ಜೊತೆಯಲ್ಲೇ ಕ್ರೈಂ ಹಾಗೂ ಥ್ರಿಲ್ಲರ್‌ ಕಥೆ ಕೂಡ ಇದೆಯಂತೆ. ಆದರೆ, ಕ್ರೈಂ ಹಾಗೂ ಥ್ರಿಲ್ಲರ್ ಅಂಶಗಳು ಇದ್ದರೂ, ಸಿನಿಮಾದಲ್ಲಿ ರಕ್ತಪಾತ ಹಾಗೂ ಹಿಂಸೆಯನ್ನು ತೋರಿಸುವುದಿಲ್ಲ ಎಂದು ಚಿತ್ರತಂಡ ಹೇಳಿಕೊಂಡಿದೆ.

ಸಿನಿಮಾದ ಹೀರೊ ಹೆಸರು ಚಂದು. ಇವರೂ ಸಿನಿಮಾಕ್ಕೆ ಹೊಸಬರು. ‘ಕಲಾವಿದನಾಗುವ ಆಸೆ ನನ್ನಲ್ಲಿ ಮೊದಲಿನಿಂದಲೂ ಇತ್ತು. ಇದು ಮಾಮೂಲಿನಂತೆ ಅಲ್ಲದ ಸಿನಿಮಾ. ನನ್ನದು ಈ ಸಿನಿಮಾದಲ್ಲಿ ಮುಗ್ಧ ಕ್ಯಾಬ್‌ ಚಾಲಕನ ಪಾತ್ರ. ತಪ್ಪು ಮಾಡದಿದ್ದರೂ, ಆರೋಪ ಹೊತ್ತುಕೊಳ್ಳಬೇಕಾದ ಸ್ಥಿತಿ ನನಗೆ ಬರುತ್ತದೆ’ ಎಂದರು ಚಂದು.

ನಟ ವಿನಯ್ ಅವರು ಈ ಸಿನಿಮಾದಲ್ಲಿ ತನಿಖಾಧಿಕಾರಿಯ ಪಾತ್ರ ನಿಭಾಯಿಸಿದ್ದಾರೆ. ಶೋಭಿತಾ, ಹೇಮಲತಾ ಹಾಗೂ ಇತರರು ತಾರಾಗಣದಲ್ಲಿ ಇದ್ದಾರೆ. ಎಸ್.ಕೆ. ರಾವ್ ಛಾಯಾಗ್ರಹಣ, ರವಿ ದೇವ್ ಮತ್ತು ಜೀತ್‌ ಸಿಂಗ್ ಸಂಗೀತ ಈ ಚಿತ್ರಕ್ಕೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT