ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಎಸ್‌ಟಿ ತೆರಿಗೆ ಹಂತ ಇಳಿಕೆ?

ಸುಧಾರಣಾ ಕ್ರಮಕ್ಕೆ ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಇಂಗಿತ
Last Updated 1 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಫರೀದಾಬಾದ್: ಸರಕು ಮತ್ತು ಸೇವಾ ತೆರಿಗೆ ದರಗಳ (ಜಿಎಸ್‌ಟಿ) ಹಂತಗಳನ್ನು ತಗ್ಗಿಸುವ ಸಾಧ್ಯತೆ ಬಗ್ಗೆ ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರು ಇಂಗಿತ ವ್ಯಕ್ತಪಡಿಸಿದ್ದಾರೆ.

‘ಜಿಎಸ್‌ಟಿ ಜಾರಿಗೆ ಬಂದು ಈಗ ಮೂರು ತಿಂಗಳಷ್ಟೇ ಆಗಿದೆ. ಹೊಸ ವ್ಯವಸ್ಥೆ ಜಾರಿ ಸಂಬಂಧ ಸುಧಾರಣೆಗೆ ಸಾಕಷ್ಟು ಅವಕಾಶವೂ ಇದೆ. ಸಣ್ಣ ತೆರಿಗೆದಾರರ ಮೇಲಿನ ತೆರಿಗೆ ಪಾವತಿ ಬದ್ಧತೆಯ ಹೊರೆಯನ್ನೂ ಕಡಿಮೆ ಮಾಡಲೂ ಸಾಧ್ಯವಿದೆ’ ಎಂದು ಹೇಳಿದ್ದಾರೆ. ಭಾನುವಾರ ಇಲ್ಲಿ ನಡೆದ ಸೀಮಾಸುಂಕ, ಪರೋಕ್ಷ ತೆರಿಗೆ ಮತ್ತು ಮಾದಕ ವಸ್ತು ರಾಷ್ಟ್ರೀಯ ಅಕಾಡೆಮಿಯ (ಎನ್ಎಸಿಐಎನ್‌) ಸಂಸ್ಥಾಪನಾ ದಿನಾಚರಣೆಯ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.

‘ವರಮಾನ ಸಂಗ್ರಹ ಹೆಚ್ಚಳಗೊಂಡು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವರಮಾನದಲ್ಲಿ ಯಾವುದೇ ಏರುಪೇರು ಆಗದಿದ್ದರೆ ತೆರಿಗೆ ದರ ಹಂತಗಳನ್ನು ಕಡಿಮೆ ಮಾಡುವ ಬಗ್ಗೆ ಚಿಂತಿಸಬಹುದಾಗಿದೆ’ ಎಂದು ಹೇಳಿದ್ದಾರೆ.

‘ನೇರ ತೆರಿಗೆಯ ಹೊರೆಯನ್ನು ಉಳ್ಳವರು ಮತ್ತು ಮಧ್ಯಮ ವರ್ಗದ ಜನರು ಭರಿಸುತ್ತಾರೆಯೇ ಹೊರತು ದುರ್ಬಲ ವರ್ಗದವರಲ್ಲ. ಆದರೆ, ಪರೋಕ್ಷ ತೆರಿಗೆಯ ಹೊರೆಯನ್ನು ಸಮಾಜದ ಎಲ್ಲ ವರ್ಗದ ಜನರು ಭರಿಸಬೇಕಾಗುತ್ತದೆ. ಸಾಮೂಹಿಕ ಬಳಕೆಯ ಸರಕುಗಳ ಮೇಲಿನ ತೆರಿಗೆ ದರಗಳನ್ನು ತಗ್ಗಿಸುವುದು ಸರ್ಕಾರದ ಮುಖ್ಯ ಆದ್ಯತೆ ಆಗಿದೆ’ ಎಂದರು.

‘ಜನ ಸಾಮಾನ್ಯರು ಬಳಸುವ ಸರಕುಗಳ ಮೇಲಿನ ತೆರಿಗೆ ಹೊರೆಯನ್ನು ಇತರ ವರ್ಗದವರು ಖರೀದಿಸುವ ಸರಕುಗಳಿಗಿಂತ ಕಡಿಮೆ ಮಾಡುವುದು ಸರ್ಕಾರದ ವಿತ್ತೀಯ ನೀತಿಯ ಭಾಗವೂ ಆಗಿರುತ್ತದೆ. ನಮ್ಮಲ್ಲಿ ತೆರಿಗೆ ಪಾವತಿ ಬದ್ಧತೆ ಪ್ರಮಾಣ ಕಡಿಮೆ ಇದೆ. ಅಭಿವೃದ್ಧಿ ಬಯಸುವ ಜನರು, ಅಭಿವೃದ್ಧಿ ಕಾರ್ಯಕ್ರಮಗಳಿಗೆ ಅಗತ್ಯವಾದ ಸಂಪನ್ಮೂಲ ಸಂಗ್ರಹಿಸಲು ತೆರಿಗೆ ಪಾವತಿಸುವ ಹೊಣೆಗಾರಿಕೆಯನ್ನೂ ಸರಿಯಾಗಿ ನಿಭಾಯಿಸಬೇಕು’ ಎಂದೂ ಅವರು ಕಿವಿಮಾತು ಹೇಳಿದ್ದಾರೆ.

‘ತೆರಿಗೆ ಪಾವತಿಸಲು ಬದ್ಧರಲ್ಲದವರಿಂದ ಬಲವಂತವಾಗಿ ವಸೂಲಿ ಮಾಡುವ ಬದಲಿಗೆ, ತೆರಿಗೆ ಪಾವತಿಸಲು ಅರ್ಹರಾದವರಿಂದ ವಸೂಲಿ ಮಾಡಲು ಹೆಚ್ಚು ಗಮನ ಕೇಂದ್ರೀಕರಿಸಿ’ ಎಂದು ಅವರು ತೆರಿಗೆ ಅಧಿಕಾರಿಗಳಿಗೆ ಸಲಹೆ ನೀಡಿದರು.

‘ಒಂದು ದೇಶ, ಒಂದು ತೆರಿಗೆ ವ್ಯವಸ್ಥೆ’ಯು ಜಿಎಸ್‌ಟಿಯ ಮೂಲ ಆಶಯವಾಗಿದೆ. ಒಕ್ಕೂಟ ವ್ಯವಸ್ಥೆಯಲ್ಲಿನ ಕೆಲ ಅನಿವಾರ್ಯತೆ ಕಾರಣಕ್ಕೆ ಜಿಎಸ್‌ಟಿ ಮಂಡಳಿಯು ನಾಲ್ಕು ಹಂತದ (ಶೇ 5, 12, 18 ಮತ್ತು 28) ತೆರಿಗೆ ವ್ಯವಸ್ಥೆಗೆ ಸಮ್ಮತಿ ನೀಡಿದೆ. ರಾಜ್ಯಗಳ ನಷ್ಟ ಭರ್ತಿ ಮಾಡಿಕೊಡುವ ಉದ್ದೇಶಕ್ಕೆ ಆರೋಗ್ಯಕ್ಕೆ ಹಾನಿಕರ ಮತ್ತು ವಿಲಾಸಿ ಸರಕುಗಳ ಮೇಲೆ ಪ್ರತ್ಯೇಕವಾಗಿ ಪರಿಹಾರ ಸೆಸ್‌ ವಿಧಿಸಲಾಗುತ್ತಿದೆ. ಹೀಗಾಗಿ ಸದ್ಯ ಜಾರಿಯಲ್ಲಿ ಇರುವ ಜಿಎಸ್‌ಟಿ ಮಾದರಿಯು ಮೂಲ ಆಶಯಕ್ಕಿಂತ ಸಂಪೂರ್ಣ ಭಿನ್ನವಾಗಿದೆ. ಹೆಚ್ಚೆಚ್ಚು ವರಮಾನ ಸಂಗ್ರಹವಾಗುತ್ತಿದ್ದಂತೆ ತೆರಿಗೆ ದರ ಹಂತಗಳನ್ನು ಇನ್ನಷ್ಟು ಸರಳಗೊಳಿಸುವ ಭರವಸೆ ಜೇಟ್ಲಿ ಅವರ ಮಾತುಗಳಲ್ಲಿ ವ್ಯಕ್ತವಾಗಿದೆ.

**

ರೆವೆನ್ಯೂ ನ್ಯೂಟ್ರಲ್‌

ತೆರಿಗೆ ದರಗಳು ಬದಲಾದರೂ ಸರ್ಕಾರದ ವರಮಾನ ಸ್ಥಿರವಾಗಿರುವುದಕ್ಕೆ ‘ರೆವೆನ್ಯೂ ನ್ಯೂಟ್ರಲ್‌’ ಎನ್ನುತ್ತಾರೆ. ಕೆಲವರಿಗೆ ಅನ್ವಯವಾಗುವಂತೆ ಕಡಿಮೆ ತೆರಿಗೆ ದರ ವಿಧಿಸುವ ಸರ್ಕಾರ, ಇತರರ ಮೇಲೆ ಹೆಚ್ಚು ತೆರಿಗೆ ವಿಧಿಸಿರುತ್ತದೆ. ಇದರಿಂದ ಸರ್ಕಾರಕ್ಕೆ ಬರಬೇಕಾದ ವರಮಾನದಲ್ಲಿ ಯಾವುದೇ ವ್ಯತ್ಯಾಸ ಆಗಲಾರದು.

**

ತೆರಿಗೆ ವರಮಾನವು ಎಲ್ಲ ಅಭಿವೃದ್ಧಿ ಚಟುವಟಿಕೆಗಳಿಗೆ ಜೀವಸೆಲೆಯಾಗಿದೆ. ತೆರಿಗೆ ಪಾವತಿಯಲ್ಲಿ ಜನರ ಮೇಲೆ ದೊಡ್ಡ ಹೊಣೆಗಾರಿಕೆಯೂ ಇದೆ.

ಅರುಣ್‌ ಜೇಟ್ಲಿ, ಕೇಂದ್ರ ಹಣಕಾಸು ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT