ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂವಾದ ಶೂನ್ಯ ಸ್ಥಿತಿಗೆ ತಲುಪಿರುವ ಭಾರತ

Last Updated 1 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಸಾಗರ: ಬಂಡವಾಳ ಎನ್ನುವುದು ಎಲ್ಲವನ್ನೂ ನಿಯಂತ್ರಿಸುವ, ಖರೀದಿಸುವ ಶಕ್ತಿ ಪಡೆದಿರುವ ಕಾರಣ ಭಾರತದಲ್ಲಿ ತೋರಿಕೆಯ ಸಂವಾದ ಕೂಡ ಸಾಧ್ಯವಾಗದ ಸಂವಾದ ಶೂನ್ಯ ಸ್ಥಿತಿಗೆ ದೇಶ ತಲುಪಿದೆ ಎಂದು ಕೋಲ್ಕತ್ತಾದ ಲೇಖಕ ಸಮೀಕ್ ಬಂದೋಪಾಧ್ಯಾಯ ಹೇಳಿದರು.

ಇಲ್ಲಿಗೆ ಸಮೀಪದ ಹೆಗ್ಗೋಡಿನಲ್ಲಿ ‘ತಲೆಮಾರುಗಳ ನಡುವೆ ಸಂವಾದ’ ಎಂಬ ವಿಷಯವನ್ನು ಆಧರಿಸಿ ಭಾನುವಾರ ಆರಂಭವಾದ ನೀನಾಸಂ ಸಂಸ್ಕೃತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಸಂವಾದ ಶೂನ್ಯ ಸ್ಥಿತಿಯಲ್ಲೂ ಗೆರಿಲ್ಲಾ ಮಾದರಿಯಲ್ಲಿ ಸಣ್ಣಸಣ್ಣ ಗುಂಪುಗಳಿಂದ ಪ್ರತಿರೋಧ ಹುಟ್ಟುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ ಎಂದರು.

ವಿಜ್ಞಾನ ಮತ್ತು ತಂತ್ರಜ್ಞಾನವನ್ನು ವಿನಾಶಕಾರಿ ಕೆಲಸಕ್ಕೆ ಬಳಸಿಕೊಂಡ ಕಾರಣ ಮೊದಲನೇ ಹಾಗೂ ಎರಡನೇ ವಿಶ್ವಯುದ್ಧದಲ್ಲಿ ಹಿಂಸೆಯ ಭೀಕರ ಪರಿಣಾಮವನ್ನು ಎದುರಿಸುವಂತಾಯಿತು. ಈ ಹೊತ್ತಿಗೆ ಹಿಂಸೆಯ ವಿರುದ್ಧ ಪ್ರತಿರೋಧ ಕಂಡುಬಂದರೂ ಅದರ ಮುಂದಿನ ತಲೆಮಾರು ಪಾಠ ಕಲಿಯುವುದರಲ್ಲಿ ವಿಫಲವಾದ್ದರಿಂದ ಮಹಾಯುದ್ಧದ ನಂತರವೂ ಹಿಂಸಾತ್ಮಕ ಘಟನೆಗಳು ಜರುಗುತ್ತಲೇ ಇವೆ ಎಂದು ತಿಳಿಸಿದರು.

ನಮ್ಮ ಪ್ರಜ್ಞೆಯನ್ನು ಎಚ್ಚರಿಸಬೇಕಾದ ಮಾಧ್ಯಮ ಕೂಡ ಇಂದು ಬಂಡವಾಳಶಾಹಿ ಹಾಗೂ ಕಾರ್ಪೊರೇಟ್‌ ಹಿಡಿತಕ್ಕೆ ಒಳಗಾಗಿವೆ. ಈ ಕಾರಣ ಯುದ್ಧದ ವಿಷಯ ಕೂಡ ನಮ್ಮ ಸಂವೇದನೆಗಳನ್ನು ಜಾಗೃತಗೊಳಿಸದೆ ಕೇವಲ ‘ಸುದ್ದಿ’ಯ ಸ್ವರೂಪಕ್ಕೆ ಸೀಮಿತಗೊಳ್ಳುತ್ತಿದೆ. ಯುದ್ಧ ಅಥವಾ ಸಾವು, ಆಘಾತ ಹಾಗೂ ಭೀಬಿತ್ಸ ಅನಿಸದೆ ಅದೊಂದು ನಿತ್ಯದ ಸರ್ವೆ ಸಾಮಾನ್ಯ ಅನುಭವ ಎನ್ನುವಂತೆ ಚಿತ್ರಣಗೊಳ್ಳುತ್ತಿರುವುದು ತಲೆಮಾರುಗಳ ನಡುವಿನ ಸಂವಾದಕ್ಕೆ ಅಡ್ಡಿಯಾಗಿರುವ ಸಂಗತಿಯಾಗಿದೆ ಎಂದರು.

ವಿಮರ್ಶಕ ಟಿ.ಪಿ.ಅಶೋಕ್, ನೀನಾಸಂನ ಅಧ್ಯಕ್ಷ ಶ್ರೀಧರ್‌ ಭಟ್‌, ಕೆ.ವಿ.ಅಕ್ಷರ, ಜಸ್ವಂತ್‌ ಜಾಧವ್‌, ಇಕ್ಬಾಲ್‌ ಅಹ್ಮದ್ ಹಾಜರಿದ್ದರು. ಮಧ್ಯಾಹ್ನ ಪುಣೆಯ ಆರತಿ ತಿವಾರಿ ಅವರಿಂದ ‘ಮಂಶಾ ಕೀ ಶಾದಿ’ ಕಿರು ನಾಟಕ ಹಾಗೂ ಸಂಜೆ ಶಿವರಾಮ ಕಾರಂತ ರಂಗಮಂದಿರದಲ್ಲಿ ನೀನಾಸಂ ತಿರುಗಾಟ ನಾಟಕ ‘ಮಧ್ಯಮ ವ್ಯಾಯೋಗ’ (ಸಂಸ್ಕೃತ ಮೂಲ: ಭಾಸ. ಕನ್ನಡಕ್ಕೆ: ಎಲ್‌.ಗುಂಡಪ್ಪ,ನಿರ್ದೇಶನ: ಉಮೇಶ್‌ ಸಾಲ್ಯಾನ್‌) ಪ್ರದರ್ಶನಗೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT