ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರ್ವಹಣೆ ಇಲ್ಲದ ಗಾಂಧಿ ಚಿತಾ ಭಸ್ಮವಿರುವ ಸ್ಮಾರಕ

Last Updated 2 ಅಕ್ಟೋಬರ್ 2017, 5:46 IST
ಅಕ್ಷರ ಗಾತ್ರ

ಕೂಡ್ಲಿಗಿ: ಸ್ವಾತಂತ್ರ್ಯ ಹೋರಾಟ ನೆನಪಿಸುವಂತಹ ಸ್ಮಾರಕಗಳನ್ನು ದೇಶದ ಉದ್ದಗಲಕ್ಕೂ ವಿವಿಧ ಹೆಸರುಗಳಲ್ಲಿ ನಿರ್ಮಾಣ ಮಾಡಲಾಗಿದೆ. ದೆಹಲಿಯಲ್ಲಿರುವ ರಾಜ್‌ಘಾಟ್‌ನಂತಯೇ ಗಾಂಧೀಜಿ ನೆನಪಿಸುವಂತಹ ಮತ್ತೊಂದು ಸ್ಮಾರಕವನ್ನು ಪಟ್ಟಣದ ಮಹಾದೇವ ಮೈಲಾರ ಕ್ರೀಡಾಂಗಣದಲ್ಲಿದೆ. ಈ ಸ್ಮಾರಕದಲ್ಲಿ ಗಾಂಧೀಜಿಯವರ ಚಿತಾ ಭಸ್ಮವಿರುವುದು ವಿಶೇಷ.

ಆದರೆ ಜಿಲ್ಲಾಡಳಿತ ಮತ್ತು ಸ್ಥಳೀಯ ಆಡಳಿತದ ನಿರ್ಲಕ್ಷ್ಯದಿಂದ ಈ ಸ್ಮಾರಕವೀಗ ಪಾಳು ಬಿದ್ದಿದೆ. ಗಿಡಗಂಟಿ ಉದ್ಯಾನವನ್ನು ಆವರಿಸಿವೆ. ಪ್ರವಾಸಿಗರನ್ನು ಸೆಳೆಯಬೇಕಾದ ಜಾಗ, ಬಿಕೋ ಎನ್ನುವ ಸ್ಥಿತಿ ತಲುಪಿದೆ. ದೀಪಗಳು ಕೆಟ್ಟು ಹೋಗಿವೆ.

ಬಿಂದು ಮಾಧವ ಎಂಬ ಶಿಕ್ಷಕ ಗಾಂಧಿ ಚಿತಾ ಭಸ್ಮವನ್ನು ಇಲ್ಲಿಗೆ ತಂದು ಮಂಟಪ ಮಾಡಿದರು. ಬಳಿಕ, ಅದಕ್ಕೆ ಹುತಾತ್ಮರ ಸ್ಮಾರಕ ಎಂದು ನಾಮನಕರಣ ಮಾಡಲಾಯಿತು.

ನಂತರ ವಿವಿಧ ಜನಪ್ರತಿನಿಧಿಗಳು ಅಭಿವೃದ್ಧಿಪಡಿಸಿದರು. 2008ರಲ್ಲಿ ಶಾಸಕ ಬಿ. ನಾಗೇಂದ್ರ ಪ್ರವಾಸೋದ್ಯಮ ಇಲಾಖೆಯ ಅನುದಾನ ಸೇರಿದಂತೆ ಒಟ್ಟು ₹ 59 ಲಕ್ಷ ಬಿಡುಗಡೆ ಮಾಡಿಸಿ, ಮತ್ತಷ್ಟು ಅಭಿವೃದ್ಧಿಗೆ ಮುನ್ನುಡಿ ಬರೆದಿದ್ದರು.

ಮುಂದೆ ಗ್ಯಾರಾ ಮೂರ್ತಿ, ಲೈಟ್ ಮ್ಯೂಜಿಕ್, ಗಾರ್ಡನ್ ಮತ್ತು ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಅನೇಕರ ಪ್ರತಿಮೆಗಳನ್ನು ಸ್ಥಾಪನೆ ಮಾಡಲು ನಿರ್ಧಾರಿಸಲಾಗಿತ್ತು. ಇದೇ ವೇಳೆ ಬಿಜೆಪಿ ಸರ್ಕಾರದ ಬದಲು, ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂತು. ಈ ವೇಳೆ ಪಕ್ಷೇತರ ಶಾಸಕರಾಗಿ ನಾಗೇಂದ್ರ ಗೆದ್ದರೂ, ಸ್ಮಾರಕ ಅಭಿವೃದ್ಧಿ ಯೋಜನೆಗಳು ಹಾಳೆ ಮೇಲೆಯೇ ಉಳಿದವು.

‘ಸ್ಮಾರಕ ಅಭಿವೃದ್ಧಿ ಕಾರ್ಯಗಳನ್ನು ಪೂರ್ಣಗೊಳಿಸಿದ ಬಳಿಕ, ಅದರ ಮೇಲುಸ್ತುವಾರಿಯನ್ನು ಪಟ್ಟಣ ಪಂಚಾಯ್ತಿ ವಹಿಸಲಾಗಿದೆ’ ಎಂದು ಹೆಸರು ಹೇಳಲು ಬಯಸದ ಲೋಕೋಪಯೋಗಿ ಇಲಾಖೆಯ ಅಧಿಕಾರಿಯೊಬ್ಬರು ಹೇಳಿದರು.

ಸ್ವಚ್ಛತೆಯಷ್ಟೆ ನಮ್ಮ ಹೊಣೆ: ‘ಗಾಂಧಿ ಜಯಂತಿ, ಸ್ವಾತಂತ್ರ್ಯ ದಿನಾಚರಣೆ ಸೇರಿದಂತೆ ರಾಷ್ಟ್ರೀಯ ಹಬ್ಬಗಳಲ್ಲಿ ಸ್ಮಾರಕವನ್ನು ಸ್ವಚ್ಛಗೊಳಿಸುವುದಷ್ಟೇ ನಮ್ಮ ಹೊಣೆ. ಅದನ್ನು ನಾವು ಮಾಡಿಕೊಂಡು ಬರುತ್ತಿದ್ದೇವೆ’ ಎಂದು ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಉಮೇಶ ಹಿರೇಮಠ ‘ಪ್ರಜಾವಾಣಿ’ಗೆ ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT