ಗಾಂಧಿ ರಕ್ಷಣೆಗೆ ಅಮೆರಿಕ ಯತ್ನಿಸಿತ್ತೇ?

ಬುಧವಾರ, ಜೂನ್ 19, 2019
23 °C

ಗಾಂಧಿ ರಕ್ಷಣೆಗೆ ಅಮೆರಿಕ ಯತ್ನಿಸಿತ್ತೇ?

Published:
Updated:
ಗಾಂಧಿ ರಕ್ಷಣೆಗೆ ಅಮೆರಿಕ ಯತ್ನಿಸಿತ್ತೇ?

ನವದೆಹಲಿ : ಎರಡನೇ ವಿಶ್ವ ಮಹಾಯುದ್ಧದ ಸಂದರ್ಭದಲ್ಲಿ ಅಮೆರಿಕದ ಗುಪ್ತಚರ ಸಂಸ್ಥೆಯಾಗಿದ್ದ ಆಫೀಸ್‌ ಆಫ್‌ ಸ್ಟ್ರ್ಯಾಟೆಜಿಕ್‌ ಸರ್ವೀಸಸ್‌ (ಒಎಸ್‌ಎಸ್‌) ಮತ್ತು ನಂತರದ ಸೆಂಟ್ರಲ್‌ ಇಂಟಲಿಜೆನ್ಸ್‌ ಏಜೆನ್ಸಿ (ಸಿಐಎ) ಮಹಾತ್ಮ ಗಾಂಧಿ ಅವರನ್ನು ರಕ್ಷಿಸಲು ಯತ್ನಿಸಿದ್ದವೇ?

–ಗಾಂಧಿ ಹತ್ಯೆ ಪ್ರಕರಣವನ್ನು ಮರು ತನಿಖೆಗೆ ಒಳಪಡಿಸಬೇಕು ಎಂದು ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ (ಪಿಐಎಲ್‌) ಉಲ್ಲೇಖಿಸಲಾಗಿರುವ ಹಲವು ಪ್ರಶ್ನೆಗಳಲ್ಲಿ ಇದೂ ಒಂದು.

ಮುಂಬೈನ ಅಭಿನವ್‌ ಭಾರತ್‌ನ ಟ್ರಸ್ಟಿ ಹಾಗೂ ಅಧ್ಯಯನಕಾರ ಡಾ. ಪಂಕಜ್‌ ಫಡ್ನಿಸ್‌ ಅವರು ಈ ಅರ್ಜಿಯನ್ನು ಸಲ್ಲಿಸಿದ್ದಾರೆ. ಗಾಂಧಿ ಅವರ ಹತ್ಯೆ ಪ್ರಕರಣವು, ಚರಿತ್ರೆಯಲ್ಲಿ ಮುಚ್ಚಿಹಾಕಲಾಗಿರುವ ದೊಡ್ಡ ಪ್ರಕರಣಗಳಲ್ಲಿ ಒಂದಾಗಿದೆಯೇ ಎಂದೂ ಅವರು ಕೇಳಿದ್ದಾರೆ.

1948ರ ಜನವರಿ 30ರಂದು ಗಾಂಧೀಜಿ ಹತ್ಯೆಯಾದಾಗ ಭಾರತದಲ್ಲಿನ ಅಮೆರಿಕ ರಾಯಭಾರ ಕಚೇರಿಯಿಂದ ವಾಷಿಂಗ್ಟನ್‌ಗೆ ಟೆಲಿಗ್ರಾಂ ಕಳುಹಿಸಲಾಗಿತ್ತು. ಆದರೆ, ಅದಕ್ಕೆ ಸಂಬಂಧಿಸಿದ ಒಂದು ವರದಿಯು ಇನ್ನೂ ರಹಸ್ಯವಾಗಿಯೇ ಇದೆ ಎಂದು ಫಡ್ನಿಸ್‌ ಅರ್ಜಿಯಲ್ಲಿ ಹೇಳಿದ್ದಾರೆ.

ಈ ವರ್ಷದ ಮೇ ತಿಂಗಳಲ್ಲಿ ಫಡ್ನಿಸ್‌ ಅವರು ಅಮೆರಿಕದ ಮೇರಿಲ್ಯಾಂಡ್‌ನಲ್ಲಿರುವ ನ್ಯಾಷನಲ್‌ ಆರ್ಕೈವ್ಸ್‌ ಆಂಡ್‌ ರಿಸರ್ಚ್‌ ಅಡ್ಮಿನಿಸ್ಟ್ರೇಷನ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಂದು ಅಮೆರಿಕಕ್ಕೆ ಕಳುಹಿಸಿದ್ದ ಟೆಲಿಗ್ರಾಂಗಳಲ್ಲಿ ಒಂದರ ದಾಖಲೆಗಳನ್ನು ಅಧಿಕೃತವಾಗಿ ಪಡೆದಿರುವುದನ್ನು ಅವರು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.

1948ರ ಜನವರಿ 30ರಂದು ರಾತ್ರಿ 8 ಗಂಟೆಗೆ ಅಮೆರಿಕದ ರಾಯಭಾರ ಕಚೇರಿಯಿಂದ ವಾಷಿಂಗ್ಟನ್‌ಗೆ ಕಳುಹಿಸಲಾಗಿರುವ ‘ನಿರ್ಬಂಧಿತ’ ಟೆಲಿಗ್ರಾಂನ ಪ್ರಕಾರ, ಅಮೆರಿಕದ ಅಧಿಕಾರಿ ಹರ್ಬರ್ಟ್‌ ಟಾಮ್‌ ರೀನರ್‌ ಅವರು ಗಾಂಧಿ ಅವರನ್ನು ಹತ್ಯೆ ಮಾಡಿದ ಸ್ಥಳದಿಂದ ಕೇವಲ 5 ಅಡಿ ದೂರದಲ್ಲಿದ್ದರು ಮತ್ತು ಭಾರತದ ಭದ್ರತಾ ಸಿಬ್ಬಂದಿ ನೆರವಿನಿಂದ ಹಂತಕನನ್ನು ಹಿಡಿದಿದ್ದರು.

‘ರೀನರ್‌ ಅವರು ನಂತರ ರಾಯಭಾರ ಕಚೇರಿಗೆ ತೆರಳಿ ಈ ಘಟನೆ ಬಗ್ಗೆ ವರದಿ ನೀಡಿದ್ದರು. ಆದರೆ, 70 ವರ್ಷಗಳು ಕಳೆದ ಬಳಿಕವೂ ಈ ವರದಿಯ ವಿವರ ಲಭ್ಯವಿಲ್ಲ. ಅರ್ಜಿದಾರ (ಸ್ವತಃ ಫಡ್ನಿಸ್‌) ಅಮೆರಿಕದ ಮಾಹಿತಿ ಸ್ವಾತಂತ್ರ್ಯ ಕಾಯ್ದೆ ಅಡಿಯಲ್ಲಿ ವಿವರ ಬಹಿರಂಗಪಡಿಸುವಂತೆ ಅರ್ಜಿ ಹಾಕಿದ್ದಾರೆ’ ಎಂದು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯಲ್ಲಿ ಹೇಳಲಾಗಿದೆ.

ರೀನರ್‌ ಅವರು ಕಳುಹಿಸಿರುವ ಮೂರನೇ ಟೆಲಿಗ್ರಾಂನಲ್ಲಿ ರಹಸ್ಯ ಮಾಹಿತಿಗಳಿವೆ ಎಂದು ಅವರು ಹೇಳಿದ್ದಾರೆ. ಈ ಅರ್ಜಿಯು ಇದೇ 6ರಂದು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಗೆ ಬರುವ ನಿರೀಕ್ಷೆ ಇದೆ.

ಗಾಂಧಿ ಹತ್ಯೆಯಲ್ಲಿ ನಾಥೂರಾಮ್‌ ಗೋಡ್ಸೆ ಅಲ್ಲದೆ ಮತ್ತೊಬ್ಬ ಹಂತಕ ಭಾಗಿಯಾಗಿದ್ದನೇ ಎಂಬುದರ ಬಗ್ಗೆ ತನಿಖೆ ನಡೆಸುವಂತೆ ಅವರು ಅರ್ಜಿಯಲ್ಲಿ ಮನವಿ ಮಾಡಿದ್ದಾರೆ. ಇದರಲ್ಲಿ ವಿದೇಶಿ ವ್ಯಕ್ತಿಯ ಕೈವಾಡ ಇದೆಯೇ ಎಂಬುದನ್ನು ತಿಳಿಯುವುದಕ್ಕಾಗಿ ಅಮೆರಿಕದ ಬಳಿ ಇರುವ ರಹಸ್ಯ ದಾಖಲೆಗಳನ್ನು ಪಡೆಯುಲು ಯತ್ನಿಸುತ್ತಿರುವುದಾಗಿಯೂ ಫಡ್ನಿಸ್ ಹೇಳಿದ್ದಾರೆ.

1996ರಿಂದ ಈ ಬಗ್ಗೆ ಅಧ್ಯಯನ ನಡೆಸುತ್ತಿರುವ ಅವರು, ಮೂರನೇ ಟೆಲಿಗ್ರಾಂನ ವಿವರ ಬಹಿರಂಗಪಡಿಸುವಂತೆ ಶ್ವೇತಭವನಕ್ಕೆ ಮನವಿ ಮಾಡಿ ಸೋಮವಾರ (ಅಕ್ಟೋಬರ್‌ 2) ಆನ್‌ಲೈನ್‌ ಅರ್ಜಿ ಅಭಿಯಾನ ಆರಂಭಿಸಲಿದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry