ದಸರಾ ಅಂದ್ರೆ ನೆನಪಿನ ದಿಬ್ಬಣ

ಶನಿವಾರ, ಮೇ 25, 2019
22 °C

ದಸರಾ ಅಂದ್ರೆ ನೆನಪಿನ ದಿಬ್ಬಣ

Published:
Updated:
ದಸರಾ ಅಂದ್ರೆ ನೆನಪಿನ ದಿಬ್ಬಣ

ವರ್ಷವಿಡೀ ಶೂಟಿಂಗ್‌, ಡಬ್ಬಿಂಗ್‌, ಸ್ಕ್ರಿಪ್ಟ್‌ ಓದುವುದು, ನಟನಾ ತರಬೇತಿ ಹೀಗೆ ಒಂದಿಲ್ಲೊಂದು ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ಕೋಸ್ಟಲ್‌ವುಡ್‌ ತಾರೆಯರು ಎಲ್ಲೇ ಇದ್ದರೂ ದಸರಾ ಸಮಯದಲ್ಲಿ ಊರಿಗೆ ಓಡೋಡಿ ಬರುತ್ತಾರೆ. ಕುಟುಂಬದವರು, ನೆಂಟರಿಷ್ಟರ ಜತೆ ಸೇರಿ ಸಂಭ್ರಮದಿಂದ ದಸರಾ ಆಚರಿಸುತ್ತಾರೆ.

ವರ್ಷದಿಂದ ವರ್ಷಕ್ಕೆ ಅದ್ಧೂರಿತನ ಪಡೆಯುತ್ತಿರುವ ಮಂಗಳೂರು ದಸರಾವನ್ನು ಮಿಸ್‌ ಮಾಡಿಕೊಳ್ಳಲು ಸಿ–ಟೌನ್‌ ಸುಂದರಿಯರಿಗೆ ಸುತಾರಾಂ ಇಷ್ಟವಿಲ್ಲ. ಬಾಲ್ಯದಲ್ಲಿ ಆಚರಿಸಿದ ದಸರಾ ನೆನಪುಗಳೊಂದಿಗೆ ಜೀಕುವುದಕ್ಕೆ ಇದಕ್ಕಿಂತ ವಿಶೇಷ ಸಂದರ್ಭ ಮತ್ತೊಂದಿಲ್ಲ ಎಂಬುದು ಅವರ ದೃಢ ಮಾತು.

ಹುಲಿ ವೇಷದ ರಂಗು

‘ರಾಮಧಾನ್ಯ’ ಎಂಬ ಐತಿಹಾಸಿಕ ಸಿನಿಮಾದಲ್ಲಿ ನಟಿಸುತ್ತಿರುವ ಕರಾವಳಿ ಬೆಡಗಿ ನಿಮಿಕಾ ರತ್ನಾಕರ್‌ ಸ್ಯಾಂಡಲ್‌ವುಡ್‌ನಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯದಲ್ಲೇ ಮತ್ತೊಂದು ಕನ್ನಡ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಬುದ್ಧನ ನಗುವಿನ ಚೆಲುವೆಗೆ ಮಂಗಳೂರು ದಸರಾ ಅಂದರೆ ನೆನಪುಗಳ ಖಜಾನೆ.

‘ನಾನು ಮಂಗಳೂರಿನ ಹುಡುಗಿ. ದಸರಾ ಹಬ್ಬದ ಸಂದರ್ಭದಲ್ಲಿ ಕುದ್ರೋಳಿ ಹಾಗೂ ಮಂಗಳಾದೇವಿ ಕ್ಷೇತ್ರಕ್ಕೆ ಮನೆಮಂದಿಯೆಲ್ಲಾ ತಪ್ಪದೇ ಭೇಟಿ ನೀಡುತ್ತೇವೆ. ಹಬ್ಬದ ಕೊನೆಯ ದಿನ ನಡೆಯುವ ವೈಭವೋಪೇತ ಮೆರವಣಿಗೆಯನ್ನು ಮಿಸ್‌ ಮಾಡದೇ ನೋಡುತ್ತೇವೆ. ಪ್ರತಿ ದಸರಾ ಸಂದರ್ಭದಲ್ಲೂ ನಮ್ಮ ಮನೆಯಲ್ಲಿ ಹುಲಿವೇಷ ಆಡಿಸುತ್ತೇವೆ’ ಎನ್ನುತ್ತಾರೆ ರೂಪದರ್ಶಿಯೂ ಆಗಿರುವ ನಿಮಿಕಾ ರತ್ನಾಕರ್‌.

ಭಜನೆಯ ಗುಂಗು

ಬಾಲಿವುಡ್‌ ಬೆಡಗಿಯಂತೆ ಕಂಗೊಳಿಸುವ ಚೆಲುವೆ ಸ್ವಾತಿ ಬಂಗೇರಾ ಅಭಿನಯದ ‘ರಂಗ್‌ ರಂಗ್‌ದ ದಿಬ್ಬಣ’ ತುಳು ಸಿನಿಮಾ ಅ.20ರಂದು ತೆರೆಕಾಣಲಿದೆ. ಟೆಲಿಫಿಲ್ಮ್‌, ಮಾಡೆಲಿಂಗ್‌ನಲ್ಲಿ ಸದಾ ಬ್ಯುಸಿಯಾಗಿರುವ ಸ್ವಾತಿಗೆ ದಸರಾ ಅಂದ ತಕ್ಷಣ ನೆನಪಾಗುವುದು ಭಜನೆ!

‘ನಮ್ಮ ಮನೆಯಲ್ಲಿ ದಸರಾ ಸಂಭ್ರಮಾಚರಣೆಯು ಗಣೇಶ ಚತುರ್ಥಿ ಅಥವಾ ದೀಪಾವಳಿ ಹಬ್ಬದಷ್ಟು ಜೋರು ಇರುವುದಿಲ್ಲ. ನವರಾತ್ರಿ ಸಂದರ್ಭ ಮನೆಮಂದಿಯೆಲ್ಲರೂ ಸಸ್ಯಾಹಾರಿಗಳಾಗಿ ಇರುತ್ತೇವೆ. ಮನೆಯ ಬಳಿ ನಮ್ಮದೇ ಒಂದು ಮಂದಿರ ಇದೆ. ನವರಾತ್ರಿ ಹಬ್ಬದ ವೇಳೆ ಮನೆಮಂದಿಯೆಲ್ಲಾ ಒಂದು ದಿನವೂ ತಪ್ಪಿಸದಂತೆ ಭಜನೆ ಮಾಡುತ್ತೇವೆ. ಈಗ ನಾನು ಸಿನಿಮಾಗಳಲ್ಲಿ ಬ್ಯುಸಿ ಆಗಿರುವುದರಿಂದ ಭಜನೆಗೆ ಹೋಗಲು ಆಗುತ್ತಿಲ್ಲ. ಹಬ್ಬದ ಕೊನೆಯ ದಿನ ಹಬ್ಬದೂಟ ಜೋರಾಗಿ ಇರುತ್ತದೆ’ ಎನ್ನುವುದು ಅವರ ಹೆಮ್ಮೆ.

ಮಂಗ್ಳೂರು ದಸರಾ; ಎಷ್ಟೊಂದು ಸುಂದರ

ನಟಿಸಿದ ಮೊದಲ ಚಿತ್ರದಲ್ಲೇ ಸಿನಿಪ್ರಿಯರ ಮನಗೆದ್ದ ಬೆಡಗಿ ನಿಶ್ಮಿತಾ. ‘ಅರೆಮರ್‍ಲೆರ್‌’ ಸಿನಿಮಾದ ಮೂಲಕ ಸಿನಿಖಾತೆ ತೆರೆದ ಇವರು ಈಗ ಸ್ಯಾಂಡಲ್‌ವುಡ್‌ ಹಾಗೂ ಕಾಲಿವುಡ್‌ನಿಂದಲೂ ಅವಕಾಶ ಗಿಟ್ಟಿಸಿಕೊಳ್ಳುತ್ತಿದ್ದಾರೆ. ದಸರಾ ಸಂದರ್ಭದಲ್ಲಿ ನವದುರ್ಗೆಯರ ಅಲಂಕಾರವನ್ನು ಕಣ್ತುಂಬಿಕೊಂಡು ಪುಳಕಗೊಳ್ಳುವುದೆಂದರೆ ಇವರಿಗೆ ಎಲ್ಲಿಲ್ಲದ ಸಂಭ್ರಮ.

‘ಮಂಗಳೂರು ದಸರಾ ಸಂದರ್ಭದಲ್ಲಿ ತಪ್ಪದೇ ಎಲ್ಲ ದೇವಸ್ಥಾನಗಳಿಗೂ ಹೋಗಿ ಬರುತ್ತೇನೆ. ಚೆಂದವಾಗಿ ಅಲಂಕರಿಸಿರುವ ನವದುರ್ಗೆಯರನ್ನು ಕಣ್ತುಂಬಿಕೊಳ್ಳುವುದರಲ್ಲೇ ನಾನು ಧನ್ಯತಾ ಭಾವ ಅನುಭವಿಸುತ್ತೇನೆ. ನವರಾತ್ರಿ ವೇಳೆ ಮನೆಯಲ್ಲಿ ಸಸ್ಯಾಹಾರಕ್ಕೆ ಮಾತ್ರ ಅವಕಾಶ. ದಸರಾ ಅಂದ್ರೆ  ಅಜ್ಜಿಮನೆ, ಪೂಜೆ, ಹಬ್ಬದೂಟ ನೆನಪಾಗುತ್ತೆ. ಇಷ್ಟು ವರ್ಷ ದಸರಾ ಉತ್ಸವದಲ್ಲಿ ತಪ್ಪದೇ ಭಾಗವಹಿಸುತ್ತಿದ್ದೆ. ಆದರೆ, ಈ ವರ್ಷ ಶೂಟಿಂಗ್‌, ಸ್ಕ್ರಿಪ್ಟ್ ನೋಡುವುದು, ವರ್ಕಶಾಪ್‌ನಲ್ಲಿ ಬ್ಯುಸಿ ಆಗಿದ್ದೇನೆ. ನವರಾತ್ರಿ ಸಂಭ್ರಮವನ್ನು ತುಂಬಾ ಮಿಸ್‌ ಮಾಡಿಕೊಂಡೆ’ ಎನ್ನುವುದು ಅವರ ವಿಷಾದ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry