ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಡಿ ಗ್ರಾಮಕ್ಕೆ ಬಸ್ ಸಂಚಾರ ಸ್ಥಗಿತ

ಆಂಧ್ರ– ಕರ್ನಾಟಕ ಒಪ್ಪಂದ ರದ್ದು ಪರಿಣಾಮ
Last Updated 1 ಅಕ್ಟೋಬರ್ 2017, 19:23 IST
ಅಕ್ಷರ ಗಾತ್ರ

ಬಳ್ಳಾರಿ: ಗಡಿ ಪ್ರದೇಶಗಳ ನಡುವೆ ಇಪ್ಪತ್ತು ಕಿ.ಮೀ ವ್ಯಾಪ್ತಿಯಲ್ಲಿ ಆಂಧ್ರಪ್ರದೇಶ ಮತ್ತು ಕರ್ನಾಟಕದ ಬಸ್‌ಗಳು ಸಂಚರಿಸುವ ಕುರಿತು ಎರಡೂ ರಾಜ್ಯಗಳ ನಡುವೆ ಏರ್ಪಟ್ಟಿದ್ದ ಒಪ್ಪಂದವನ್ನು ಆಂಧ್ರಪ್ರದೇಶ ಹೈಕೋರ್ಟ್‌ ರದ್ದು ಮಾಡಿರುವುದರಿಂದ ರಾಜ್ಯದ ಸಾವಿರಾರು ಗಡಿ ಕನ್ನಡಿಗರು ಸಮರ್ಪಕ ಬಸ್‌ ಸೌಕರ್ಯವಿಲ್ಲದೆ ತೊಂದರೆಗೆ ಸಿಲುಕಿದ್ದಾರೆ.

ಜುಲೈ 7ರಿಂದಲೇ ಈಶಾನ್ಯ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳ ಸಂಚಾರ ಸ್ಥಗಿತಗೊಂಡಿದ್ದು, ಮೂರು ತಿಂಗಳಾದರೂ ಸಮಸ್ಯೆಗೆ ಪರಿಹಾರ ದೊರಕಿಲ್ಲ. ಹೀಗಾಗಿ ಕೆಲವೇ ಖಾಸಗಿ ಬಸ್‌ಗಳು ಮತ್ತು ಆಟೋರಿಕ್ಷಾಗಳನ್ನೇ ನೆಚ್ಚಿಕೊಂಡು ಜನರು ಪ್ರಯಾಣಿಸುತ್ತಿದ್ದಾರೆ. ಈ ಪರಿಸ್ಥಿತಿಯಿಂದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಂತ್ರಸ್ತರಾಗಿದ್ದಾರೆ.

ಜಿಲ್ಲೆಯ ಬಳ್ಳಾರಿ ನಗರ ಹಾಗೂ ಸಿರುಗುಪ್ಪದಿಂದ ಆಂಧ್ರಪ್ರದೇಶದ ಕನ್ನಡ ಗ್ರಾಮಗಳಾದ ಎಲ್ಲಾರ್ತಿ, ಗೂಳ್ಯಂ, ಆಲೂರು, ದರ್ಗಾ ಹೂನ್ನೂರು, ಪಾಲ್ತೂರು, ಹೊಳಗುಂದಿ, ಉರಕುಂದಿ, ಹಾಲ್ವಿಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳ ಸಂಚಾರ ಸ್ಥಗಿತಗೊಂಡಿದೆ.

ಬಸ್‌ಗಳ ಸಂಚಾರವನ್ನು ಆರಂಭಿಸಬೇಕು ಎಂದು ಆಗ್ರಹಿಸಿ ಕರ್ನೂಲು ಜಿಲ್ಲೆಯ ಕನ್ನಡ ಗ್ರಾಮ ಹೊಳಗುಂದಿಯಲ್ಲಿ ಕನ್ನಡ ಸಂಘದ ಮುಖಂಡರು, ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಪ್ರತಿಭಟನೆಯನ್ನೂ ನಡೆಸಿದ್ದಾರೆ.

ಎರಡು ಖಾಸಗಿ ಬಸ್‌: ‘ಆಂಧ್ರದ ಕನ್ನಡ ಗ್ರಾಮಗಳು ಮತ್ತು ಜಿಲ್ಲೆಯ ನಡುವೆ ಈಗ ಕೇವಲ ಎರಡು ಖಾಸಗಿ ಬಸ್‌ಗಳು ಮಾತ್ರ ಸಂಚರಿಸುತ್ತಿವೆ. ಬಳ್ಳಾರಿ–ಹೊಳಗುಂದಿ ಹಾಗೂ ಬಳ್ಳಾರಿ– ಆದೋನಿ ನಡುವೆ ಸಂಚರಿಸುವ ಬಸ್‌ಗಳಲ್ಲಿ ಜಾಗವಿಲ್ಲದೆ ಮೇಲೆ ಕುಳಿತು ನೂರಾರು ಮಂದಿ ಪ್ರಯಾಣಿಸುತ್ತಿದ್ದಾರೆ. ಈ ಬಸ್‌ಗಳು ಸಮಯಕ್ಕೆ ಸರಿಯಾಗಿ ಬಾರದಿದ್ದರೆ ರೋಗಿಗಳು, ವಯೋವೃದ್ಧರ ಪಾಡು ಹೇಳತೀರದು’ ಎಂದು ಹೊಳಗುಂದಿಯ ಕನ್ನಡ ಶಾಲೆಯ ಶಿಕ್ಷಕರಾದ ದೊಡ್ಡಬಸಪ್ಪ, ಡಿ.ರಾಮದಾಸ್‌ ಮತ್ತು ಎಸ್‌.ಪೋತರಾಜ ‘ಪ್ರಜಾವಾಣಿ’ಗೆ ಗುರುವಾರ ತಿಳಿಸಿದರು.

‘ಬಳ್ಳಾರಿ ಮತ್ತು ಸಿರುಗುಪ್ಪದ ಶಾಲೆ– ಕಾಲೇಜುಗಳಿಗೆ ದಾಖಲಾಗಿರುವ ಸಾವಿರಾರು ವಿದ್ಯಾರ್ಥಿಗಳು ಬಸ್‌ಗಳಿಲ್ಲದೆ ಪರದಾಡುತ್ತಿದ್ದಾರೆ. ಖಾಸಗಿ ಬಸ್‌ಗಳು ಶಾಲೆ– ಕಾಲೇಜು ವೇಳಾಪಟ್ಟಿಗೆ ಪೂರಕವಾಗಿ ಸಂಚರಿಸದೇ ಇರುವುದು ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಬಾಲಕಿಯರು ಮನೆಗಳಲ್ಲೇ ಉಳಿಯುವಂತಾಗಿದೆ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಪ್ರಯತ್ನ ಜಾರಿಯಲ್ಲಿ: ಈ ಕುರಿತು ಪ್ರತಿಕ್ರಿಯಿಸಿದ ಈಶಾನ್ಯ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಚಂದ್ರಶೇಖರ್‌, ‘ಕೋರ್ಟ್ ಆದೇಶವನ್ನು ಧಿಕ್ಕರಿಸುವಂತಿಲ್ಲ. ಆದರೆ ಎರಡೂ ರಾಜ್ಯಗಳ ನಡುವೆ ಹೊಸ ಒಪ್ಪಂದ ಮಾಡಿಕೊಳ್ಳುವ ಪ್ರಯತ್ನ ಜಾರಿಯಲ್ಲಿದೆ. ಉನ್ನತ ಅಧಿಕಾರಿಗಳಿಗೆ ಗಡಿ ಕನ್ನಡಿಗರ ಸಮಸ್ಯೆಗಳ ಕುರಿತು ಅರಿವು ಮೂಡಿಸಲಾಗಿದೆ’ ಎಂದರು.

1998ರ ಒಪ್ಪಂದ: ‘ಎರಡೂ ರಾಜ್ಯ ಸರ್ಕಾರಗಳ ನಡುವೆ 1998ರಲ್ಲಿ ಒಪ್ಪಂದ ಏರ್ಪಟ್ಟಿತ್ತು. ಒಪ್ಪಂದವನ್ನು ಪ್ರಶ್ನಿಸಿ ಆಂಧ್ರದ ಖಾಸಗಿ ಬಸ್‌ ಮಾಲೀಕರು ಖಾಸಗಿ ಮೊಕದ್ದಮೆ ಹೂಡಿದ್ದ ಪರಿಣಾಮವಾಗಿ ಹೈಕೋರ್ಟ್‌ ಒಪ್ಪಂದವನ್ನು ರದ್ದು ಮಾಡಿದೆ’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT