ಅಂಗಳದಲ್ಲಿ ಇಂಗಲಿಲ್ಲ ದಾಖಲೆ ಮಳೆ!

ಗುರುವಾರ , ಮೇ 23, 2019
24 °C

ಫಲಿತಾಂಶ (ಮುನ್ನಡೆ+ಗೆಲುವು) 0/542LIVE

₹12 ಕೋಟಿ ದಂಡ ತೆತ್ತರೂ ಮಳೆ ನೀರು ಸಂಗ್ರಹಿಸಲಿಲ್ಲ l ನಿರಾಸಕ್ತಿ ವಹಿಸುತ್ತಿರುವ ಜನರು

ಅಂಗಳದಲ್ಲಿ ಇಂಗಲಿಲ್ಲ ದಾಖಲೆ ಮಳೆ!

Published:
Updated:
ಅಂಗಳದಲ್ಲಿ ಇಂಗಲಿಲ್ಲ ದಾಖಲೆ ಮಳೆ!

ಬೆಂಗಳೂರು: ನಗರದಲ್ಲಿ ಎರಡು ತಿಂಗಳಲ್ಲಿ ದಾಖಲೆಯ ಮಳೆಯಾಗಿದೆ. ಆದರೆ, ಹೆಚ್ಚಿನ ಬೃಹತ್‌ ಕಟ್ಟಡ ಮತ್ತು ಮನೆಗಳಲ್ಲಿ ಮಳೆ ನೀರು ಸಂಗ್ರಹ ವ್ಯವಸ್ಥೆ ಅಳವಡಿಸದ ಪರಿಣಾಮ ನೀರೆಲ್ಲ ಚರಂಡಿಪಾಲಾಗಿದೆ.

ಆಗಸ್ಟ್‌ನಲ್ಲಿ 348 ಮಿ.ಮೀ. ಹಾಗೂ ಸೆಪ್ಟೆಂಬರ್‌ನಲ್ಲಿ 30ರ ವರೆಗೆ 514 ಮಿ.ಮೀ ಮಳೆಯಾಗಿದೆ. ಇದು ದಶಕದ ದಾಖಲೆಯ ಮಳೆ. ಆದರೆ, ಈ ನೀರನ್ನು ಮನೆ ಅಂಗಳದಲ್ಲಿ ಹಿಡಿದಿಟ್ಟುಕೊಳ್ಳಲು ಜನರು ಕಾಳಜಿ ವಹಿಸಿಲ್ಲ.

ಮಳೆ ನೀರಿನ ಸಂಗ್ರಹ ಕುರಿತಂತೆ ಜಾಗೃತಿ ಮೂಡದ ಕಾರಣ ಪ್ರತಿವರ್ಷ 14 ಟಿಎಂಸಿ ಅಡಿಯಷ್ಟು ನೀರು ವ್ಯರ್ಥವಾಗಿ ಚರಂಡಿ ಪಾಲಾಗುತ್ತಿದೆ. ಅಷ್ಟು ನೀರನ್ನು ಸಾಗಿಸುವ ಸಾಮರ್ಥ್ಯ ಚರಂಡಿಗಳಿಗೆ ಇಲ್ಲ. ಹಾಗಾಗಿ ಪದೇ ಪದೇ ಪ್ರವಾಹ ಉಂಟಾಗುತ್ತಿದೆ.

ರಾಜಧಾನಿಯಲ್ಲಿ 19 ಲಕ್ಷ ಕಟ್ಟಡಗಳಿವೆ. ಮಳೆ ನೀರನ್ನು ಸಮರ್ಪಕವಾಗಿ ಸಂಗ್ರಹ ಮಾಡಿದರೆ ನಿವಾಸಿಗಳು ಜಲಮಂಡಳಿಯನ್ನು ಅವಲಂಬಿಸುವ ಅಗತ್ಯವೇ ಇರುವುದಿಲ್ಲ. ರಾಜಧಾನಿಯಲ್ಲಿ 54 ಸಾವಿರ  ಕಟ್ಟಡಗಳಲ್ಲಿ ಮಾತ್ರ ಮಳೆ ನೀರು ಸಂಗ್ರಹ ವ್ಯವಸ್ಥೆ ಇದೆ. 2,528 ಸರ್ಕಾರಿ ಕಟ್ಟಡಗಳ ಪೈಕಿ 2,318 ಕಟ್ಟಡಗಳಲ್ಲಿ ಇದನ್ನು ಅಳವಡಿಸಿಕೊಂಡಿಲ್ಲ.

ನೀರಿನ ಅಭಾವ ನೀಗಿಸಲು ಹಾಗೂ ಅಂತರ್ಜಲ ಮಟ್ಟ ಹೆಚ್ಚಿಸಲು ಪ್ರತಿ ಮನೆ ಹಾಗೂ ಕಟ್ಟಡಗಳಲ್ಲಿ ಮಳೆ ನೀರು ಕಡ್ಡಾಯವಾಗಿ ಸಂಗ್ರಹಿಸಬೇಕು ಎಂದು ನಗರಾಭಿವೃದ್ಧಿ ಇಲಾಖೆ ಎಂಟು ವರ್ಷಗಳ ಹಿಂದೆ ಕಾನೂನು ರೂಪಿಸಿತ್ತು.

2,400 ಚದರ ಅಡಿಯ ನಿವೇಶನದ ಹಳೆಯ ಕಟ್ಟಡಗಳಿಗೆ ಹಾಗೂ 1,200 ಚದರ ಅಡಿಯ ಮತ್ತು ಅದಕ್ಕಿಂತ ಹೆಚ್ಚಿನ ವಿಸ್ತೀರ್ಣದ ಹೊಸ ಕಟ್ಟಡಗಳಲ್ಲಿ ಈ ವ್ಯವಸ್ಥೆಯನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕು ಎಂದು ಜಲಮಂಡಳಿ 2009ರಲ್ಲಿ ಸೂಚಿಸಿತ್ತು. 2011ರ ಡಿಸೆಂಬರ್‌ ತಿಂಗಳೊಳಗೆ ಎಲ್ಲ ಮನೆಗಳಲ್ಲೂ ಇದನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕು ಎಂದು ನಿರ್ದೇಶನ ನೀಡಿತ್ತು. ಬಳಿಕ ಕಟ್ಟಡ ಮಾಲೀಕರ ಬಗ್ಗೆ ಮಂಡಳಿ ಮೃದು ಧೋರಣೆ ತಳೆದಿತ್ತು.

2016ರಲ್ಲಿ ಮಳೆ ನೀರು ಸಂಗ್ರಹ ವ್ಯವಸ್ಥೆಯ ಕಾಯ್ದೆಗೆ ತಿದ್ದುಪಡಿ ತರಲಾಗಿತ್ತು. 2016ರ ಮೇ ತಿಂಗಳೊಳಗೆ ಮನೆಯ ಆವರಣದಲ್ಲಿ ಮಳೆ ನೀರು ಇಂಗಿಸಬೇಕು. ಇಲ್ಲದಿದ್ದರೆ ದಂಡ ವಿಧಿಸಲಾಗುತ್ತದೆ ಎಂದು ಜಲಮಂಡಳಿ ಮತ್ತೆ ಎಚ್ಚರಿಕೆ ನೀಡಿತ್ತು. ಬಳಿಕ ಗಡುವನ್ನು ಆಗಸ್ಟ್‌ ವರೆಗೆ ವಿಸ್ತರಿಸಿತ್ತು. ಬಳಿಕ ದಂಡ ವಿಧಿಸಲು ಆರಂಭಿಸಿತ್ತು. ಒಂದು ವರ್ಷದಲ್ಲಿ ಮನೆ ಮಾಲೀಕರು ₹12 ಕೋಟಿ ದಂಡ ತೆತ್ತಿದ್ದಾರೆ.

‘ಸಾಕಷ್ಟು ಜಾಗೃತಿ ಮೂಡಿಸಿದರೂ ಜನರು ಮಳೆ ನೀರು ಸಂಗ್ರಹಕ್ಕೆ ಒಲವು ವ್ಯಕ್ತಪಡಿಸುತ್ತಿಲ್ಲ. ಈ ವ್ಯವಸ್ಥೆ ಅಳವಡಿಸಿಕೊಳ್ಳುವವರಿಗೆ ತಾಂತ್ರಿಕ ಮಾರ್ಗದರ್ಶನ ನೀಡಲು ಸಿದ್ಧರಿದ್ದೇವೆ’ ಎಂದು ಜಲಮಂಡಳಿಯ ಪ್ರಧಾನ ಮುಖ್ಯ ಎಂಜಿನಿಯರ್ ಕೆಂಪರಾಮಯ್ಯ ತಿಳಿಸುತ್ತಾರೆ.

**

ಕೆರೆಗಳ ಸಂಗ್ರಹಣಾ ಸಾಮರ್ಥ್ಯವೂ ಕುಸಿತ

ಒತ್ತುವರಿ ಹಾಗೂ ಹೂಳು ತುಂಬಿರುವ ಕಾರಣದಿಂದಾಗಿ ನಗರದ ಕೆರೆಗಳಲ್ಲಿ ನೀರಿನ ಸಂಗ್ರಹಣಾ ಸಾಮರ್ಥ್ಯ ಶೇ 60ರಷ್ಟು ಕಡಿಮೆಯಾಗಿದೆ.

‘1800ರಲ್ಲಿ ನಗರದಲ್ಲಿ 1,452 ಕೆರೆಗಳಿದ್ದವು. ಅವುಗಳ ನೀರಿನ ಸಂಗ್ರಹಣಾ ಸಾಮರ್ಥ್ಯ 35 ಟಿಎಂಸಿ ಅಡಿ ಆಗಿತ್ತು. ಈಗ 193 ಕೆರೆಗಳು ಉಳಿದಿವೆ. ಅವುಗಳ ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ 5 ಟಿಎಂಸಿ ಅಡಿ ಆಗಿರಬೇಕಿತ್ತು. ಹೂಳು ತುಂಬಿದ ಕಾರಣ ಈಗ ಅದು 1.2 ಟಿಎಂಸಿ ಅಡಿಗೆ ಇಳಿದಿದೆ. ಅಂದರೆ 387 ಹೆಕ್ಟೇರ್‌ನ ಜಲಮೂಲದಲ್ಲಿ ಹೂಳು ತುಂಬಿದೆ’ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿ ಟಿ.ವಿ.ರಾಮಚಂದ್ರ ಹೇಳುತ್ತಾರೆ.

‘ವರ್ಷಕ್ಕೆ 787 ಮಿ.ಮೀ. ಮಳೆಯಾಗುತ್ತದೆ. ಅಂದರೆ 14.80 ಟಿಎಂಸಿ ಅಡಿ ನೀರನ್ನು ಮಳೆ ನೀರು ಸಂಗ್ರಹದ ಮೂಲಕ ಹಿಡಿದಿಟ್ಟುಕೊಳ್ಳಲು ಸಾಧ್ಯವಿದೆ. ನಗರಕ್ಕೆ ವರ್ಷಕ್ಕೆ 19 ಟಿಎಂಸಿ ಅಡಿ ಕಾವೇರಿ ನೀರು ಪೂರೈಕೆಯಾಗುತ್ತಿದೆ. ಒಂದು ವೇಳೆ ದೊಡ್ಡ ಮಟ್ಟದಲ್ಲಿ ಮಳೆ ನೀರು ಸಂಗ್ರಹಿಸಿದರೆ ಕಾವೇರಿ ಮೇಲಿನ ಅವಲಂಬನೆ ಗಣನೀಯವಾಗಿ ಕಡಿಮೆಯಾಗುತ್ತದೆ’ ಎಂದು ಅವರು ವಿಶ್ಲೇಷಿಸುತ್ತಾರೆ.

**

ಕಟ್ಟಡಗಳಿಗೆ ದಂಡ ಎಷ್ಟು (ತಿಂಗಳಿಗೆ)

25%: ಗೃಹ ಬಳಕೆದಾರರಿಗೆ ನೀರಿನ ಬಿಲ್‌ನಲ್ಲಿ ಮೊದಲ ಬಾರಿ ವಿಧಿಸಲಾಗುವ ದಂಡ

50%: ಮೂರು ತಿಂಗಳ ಬಳಿಕ ದಂಡ (ಗೃಹ ಬಳಕೆ)

50%: ಗೃಹೇತರ ಬಳಕೆದಾರರಿಗೆ ಮೊದಲ ಬಾರಿ ವಿಧಿಸಲಾಗುವ ದಂಡ

100%: ಗೃಹೇತರ ಬಳಕೆದಾರರಿಗೆ ಮೂರು ತಿಂಗಳ ಬಳಿಕ ದಂಡ

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry