ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಂಬು ಹಿಡಿದವರ ಕೈಗೆ ಗುಲಾಬಿ, ದಾಸವಾಳ

Last Updated 2 ಅಕ್ಟೋಬರ್ 2017, 5:54 IST
ಅಕ್ಷರ ಗಾತ್ರ

ಬೀದರ್: ಅವರು 200 ಎಕರೆ ಕೃಷಿ ಜಮೀನು ಹೊಂದಿರುವ ಗೌಡರು. ಆಸುಪಾಸಿನ ಹತ್ತು ಗ್ರಾಮಗಳಲ್ಲಿ ಸುತ್ತಾಡಿದರೂ ಕಾಣಸಿಗದಂತಹ ಕಲ್ಲಿನ ದೊಡ್ಡ ಮನೆ ಅವರದು. ಮನೆಯೊಳಗೆ ಸೇದು ಬಾವಿಯೂ ಇದೆ. ಆದರೆ ಮನೆ ಮಂದಿಯಲ್ಲ ಇವತ್ತಿಗೂ ಬಯಲಲ್ಲೇ ಶೌಚಕ್ಕೆ ಹೋಗುತ್ತಾರೆ.

ಇದು ಬೀದರ್‌ ತಾಲ್ಲೂಕಿನ ಸಂಗನಳ್ಳಿ ಹಾಗೂ ಔರಾದ್ ತಾಲ್ಲೂಕಿನ ಕರಂಜಿ(ಬಿ) ಗ್ರಾಮದ ಸ್ಥಿತಿ. ಹಿರಿ ಅಕ್ಕನ ಚಾಳಿ ಮನೆ ಮಂದಿಗೆಲ್ಲ ಎನ್ನುವಂತೆ ಗ್ರಾಮದ ಜನ ಅವರನ್ನೇ ಅನುಸರಿಸುತ್ತಿದ್ದಾರೆ. ಇಂತಹ ಪ್ರಮುಖರ ಮನವೊಲಿಸಲೆಂದೇ ಜಿಲ್ಲೆಯ ಅಧಿಕಾರಿಗಳು ಇದೀಗ ಗಾಂಧಿಗಿರಿಗೆ ಇಳಿದಿದ್ದಾರೆ.

ಗ್ರಾಮಗಳಲ್ಲಿ ಡಂಗೂರ ಬಾರಿಸಿ, ಶಾಲಾ ಮಕ್ಕಳಿಂದ ಜಾಗೃತಿ ಜಾಥಾ ನಡೆಸಿ, ಮನೆ ಮನೆಗೆ ತೆರಳಿ ಶೌಚಾಲಯ ಕಟ್ಟಿಸಿಕೊಳ್ಳುವಂತೆ ಅನೇಕ ಬಾರಿ ತಿಳಿವಳಿಕೆ ನೀಡಿದ್ದಾರೆ. ಆದರೆ, ಗ್ರಾಮಸ್ಥರು ಇದಾವುದರ ಬಗೆಗೂ ತಲೆ ಕೆಡಿಸಿಕೊಂಡಿಲ್ಲ.

ಹೀಗಾಗಿ ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಬೆಳಗಿನ ಜಾವ ಊರ ಹೊರಗೆ ನಿಂತು ಬಯಲು ಶೌಚಕ್ಕೆ ಹೊರಟವರಿಗೆ ಗುಲಾಬಿ, ದಾಸವಾಳ ಕೊಟ್ಟು, ಹೂಮಾಲೆ ಹಾಕಿ ತಿಳಿವಳಿಕೆ ನೀಡುತ್ತಿದ್ದಾರೆ. ಕೆಲ ಅಧಿಕಾರಿಗಳು ಗ್ರಾಮಗಳಲ್ಲೇ ವಾಸ್ತವ್ಯ ಮಾಡಿ ಬಯಲು ಶೌಚಕ್ಕೆ ಕಡಿವಾಣ ಹಾಕಲು ಪ್ರಯತ್ನ ನಡೆಸಿದ್ದಾರೆ.

ಬೀದರ್, ಹುಮನಾಬಾದ್ ಹಾಗೂ ಭಾಲ್ಕಿ ತಾಲ್ಲೂಕುಗಳಲ್ಲಿ ತಲಾ ಎರಡು ತಂಡಗಳು ಕಾರ್ಯನಿರ್ವಹಿಸುತ್ತಿವೆ. ಬಸವಕಲ್ಯಾಣ ಹಾಗೂ ಔರಾದ್ ತಾಲ್ಲೂಕಿನಲ್ಲಿ ಮಾತ್ರ ತಲಾ ಆರು ತಂಡಗಳನ್ನು ರಚಿಸಲಾಗಿದೆ. ತಂಡದಲ್ಲಿ ಜಿಲ್ಲಾ ಮಟ್ಟದ, ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಇದ್ದಾರೆ. ಈವರೆಗೆ 124 ಗ್ರಾಮಗಳಿಗೆ ತೆರಳಿ ಶೌಚಾಲಯ ಕಟ್ಟಿಸಿಕೊಳ್ಳುವಂತೆ ಗ್ರಾಮಸ್ಥರಿಗೆ ತಿಳಿವಳಿಕೆ ನೀಡಿದ್ದಾರೆ.

‘ನಿರ್ಮಲ ಭಾರತ ಯೋಜನೆಯಡಿ ಸಹಾಯಧನ ಒದಗಿಸುತ್ತಿದ್ದರೂ ಕೆಲವರು ಶೌಚಾಲಯ ಕಟ್ಟಿಕೊಳ್ಳಲು ಮುಂದೆ ಬರುತ್ತಿಲ್ಲ. ಕೆಲವರು ಶೌಚಾಲಯ ಕಟ್ಟಿಕೊಂಡರೂ ಅದನ್ನು ಬಳಸುತ್ತಿಲ್ಲ. ಹೀಗಾಗಿ ಅಧಿಕಾರಿಗಳು ಹೂವು ಹಿಡಿದು ಬೀದಿಗೆ ಇಳಿಯಬೇಕಾಯಿತು. ಜನ ಬೆಳಗಿನ ಜಾವ ಚಂಬು ಹಿಡಿದು ಮನೆಯಿಂದ ಹೊರಗೆ ಬರುತ್ತಿದ್ದಂತೆಯೇ ಅಧಿಕಾರಿಗಳ ತಂಡ ಅವರತ್ತ ಧಾವಿಸುತ್ತಿದೆ. ಮುಜುಗರ ಉಂಟಾಗಿ ಕೆಲವರು ಶೌಚಾಲಯ ಬಳಸಲು ಆರಂಭಿಸಿದ್ದಾರೆ.

ಕೆಲವರು ಶೌಚಾಲಯ ಕಟ್ಟಿಕೊಳ್ಳಲು ಮುಂದೆ ಬಂದಿದ್ದಾರೆ’ ಎಂದು ಸ್ವಚ್ಛ ಭಾರತ ಮಿಷನ್‌ ಜಿಲ್ಲಾ ನೋಡಲ್ ಅಧಿಕಾರಿ ಗೌತಮ ಅರಳಿ ಹೇಳುತ್ತಾರೆ.
‘ನೈರ್ಮಲ್ಯ ಜಾಗೃತಿಗೆ ನಡೆಸಿರುವ ಹೋರಾಟ ಫಲ ನೀಡಿದೆ. ಆರು ತಿಂಗಳ ಅವಧಿಯಲ್ಲಿ 16 ಸಾವಿರ ಕುಟುಂಬಗಳು ತಮ್ಮ ಮನೆಯಲ್ಲಿ ಶೌಚಾಲಯ ಕಟ್ಟಿಸಿಕೊಂಡಿವೆ.

ವರ್ಷದ ಅಂತ್ಯಕ್ಕೆ ಜಿಲ್ಲೆಯ 200 ಗ್ರಾಮಗಳನ್ನು ಬಯಲು ಶೌಚ ಮುಕ್ತ ಮಾಡಬೇಕು ಎನ್ನುವ ಗುರಿಯೊಂದಿಗೆ ಕೆಲಸ ಆರಂಭಿಸಿದ್ದೇವೆ. ಶೌಚಾಲಯ ದಿನವಾದ ನವೆಂಬರ್ 19ರಂದು ಕನಿಷ್ಠ ನೂರು ಗ್ರಾಮಗಳಾದರೂ ಬಯಲು ಶೌಚ ಮುಕ್ತವಾಗಬೇಕು ಎನ್ನುವುದು ನಮ್ಮ ಗುರಿ’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಆರ್‌.ಸೆಲ್ವಮಣಿ ವಿವರಿಸುತ್ತಾರೆ.

‘ಜಿಲ್ಲೆಯ 2.79 ಕುಟುಂಬಗಳ ಪೈಕಿ ಒಂದು ಲಕ್ಷ ಕುಟುಂಬಗಳು ಮಾತ್ರ ಶೌಚಾಲಯ ಹೊಂದಿವೆ. 620 ಗ್ರಾಮಗಳ ಪೈಕಿ ಕೇವಲ 11 ಗ್ರಾಮಗಳ ಎಲ್ಲ ಮನೆಗಳಲ್ಲೂ ಶೌಚಾಲಯಗಳಿವೆ. ಇನ್ನೂ 609 ಗ್ರಾಮಗಳಲ್ಲಿ ಅಭಿ ಯಾನ ತೀವ್ರಗೊಳಿಸಬೇಕಿದೆ. ಯುದ್ಧೋ ಪಾದಿಯಲ್ಲಿ ಕೆಲಸ ಮಾಡಿ ಗುರಿ ಮುಟ್ಟಲು ಪ್ರಯತ್ನಿಸುತ್ತಿದ್ದೇವೆ’ ಎಂದು ಹೇಳುತ್ತಾರೆ.

‘ಗ್ರಾಮ ಪಂಚಾಯಿತಿಗಳಿಗೆ ಚುನಾ ವಣೆ ನಡೆದು ಎರಡು ವರ್ಷಗಳಾಗಿವೆ. ಚುನಾವಣೆಗೆ ಮುಂಚೆ ಮುಚ್ಚಳಿಕೆ ಬರೆದುಕೊಟ್ಟರೂ ಕೆಲ ಪಂಚಾಯಿತಿ ಸದಸ್ಯರು ಶೌಚಾಲಯ ಕಟ್ಟಿಸಿಕೊಂಡಿಲ್ಲ. ಜಾಗೃತಿ ಕಾರ್ಯಕ್ರಮದಲ್ಲೂ ಪಾಲ್ಗೊ ಳ್ಳಲು ಆಸಕ್ತಿ ತೋರುತ್ತಿಲ್ಲ.

ಅಪಾರ ಆಸ್ತಿಪಾಸ್ತಿ ಹೊಂದಿರುವ ಊರಿನ ಗೌಡರೂ ಸರ್ಕಾರದ ಸಹಾಯಧನಕ್ಕೆ ಕೈಚಾಚುತ್ತಿದ್ದಾರೆ. ನಮ್ಮ ಅಭಿಯಾನಕ್ಕೆ ಚುನಾಯಿತ ಪ್ರತಿನಿಧಿಗಳು ಕೈಜೋಡಿ ಸಿದರೆ ಹೆಚ್ಚು ಗ್ರಾಮಗಳನ್ನು ಬಯಲು ಶೌಚ ಮುಕ್ತಗೊಳಿಸಬಹುದು’ ಎಂದು ಭಾಲ್ಕಿ ತಾಪಂ ಗ್ರಾಮೀಣ ಉದ್ಯೋಗ ವಿಭಾಗದ ಪ್ರಭಾರ ಉಪ ನಿರ್ದೇಶಕಿ ಶಿವಲೀಲಾ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT