ಅಪಾರ್ಥಗೊಂಡ ಅರ್ಥಪೂರ್ಣ ಶಬ್ದಸಂಪತ್ತು

ಬುಧವಾರ, ಜೂನ್ 26, 2019
22 °C

ಅಪಾರ್ಥಗೊಂಡ ಅರ್ಥಪೂರ್ಣ ಶಬ್ದಸಂಪತ್ತು

Published:
Updated:

ಈಗೊಂದೆರ್ಡ್ ತಿಂಗಳ ಹಿಂದ್ ಬೆಂಗ್ಳೂರಿನ ರವೀಂದ್ರ ಕಲಾಕ್ಷೇತ್ರದೊಳಗ ತತ್ವಪದಗಳ ಮೂವತ್ತೆರಡು ಪುಸ್ತಕಗಳ್ನ ಬಿಡುಗಡೆ ಮಾಡೂ ಒಂದ್ ಛಂದ್ ಕಾರ್ಯಕ್ರಮ ನಡೀತು. ಕಾರ್ಯಕ್ರಮದ ಮುಂಚೇಕ, ಬಂದವ್ರಿಗೆಲ್ಲಾ ಒಂದೀಟು ಮನಸು ಹಗರಾಗ್ಲಿ ಅಂತ ಆಧುನಿಕ ಜನಪದ ತಂಡದವರ ಕಡೀಂದ ತತ್ವಪದಗಳ್ನ ಹಾಡಿಸಿದ್ರು.

ಪಾಪ ಅವ್ರೂ ಭಾಳೊತ್ತನ್ಕಾ, ಛೊಲೋತಾಗೇ ಹಾಡಿದ್ರು. ಮಂತ್ರಿಗಳು ಬರೂದು ಬ್ಯಾರೆ ಭಾಳ ತಡಾ ಆಗಿದ್ದಕ್ಕ ಬಂದವರ್‍ನ ಸುಮ್ನ ಕುಂದರಸೂದು ಚೊಲೋ ಅಲ್ಲಂತ ಸಂಘಟನಾಕಾರ್‍ರು ‘ಇನ್ನಷ್ಟು ಹಾಡ್ರೆಪಾ’ ಅಂತ, ಮತ್ತಷ್ಟು ಹಾಡಾಕ ಹಚ್ಚಿದ್ರು.

ಪಾಪ ಹಾಡಿ, ಹಾಡಿ ಹೈರಾಣಾಗಿದ್ದ ಅವರು ಆ ಹೊತ್ತಿನ್ಯಾಗ ಹಾಡಾಕ ಎತಗೊಂಡಿದ್ದು ಶಿಶುನಾಳ ಶರೀಫ ಸಾಹೇಬರ ತತ್ವಪದವನ್ನ. ಸುರೂಮಾಡಿದ್ರು ನೋಡ್ರಿ- ‘ಹರದಾಡುವ ಮನಸಿಗೆ ಮಚ್ಚಲ್ಹೊಡದು ನಿಲಿಸಬೇಕಣ್ಣ’- ಅಂತ. ಅದನ್ನವ್ರು ಹತ್ತ್ ಮಿನೀಟು ಕಟದs ಕಟದ್ರು! ಮುಮ್ಯಾಳದ ಲೀಡರ್ ಮುಂದ್ ಮುಂದ್ ‘ಹರದಾಡುವ ಮನಸಿಗೆ ಮಚ್ಚಲ್ಹೊಡದು ನಿಲಿಸಬೇಕಣ್ಣ’ ಅನ್ನಾಂವಾ; ಅಂವಾ ಹಂಗ್ ಅಂದಕೂಡ್ಲೇ ಹಿಮ್ಮ್ಯಾಳದ ತಂಡ ಇನ್ನೊಂದೀಟು ಉಮೇದ್ಲಿಂದ ಹೇಳವ್ರು ‘ಮಚ್ಚಲ್ಹೊಡೆದು ನಿಲಿಸಬೇಕಣ್ಣ... ಮಚ್ಚಲ್ಹೊಡೆದು ನಿಲಿಸಬೇಕಣ್ಣ...’ ಅಂತ.

ಶರೀಫ ಸಾಹೇಬರ ಜವಾರಿ ಭಾಷಾದ ಹಾಡಗೊಳ್ನ ಕೇಳ್ಕೊಂತ ಬೆಳದವ್ರಿಗೆ ಇವರ್‌ ಹಿಂಗ್ ಹಾಡೂದು ಕೇಳಿ ಒಂದ್ ನಮೂನಿ ಸಂಕ್ಟ ಸುರೂವಾತು. ಅಲೆ ಇವನ? ‘ಮಚ್ಚಲ್ಹೊಡದು, ಮಚ್ಚಲ್ಹೊಡದು... ಅನ್ನಾಕತ್ಯಾರಲ್ಲಪಾ ಇವರು! ಶರೀಫರು ಹೇಳಲಾರದ ಶಬ್ದಾನ ಇವರೆಲ್ಲಿಂದ ತಂದ್ರು?’ ಅಂತ ಒಬ್ಬರಿಗೊಬ್ಬರು ಗುಸು ಗುಸು ಮಾತಾಡ್ಕೊಳ್ಳಾಕ ಹತ್ತಿದ್ರು. ನನ್ನ ಮಗ್ಗಲ್ಕ ಕುಂತ ಬೆಂಗ್ಳೂರಿನ ಗೆಳ್ಯಾನೂ ‘ಯಾಕೆ ಇವರೆಲ್ಲಾ ಹೀಗೆ ಗುಜು ಗುಜು ಮಾಡತಾ ಇರೂದು?’ ಅಂತ ಬೆಂಗಳೂರಿನ ಸವಾರಿ ಭಾಷಾದಾಗ ನನ್ನ ಕೇಳಿದ. ನಾನು ಅಂವಗ ಹೇಳ್ದೆ ‘ನೋಡ್ ತಮ್ಮಾ ಅವ್ರೇನು ‘ಮಚ್ಚಲ್ಹೊಡದು’ ಅಂತ ಶಬ್ದಾ ಬಳಸಿದ್ರಲ್ಲ, ಅದು ‘ಮಚ್ಚಲ್ಹೊಡದು’ ಅಲ್ಲ; ‘ಮಚ್ಚಿಲ್ಹೊಡದು’ ಆಗಬೇಕಾಗಿತ್ತು ಅಂತ. ಅಂವಗ ಇನ್ನೂ ದಿಗಲು! ‘ಏನು ವ್ಯತ್ಯಾಸ ಅದರೊಳಗೆ, ಮಚ್ಚಿ ಅಂದ್ರ ಏನರ್ಥ?’ ಅಂತ ಮತ್ತ ಪ್ರಶ್ನೆ ಹಾಕಿದ್ಯಾಗ ಹೇಳಬೇಕಾತು, ನೋಡು ‘ಮಚ್ಚಿ’ ಅಂದ್ರ ‘ಕಾಲ್ಮರಗಿ’ ಅಂತ. ‘ಹಂಗದ್ರೇನು?’ ಅಂತ ಮತ್ತ ಅಂವಾ ಕೇಳೇ ಕೇಳ್ತಾನಂತ ಗೊತ್ತಾಗಿ ನಾನs ‘ಕಾಲ್ಮರಗಿ ಅಂದ್ರ ಚಪ್ಪಲ್ಲು, ಅದೂ ಹರಕ ಚಪ್ಪಲ್ಲು’ ಅಂತ ಬಿಡಿಸಿ ಹೇಳ್ಬೇಕಾತು.

‘ಮಚ್ಚಿ’ ಮತ್ತ್ ‘ಮಚ್ಚು’ ಶಬ್ದಗಳ ವ್ಯತ್ಯಾಸ ತಿಳೀಲಾರ್‍ದವ್ರೀಗೆ ಶರೀಫ ಸಾಹೇಬ್ರು ಹರದಾಡೂ ಮನಸಿಗೆ ಯದರ್‍ಲೆ ಹೊಡಿಬೇಕಂತಾರ ಅನ್ನೂದು ಗೊತ್ತಾಗಾಕ ಸಾಧ್ಯಾನs ಇಲ್ಲ. ಅವಾಗ ಅವ್ರು ‘ಮಚ್ಚಲೇ’ ಹೊಡದಾಡಿ ತೆಲೀ ಹಾರಸವ್ರs. ಒಂದ್ ಶಬ್ದ, ಅದನ್ನ ಬಳಸೂ ರೀತಿಲಿಂದ ಹೆಂಗೆಂಗ್ ಬ್ಯಾರೇ ಬ್ಯಾರೆ ಅರ್ಥವ್ಯತ್ಯಾಸ ತರತೈತಿ ಅನ್ನೂದನ್ನ ತಿಳಕೊಂಡು ಉಪಯೋಗಾ ಮಾಡಬೇಕಕ್ಕೈತಿ. ಇಲ್ಲಂದ್ರ, ಐಲೀಕಡೆ ಬೆಂಗಳೂರಿನ್ಯಾಗ ಅಗದೀ ಹೆಚ್ಚೆಚ್ಚು ಬಳಕಿ ಆಗೂ ‘ಮಚ್ಚು’ ಶಬ್ದಾನs ಶರೀಫ ಸಾಹೇಬ್ರೂ ಬಳಸ್ಯಾರನ್ನೂ ತಪ್ಪ್ ತಿಳವಳಿಕಿ ಬರೂ ಸಾಧ್ಯತಾ ಇರತೈತಿ.

‘ಮಚ್ಚಿ’ ಅಂದ್ರ ಕಾಲಾಗ ಹಾಕೂ ವಸ್ತು; ಚಪ್ಪಲ್ಲು. ‘ಹೇಸಿಗಿ, ಹೊಲಸು, ಕಸಾ-ಕಡ್ಡಿ ಎಲ್ಲಾನೂ ತುಳದಾಡಿ ಹೊಲಸಾಗುವಂಥಾ ಅಂಥಾ ಚಪ್ಪಲ್ಲಿಲೆ ಹೊಡದ್ರ, ಹರದಾಡೂ ಮನಸಿಗೆ ಅವಾಗಾದ್ರೂ ನಾಚಿಕಿ ಬಂದು ತನ್ನ ಕೆಟ್ಟ್ ಗುಣಾ ಬಿಡಬೌದು’ ಅನ್ನೂದು ಶರೀಫ ಸಾಹೇಬರ ವಿಚಾರ. ಮನಸು ಹರದಾಡಬಾರ್‍ದು ಗಟ್ಟ್ಯಾಗಿರಬೇಕು ಅಂತ ಹೇಳೂದುರ ಸಲವಾಗಿ ಅವರು ಹಂಗ್ ಹೇಳ್ಯಾರ. ಅದನ್ನ ಬಿಟ್ಟು ‘ಮಚ್ಚು’ ತೊಗೊಂಡ ಹೊಡದ್ರ ತೆಲಿ ಉಳದೀತಾ? ಮಚ್ಚು ಬ್ಯಾರೆ, ಮಚ್ಚೀನs ಬ್ಯಾರೆ. ಹಾಡು ಹಾಡವ್ರು, ಹಾಡಸವ್ರು ಶಬ್ದದ ಮೂಲಾ ತಿಳಕೋಬೇಕಕ್ಕೈತಿ. ಇಲ್ಲಾಂದ್ರ ಒಂದ್ ಹೋಗಿ ಮತ್ತೊಂದು ಆಗೂದು ಗ್ಯಾರಂಟಿ.

ಬೆಂಗಳೂರಿನ ಕಡೆಯವ್ರಿಂದ ಹಿಂಗs ಅಪಾರ್ಥ ಆಗಿ ಬಳಕಿ ಆಗಿರೂವಂಥಾ ಉತ್ತರ ಕರ್ನಾಟಕದ ಇನ್ನೂ ಭಾಳ ಶಬ್ದಾ ಅದಾವು. ಯಾವ್ಯಾವ್ದೋ ವಿಷಯದ ಬಗ್ಗೆ ಸಂಶೋಧನಾ ಮಾಡೂ ನಮ್ಮ ಇನವರ್ಸಿಟಿಗೋಳು ಇದರ ಸಲುವಾಗೇ ಒಂದ್ ಪಿಎಚ್.ಡಿ. ಮಾಡಿಸಬೌದು. ಧಾರ್‍ವಾಡದ ಭಾಷಾ, ಮತ್ತ ಅದರ ಒಳಗಿನ ಅರ್ಥ ತಿಳಕೊಳ್ಳಲಾರ್‍ದನs ಹೆಂಗ್ ಬೇಕೋ ಹಂಗ್ ಹಾಡೂದು ಇಕ್ಕಡಿಯವ್ರಿಗೆ ರೂಢಾ ಆಗಿಬಿಟ್ಟೈತಿ. ಒಂದೆರ್‍ಡು ಉದಾಹರಣಿ ಹೇಳಬೇಕಂದ್ರ, ವರಕವಿ ದ.ರಾ. ಬೇಂದ್ರೆಯವರ ‘ನೀ ಹೀಂಗ್ ನೋಡಬ್ಯಾಡ ನನ್ನ...’ ಅನ್ನೂ ಅಗದೀ ಪ್ರಸಿದ್ಧ ದಾಂಪತ್ಯದುಃಖದ ಹಾಡಿನ್ಯಾಗಿನ ಕೆಲವು ಶಬ್ದಗಳ್ನ ಸಿನೇಮಾದ ಮಂದಿ ಬಳಸಿದ ರೀತೀನs ಗಮನಿಸಬೌದು. ಆ ಹಾಡಿನೊಳಗಿನ ‘ಧಾರೀಲೆ ನೆನೆದ’ (ಮದುವೆ ಧಾರೆಯಲ್ಲಿ ನೆನೆದದ್ದು) ಅನ್ನೂ ಶಬ್ದಾನ ‘ದಾರೀಲಿ ನೆನೆದೆ’ (ರೋಡಿನ್ಯಾಗ ಮಳೀಗೆ ನೆನೆದೆ) ಅಂತ, ‘ಮುಗಲsನ ಕತ್ತರಿಸಿ’ (ಮುಗಲು ಹರದು) ಅನ್ನೂ ಶಬ್ದಾನ ‘ಮುಗಿಲಿನ ಕತ್ತರಿಸಿ’ (ಅರ್ಥವೇ ಇಲ್ಲ, ಅಥವಾ ಮುಗಿಲನ್ನ ಕಟ್ ಮಾಡಿ) ಅಂತ, ‘ಎವೆ ಬಡಿಸಿ ಕೆಡವು’ (ಕಣ್ಣಿನ ರೆಪ್ಪೀ ಬಡದು) ಅನ್ನೂ ಶಬ್ದಾನ ‘ಎದೆ ಬಡಿಸಿ ಕೆಡವು’ (ಎದೆ ಬಡಿಸಿ ಏನ್ ಕೆಡವಬೇಕೋ ಗೊತ್ತಿಲ್ಲ) ಅಂತ ಹಾಡ್ಸ್ಯಾರ. ಬೇಂದ್ರೆಯವರು ಬಳಸಿದಂಥಾ ದೇಸಿ ನುಡಿಗಟ್ಟಿನ ಮೂಲ ಅರ್ಥಗಳನ್ನ ಈ ಸಿನೇಮಾದ ಮಂದಿ ಬಳಸಿರೋ ಶಬ್ದಗೋಳು ಪೂರ್ತಿ ಅಪಾರ್ಥಾ ಮಾಡ್ಯಾವನ್ನೂದನ್ನ ಇಲ್ಲೀತನ್ಕ ಯಾರೂ ದರಕಾರಾ ಮಾಡೇ ಇಲ್ಲ. ಇನ್ನೂ ಮಜಾ ಅಂದ್ರ ಇದs ಹಾಡಿನೊಳಗ ಬೇಂದ್ರೆಯವರು ‘ಇಬ್ಬನಿ ತೊಳೆದರೂ ಹಾಲು ಮೆತ್ತಿದಾ ಕವಳಿಕಂಟಿಯಾ ಹಣ್ಣು’ ಅಂತ ಒಂದು ಸಾಲು ಬರದಾರ.

ಇದರ ಅರ್ಥ ಆಗಬೇಕಂದ್ರ ಕವಳಿ ಹಣ್ಣು ನೋಡಿರಾಕsಬೇಕು. ಕವಳಿ ಹಣ್ಣಿನ ಮ್ಯಾಲ ಸುರಿಯೂ ಅದರ ಹಾಲಿನ ರಸಾ, ಇಬ್ಬನ್ನಿ ಹನಿ ಬಿದ್ರೂ ತೊಳದು ಹೋಗುದುಲ್ಲ. ಅಷ್ಟು ಗಟ್ಟ್ಯಾಗಿ ಕುಂತಿರತೈತಿ ಅದು. ನಿನ್ನ ಕಣ್ಣೀರೂ ಸೈತ ಆ ಕವಳೀ ಹಣ್ಣಿನ ಹಾಲಿನೆಂಗ್ ಗಟ್ಟ್ಯಾಗಿ ಕುಂತೈತಿ, ಅದನ್ನ ಕಣ್ಣರೆಪ್ಪೀ ಅಳಗಾಡಿಸಿ ಉದುರ್‍ಸು ಅನ್ನೂ ಅರ್ಥದೊಳಗ ಬೇಂದ್ರೆಯವರು ಆ ಮಾತು ಬಳಸ್ಯಾರ. ಆದ್ರ ಇದನ್ನ ಸಿನೇಮಾದ ಮಂದಿ ‘ಇಬ್ಬನಿ ತೊಳೆದರೂ ಹಾಲು ಮೆತ್ತಿದಾ ಕವಳ ಕಾಂಟೆಯಾ ಹಣ್ಣು’ ಅಂತ ಮಾಡಿ ಹಾಡ್ಸ್ಯಾರ! ಎಲ್ಲೀ ‘ಕವಳಿ ಕಂಟಿಯಾ ಹಣ್ಣು?’, ‘ಎಲ್ಲೀ ಕವಳ ಕಾಂಟೆಯಾ ಹಣ್ಣು?’ ಛೇ...! ಒಂದಕ್ಕೊಂದಕ್ಕ ಸಂಬಂಧನs ಇಲ್ಲ! (ಈ ಉಪಾದ್ವ್ಯಾಪಿ ನಡದದ್ದು ಪ್ರೇಮತರಂಗ ಸಿನೇಮಾದಾಗ). ಹಾಡಿನ ಮೂಲ ಬನಿ, ದನಿ, ಬೆಡಗು, ಬೆರಗು, ದೇಸಿತನಾ–ಇವೆಲ್ಲಾ ತಿಳೀಬೇಕಂದ್ರ ಅರ್ಥಕ್ಕಿಂತ ಮೊದ್ಲ ಆ ಶಬ್ದಗಳನ್ನ ಬಳಸೂ ರೀತೀನ ತಿಳಕೋಬೇಕಾಕ್ಕೈತಿ. ಇಲ್ಲಂದ್ರ ಕವಿ ಮಾಡಿದ್ದs ಒಂದು; ಇವ್ರು ಹಾಡಿದ್ದs ಒಂದಾಗಿ, ಮೂಲ ಅರ್ಥಾನs ಹದಗೆಟ್ಟು ಹಳ್ಳಾಕೂಡಿ ಹೋಗಿಬಿಡತೈತಿ.

ನೆಲದ ಭಾಷಾದ ನೆಲೀ ತಿಳೀಲಾರ್‍ದ ಹಿಂತಾ ತಪ್ಪು ಮಾಡಬಾರ್ದು; ಆಗಬಾರ್‍ದು. ಭಾಷೆ ಅಥವಾ ಶಬ್ದ ಅಂದ್ರ, ಅದು ಎದೀ ಒಳಗಿನ ಅರ್ಥ ಅಥವಾ ದನಿಯ ಭಾಳ ಮುಖ್ಯ ಅಂಗ ಅಥವಾ ಅಂಗಿ. ಆ ಅಂಗ ಅಥವಾ ಅಂಗೀನs ಹರದು, ಛಂದಗೇಡಿ ಮಾಡಿ ಬಿಟ್ರ ಅರ್ಥದ ಅಂದನs ಕೆಡತೈತಿ. ಅರ್ಥ ಕೆಟ್ರ ಆ ಶಬ್ದಾ ಬಳಸಿದ್ದೂ ವ್ಯರ್ಥ ಅಕ್ಕೈತಿ. ವಾಕ್ ಮತ್ತು ಅರ್ಥ (ವಾಗರ್ಥ)ಗಳೊಳಗೆ ಶಿವ-ಶಕ್ತಿಯರ ನಡುವೆ ಇರೋ ಸಂಬಂಧ ಇರತೈತಿ ಅಂತ ನಮ್ಮ ಕಾವ್ಯಪರಿಣತರು ಹೇಳ್ಯಾರ. ವಾಕ್ ಕೆಡಿಸಿದ್ರ, ಅರ್ಥಾ ಅಪಾರ್ಥ ಅಕ್ಕೈತಿ. ಅದರ ಕಡೆ ನಮ್ಮ ಸಿನೇಮಾದ ಮಂದಿ ಒಂದೀಟು ಗಮನಾ ಹರಸ್ಬೇಕು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry