ಶುಕ್ರವಾರ, ಸೆಪ್ಟೆಂಬರ್ 20, 2019
28 °C

ಸತ್ಯವನ್ನು ಒಪ್ಪಿಕೊಳ್ಳಲಾಗದ ಸ್ಥಿತಿಯಲ್ಲಿದ್ದೇನೆ

Published:
Updated:

ಹುಬ್ಬಳ್ಳಿ: ಹಾನಗಲ್ ಕುಮಾರಸ್ವಾಮಿಗಳು ಸ್ಥಾಪಿಸಿರುವ ವೀರಶೈವ ಸಂಪ್ರದಾಯದ ಮಠದ ಸ್ವಾಮೀಜಿ ತಾವಾಗಿರುವುದರಿಂದ, ಲಿಂಗಾಯತ ಸ್ವತಂತ್ರ ಧರ್ಮದ ಹೋರಾಟದಲ್ಲಿ ಯಾರನ್ನು ಬೆಂಬಲಿಸಬೇಕು ಎಂಬ ಗೊಂದಲದಲ್ಲಿರುವುದಾಗಿ ಮೂರುಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಭಾನುವಾರ ಇಲ್ಲಿ ಹೇಳಿದರು.

ವಿಶ್ವ ಲಿಂಗಾಯತ ಮಹಾಸಭಾ, ರಾಷ್ಟ್ರೀಯ ಬಸವದಳದ ಆಶ್ರಯದಲ್ಲಿ ಆಯೋಜಿಸಿದ್ದ ಚಿಂತನಾ ಸಭೆಯಲ್ಲಿ ಮಾತನಾಡಿದ ಅವರು, ‘ಸತ್ಯವನ್ನು ಒಪ್ಪಿಕೊಳ್ಳಲು ಸಾಧ್ಯವಾಗದ ಸ್ಥಿತಿಯಲ್ಲಿ ನಾನಿದ್ದೇನೆ’ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

‘ಬಾದಾಮಿ ತಾಲ್ಲೂಕಿನ ಶಿವಯೋಗ ಮಂದಿರದಲ್ಲಿ ಇತ್ತೀಚೆಗೆ ನಡೆದ ವೀರಶೈವ ಸಮಾವೇಶದಲ್ಲೂ ನಾನು ಭಾಗವಹಿಸಿದ್ದೆ. ಇದೀಗ ಲಿಂಗಾಯತ ಸ್ವತಂತ್ರ ಧರ್ಮ ಹೋರಾಟದಲ್ಲೂ ಪಾಲ್ಗೊಳ್ಳುತ್ತಿದ್ದೇನೆ. ಲಿಂಗಾಯತ, ವೀರಶೈವ ಎರಡೂ ಕಡೆಯಿಂದ ನನ್ನ ಮೇಲೆ ತೀವ್ರ ಒತ್ತಡ ಇದೆ. ಇಲ್ಲಿ ಇರಲು ಆಗುತ್ತಿಲ್ಲ, ಅಲ್ಲಿಗೆ ಹೋಗಲು ಆಗುತ್ತಿಲ್ಲ. ಇದೀಗ ಎಂಥ ತ್ಯಾಗಕ್ಕೂ ಸಿದ್ಧನಾಗಿ ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆ ಹೋರಾಟದಲ್ಲಿ ಭಾಗವಹಿಸುತ್ತಿದ್ದೇನೆ’ ಎಂದರು.

‘ಶಿವಯೋಗ ಮಂದಿರದಲ್ಲಿ ಪ್ರತಿ ದಿನ ಪ್ರಸಾದವಾದ ಬಳಿಕ ವಚನವನ್ನು ಓದಿ, ಅರ್ಥ ಹೇಳುವ ಸಂಪ್ರದಾಯ ಇಂದಿಗೂ ಇದೆ. ಅಲ್ಲದೇ, ಹಾನಗಲ್ ಕುಮಾರಸ್ವಾಮಿಗಳು ತಾವು ಬರೆಯುತ್ತಿದ್ದ ಪ್ರತಿಯೊಂದು ಪತ್ರದ ಮೇಲೆ ‘ಶ್ರೀಗುರು ಬಸವಲಿಂಗಾಯ ನಮಃ’ ಎಂದು ಬರೆಯುತ್ತಿದ್ದರು. ಹೀಗಾಗಿ ಲಿಂಗಾಯತ ಸ್ವತಂತ್ರ ಧರ್ಮ ಹೋರಾಟವನ್ನು ಬೆಂಬಲಿಸುವುದಲ್ಲಿ ಅರ್ಥವಿದೆ’ ಎಂದು ಹೇಳಿದರು.

‘ವೀರಶೈವ-ಲಿಂಗಾಯತ ಬೇರೆ ಬೇರೆಯಲ್ಲ. ಆದರೂ ಸಹ ಸಮಾಜದ ಒಳಿತಿಗಾಗಿ ಲಿಂಗಾಯತ ಕ್ಕೆ ಆದಷ್ಟು ಶೀಘ್ರ ಸ್ವತಂತ್ರ ಧರ್ಮದ ಸಂವಿಧಾನಾತ್ಮಕ ಮಾನ್ಯತೆ ಸಿಗಬೇಕು’ ಎಂದು ಪ್ರತಿಪಾದಿಸಿದರು.ಅಮಿತ್ ಷಾ ಯಾರು?:

‘ಸ್ವತಂತ್ರ ಲಿಂಗಾಯತ ಧರ್ಮ ಹೋರಾಟ ವಿರೋಧಿಸಲು ಬಿಜೆಪಿ ರಾಷ್ಟ್ರೀಯ ಘಟಕದ ಅಧ್ಯಕ್ಷ ಅಮಿತ್ ಷಾ ಯಾರು’ ಎಂದು ಪ್ರಶ್ನಿಸಿದ ಗಣಿ ಮತ್ತು ಭೂ ವಿಜ್ಞಾನ ಸಚಿವ, ರಾಷ್ಟ್ರೀಯ ಬಸವ ಸೇನೆ ಅಧ್ಯಕ್ಷ ವಿನಯ ಕುಲಕರ್ಣಿ, ‘ಜೈನ ಸಮಾಜದವರಾಗಿರುವ ಅವರು ನಮ್ಮ ಈ ಹೋರಾಟಕ್ಕೆ ತಡೆ ಒಡ್ಡುವುದು ಎಷ್ಟು ಸರಿ?’ ಎಂದು ಕೇಳಿದರು.

‘ಒಂದು ಕಾಲದಲ್ಲಿ ಹಿಂದೂ ಧರ್ಮದ ಭಾಗವಾಗಿದ್ದ ಜೈನ ಸಮಾಜ ಇದೀಗ ಸ್ವತಂತ್ರವಾಗಿರುವಂತೆ, ಲಿಂಗಾಯತವೂ ಸ್ವತಂತ್ರವಾಗಲಿದೆ. ಇದರಿಂದ ಹಿಂದೂ ಧರ್ಮಕ್ಕೆ ಯಾವುದೇ ಹಾನಿಯಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ಪ್ರತ್ಯೇಕ ಧರ್ಮ ಹೋರಾಟದಲ್ಲಿ ಬಿಜೆಪಿಯ ಲಿಂಗಾಯತ ಮುಖಂಡರು ಭಾಗವಹಿಸದೇ ಇರುವುದು ಖಂಡನೀಯ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬುದ್ಧಿ ಭ್ರಷ್ಟರಿಂದ ಧರ್ಮ ಒಡೆಯುವ ಕಾರ್ಯ: ಸು.ರಾಮಣ್ಣ

ಬಾಗಲಕೋಟೆ: ‘ಕಾವಿ ವಸ್ತ್ರಧಾರಿಗಳು ವಿಶ್ವವನ್ನೇ ಒಂದುಗೂಡಿಸುವ ಹೊಣೆ ಹೊತ್ತಿರುತ್ತಾರೆ. ಆದರೆ ಅಂತಹವರ ಪೈಕಿಯೂ ಬುದ್ಧಿ ಭ್ರಷ್ಟರಾದ ಕೆಲವರು ಧರ್ಮ ಒಡೆಯುವ ಕಾರ್ಯಕ್ಕೆ ಮುಂದಾಗಿದ್ದು, ನಾವು ಅವರನ್ನು ಸಮರ್ಥವಾಗಿ ಎದುರಿಸಲಿದ್ದೇವೆ’  ಎಂದು ಆರ್‌ಎಸ್‌ಎಸ್‌ನ ಹಿರಿಯ ಪ್ರಚಾರಕ ಸು.ರಾಮಣ್ಣ ಭಾನುವಾರ ಇಲ್ಲಿ ಹೇಳಿದರು.

ವಿಜಯದಶಮಿ ಅಂಗವಾಗಿ ನಡೆದ ವಾರ್ಷಿಕ ಪಥಸಂಚಲನದಲ್ಲಿ ಪಾಲ್ಗೊಂಡು ಮಾತನಾಡಿದ ಅವರು,‘ಧರ್ಮದ ಪರಿಕಲ್ಪನೆಯನ್ನೇ ತಿಳಿಯದವರು ಲಿಂಗಾಯತ ಪ್ರತ್ಯೇಕ ಧರ್ಮ ಎಂದು ಹೇಳುತ್ತಿದ್ದಾರೆ. ಅವರು ಭ್ರಮೆಗೆ ಒಳಗಾಗಿರುವುದು ಕಂಡು ದುಃಖವಾಗುತ್ತಿದೆ. ತಮ್ಮ ಹೆಸರಿನಲ್ಲಿ ‘ರಾಮ’ ಎಂದು ಇಟ್ಟುಕೊಂಡಿರುವ ದೊಡ್ಡ ರಾಜಕಾರಣಿಯೊಬ್ಬರು ಚುನಾವಣೆಯಲ್ಲಿ ಗೆಲ್ಲಲೇಬೇಕು ಎಂಬ ಕಾರಣಕ್ಕೆ ಹಿಂದೂ ಸಮಾಜವನ್ನು ಒಡೆಯುವ ಕೆಲಸಕ್ಕೆ ಕೈ ಹಾಕಿದ್ದಾರೆ’ ಎಂದು ಹೇಳಿದರು.

‘ಮೊದಲೆಲ್ಲಾ ಜನಗಣತಿಗೆ ಬಂದಾಗ ಮಾತ್ರ ಸ್ವತಂತ್ರ ಧರ್ಮ ಎಂದು ನಾಲ್ಕಾರು ಜನ ಹೇಳುತ್ತಿದ್ದರು. ಈಗ ಅನ್ಯ ಉದ್ದೇಶ ಇರುವ ಕೆಲವರು ಇದಕ್ಕೆ ಬೆಂಬಲವಾಗಿ ನಿಂತಿದ್ದಾರೆ’ ಎಂದು ಹೇಳಿದ ರಾಮಣ್ಣ, ‘ಧರ್ಮದ ಹೆಸರಿನಲ್ಲಿ ಸಮಾಜ ಒಡೆದು ಸಾಮರಸ್ಯ ಕೆಡಿಸುವುದು ನಿರ್ಲಜ್ಜ, ಬೇಜವಾಬ್ದಾರಿಯುತ ಚಟುವಟಿಕೆ’ ಎಂದು ಬಣ್ಣಿಸಿದರು.

‘ಹಿಂದೂ ಧರ್ಮ ಅನ್ನುವುದು ಇಲ್ಲವೇ ಇಲ್ಲ; ಜಾತಿಗಳು ಮಾತ್ರ ಇವೆ’ ಎಂಬ ಸಚಿವ ಕಾಗೋಡು ತಿಮ್ಮಪ್ಪ ಅವರ ಹೇಳಿಕೆ ಪ್ರಸ್ತಾಪಿಸಿದ ರಾಮಣ್ಣ, ‘ಯಾರ ಕಣ್ಣು ಹಳದಿ ಬಣಕ್ಕೆ ತಿರುಗಿದೆಯೋ ಅಂಥವರು ಈ ರೀತಿ ಹೇಳುತ್ತಾರೆ’ ಎಂದರು.

‘ಕೆಲವು ರಾಜಕಾರಣಿಗಳಿಗೆ ತಲೆ ಕೆಟ್ಟಿದೆ. ಎಲ್ಲವನ್ನೂ ಜಾತಿಯ ಕನ್ನಡಕದಲ್ಲಿ ನೋಡುತ್ತಾರೆ. ಬುದ್ಧಿಜೀವಿಗಳು, ರಾಜಕಾರಣಿಗಳು ಸಮಾಜದ ಸಾಮರಸ್ಯ ಕೆಡಿಸಿ ಸಮಸ್ಯೆ ಸೃಷ್ಟಿಸುವ ಕೆಲಸ ಮಾಡುತ್ತಿರುತ್ತಾರೆ. ಎಲ್ಲರ ಸವಾಲನ್ನೂ ಸಂಘ ಎದುರಿಸಿಕೊಂಡು ಬಂದಿದೆ. ವಿಘ್ನ ಸಂತೋಷಿಗಳಾದ ಇವರದು ಶನಿ ಸಂತಾನ’ ಎಂದು ಜರಿದರು.

ವೀರಶೈವ ಮಹಾಸಭಾ: 4ರಂದು ಬೆಂಗಳೂರಿನಲ್ಲಿ ತುರ್ತುಸಭೆ

ಪ್ರಜಾವಾಣಿ ವಾರ್ತೆ

ಬೆಳಗಾವಿ: ಅಖಿಲ ಭಾರತ ವೀರಶೈವ ಮಹಾಸಭಾದ ತುರ್ತುಸಭೆಯನ್ನು ಇದೇ 4ರಂದು ಬೆಂಗಳೂರಿನಲ್ಲಿ ಕರೆಯಲಾಗಿದೆ ಎಂದು ಮಹಾಸಭಾ ಕಾರ್ಯದರ್ಶಿ ಕಲ್ಯಾಣರಾವ ಮುಚಳಂಬಿ ಹೇಳಿದರು.

‘ಲಿಂಗಾಯತ ಸ್ವತಂತ್ರ ಧರ್ಮ ವಿಷಯ ಮುಂದಿಟ್ಟುಕೊಂಡು ಹೋರಾಡುತ್ತಿರುವವರು ಈಚೆಗೆ ನಡೆದ ಸಮಾವೇಶಗಳಲ್ಲಿ, ನಿಲುವು ಸ್ಪಷ್ಟಪಡಿಸುವಂತೆ ಮಹಾಸಭಾಕ್ಕೆ ಅ. 15ರವರೆಗೆ ಗಡುವು ನೀಡಿದ್ದಾರೆ. ಸಭೆಯಲ್ಲಿ ಈ ವಿಚಾರದ ಬಗ್ಗೆ ಚರ್ಚಿಸಿ, ಗಡುವು ನೀಡಿದವರಿಗೆ ತಕ್ಕ ಉತ್ತರ ಕೊಡಲಾಗುವುದು’ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಪ್ರತ್ಯೇಕ ಧರ್ಮದ ವಿಚಾರದಲ್ಲಿ ಈಗ ಉಂಟಾಗಿರುವ ಗೊಂದಲ ಹಾಗೂ ನಡೆಯುತ್ತಿರುವ ಬೆಳವಣಿಗೆಗಳಿಂದ ಸಮಾಜದವರಿಗೆ ಬಹಳ ನೋವಾಗಿದೆ. ಅಖಿಲ ಭಾರತ ವೀರಶೈವ ಮಹಾಸಭೆಯು ಸಮಸ್ತ ಸಮಾಜದ ಮಾತೃಸಂಸ್ಥೆ. ಹೀಗಿರುವಾಗ ವೀರಶೈವ ಸಮಾಜವನ್ನು ಒಡೆಯುವುದು ಸರಿಯಲ್ಲ. ಮಹಾಸಭಾಕ್ಕೆ ಎಲ್ಲರೂ ಬೇಕು. ಸಭೆಯಲ್ಲಿ ಇದನ್ನು ಮನವರಿಕೆ ಮಾಡಿಕೊಡಲು ಪ್ರಯತ್ನಿಸಲಾಗುವುದು’ ಎಂದರು.

ಉಪಾಧ್ಯಕ್ಷ ಮಲ್ಹಾರಿಗೌಡ ಎಸ್‌. ಪಾಟೀಲ ಮಾತನಾಡಿ, ‘ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲರಿಗೆ ಮುಖ್ಯಮಂತ್ರಿ ಆಗುವ ಆಸೆ ಇದೆ. ಹೀಗಾಗಿಯೇ ಅವರು ಲಿಂಗಾಯತ ಧರ್ಮದ ಕೂಗು ಎಬ್ಬಿಸಿದ್ದಾರೆ. ಜನರಲ್ಲಿ ಗೊಂದಲ ಹುಟ್ಟು ಹಾಕುತ್ತಿರುವ ಅವರ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಯಂತ್ರಣ ಹೇರಬೇಕು. ಇಲ್ಲದಿದ್ದಲ್ಲಿ ಮುಂದೆ ಅಪಾಯ ಕಾದಿದೆ’ ಎಂದು ಎಚ್ಚರಿಸಿದರು.

 

Post Comments (+)