ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಂಕಾಂಗ್: ದುರಾಡಳಿತ ವಿರೋಧಿಸಿ ಪ್ರತಿಭಟನೆ

Last Updated 1 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಹಾಂಕಾಂಗ್: ಚೀನಾ ಬೆಂಬಲಿತ ಹಾಂಕಾಂಗ್ ಸರ್ಕಾರವು ತನ್ನ ಎದುರಾಳಿಗಳನ್ನು ನಿಯಂತ್ರಿಸಲು ನ್ಯಾಯಾಂಗವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿ ಪ್ರಜಾಪ್ರಭುತ್ವ ಪರ ಸಾವಿರಾರು ಹೋರಾಟಗಾರರು ಭಾನುವಾರ ರಸ್ತೆಗಿಳಿದು ಪ್ರತಿಭಟಿಸಿದರು.

‘ಸರ್ವಾಧಿಕಾರಿಯ ಆಡಳಿತ ಬೇಡ’ ಹಾಗೂ ’ರಿಮ್‌ಸ್ಕಿ ಯು.ಎನ್ ಅವರು ನಗರದ ನ್ಯಾಯಾಂಗ ಕಾರ್ಯದರ್ಶಿ ಹುದ್ದೆಯಿಂದ ಕೆಳಗಿಳಿಯಬೇಕು’ ಎಂಬ ಬೇಡಿಕೆಗಳಿದ್ದ ಫಲಕಗಳನ್ನು ಹಿಡಿದು ಪ್ರತಿಭಟನಾಕಾರರು ಮೆರವಣಿಗೆ ನಡೆಸಿದರು. ಮೂವರು ಪ್ರಜಾಪ್ರಭುತ್ವ ಪರ ಕಾರ್ಯಕರ್ತರಿಗೆ ಜೈಲು ಶಿಕ್ಷೆ ವಿಧಿಸಿ ನೀಡಿರುವ ತೀರ್ಪನ್ನು ಪರಿಶೀಲಿಸಬೇಕು ಎಂಬುದು ಪ್ರತಿಭಟನಾಕಾರರ ಆಗ್ರಹ.

2014ರಲ್ಲಿ ನಡೆದ ಬೃಹತ್ ರ‍‍್ಯಾಲಿಯಲ್ಲಿ ಭಾಗವಹಿಸಿದ್ದರು ಎಂಬ ಕಾರಣಕ್ಕೆ ಮೂವರು ಕಾರ್ಯಕರ್ತರಿಗೆ ಆರರಿಂದ ಎಂಟು ತಿಂಗಳುಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಇದನ್ನು ವಿರೋಧಿಸಿ ಪ್ರತಿಭಟನಾಕಾರರು ಕಪ್ಪು ಟಿ–ಶರ್ಟ್ ಧರಿಸಿ ಮೆರವಣಿಗೆಯಲ್ಲಿ ಪಾಲ್ಗೊಂಡರು.

‘ಹಾಂಕಾಂಗ್‌ನಲ್ಲಿ ರಾಜಕೀಯ ವಿಚಾರಣೆಯೇ ಮೇಲುಗೈ ಸಾಧಿಸುತ್ತಿದೆ ಎಂದು ನಮಗೆ ಅನ್ನಿಸುತ್ತಿದೆ’ ಎಂದು ಪ್ರತಿಭಟನೆಯ ನೇತೃತ್ವ ವಹಿಸಿದ್ದ ಸಿವಿಲ್ ಹ್ಯೂಮನ್ ಫ್ರಂಟ್‌ನ ಮುಖ್ಯಸ್ಥ ಆರೋಪಿಸಿದ್ದಾರೆ.

ಆದರೆ, ‘ಆಪಾದನೆಗಳೆಲ್ಲ ಸುಳ್ಳು. ಕಾನೂನಿನ ಪ್ರಕಾರವೇ ನ್ಯಾಯಾಂಗ ಇಲಾಖೆಯು ಎಲ್ಲಾ ಪ್ರಕರಣಗಳನ್ನು ನಿಭಾಯಿಸುತ್ತಿದೆ’ ಎಂದು ಸರ್ಕಾರ ಹೇಳಿಕೆಯಲ್ಲಿ ಸಮರ್ಥಿಸಿಕೊಂಡಿದೆ.

‘ಚೀನಾದ ರಾಷ್ಟ್ರೀಯ ದಿನಾಚರಣೆ ದಿನವೇ ನಡೆದ ಪ್ರತಿಭಟನೆಯಲ್ಲಿ 40,000 ಪ್ರತಿಭಟನಾಕಾರರು ಭಾಗವಹಿಸಿದ್ದಾರೆ ಎಂದು ಸಂಘಟಕರು ಹೇಳಿದ್ದಾರೆ. ಆದರೆ, ಪ್ರತಿಭಟನೆಯಲ್ಲಿ 4,300 ಜನ ಮಾತ್ರ ಹಾಜರಿದ್ದರು ಎಂದು ಸರ್ಕಾರ ಹೇಳಿದೆ’ ಎಂದು ‘ಸೌಥ್ ಚೀನಾ ಮಾರ್ನಿಂಗ್ ಪೋಸ್ಟ್’ ವರದಿ ಮಾಡಿದೆ.

‘1997ರಲ್ಲಿ ಹಾಂಕಾಂಗ್ ಮೇಲೆ ಚೀನಾ ನಿಯಂತ್ರಣ ಪಡೆದ ನಂತರ ‘ಒಂದು ರಾಷ್ಟ್ರ, ಎರಡು ವ್ಯವಸ್ಥೆ’ ಘೋಷಣೆಯನ್ನು ಚೀನಾ ದುರ್ಬಲಗೊಳಿಸುತ್ತಿದೆ’ ಎಂದು ಇಲ್ಲಿನ ನಿವಾಸಿಗಳು ಕಳವಳ ವ್ಯಕ್ತಪಡಿಸಿದ್ದಾರೆ. ‘ಒಂದು ರಾಷ್ಟ್ರ, ಎರಡು ವ್ಯವಸ್ಥೆ’ ಪ್ರಕಾರ ಹಾಂಕಾಂಗ್‌ಗೆ ಸ್ವಾಯತ್ತೆ ಇದೆ. ಪ್ರತ್ಯೇಕ ಕಾನೂನು ಹಾಗೂ ಸ್ವತಂತ್ರ ನ್ಯಾಯಾಂಗ ವ್ಯವಸ್ಥೆಯ ಅವಕಾಶವೂ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT