ಭಾನುವಾರ, ಸೆಪ್ಟೆಂಬರ್ 22, 2019
22 °C

50 ಇಂದಿರಾ ಕ್ಯಾಂಟೀನ್‌ ಉದ್ಘಾಟನೆಗೆ ಸಿದ್ಧ

Published:
Updated:
50 ಇಂದಿರಾ ಕ್ಯಾಂಟೀನ್‌ ಉದ್ಘಾಟನೆಗೆ ಸಿದ್ಧ

ಬೆಂಗಳೂರು: 50 ವಾರ್ಡ್‌ಗಳಲ್ಲಿ ಇಂದಿರಾ ಕ್ಯಾಂಟೀನ್‌ಗಳು ಸಿದ್ಧಗೊಂಡಿವೆ. ಕೆ.ಆರ್‌.ಮಾರುಕಟ್ಟೆ ಹಾಗೂ ಹೊಸಕೆರೆಹಳ್ಳಿ ಬಳಿಯ ಕ್ಯಾಂಟೀನ್‌ಗಳನ್ನು ಮೇಯರ್‌ ಸಂಪತ್‌ ರಾಜ್‌ ಸೋಮವಾರ ಸಾಂಕೇತಿಕವಾಗಿ ಉದ್ಘಾಟಿಸಲಿದ್ದಾರೆ.

ಸರ್ಕಾರದ ಮಹತ್ವಾಕಾಂಕ್ಷೆಯ ಇಂದಿರಾ ಕ್ಯಾಂಟೀನ್‌ ಯೋಜನೆಗೆ ಆಗಸ್ಟ್‌ 16ರಂದು ಚಾಲನೆ ನೀಡಲಾಗಿತ್ತು. ಮೊದಲ ಹಂತದಲ್ಲಿ 101 ಕ್ಯಾಂಟೀನ್‌ಗಳು ಉದ್ಘಾಟನೆಗೊಂಡಿದ್ದವು. ಉಳಿದ 97 ಕ್ಯಾಂಟೀನ್‌ಗಳನ್ನು ಗಾಂಧಿ ಜಯಂತಿಯಂದು ಉದ್ಘಾಟಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದರು. ಆದರೆ, 47 ವಾರ್ಡ್‌ಗಳಲ್ಲಿ ಕ್ಯಾಂಟೀನ್‌ ಇನ್ನಷ್ಟೇ ಸಿದ್ಧಗೊಳ್ಳಬೇಕಿದೆ.

‘ಇಷ್ಟರಲ್ಲೇ 97 ವಾರ್ಡ್‌ಗಳಲ್ಲೂ ಕ್ಯಾಂಟೀನ್‌ಗಳು ನಿರ್ಮಾಣಗೊಳ್ಳಬೇಕಿತ್ತು. ಆದರೆ, ಜಾಗದ ಸಮಸ್ಯೆಯಿಂದಾಗಿ ಕೆಲವೆಡೆ ಕ್ಯಾಂಟೀನ್‌ ಸ್ಥಾಪಿಸಲು ಸಾಧ್ಯವಾಗಲಿಲ್ಲ. ಸದ್ಯ 50 ವಾರ್ಡ್‌ಗಳಲ್ಲಿ ಕ್ಯಾಂಟೀನ್‌ಗಳು ಸಿದ್ಧಗೊಂಡಿವೆ. ಆಯಾ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಸ್ಥಳೀಯ ಪಾಲಿಕೆ ಸದಸ್ಯರ ಸಮಯ ನೋಡಿಕೊಂಡು ಕ್ಯಾಂಟೀನ್‌ಗಳನ್ನು ಉದ್ಘಾಟಿಸುತ್ತೇವೆ’ ಎಂದು ಬಿಬಿಎಂಪಿ ಆಯುಕ್ತ ಎನ್‌. ಮಂಜುನಾಥ ಪ್ರಸಾದ್‌ ‘ಪ್ರಜಾವಾಣಿ’ಗೆ ತಿಳಿಸಿದರು.

12 ಅಡುಗೆ ಮನೆಗಳು ಸಿದ್ಧ: ‘ಕ್ಯಾಂಟೀನ್‌ಗಳಿಗೆ ಆಹಾರ ಸರಬರಾಜು ಮಾಡಲು 12 ಕೇಂದ್ರೀಕೃತ ಅಡುಗೆ ಮನೆಗಳು ಸಿದ್ಧಗೊಂಡಿವೆ. 6 ಅಡುಗೆ ಮನೆಗಳಲ್ಲಿ ಅಡುಗೆ ಮಾಡಲು ಬೇಕಾದ ಉಪಕರಣಗಳನ್ನು ಅಳವಡಿಸಲಾಗುತ್ತಿದೆ. ಉಳಿದ 9 ಕಡೆ ಕಾಮಗಾರಿ ನಡೆಯುತ್ತಿದೆ’ ಎಂದು ಅವರು ತಿಳಿಸಿದರು.

**

ಬೇಡಿಕೆ ಆಧರಿಸಿ ಆಹಾರ ಪೂರೈಕೆ

ಇಂದಿರಾ ಕ್ಯಾಂಟೀನ್‌ಗಳಲ್ಲಿ ಬೇಡಿಕೆ ಆಧರಿಸಿ 101 ಕ್ಯಾಂಟೀನ್‌ಗಳಿಗೆ ಪೂರೈಸುವ ಆಹಾರದ ಪ್ರಮಾಣವನ್ನು ಮರುನಿಗದಿಪಡಿಸಲಾಗಿದೆ.

‘ಕ್ಯಾಂಟೀನ್‌ನಲ್ಲಿ ದಿನದ ಮೂರು ಹೊತ್ತು (ಬೆಳಿಗ್ಗೆ, ಮಧ್ಯಾಹ್ನ ಹಾಗೂ ರಾತ್ರಿ) ಊಟ, ಉಪಾಹಾರ ಪೂರೈಸಲಾಗುತ್ತಿದೆ. ಆರಂಭದಲ್ಲಿ ಒಂದು ಹೊತ್ತಿನಲ್ಲಿ ತಲಾ 300 ಮಂದಿಗೆ ತಿಂಡಿ, ಊಟ ವಿತರಿಸಲಾಗಿತ್ತು. ಬೇಡಿಕೆ ಹೆಚ್ಚಿದ್ದರಿಂದ ಒಂದು ಹೊತ್ತಿನಲ್ಲಿ ತಲಾ 500 ಮಂದಿಗೆ ಊಟ, ಉಪಾಹಾರ ನೀಡಲು ನಿರ್ಧರಿಸಿದ್ದೆವು. ಆದರೆ, ಕೆಲವೆಡೆ ಆಹಾರದ ಕೊರತೆ ಉಂಟಾದರೆ, ಮತ್ತೆ ಕೆಲವೆಡೆ ಉಳಿಯುತ್ತಿತ್ತು. ರಾತ್ರಿಯ ಊಟಕ್ಕೆ ಬೇಡಿಕೆ ಕಡಿಮೆ ಇತ್ತು. ಆಯಾ ವಾರ್ಡ್‌ನಲ್ಲಿ ಇರುವ ಬೇಡಿಕೆಗೆ ಅನುಗುಣವಾಗಿ ಆಹಾರ ಪೂರೈಸಲು ನಿರ್ಧರಿಸಲಾಗಿದೆ’ ಎಂದು ಮಂಜುನಾಥ ಪ್ರಸಾದ್‌ ತಿಳಿಸಿದರು.

Post Comments (+)