ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹2,000 ಮುಖಬೆಲೆಯ ಜೆರಾಕ್ಸ್‌ ನೋಟು ನೀಡಿ ವಂಚನೆ

Last Updated 1 ಅಕ್ಟೋಬರ್ 2017, 19:57 IST
ಅಕ್ಷರ ಗಾತ್ರ

ಬೆಂಗಳೂರು: ಕೆ.ಆರ್‌.ಪುರದ ಮಾರುಕಟ್ಟೆಯಲ್ಲಿ ವ್ಯಕ್ತಿಯೊಬ್ಬ ₹2,000 ಮುಖಬೆಲೆಯ 6 ಜೆರಾಕ್ಸ್‌ ನೋಟುಗಳನ್ನು ನೀಡಿ ನಂದೀಶ್ವರಿ (55) ಎಂಬುವರನ್ನು ವಂಚಿಸಿದ್ದಾರೆ.

‘ಆಂಧ್ರಪ್ರದೇಶದ ಚಿತ್ತೂರಿನ ನಂದೀಶ್ವರಿ, ತರಕಾರಿ ಹಾಗೂ ಹೂವು ಮಾರಾಟ ಮಾಡಲು ನಗರಕ್ಕೆ ಬಂದಿದ್ದರು. ಭಾನುವಾರ ಮಧ್ಯಾಹ್ನ ಅವರ ಬಳಿ ಬಂದಿದ್ದ ವ್ಯಕ್ತಿಯೊಬ್ಬ, ₹2,000 ಮುಖಬೆಲೆಯ 6 ಜೆರಾಕ್ಸ್‌ ನೋಟುಗಳನ್ನು ಕೊಟ್ಟು ಚಿಲ್ಲರೆ ಕೊಡುವಂತೆ ಕೇಳಿದ್ದ. ಗ್ರಾಹಕರು ಹೆಚ್ಚಿದ್ದರಿಂದ ನೋಟು ಪ‍ರೀಕ್ಷಿಸಲು ಮರೆತ ನಂದೀಶ್ವರಿ, ಆತನಿಗೆ ಚಿಲ್ಲರೆ ಕೊಟ್ಟಿದ್ದರು. ಬಳಿಕ ಆ ವ್ಯಕ್ತಿ ಅಲ್ಲಿಂದ ಹೊರಟು ಹೋಗಿದ್ದಾನೆ’ ಎಂದು ಪೊಲೀಸರು ತಿಳಿಸಿದರು.

‘ವ್ಯಾಪಾರ ಮುಗಿದ ಬಳಿಕ ನಂದೀಶ್ವರಿ, ಬಟ್ಟೆಗಳನ್ನು ಖರೀದಿ ಮಾಡಲು ಸಂಜೆ ಅಂಗಡಿಗೆ ಹೋಗಿದ್ದರು. ಖರೀದಿ ಬಳಿಕ ಅದೇ ನೋಟುಗಳನ್ನು ಕೊಟ್ಟಿದ್ದರು. ಅವುಗಳನ್ನು ಗಮನಿಸಿದ್ದ ಅಲ್ಲಿಯ ವ್ಯಾಪಾರಿ, ನೋಟುಗಳು ನಕಲಿ ಎಂಬುದನ್ನು ತಿಳಿಸಿದ್ದರು. ಅವಾಗಲೇ ನಂದೀಶ್ವರಿಗೆ ವಂಚನೆಗೆ ಒಳಗಾಗಿದ್ದು ಗೊತ್ತಾಗಿದೆ.’

‘ಬಳಿಕ ಠಾಣೆಗೆ ಬಂದು ದೂರು ನೀಡಿದ್ದಾರೆ. ಘಟನಾ ಸ್ಥಳದಲ್ಲಿದ್ದ ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲಿಸಿದ್ದು, ಹೆಣ್ಣಿನ ವೇಷ ಧರಿಸಿಕೊಂಡು ಬಂದಿದ್ದ ವ್ಯಕ್ತಿ ಈ ರೀತಿ ಮಾಡಿದ್ದು ಗೊತ್ತಾಗಿದೆ. ಆತ ತಲೆಮರೆಸಿಕೊಂಡಿದ್ದು, ಪತ್ತೆ ಹಚ್ಚುತ್ತಿದ್ದೇವೆ’ ಎಂದು ಪೊಲೀಸರು ಹೇಳಿದರು.

‘6 ನೋಟುಗಳು ಬಣ್ಣದ ಜೆರಾಕ್ಸ್‌ನಲ್ಲಿ ಮುದ್ರಿಸಿದ್ದು ಎಂಬುದು ಕಂಡುಬಂದಿದೆ. ಮಾರುಕಟ್ಟೆಯಲ್ಲಿರುವ ಇತರೆ ವ್ಯಾಪಾರಿಗಳಲ್ಲಿ ಯಾರಿಗಾದರೂ ಇಂಥ ನೋಟುಗಳು ಬಂದಿವೆಯಾ? ಎಂಬುದನ್ನು ತಿಳಿದುಕೊಳ್ಳುತ್ತಿದ್ದೇವೆ’ ಎಂದು ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT