ಶುಕ್ರವಾರ, ಸೆಪ್ಟೆಂಬರ್ 20, 2019
22 °C

ಸಚಿವ ಆಂಜನೇಯ ಸೊಕ್ಕಿನ ಮಾತು: ಯಡಿಯೂರಪ್ಪ ಟೀಕೆ

Published:
Updated:
ಸಚಿವ ಆಂಜನೇಯ ಸೊಕ್ಕಿನ ಮಾತು: ಯಡಿಯೂರಪ್ಪ ಟೀಕೆ

ಬೆಂಗಳೂರು: ‘ವಿಧಾನಸೌಧ ಇರುವುದು ಕಾಯಿ ಒಡೆದು, ಆರತಿ ಬೆಳಗಲು ಅಲ್ಲ ಎಂದು ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ ನೀಡಿರುವ ಹೇಳಿಕೆ ಸೊಕ್ಕಿನಿಂದ ಕೂಡಿದೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಟೀಕಿಸಿದರು.

ಬಿಜೆಪಿ ಕಚೇರಿಯಲ್ಲಿ ಭಾನುವಾರ ನಡೆದ ನೆ.ಲ. ನರೇಂದ್ರಬಾಬು ಅವರ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ರಾಜ್ಯದಾದ್ಯಂತ ವಿಜೃಂಭಣೆಯಿಂದ ವಿಜಯದಶಮಿ ಆಚರಿಸುತ್ತಿರುವ ಜನರಿಗೆ ಆಂಜನೇಯ ಅಪಮಾನ ಮಾಡಿದ್ದಾರೆ’ ಎಂದು ದೂರಿದರು.

‘ಸಚಿವ ಸ್ಥಾನದಲ್ಲಿ ಮುಂದುವರಿಯಲು ಅವರಿಗೆ ನೈತಿಕತೆ ಇಲ್ಲ. ಅವರನ್ನು ಮುಂದುವರಿಸುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಶೋಭೆ ತರುವುದಿಲ್ಲ’ ಎಂದಿದ್ದಾರೆ .

‘ಪ್ರಧಾನಿ ನರೇಂದ್ರ ಮೋದಿ ಅವರ ಮನ್ ಕಿ ಬಾತ್ ಬಗ್ಗೆ ವಿಶ್ವವೇ ಮೆಚ್ಚುತ್ತಿದೆ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಗುರವಾಗಿ ಮಾತನಾಡುತ್ತಿದ್ದಾರೆ. ಇದರಿಂದ ಅವರಿಗೆ ಲಾಭ ಆಗುವುದಿಲ್ಲ, ಬದಲಿಗೆ ಜನ ಇಟ್ಟಿರುವ ಅಲ್ಪಸ್ವಲ್ಪ ವಿಶ್ವಾಸವನ್ನೂ ಕಳೆದುಕೊಳ್ಳಲಿದ್ದಾರೆ. ಇನ್ನು ಐದಾರು ತಿಂಗಳಲ್ಲಿ ಮನೆಗೆ ಹೋಗುತ್ತಿರುವವರ ಬಗ್ಗೆ ನಾನು ಹೆಚ್ಚಿಗೆ ಮಾತನಾಡುವುದಿಲ್ಲ’ ಎಂದು ವ್ಯಂಗ್ಯವಾಡಿದರು.

ನರೇಂದ್ರಬಾಬು ಅವರು ಮರಳಿ ಬಿಜೆಪಿ ಸೇರಿದ್ದಾರೆ. ಪಕ್ಷದಲ್ಲಿ ಅವರಿಗೆ ಏನು ಜವಾಬ್ದಾರಿ  ನೀಡಬೇಕು ಎಂಬುದನ್ನು ವರಿಷ್ಠರೊಂದಿಗೆ ಚರ್ಚಿಸಿ ತೀರ್ಮಾನಿಸಲಾಗುವುದು. ರಾಜ್ಯದಲ್ಲಿರುವ ಭ್ರಷ್ಟ ಸರ್ಕಾರ ಕಿತ್ತೊಗೆಯಲು ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು ಎಂದೂ ಯಡಿಯೂರಪ್ಪ ಹೇಳಿದರು.

Post Comments (+)