ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೆಲುವಿನ ಭ್ರಮೆಯಲ್ಲಿ ಮುಖ್ಯಮಂತ್ರಿ: ಎಚ್‌ಡಿಕೆ ವಾಗ್ದಾಳಿ

Last Updated 1 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಜಾತಿ ರಾಜಕಾರಣ ಮತ್ತು ಸುಳ್ಳು ಪ್ರಚಾರದ ಮೂಲಕ ಚುನಾವಣೆ ಗೆಲ್ಲಬಹುದು ಎಂಬ ಭ್ರಮೆಯಲ್ಲಿದ್ದಾರೆ’ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ವಾಗ್ದಾಳಿ ಮಾಡಿದ್ದಾರೆ.

ಇತ್ತೀಚೆಗೆ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿ ಚೇತರಿಸಿಕೊಳ್ಳುತ್ತಿರುವ ಕುಮಾರಸ್ವಾಮಿ ಭಾನುವಾರ ಅಪೊಲೋ ಆಸ್ಪತ್ರೆಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ‘ಜನ ತಮ್ಮ ಆಡಳಿತದಿಂದ ಸಂತೃಪ್ತರಾಗಿದ್ದಾರೆ ಎಂದು ಸಿದ್ದರಾಮಯ್ಯ ಭಾವಿಸಿದ್ದಾರೆ. ಅದು ನಿಜವಲ್ಲ’ ಎಂದರು.

‘ನಮ್ಮ ಜನ ಅಬ್ಬರದ ಪ್ರಚಾರ ತಂತ್ರಗಳಿಗೆ ಮರುಳಾಗುವಷ್ಟು ಮೂರ್ಖರಲ್ಲ ಎಂಬುದನ್ನು ಸಿದ್ದರಾಮಯ್ಯನವರು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದೂ ಹೇಳಿದರು.

ಬೆಂಗಳೂರಿನಲ್ಲಿ ಮಳೆ ಮತ್ತು ಪ್ರವಾಹದಿಂದ ಜನ ಸಂಕಷ್ಟದಲ್ಲಿದ್ದಾರೆ. ಇದರಿಂದ ಆಗುತ್ತಿರುವ ಸಮಸ್ಯೆಗಳನ್ನು ತಡೆಯುವಲ್ಲಿ ಮುಖ್ಯಮಂತ್ರಿ ವಿಫಲರಾಗಿದ್ದಾರೆ. ರೈತರ ಸಮಸ್ಯೆಗಳಿಗೆ ಕಿವಿಗೊಡುತ್ತಿಲ್ಲ ಎಂದು ಕುಮಾರಸ್ವಾಮಿ ಆರೋಪಿಸಿದರು.

‘ದಸರಾ ಉದ್ಘಾಟನೆ ಸಮಯದಲ್ಲಿ ಪೂಜೆ ಸಲ್ಲಿಸುವಾಗ ಮುಂದಿನ ಐದು ವರ್ಷ ತಾವೇ ಮುಖ್ಯಮಂತ್ರಿಯಾಗಿ ಮುಂದುವರಿಯುವುದಾಗಿ ಸಿದ್ದರಾಮಯ್ಯ ಹೇಳಿದ್ದರು. ಈ ಹಿಂದೆ ಯಡಿಯೂರಪ್ಪ ಅವರು ಹೀಗೆಯೇ ಹೇಳಿದ್ದರು. 10 ವರ್ಷಗಳ ಕಾಲ ತಮ್ಮನ್ನು ಅಲುಗಾಡಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದಿದ್ದರು. ಮುಂದೇನಾಯಿತು ಎಂಬುದು ಎಲ್ಲರಿಗೂ ಗೊತ್ತಿದೆ. ನಾನು ಶಸ್ತ್ರ ಚಿಕಿತ್ಸೆಗೆ ಒಳಗಾಗಿರುವುದರಿಂದ ಜೆಡಿಎಸ್‌ ಶಕ್ತಿ ಕುಂದಿದೆ ಮತ್ತು ಬಿಜೆಪಿ ಲೆಕ್ಕಕ್ಕೇ ಇಲ್ಲ ಎಂದು ಭಾವಿಸಿದ್ದರೆ. ಅದು ಅವರ ತಪ್ಪು ಗ್ರಹಿಕೆ’ ಎಂದು ತಿಳಿಸಿದರು.

ಖಾಸಗಿ ಆಸ್ಪತ್ರೆಗಳ ಮಸೂದೆ ಬಗ್ಗೆ ತೀವ್ರ ವಿರೋಧ ವ್ಯಕ್ತಪಡಿಸಿದ ಅವರು, ’ಸಚಿವ ರಮೇಶ್‌ ಕುಮಾರ್‌ ಅವರು ಇತರರಿಗಿಂತ ಭಿನ್ನ ಎಂದು ಭಾವಿಸಿದ್ದೆ. ಆದರೆ, ಇಂತಹ ಕೆಟ್ಟ ಆರೋಗ್ಯ ಮಂತ್ರಿಯನ್ನು ಈವೆರೆಗೂ ನೋಡಿಲ್ಲ. ವೈದ್ಯರನ್ನು ಜೈಲಿಗೆ ಕಳುಹಿಸುವುದಾಗಿ ಹೇಳುತ್ತಿದ್ದಾರೆ’ ಎಂದರು.

‘ಬಿಜೆಪಿ ಪರಿವರ್ತನೆ ಯಾತ್ರೆ ಮಾಡುವ ಮೊದಲು ಈ ಹಿಂದೆ ಆಡಳಿತದಲ್ಲಿ ಇದ್ದಾಗ ಮಾಡಿದ ಅಕ್ರಮಗಳ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಲಿ. ಮಹದಾಯಿ ನದಿ ವಿವಾದವನ್ನು ಬಗೆಹರಿಸುವುದಾಗಿ ಹೇಳಿಕೊಂಡಿದ್ದರು. ಆದರೆ, ಇಲ್ಲಿಯವರೆಗೆ ಏನೂ ಮಾಡಿಲ್ಲ’ ಎಂದು ಅವರು ತರಾಟೆಗೆ ತೆಗೆದುಕೊಂಡರು.

ಆಸ್ಪತ್ರೆಯಿಂದ ಇಂದು ಬಿಡುಗಡೆ:

ಸೆ. 23 ರಂದು ಹೃದಯದ ಕವಾಟ ಬದಲಾವಣೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಕುಮಾರಸ್ವಾಮಿ ಸೋಮವಾರ ಆಸ್ಪತ್ರೆಯಿಂದ ಬಿಡುಗಡೆ ಆಗಲಿದ್ದಾರೆ.

ಒಂದು ತಿಂಗಳ ವಿಶ್ರಾಂತಿ ಅಗತ್ಯವಿರುವುದರಿಂದ ರಾಜಕೀಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದಿಲ್ಲ ಎಂದು ಮೂಲಗಳು ತಿಳಿಸಿವೆ.

‘20 ರಿಂದ 25 ದಿವಸಗಳವರೆಗೆ ವಿಶ್ರಾಂತಿ ತೆಗೆದುಕೊಳ್ಳಲು ವೈದ್ಯರು ಸಲಹೆ ನೀಡಿದ್ದಾರೆ. ಈಗ ಸಂಪೂರ್ಣ ಗುಣಮುಖನಾಗಿದ್ದೇನೆ. ನವೆಂಬರ್‌ನಲ್ಲಿ ರಾಜ್ಯ ಪ್ರವಾಸ ಮಾಡಲು ಉದ್ದೇಶಿಸಿದ್ದೇನೆ. ಆದ್ದರಿಂದ ಪಕ್ಷದ ಕಾರ್ಯಕರ್ತರು ಮತ್ತು ಹಿತೈಷಿಗಳು 20–25 ದಿನಗಳವರೆಗೆ ಭೇಟಿ ಆಗುವುದು ಬೇಡ’ ಎಂದು ಅವರು ಮನವಿ ಮಾಡಿದರು.

‘ಕಳೆದ ತಿಂಗಳು ಇಸ್ರೇಲ್‌ಗೆ ತೆರಳುವ ಸಂದರ್ಭದಲ್ಲಿ ಮುಂಬೈನಲ್ಲಿ ಹೃದಯಾಘಾತಕ್ಕೆ ಒಳಗಾಗಿದ್ದೆ. ಶಸ್ತ್ರಚಿಕಿತ್ಸೆಯಿಂದ ನನಗೆ ಪುನರ್ಜನ್ಮ ಸಿಕ್ಕಿದೆ. ಇಂತಹ ಉತ್ತಮ ಚಿಕಿತ್ಸೆ ಎಲ್ಲರಿಗೂ ಸಿಗಬೇಕು ಎಂಬುದು ನನ್ನ ಆಶಯ’ ಎಂದು ಕುಮಾರಸ್ವಾಮಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT