18 ತಿಂಗಳ ಹಿಂದೆಯೇ ₹ 12 ಕೋಟಿ ಮಂಜೂರು

ಶುಕ್ರವಾರ, ಮೇ 24, 2019
33 °C

18 ತಿಂಗಳ ಹಿಂದೆಯೇ ₹ 12 ಕೋಟಿ ಮಂಜೂರು

Published:
Updated:
18 ತಿಂಗಳ ಹಿಂದೆಯೇ ₹ 12 ಕೋಟಿ ಮಂಜೂರು

ಮುಂಬೈ: ಕಳೆದ ಶುಕ್ರವಾರ 23 ಜನರನ್ನು ಬಲಿ ಪಡೆದ ಮುಂಬೈನ ಎಲ್ಫಿನ್‌ಸ್ಟನ್ ರೋಡ್–ಪರೇಲ್ ರೈಲು ನಿಲ್ದಾಣಗಳ ನಡುವಣ ಪಾದಚಾರಿ ಮೇಲು ಸೇತುವೆಯ ವಿಸ್ತರಣೆಗೆ 2016–17ರ ಬಜೆಟ್‌ನಲ್ಲೇ ಹಣವನ್ನು ತೆಗೆದಿರಿಸಲಾಗಿತ್ತು.

2015ರಲ್ಲಿ ಅಂದಿನ ರೈಲ್ವೆ ಸಚಿವ ಸುರೇಶ್ ಪ್ರಭು ಅವರು ‘ಹೊಸ ಸೇತುವೆ ನಿರ್ಮಿಸಲು ನಾನೇ ಮುತುವರ್ಜಿ ವಹಿಸಿ ಹಣ ಮೀಸಲಿರಿಸಿದ್ದೆ’ ಎಂದು ಶನಿವಾರ ಹೇಳಿಕೆ ನೀಡಿದ್ದಾರೆ.

‘2016–17ರ ರೈಲ್ವೆ ಬಜೆಟ್‌ನಲ್ಲಿ ಪ್ರಭು ಅವರು ಈ ಯೋಜನೆಗೆ ₹ 12.35 ಕೋಟಿ ಹಣ ತೆಗೆದಿರಿಸಿದ್ದರು. ಆದರೆ ರೈಲ್ವೆಯ ಹಿರಿಯ ಅಧಿಕಾರಿಗಳ ನಿರ್ಲಕ್ಷದ ಕಾರಣ ಯೋಜನೆಯ ಟೆಂಡರ್‌ ಪ್ರಕ್ರಿಯೆಯೇ ಆರಂಭವಾಗಿಲ್ಲ’ ಎಂದು ರೈಲ್ವೆಯ ಸಿಬ್ಬಂದಿ ಒಬ್ಬರು ಆರೋಪಿಸಿದ್ದಾರೆ.

ರೈಲ್ವೆಯ ಸೇತುವೆ ನವೀಕರಣ, ವಿಸ್ತರಣೆಗೆ ಯಾವುದೇ ಪ್ರಾಧಿಕಾರದ ಅನುಮತಿಯ ಅವಶ್ಯಕತೆ ಇಲ್ಲ. ಹೀಗಿದ್ದೂ ಹಣ ಮಂಜೂರು ಆಗಿ 18 ತಿಂಗಳು ಕಳೆದರೂ ಕಾಮಗಾರಿ ಆರಂಭವಾಗಿಲ್ಲ. ಇದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ರೈಲುಗಳು ಹೆಚ್ಚಲಿ: ಮುಂಬೈ ಮಹಾನಗರ ಮತ್ತು ಅಕ್ಕಪಕ್ಕದ ಠಾಣೆ, ಪಲಗಹಾರ್ ಮತ್ತು ರಾಯಗಡ ಜಿಲ್ಲೆಗಳಿಗೂ ಹಬ್ಬಿರುವ ಮುಂಬೈ ಉಪನಗರ ರೈಲು ಜಾಲ ಜಗತ್ತಿನಲ್ಲೇ ಅತ್ಯಂತ ದೊಡ್ಡದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಅತ್ಯಂತ ಹೆಚ್ಚು ದಟ್ಟಣೆ ಇರುವ ರೈಲು ಜಾಲ ಎಂಬ ಹೆಸರಿಗೂ ಪಾತ್ರವಾಗಿರುವ ಮುಂಬೈ ಉಪನಗರ ರೈಲು ವ್ಯವಸ್ಥೆಯಲ್ಲಿನ ಸುರಕ್ಷತೆ ಬಗ್ಗೆ ಎಲ್ಲರೂ ಈಗ ಪ್ರಶ್ನಿಸತೊಡಗಿದ್ದಾರೆ.

‘ಈ ಜಾಲದ ಸಾಮರ್ಥ್ಯಕ್ಕಿಂತ ಹಲವು ಪಟ್ಟು ಹೆಚ್ಚು ಪ್ರಯಾಣಿಕರು ರೈಲುಗಳನ್ನು ಬಳಸುತ್ತಿದ್ದಾರೆ. ರೈಲುಗಳು ಮತ್ತು ರೈಲು ಮಾರ್ಗಗಳನ್ನು ಹೆಚ್ಚಿಸುವುದರಿಂದ ಮಾತ್ರ ಸಮಸ್ಯೆಯನ್ನು ಸುಧಾರಿಸಲು ಸಾಧ್ಯ’ ಎಂದು ರೈಲ್ವೆಯ ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

‘ರೈಲ್ವೆ ಜಾಲದ ಕಾರ್ಯನಿರ್ವಹಣೆ ಚೆನ್ನಾಗೇ ಇದೆ. ಆದರೆ ಸೌಕರ್ಯಗಳು ಸುಧಾರಿಸಬೇಕಿದೆ. ದೆಹಲಿಯಲ್ಲಿ ಠಿಕಾಣಿ ಹೂಡಿರುವ ರೈಲ್ವೆ ಅಧಿಕಾರಿಗಳಿಗೆ ಮುಂಬೈ ಎಂದರೆ ಮೊದಲಿನಿಂದಲೂ ಅಸಡ್ಡೆ. ಇಲ್ಲಿನವರೇ ಆದ ಸುರೇಶ್ ಪ್ರಭುವಾದರೂ ಮುಂಬೈ ರೈಲು ವ್ಯವಸ್ಥೆಯನ್ನು ಸಾಧರಿಸುತ್ತಾರೆ ಅಂದುಕೊಂಡಿದ್ದೆವು. ಅದೂ ಕನಸಾಗೇ ಉಳಿಯಿತು’ ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಅನಿಲ್ ಗಲಗಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮುಂಬೈ ಉಪನಗರ ರೈಲು ಜಾಲ

465 ಕಿ.ಮೀ ಜಾಲದ ಉದ್ದ

2,342 -ಪ್ರತಿದಿನದ ರೈಲು ಟ್ರಿಪ್‌ಗಳ ಸಂಖ್ಯೆ

136 -ರೈಲು ನಿಲ್ದಾಣಗಳು

 78 ಲಕ್ಷ- ಪ್ರತಿದಿನದ ಪ್ರಯಾಣಿಕರ ಸರಾಸರಿ ಸಂಖ್ಯೆ

264 ಕೋಟಿ -ಒಂದು ವರ್ಷದಲ್ಲಿ ಈ ಜಾಲದ ಪ್ರಯಾಣಿಕರ ಸಂಖ್ಯೆ

ಸಾವೆಂದರೆ ಸಾಮಾನ್ಯ

ವಿಶ್ವದ ಅತ್ಯಂತ ದಟ್ಟಣೆಯ ರೈಲು ಜಾಲ ಎನಿಸಿಕೊಂಡಿರುವುದರ ಜತೆಯಲ್ಲೇ ಅತಿ ಹೆಚ್ಚು ಪ್ರಯಾಣಿಕರನ್ನು ಬಲಿ ಪಡೆಯುವುದಕ್ಕೂ ಈ ರೈಲು ಜಾಲ ಕುಖ್ಯಾತವಾಗಿದೆ. ಎಲ್ಲಾ ರೈಲುಗಳೂ ಸದಾ ಕಿಕ್ಕಿರಿದು ತುಂಬಿರುವುದರಿಂದ ಚಲಿಸುವಾಗ ರೈಲಿನಿಂದ ಬಿದ್ದು ಸಾಯುವವರ ಸಂಖ್ಯೆ ಹೆಚ್ಚು. ಪಾದಚಾರಿ ಮೇಲುಸೇತುವೆಗಳಲ್ಲಿ ದಟ್ಟಣೆ ಹೆಚ್ಚು. ಹೀಗಾಗಿ ಬಹುತೇಕ ಮಂದಿ ಹಳಿಗಳನ್ನು ದಾಟಿಕೊಂಡೇ ಪ್ಲಾಟ್‌ಫಾರಂಗಳನ್ನು ಬದಲಿಸುತ್ತಾರೆ. ಹೀಗಾಗಿ ರೈಲುಗಳಿಗೆ ಸಿಲುಕಿ ಮೃತಪಡುವವರ ಸಂಖ್ಯೆಯೂ ದೊಡ್ಡದಿದೆ.

ಹೀಗೆ ಪ್ರತಿದಿನ ಎಷ್ಟು ಜನ ಮೃತಪಟ್ಟಿದ್ದಾರೆ ಮತ್ತು ಗಾಯಗೊಂಡಿದ್ದಾರೆ ಎಂಬ ಮಾಹಿತಿಯನ್ನು ರೈಲ್ವೆ ಪೊಲೀಸರು ಪ್ರತಿದಿನ ಪ್ರಕಟಿಸುವ ಪರಿಪಾಠ ರೂಢಿಸಿಕೊಂಡಿದ್ದಾರೆ. ರೈಲ್ವೆ ಪೊಲೀಸ್‌ ಠಾಣೆ ಮತ್ತು ಅಧಿಕೃತ ಜಾಲತಾಣದಲ್ಲಿ ಈ ಮಾಹಿತಿ ಪ್ರಕಟವಾಗುತ್ತದೆ.

2016

3,202 -ಮೃತಪಟ್ಟವರು

3,363 -ಗಾಯಾಳುಗಳು

**********

2015

3,304 -ಮೃತಪಟ್ಟವರು

3,349 -ಗಾಯಾಳುಗಳು

10–12 -ಪ್ರತಿದಿನ ರೈಲು–ರೈಲು ಮಾರ್ಗದಲ್ಲಿನ ವಿವಿಧ ಅವಘಡಗಳಿಗೆ ಬಲಿಯಾಗುವವರ ಸಂಖ್ಯೆ

* ಆಧಾರ: ಸಮೀರ್‌ ಜವೇರಿ ಎಂಬುವವರ ಮಾಹಿತಿ ಹಕ್ಕು ಅರ್ಜಿಗೆ ಮುಂಬೈ ಉಪನಗರ ರೈಲು ವ್ಯವಸ್ಥೆ ನೀಡಿರುವ ಮಾಹಿತಿ

ಮೋದಿ ಸಂತಾಪಕ್ಕೆ ಟ್ವಿಟರ್‌ನಲ್ಲಿ ತರಾಟೆ

ಎಲ್ಫಿನ್‌ಸ್ಟನ್ ರೋಡ್– ಪರೇಲ್ ರೈಲು ನಿಲ್ದಾಣಗಳ ಪಾದಚಾರಿ ಮೇಲುಸೇತುವೆ ಕಾಲ್ತುಳಿತ ದುರಂತಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ರಾತ್ರಿ ಸಂತಾಪ ಸೂಚಿಸಿ ಟ್ವೀಟ್ ಮಾಡಿದ್ದರು. ಆದರೆ ತಕ್ಷಣವೇ ಹಲವರು ಟ್ವಿಟರ್‌ನಲ್ಲಿ ಮೋದಿ ಅವರನ್ನು ತರಾಟೆಗೆ ತೆಗೆದುಕೊಂಡರು. ಮೋದಿ ಅವರ ಟ್ವೀಟ್‌ಗೆ ಆಕ್ರೋಶ ವ್ಯಕ್ತಪಡಿಸಿ ಪ್ರಕಟವಾದ ಟ್ವೀಟ್‌ಗಳ ಸಂಖ್ಯೆ ಹೆಚ್ಚುತ್ತಿದ್ದಂತೆ ಮೋದಿ ಅವರ ಟ್ವೀಟ್ ಅನ್ನು ಅವರ ಖಾತೆಯಿಂದ ಅಳಿಸಿಹಾಕಲಾಗಿದೆ.

ಬಾವಿಕ್ ಪುರೋಹಿತ್ ಎಂಬುವವರು ‘ನೋಡಿ ಹೃದಯಾಳದ ಸಂತಾಪ ಬಂದೇಬಿಟ್ಟಿತು. ಉಳಿದ ಉಪನಗರ ರೈಲುನಿಲ್ದಾಣಗಳಲ್ಲಿ ಕಾಲ್ತುಳಿತ ಸಂಭವಿಸುವುದುನ್ನು ಕಾಯುತ್ತಿರೋಣ’ ಎಂದು ಲೇವಡಿ ಮಾಡಿದ್ದಾರೆ.

ಲಕ್ಷ್ಮೀ ನಾಯ್ಡು ಎಂಬುವವರು ‘ನಿಮ್ಮ ಸಂತಾಪಕ್ಕೆ ಧನ್ಯವಾದಗಳು. ನಾವು ಕಷ್ಟಪಟ್ಟು ದುಡಿದ ಹಣದಲ್ಲಿ ಮಜಾ ಮಾಡುತ್ತಿರುವ, ಇದಕ್ಕೆಲ್ಲಾ ಕಾರಣವಾದ ರಾಜಕಾರಣಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಿ’ ಎಂದಿದ್ದಾರೆ.

ರಾಜೇಶ್ ಸಿಂಗ್ ‘ನಿಮ್ಮ ಸಂತಾಪ ಬಂದೇಬಿಟ್ಟಿತಾ... ಆಮೇಲೆ ಬುಲೆಟ್‌ ರೈಲು, ಬೃಹತ್ ಪ್ರತಿಮೆಗಳಂತಹ ಅನಗತ್ಯ ಯೋಜನೆಗಳಿಗೆ ಅನುಮತಿ ನೀಡಿ ಹೋಗಿ. ಮೂಲಸೌಕರ್ಯಗಳು ಬದಿಗಿರಲಿ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಶಾಲ್ ಗುಪ್ತಾ ಎಂಬುವವರು ‘ನಿಮ್ಮ ಸಂತಾಪ ನರಕಕ್ಕಿರಲಿ. ಇದಕ್ಕೆಲ್ಲಾ ಕಾರಣರಾದವರನ್ನು ಮೊದಲು ಶಿಕ್ಷಿಸಿ. ಆಮೇಲೆ ನಿಮ್ಮ ಸಂತಾಪವನ್ನು ಒಪ್ಪಿಕೊಳ್ಳುತ್ತೇವೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry