ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಲ್‌ ಆಫ್‌ ಮ್ಯಾನ್‌ ಚೆಸ್‌ ಟೂರ್ನಿ: ಆನಂದ್‌, ಸ್ವಪ್ನಿಲ್‌ಗೆ ಜಯ

Last Updated 1 ಅಕ್ಟೋಬರ್ 2017, 19:50 IST
ಅಕ್ಷರ ಗಾತ್ರ

ಐಲ್ ಆಫ್‌ ಮ್ಯಾನ್‌: ಭಾರತದ ಗ್ರ್ಯಾಂಡ್‌ ಮಾಸ್ಟರ್‌ ವಿಶ್ವನಾಥನ್‌ ಆನಂದ್‌ ಮತ್ತು ಸ್ವಪ್ನಿಲ್‌ ಎಸ್‌ ಧೋಪಡೆ ಅವರು ಐಲ್ ಆಫ್‌ ಮ್ಯಾನ್‌ ಇಂಟರ್‌ನ್ಯಾಷನಲ್‌ ಚೆಸ್‌ ಟೂರ್ನಿಯಲ್ಲಿ ಗೆದ್ದರು.

ಭಾನುವಾರ ನಡೆದ ಎಂಟನೇ ಸುತ್ತಿನ ಹಣಾಹಣಿಯಲ್ಲಿ ಐದು ಬಾರಿಯ ವಿಶ್ವ ಚಾಂಪಿಯನ್‌ ಆನಂದ್, ಫ್ರಾನ್ಸ್‌ನ ಫ್ರೆಸಿನೆಟ್‌ ಲೌರೆಂಟ್‌ ವಿರುದ್ಧ ಗೆದ್ದರು.

ಹಿಂದಿನ ಪಂದ್ಯಗಳಲ್ಲಿ ಬಲಿಷ್ಠ ಆಟಗಾರರನ್ನು ಮಣಿಸಿ ವಿಶ್ವಾಸ ಹೆಚ್ಚಿಸಿಕೊಂಡಿದ್ದ ಆನಂದ್‌, ಫ್ರೆಸಿನೆಟ್‌ ವಿರುದ್ಧದ ಹೋರಾಟದಲ್ಲೂ ಆರಂಭದಿಂದಲೇ ಚುರುಕಾಗಿ ಕಾಯಿಗಳನ್ನು ಮುನ್ನಡೆಸಿದರು. ಈ ಮೂಲಕ ಎದುರಾಳಿಯ ಮೇಲೆ ಒತ್ತಡ ಹೇರಿ 41ನೇ ನಡೆಯಲ್ಲಿ ಜಯದ ತೋರಣ ಕಟ್ಟಿದರು.ಇದರೊಂದಿಗೆ ಪಾಯಿಂಟ್ಸ್‌ ಪಟ್ಟಿಯಲ್ಲಿ ಜಂಟಿ ಮೂರನೇ ಸ್ಥಾನಕ್ಕೇರಿದರು.

ಮುಂದಿನ ಸುತ್ತಿನಲ್ಲಿ ಆನಂದ್‌, ಚೀನಾದ ಹೊವು ಯಿಫಾನ್‌ ವಿರುದ್ಧ ಆಡಲಿದ್ದಾರೆ.

ಇನ್ನೊಂದು ಪಂದ್ಯದಲ್ಲಿ ಸ್ವಪ್ನಿಲ್‌, ಇಂಗ್ಲೆಂಡ್‌ನ ಶಾರ್ಟ್‌ ನಿಗೆಲ್‌ಗೆ ಸೋಲಿನ ರುಚಿ ತೋರಿಸಿದರು. ಭಾರತದ ಆಟಗಾರ 73ನೇ ನಡೆಯಲ್ಲಿ ಎದುರಾಳಿಯ ಸವಾಲು ಮೀರಿ ನಿಂತರು.

ಒಂಬತ್ತನೇ ಸುತ್ತಿನಲ್ಲಿ ಸ್ವಪ್ನಿಲ್‌, ಉಕ್ರೇನ್‌ನ ಎಲ್‌ಜಾನೊವ್‌ ಪ್ಯಾವೆಲ್‌ ಎದುರು ಸೆಣಸುವರು.

ಗ್ರ್ಯಾಂಡ್‌ ಮಾಸ್ಟರ್‌ ವಿದಿತ್‌ ಸಂತೋಷ್‌ ಗುಜರಾತಿ, ಉಕ್ರೇನ್‌ನ ಎಲ್‌ಜಾನೊವ್‌ ಪ್ಯಾವೆಲ್‌  ಎದುರು ಡ್ರಾ ಮಾಡಿಕೊಂಡರು. ಅವರು ಮುಂದಿನ ಸುತ್ತಿನಲ್ಲಿ ಹಂಗರಿಯ ರ‍್ಯಾಪ್ಪೊರ್ಟ್‌ ರಿಚರ್ಡ್‌, ಸವಾಲು ಎದುರಿಸಲಿದ್ದಾರೆ.

ಗ್ರ್ಯಾಂಡ್‌ ಮಾಸ್ಟರ್‌ ದ್ರೋನವಳ್ಳಿ ಹರಿಕಾ ಕೂಡ ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾದರು. ಅವರು ಆಸ್ಟ್ರೇಲಿಯಾದ ಜಾನ್‌ ಪಾಲ್‌ ವಾಲ್ಲೆಸ್‌ ವಿರುದ್ಧ ಪಾಯಿಂಟ್‌ ಹಂಚಿಕೊಂಡರು.

ಎಸ್‌.ಸೇತುರಾಮನ್‌ಗೆ ಎಂಟನೇ ಸುತ್ತಿನಲ್ಲಿ ನಿರಾಸೆ ಕಾಡಿತು. ರಷ್ಯಾದ ವ್ಲಾದಿಮಿರ್‌ ಕ್ರಾಮ್ನಿಕ್‌, ಭಾರತದ ಆಟಗಾರನನ್ನು ಮಣಿಸಿದರು. ಸೇತುರಾಮನ್‌ ಮುಂದಿನ ಸುತ್ತಿನಲ್ಲಿ ಸ್ವಯಮ್ ಮಿಶ್ರಾ ವಿರುದ್ಧ ಆಡಲಿದ್ದಾರೆ.

ನಾರ್ವೆಯ ಮ್ಯಾಗ್ನಸ್‌ ಕಾರ್ಲ್‌ಸನ್‌ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಅವರ ಖಾತೆಯಲ್ಲಿ 7 ಪಾಯಿಂಟ್ಸ್‌ ಇದೆ. ಹಿಕಾರು ನಕಮುರಾ (6.5 ಪಾಯಿಂಟ್ಸ್‌) ನಂತರದ ಸ್ಥಾನ ಹೊಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT